ಹಳೆಯ ನೆನಪುಗಳು ಮರೆತುಹೋಗಿ, ಜತೆಗಿರುವವರನ್ನೂ ಗುರುತಿಸಲಾಗದಂತೆ ಮಾಡುವ ಮಿದುಳಿಗೆ ಸಂಬಂಧಿಸಿದ ವಿಚಿತ್ರ ಸಮಸ್ಯೆ ಅಮ್ನೇಸಿಯಾ. ಲೈಸೆಸ್ಟರ್ ಶೈರ್ ನಲ್ಲಿ ವಾಸಿಸುವ ಕ್ಲೋಯ್ ಎಂಬಾಕೆ ಕೂಡ ಈ ಸಮಸ್ಯೆ ಅನುಭವಿಸುತ್ತಿದ್ದು, ದಿನವೂ ಬೆಳಗ್ಗೆ ಏಳುವಾಗ ತನ್ನನ್ನು ಆರು ವರ್ಷದ ಬಾಲಕಿಯಂತೆ, ತನ್ನ ಸಂಗಾತಿಯನ್ನು ಕಿಡ್ನ್ಯಾಪರ್ ನಂತೆ ಭಾವಿಸುತ್ತಾಳೆ!
ಕಮಲಹಾಸನ್ ಮತ್ತು ಶ್ರೀದೇವಿ ಅಭಿನಯದ ಅದ್ಭುತ ಹಿಂದಿ ಸಿನಿಮಾ “ಸದ್ಮಾ (Sadma)ʼ. ಇದನ್ನು ನೋಡಿದವರು ಎಂದಿಗೂ “ಸುರಮೈ ಅಖಿಯೋಂಸೆʼ ಹಾಡನ್ನು ಮರೆಯುವುದಿಲ್ಲ. ಹಾಗೆಯೇ, “ಘಜಿನಿ (Ghajini)’ ಸಿನಿಮಾದ ಸಂಜಯ್ ಸಿಂಘಾನಿಯಾ ಪಾತ್ರ ಮರೆಯಲು ಸಾಧ್ಯವಿಲ್ಲ. ಇನ್ನು, ಕನ್ನಡ ಸಿನಿಮಾ ಲೋಕಕ್ಕೆ ಬಂದರೆ, “ರಂಗಿತರಂಗʼ ಹೊಸ ಅಲೆಯನ್ನೇ ಸೃಷ್ಟಿಸಿ ಎಲ್ಲರನ್ನೂ ಮೋಡಿ ಮಾಡಿತ್ತು. ಕಳೆದ ವರ್ಷ ನೆಟ್ ಫ್ಲಿಕ್ಸ್ (Netflix) ನಲ್ಲಿ ಬಿಡುಗಡೆಯಾಗಿದ್ದ “ಗರ್ಲ್ ಆನ್ ದ ಟ್ರೇನ್ʼ (Girl on The Train) ಕೂಡ ಸಾಕಷ್ಟು ಮೆಚ್ಚುಗೆ ಗಳಿಸಿದ್ದ ಚಿತ್ರ. ಇವೆಲ್ಲವೂ ಒಂದು ನಿರ್ದಿಷ್ಟ ಮಾನಸಿಕ ಸಮಸ್ಯೆಯನ್ನು ಕೇಂದ್ರೀಕರಿಸಿ ನಿರ್ಮಿಸಿದ ಚಿತ್ರಗಳು. ಆ ಸಮಸ್ಯೆ ಅಮ್ನೇಸಿಯಾ (Amnesia). ಈ ಸಿನಿಮಾಗಳು ಕೇವಲ ವೀಕ್ಷಕರ ಮನಗೆಲ್ಲುವ ತಂತ್ರವಲ್ಲ. ನಿಜವಾಗಿಯೂ ಅಂಥದ್ದೊಂದು ಸಮಸ್ಯೆ ಇರುತ್ತದೆ. ಲೈಸೆಸ್ಟರ್ ಶೈರ್ (Leicestershire)ನಲ್ಲಿ ವಾಸಿಸುವ ಕ್ಲೋಯ್ ಬರ್ನಾರ್ಡ್ (Chloe Barnard) ಎಂಬಾಕೆ ಇದೇ ಸಮಸ್ಯೆಯೊಂದಿಗೆ ಬದುಕುತ್ತಿದ್ದಾಳೆ.
ಕಿಡ್ನಾಪರ್!
ಕ್ಲೋಯ್ ಪ್ರತಿದಿನ ಬೆಳಗ್ಗೆ ಏಳುವಾಗ ತಾನು ಆರು ವರ್ಷದ ಕೂಸು ಎನ್ನುವ ಭಾವನೆಯಲ್ಲೇ ಇರುತ್ತಾಳೆ. ಹಾಗೆಯೇ, ಅವಳ ಸಂಗಾತಿ (Partner) ಜೇಮ್ಸ್ (James) ಅನ್ನು ತನ್ನನ್ನು ಕಿಡ್ನ್ಯಾಪ್ ಮಾಡಿದ ಕಳ್ಳ (Kidnaper) ಎಂಬುದಾಗಿ ಭಾವಿಸುತ್ತಾಳೆ. ಅವಳಿಗೆ ಆರು ವರ್ಷದವರೆಗಿನ ಘಟನೆಗಳೆಲ್ಲವೂ ನೆನಪಿದೆ. ಆ ಬಳಿಕದ ಬದುಕನ್ನು ದಿನವೂ ನೆನಪು ಮಾಡಿಕೊಡಬೇಕು. ಅವಳ ಸಂಗಾತಿ ಜೇಮ್ಸ್ ಪ್ರತಿದಿನ ಬೆಳಗ್ಗೆ ತಾನು ಅವಳ ಸಂಗಾತಿಯೆಂದು ನೆನಪು ಮಾಡಿಕೊಡುತ್ತಾನೆ.
ನಾವೆಲ್ಲರೂ ಬಾಲ್ಯಕಾಲವನ್ನು ನೆನಪಿಸಿಕೊಳ್ಳುತ್ತೇವೆ. ಆದರೆ, ಯಾವುದಾದರೂ ನಿರ್ದಿಷ್ಟ ವಯಸ್ಸನ್ನು ನೆನಪಿಸಿಕೊಂಡು, ಆ ವಯಸ್ಸಿನಲ್ಲಿ ನಾವು ಹೇಗಿದ್ದೇವೋ ಹಾಗೆ ವರ್ತಿಸುವುದಿಲ್ಲ. ಆದರೆ, ಕ್ಲೋಯ್ ಹಾಗಲ್ಲ. ಆರು ವರ್ಷದ ಬಾಲಕಿಯಂತೆ ವರ್ತಿಸುತ್ತಾಳೆ. ಒಮ್ಮೊಮ್ಮೆ ರಾತ್ರಿ ಎದ್ದು ಮನೆಯಿಂದ ಆಚೆ ಹೋಗುತ್ತಾಳೆ. ಬೆಳಗ್ಗೆ ಎದ್ದಾಗ ಕಿಡ್ನಾಪರ್ ಎಂದು ಭಾವಿಸಿ ಜೇಮ್ಸ್ ಗೆ ಚಾಕು ಹಿಡಿದು ನಿಲ್ಲುತ್ತಾಳೆ. ಕಳೆದ 23 ವರ್ಷಗಳ ಸ್ಮರಣೆ ಅವಳ ಮಿದುಳಿನಿಂದ (Brain) ಹಾರಿ ಹೋಗಿದೆ ಎಂದರೆ ಇದೆಂತಹ ವಿಚಿತ್ರ ಸ್ಥಿತಿ ಎಂದು ಅಂದಾಜಿಸಬಹುದು. ಆದರೆ, ಕೆಲವೊಮ್ಮೆ ಆಕೆ ಹದಿಹರೆಯದವಳಂತೆ ವರ್ತಿಸುವುದೂ ಇದೆ. ಈ ಎಲ್ಲ ಸನ್ನಿವೇಶಗಳನ್ನು 39 ವರ್ಷದ ಜೇಮ್ಸ್ ಅತ್ಯಂತ ಕೂಲಾಗಿ ನಿಭಾಯಿಸುತ್ತಾನೆ. ಪ್ರತಿದಿನ ಆಕೆಯ ಸ್ಮರಣೆ (Memory) ಬರುವವರೆಗೂ ಸಮಾಧಾನ ಚಿತ್ತದಿಂದ ಇದ್ದು ನೆನಪು ಮರಳಿಸಲು ಯತ್ನಿಸುತ್ತಾನೆ. ಮಿದುಳಿಗೆ ಆಗ ಪಾರ್ಶ್ವವಾಯು (Stroke) ವಿನಿಂದ ಕ್ಲೋಯ್ ಈ ಸಮಸ್ಯೆ ಎದುರಿಸುತ್ತಿದ್ದಾಳೆ.
ಇದನ್ನೂ ಓದಿ: ಮುನಿಸಿಕೊಂಡ ಹೆಂಡತಿಯನ್ನು ಹೀಗೆ ಒಲಿಸಿಕೊಳ್ಳಿ
ಒಂದು ಸನ್ನಿವೇಶವನ್ನು ಕ್ಲೋಯ್ ನೆನಪಿಸಿಕೊಂಡಿದ್ದಾಳೆ. ಒಮ್ಮೆ ಕ್ಲೋಯ್ ಬಾಲ್ಯಕಾಲದ (Childhood) ನೆನಪಿನಲ್ಲಿ ಮನೆಯಿಂದ ಇಳಿದು ಹೊರಗೆ ಹೋಗಿದ್ದಳು. ಅಲ್ಲಿನ ಮೆಟ್ಟಿಲುಗಳ ಮೇಲೆ ಸುಮಾರು ಹೊತ್ತು ಕುಳಿತ ಬಳಿಕ ತಿರುಗಿ ನೋಡಿದರೆ ಇದು ತನ್ನ ಮನೆಯೇ ಇರಬಹುದು ಎನಿಸಿತಂತೆ. ಮನೆಯನ್ನು ಪ್ರವೇಶಿಸಿದಾಗ ಆಕೆಯ ಸಂಗಾತಿ ಜೇಮ್ಸ್ ತನ್ನ ನಾಯಿಯೊಂದಿಗೆ ಸೋಫಾದಲ್ಲಿ ಕುಳಿತಿದ್ದ. ಆಗ ಕ್ಲೋಯ್ ಎತ್ತರದ ಸ್ವರದಲ್ಲಿ “ನೀನ್ಯಾರು, ಇಲ್ಲೇನು ಮಾಡ್ತಾ ಇದ್ದೀಯ? ಈ ನಾಯಿಯನ್ನು ಇಲ್ಲೇಕೆ ತಂದೆ? ನಂಗೆ ನನ್ನ ಅಪ್ಪ, ಅಮ್ಮ ಬೇಕುʼ ಎಂದು ಗಲಾಟೆ ಮಾಡಿದಳು. ಆದರೆ, ಇಂತಹ ಸಮಯದಲ್ಲಿ ಏನು ಮಾಡಬೇಕೆಂದು ಜೇಮ್ಸ್ ಗೆ ತಿಳಿದಿದೆ ಮತ್ತು ಆತ ಭಯಪಡುವುದಿಲ್ಲ. ಅವಳಿಗೆ ನೆನಪು ತರಲೆಂದು ಹತ್ತಿರ ಬಂದು ಆಕೆಯನ್ನು ಸ್ಪರ್ಶಿಸಿದಾಗ ಅವನನ್ನು ತಳ್ಳಿ ಸ್ಪ್ಯಾನರ್ ತೆಗೆದುಕೊಂಡು ಆತನಿಗೆ ಹೊಡೆದಾಗ ಆತ ಕೂಲಾಗಿಯೇ, ನಿನ್ನ ಅಪ್ಪ ಅಮ್ಮ ಯಾರೆಂದು ನನಗೆ ತಿಳಿದಿದೆ ಎಂದು ಹೇಳಿದ. ಇಬ್ಬರೂ ಸೇರಿ ಅವರನ್ನು ಕೂಗಿ ಕರೆದಿದ್ದರು. ಈ ಘಟನೆ ನಡೆದಿದ್ದು ರಾತ್ರಿ. ಮಾರನೆಯ ದಿನ ಬೆಳಗ್ಗೆ ಏಳುವಾಗ ಆರಾಮಾಗಿದ್ದಳು. ಈ ಸಮಸ್ಯೆಯ ಮಗ್ಗಲುಗಳನ್ನು ಬಿಂಬಿಸುವ ಇಂತಹ ಹಲವಾರು ಘಟನೆಗಳನ್ನು ಕ್ಲೋಯ್ ಇತ್ತೀಚೆಗೆ ಹಂಚಿಕೊಂಡಿದ್ದಾಳೆ.
ಇದನ್ನೂ ಓದಿ: 30ವರ್ಷ ವಯಸ್ಸಿನ ಬಳಿಕ ಗೆಳೆಯರನ್ನು ಕಳೆದುಕೊಳ್ಳಲು ಕಾರಣವೇನು?
“ಜೇಮ್ಸ್ ಎಲ್ಲ ಅಪಸವ್ಯಗಳನ್ನು ಸಹಿಸಿಕೊಳ್ಳುತ್ತಾನೆ. ಆದರೆ, ಇದು ಅವನನ್ನು ಆತಂಕಕ್ಕೆ ದೂಡುತ್ತಿದೆ. ಈ ಸಮಸ್ಯೆ ಅನುಭವಿಸುವುದು ಕಷ್ಟಕರʼ ಎಂದಾಕೆ ಹೇಳಿಕೊಂಡಿದ್ದಾಳೆ.