Health Tips: ಬೆಡ್‌ ಪಕ್ಕ ತಂದಿಟ್ಟ ನೀರನ್ನು ರಾತ್ರಿಯೆದ್ದು ಕುಡಿಯುವುದು ಸೂಕ್ತವೇ ?

By Suvarna News  |  First Published Mar 1, 2022, 2:20 PM IST

ರಾತ್ರಿ ಮಲಗುವಾಗ ಹಲವರು ಬೆಡ್ ಪಕ್ಕ ಪಾತ್ರೆ, ಬಾಟಲ್‌ನಲ್ಲಿ ನೀರು (Water) ತಂದಿಟ್ಟುಕೊಳ್ಳುತ್ತಾರೆ. ರಾತ್ರಿ ಎಚ್ಚರವಾದಾಗ ಈ ನೀರನ್ನು ಕುಡಿದು ಮಲಗಿಬಿಡುತ್ತಾರೆ. ಆದರೆ ಈ ರೀತಿ ತಂದಿಟ್ಟಿರುವ ನೀರನ್ನು ಕುಡಿಯೋದು ಆರೋಗ್ಯ (Health)ಕ್ಕೆ ಒಳ್ಳೇದಲ್ಲ ಅನ್ನೋದು ನಿಮಗೆ ಗೊತ್ತಾ?


ರಾತ್ರಿ ಮಲಗುವ ಮೊದಲು ನೀರು (Water) ಕುಡಿದು ಮಲಗುವ ಅಭ್ಯಾಸ ಹಲವರಿಗಿದೆ. ಆದರೆ ಇನ್ನೂ ಕೆಲವರು ರಾತ್ರಿ ಮಲಗುವಾಗ ಬೆಡ್ ಪಕ್ಕ ಪಾತ್ರೆ, ಬಾಟಲ್‌ (Bottle)ನಲ್ಲಿ ನೀರು ತಂದಿಟ್ಟುಕೊಳ್ಳುತ್ತಾರೆ. ರಾತ್ರಿ ಎಚ್ಚರವಾದಾಗ ಕುಡಿಯಲು, ದಿಢೀರ್ ಕೆಮ್ಮು ಬಂದಾಗ ಪಕ್ಕದಲ್ಲೇ ನೀರಿದ್ದರೆ ಒಳ್ಳೆಯದು ಎಂಬುದು ಹಲವರ ಅಭಿಪ್ರಾಯ. ಅದರಲ್ಲೂ ವಯಸ್ಸಾದವರು ಮನೆಯಲ್ಲಿದ್ದರೆ ಅವರ ಪಕ್ಕ ಬಾಟಲ್‌ನಲ್ಲಿ ನೀರು ತುಂಬಿಡುವುದು ಹೆಚ್ಚಿನವರು ಮರೆಯುವುದಿಲ್ಲ. 

ರಾತ್ರಿ ಮಲಗಿದ ಹಲವರು ರಾತ್ರಿ ಬಾಯಾರಿಕೆಯಾದ ಭಾವನೆಯಿಂದ ಎಚ್ಚರಗೊಳ್ಳುತ್ತಾರೆ. ನಂತರ ಹಾಸಿಗೆಯ ಪಕ್ಕದ ಮೇಜಿನ ಮೇಲೆ ಇರಿಸಲಾಗಿರುವ ಬಾಟಲ್‌ನಿಂದ ನೀರು ಕುಡಿಯುತ್ತಿರುತ್ತಾರೆ. ಆದರೆ ನೀವು ರಾತ್ರಿಯಲ್ಲಿ ತಂದಿಟ್ಟಿರುವ ನೀರನ್ನು ಕುಡಿಯಬಹುದೇ, ಕುಡಿಯಬಾರದೇ ಎಂಬ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ ?

Tap to resize

Latest Videos

ಮಾನವ ದೇಹವು 70 ಪ್ರತಿಶತ ನೀರಿನಿಂದ ಮಾಡಲ್ಪಟ್ಟಿದೆ. ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು, ಬೆವರು, ಮೂತ್ರ ವಿಸರ್ಜನೆ ಮತ್ತು ಕರುಳಿನ ಚಲನೆಗಳ ಮೂಲಕ ಅದನ್ನು ನಿರ್ವಿಷಗೊಳಿಸಲು ಮತ್ತು ಕೀಲುಗಳನ್ನು ನಯಗೊಳಿಸಲು ನೀರನ್ನು ಕುಡಿಯುವುದು ಅತ್ಯಗತ್ಯವಾಗಿದೆ. ಆದರೆ ಆರೋಗ್ಯ (Health)ವಾಗಿರಲು ಶುದ್ಧವಾಗಿರುವ ನೀರನ್ನು ಕುಡಿಯಬೇಕಾದುದು ಅದಕ್ಕಿಂತ ಹೆಚ್ಚು ಮುಖ್ಯ.

Health Tips: ವರ್ಕೌಟ್ ಮಾಡುವಾಗ ಎಷ್ಟು ನೀರು ಕುಡಿಯಬೇಕು ?

ನೀರು ಹಾಳಾಗುತ್ತದಾ ? ಕುಡಿಯಲು ಯೋಗ್ಯವಿಲ್ಲದಂತೆ ಆಗುತ್ತದಾ ಎಂಬುದು ಹಲವರನ್ನು ಕಾಡುವ ಪ್ರಶ್ನೆ. ಮುಚ್ಚಿಟ್ಟಿರದ ನೀರು ಇಂಗಾಲದ ಡೈಆಕ್ಸೈಡ್‌ನೊಂದಿಗೆ ಬೆರೆಯುತ್ತದೆ. ಯಾವುದೇ ಹಾನಿಕಾರಕ ಪರಿಣಾಮವಿಲ್ಲದಿದ್ದರೂ, ಇದು ನೀರಿನ ಪಿಹೆಚ್ ಮಟ್ಟವನ್ನು ಸ್ವಲ್ಪ ಕಡಿಮೆ ಮಾಡುತ್ತದೆ ಎಂದು ದೆಹಲಿಯ ಧರ್ಮಶಿಲಾ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆಂತರಿಕ ಔಷಧದ ಸಲಹೆಗಾರ ಡಾ.ಗೌರವ್ ಜೈನ್ ಹೇಳುತ್ತರೆ. 

ಆರೋಗ್ಯವಂತ ವ್ಯಕ್ತಿಯು ರಾತ್ರಿ ಪೂರ್ತಿ ಇಟ್ಟಿರುವ ನೀರನ್ನು ಕುಡಿಯಬಹುದಾಗಿದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಇದೇ ನೀರನ್ನು ಈಗಾಗಲೇ ಅನಾರೋಗ್ಯವಿರುವ ವ್ಯಕ್ತಿ ಸೇವಿಸಿದರೆ, ಅದು ಅವರ ರೋಗನಿರೋಧಕ ಶಕ್ತಿಯನ್ನು ಕಡಿಮೆಗೊಳಿಸಬಹುದು. ಮಾಲಿನ್ಯದ ಮೂಲಕ ಮತ್ತೊಂದು ಸೋಂಕಿಗೆ ಕಾರಣವಾಗಬಹುದು. ಆದರೆ ಸರಿಯಾಗಿ ಸಂಗ್ರಹಿಸಿದರೆ ನೀರನ್ನು ಯಾರು ಸಹ ಕುಡಿಯಬಹುದು. ಇದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಡಾ.ಗೌರವ್ ಜೈನ್ ತಿಳಿಸಿದ್ದಾರೆ. 

ಮುಂಬೈನ ಭಾಟಿಯಾ ಆಸ್ಪತ್ರೆಯ ಡಾ.ಆಶಿತ್ ಭಗವತಿ ಮಾತನಾಡಿ, ನೀರನ್ನು ಮುಚ್ಚದೆ ಬಿಟ್ಟರೆ ಮಾಲಿನ್ಯ ಉಂಟಾಗುತ್ತದೆ. ಪರಿಸರದಲ್ಲಿರುವ ಸಣ್ಣ ಧೂಳಿನ ಕಣಗಳು ಮತ್ತು ಇತರ ಮಾಲಿನ್ಯಕಾರಕಗಳು ನೀರಿಗೆ ಸೇರಿಕೊಳ್ಳುತ್ತವೆ.  ಹೀಗಾಗಿ ರಾತ್ರಿಯಿಡೀ ಒಂದು ಲೋಟ ನೀರನ್ನು ಮುಚ್ಚದೆ ಇಡುವುದರಿಂದ ಧೂಳು ಮತ್ತು ಇತರ ಕಣಗಳಿಂದ ಮಾಲಿನ್ಯ ( Pollution)ವಾಗುತ್ತದೆ’ ಎಂದು ಡಾ.ಭಗವತಿ ಹೇಳಿದರು.

Shower Secrets: ಸ್ನಾನಕ್ಕೆ ತಣ್ಣೀರು ಒಳ್ಳೆಯದಾ ? ಬಿಸಿ ನೀರಾ ?

ನೀರನ್ನು ಶೇಖರಿಸಿಡಲು ಬಳಸಲಾಗುವ ಪಾತ್ರೆಯಿಂದಾಗಿಯೂ ನೀರು ಕುಡಿಯಲು ಯೋಗ್ಯವಾಗದೆ ಇರಬಹುದು. ಪ್ರತಿ ಬಳಕೆಯ ನಂತರ ನೀರನ್ನು ಸಂಗ್ರಹಿಸಿಡುವ ಪಾತ್ರೆ ಅಥವಾ ಬಾಟಲಿಯನ್ನು ಸ್ವಚ್ಛಗೊಳಿಸುವುದು ಅಗತ್ಯವಾಗಿರುತ್ತದೆ. ಹಾಗೆ ಮಾಡದಿರುವುದು ಬ್ಯಾಕ್ಟೀರಿಯ ಮತ್ತು ಇತರ ವೈರಸ್‌ಗಳ ಸಂಗ್ರಹಣೆಯಾಗಲು ಕಾರಣವಾಗುತ್ತದೆ ಎಂದು ಲೀಡ್ ಹೆಲ್ತ್ ಕೋಚ್, ಪೌಷ್ಟಿಕತಜ್ಞ ಪ್ರೀತಿ ತ್ಯಾಗಿ ವಿವರಿಸಿದ್ದಾರೆ.

ಕಾರಲ್ಲಿ ಪ್ಲಾಸ್ಟಿಕ್ ಬಾಟಲಿಗಳು ಅಥವಾ ಮುಚ್ಚಿದ ಪಾತ್ರೆಗಳಲ್ಲಿ ದೀರ್ಘಕಾಲ ಇರಿಸಲಾಗಿರುವ ನೀರು ಕುಡಿಯಲು ಸುರಕ್ಷಿತವಲ್ಲ ಏಕೆಂದರೆ ಅದು ಸೂರ್ಯನ ಬೆಳಕಿನಲ್ಲಿ ಬಿಸಿಯಾಗುತ್ತದೆ ಮತ್ತು ಬ್ಯಾಕ್ಟೀರಿಯಾ (Bacteria) ಸಂತಾನೋತ್ಪತ್ತಿ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಡಾ.ಜೈನ್ ಹೇಳಿದರು.

ರಾತ್ರಿಯಿಡೀ ಹಾಸಿಗೆಯ ಪಕ್ಕ ನೀರು ತಂದಿಟ್ಟು ಆಗಾಗ ಕುಡಿಯುವುದು ಉತ್ತಮವಲ್ಲ. ಬದಲಾಗಿ ವಾಟರ್ ಫಿಲ್ಟರ್‌ನಂತಹ ನೀರಿನ ಮೂಲದವರೆಗೆ ನಡೆದು ತಾಜಾ ಗ್ಲಾಸ್ ನೀರು ಹಿಡಿದು  ಕುಡಿಯುವುದು ಉತ್ತಮ ಅಭ್ಯಾಸವಾಗಿದೆ ಎಂದು ವೈದ್ಯರು ಸಲಹೆ ನೀಡುತ್ತಾರೆ. ಅಲ್ಲದೆ, ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಸಂಗ್ರಹಿಸುವುದನ್ನು ತಪ್ಪಿಸುವುದು ಒಳ್ಳೆಯದು. ಏಕೆಂದರೆ ಇದರಲ್ಲಿರುವ ನೀರು ಬಾಟಲ್ ತಯಾರಿಸಲು ಬಳಸುವ ರಾಸಾಯನಿಕಗಳಿಂದ ಕಲುಷಿತಗೊಳ್ಳುತ್ತದೆ ಎಂದು ಡಾ.ಭಗವತಿ ಹೇಳಿದರು. ಹಿಂದಿನ ಕಾಲದಲ್ಲಿ ಜನರು ನೀರನ್ನು ಸಂಗ್ರಹಿಸಲು ಮಣ್ಣಿನ ಮಡಕೆಗಳು ಮತ್ತು ತಾಮ್ರವನ್ನು ಬಳಸುತ್ತಿದ್ದರು. ಇದು ಆರೋಗ್ಯಕ್ಕೆ ಪೂರಕವಾಗಿತ್ತು ಎಂದಿದ್ದಾರೆ.

ಆಯುರ್ವೇದ ವೈದ್ಯರ ಪ್ರಕಾರ, ಆಯುರ್ವೇದದ ಪ್ರಕಾರ ತಾಮ್ರ (Copper)ದ ಪಾತ್ರೆಯಲ್ಲಿ ಸಂಗ್ರಹವಾಗಿರುವ ನೀರಿನ ಗುಣಮಟ್ಟ ಉತ್ತಮವಾಗಿರುತ್ತದೆ. ಆಯುರ್ವೇದವು ತಾಮ್ರದ ಪಾತ್ರೆಗಳಲ್ಲಿ ನೀರನ್ನು ಸಂಗ್ರಹಿಸಲು ಶಿಫಾರಸು ಮಾಡಿದೆ, ಏಕೆಂದರೆ ಅದು ಬ್ಯಾಕ್ಟೀರಿಯಾವನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿದೆ. ಆದರೂ  ವಾರಕ್ಕೆ ಎರಡು ಬಾರಿಯಾದರೂ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಮರೆಯದಿರಿ.

click me!