
ತಿರುವನಂತಪುರಂ: ಭಾರತದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿದೆ. ವಿದೇಶದಿಂದ ಕೇರಳಕ್ಕೆ ಹಿಂದಿರುಗಿದ ವ್ಯಕ್ತಿಯಲ್ಲಿ ಮಂಗನ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡ ನಂತರ ವ್ಯಕ್ತಿಯ ಬ್ಲಡ್ ಸ್ಯಾಂಪಲ್‌ನ್ನು ನ್ಯಾಷನಲ್ ಇನ್ಸಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಿಕೊಡಲಾಗಿತ್ತು. ಪರೀಕ್ಷಾ ವರದಿಯಲ್ಲಿ ಕೊಲ್ಲಂನ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ದುಬೈನಿಂದ ತಿರುವನಂತಪುರಂಗೆ ಜುಲೈ 12ರಂದು ಆಗಮಿಸಿದ ವ್ಯಕ್ತಿಯೊಬ್ಬರಿಗೆ ಮಂಕಿಪಾಕ್ಸ್ ಸೋಂಕು ತಗುಲಿದ್ದು, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ಐಸಿಎಂಆರ್) ಮಾರ್ಗಸೂಚಿ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತಿದೆ
ಸೋಂಕಿನ ಕುರಿತು ಮುನ್ನೆಚ್ಚರಿಕೆ ವಹಿಸಲು ಕೇಂದ್ರ ಸೂಚನೆ
ವ್ಯಕ್ತಿಗೆ ಮಂಗನ ಕಾಯಿಲೆಯ (Monkey pox) ಲಕ್ಷಣಗಳು ಕಾಣಿಸಿಕೊಂಡಿದ್ದು, ವಿದೇಶದಲ್ಲಿ ಮಂಗನ ಕಾಯಿಲೆಯ ರೋಗಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಎಂದು ಸಚಿವರು ತಿಳಿಸಿದ್ದಾರೆ. ಸದ್ಯಕ್ಕೆ ಸೋಂಕು (Virus) ತಗುಲಿದ ವ್ಯಕ್ತಿಯ ಆರೋಗ್ಯ (Health) ಸ್ಥಿರವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಕೇರಳದಲ್ಲಿ ಮಾತ್ರವಲ್ಲ ಭಾರತದಲ್ಲಿಯೂ ಇದು ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ಕೇಂದ್ರ ಸರಕಾರವೂ ಮಂಕಿಪಾಕ್ಸ್ ಸೋಂಕನ್ನು ಗಂಭೀರವಾಗಿ ಪರಿಗಣಿಸಿದ್ದು, ಕೇಂದ್ರೀಯ ತಂಡವನ್ನು ಕೇರಳಕ್ಕೆ ಕಳುಹಿಸಲು ತೀರ್ಮಾನಿಸಿದೆ. ಈಗಾಗಲೇ ಎಲ್ಲಾ ರಾಜ್ಯಗಳಿಗೆ ಸೋಂಕಿನ ಕುರಿತು ಮುನ್ನೆಚ್ಚರಿಕೆ ವಹಿಸಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪತ್ರ ಬರೆದಿದೆ.
ಮಂಕಿಪಾಕ್ಸ್ ವೈರಸ್ 2017ರಲ್ಲಿ ಕಂಡು ಬಂದ ಸೋಂಕಿಗಿಂತಲೂ ದುರ್ಬಲ, ಆದರೆ ಹೆಚ್ಚು ಅಪಾಯಕಾರಿ !
ಕೇರಳ ರಾಜ್ಯದದ ಆರೋಗ್ಯ ಇಲಾಖೆ ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು (Guidelines) ಹೊರಡಿಸಿದೆ. ರೋಗಿಯ ಆರೋಗ್ಯ ಸಾಕಷ್ಟು ಸ್ಥಿರವಾಗಿದೆ. ರೋಗಿಯ ಎಲ್ಲಾ ಪ್ರಾಥಮಿಕ ಸಂಪರ್ಕಗಳನ್ನು ಗುರುತಿಸಲಾಗಿದೆ - ಅವರ ತಂದೆ, ತಾಯಿ, ಟ್ಯಾಕ್ಸಿ ಚಾಲಕ, ಆಟೋ ಚಾಲಕ ಮತ್ತು ಪಕ್ಕದ ಸೀಟಿನಲ್ಲಿದ್ದ ಅದೇ ವಿಮಾನದ 11 ಪ್ರಯಾಣಿಕರ ಮಾಹಿತಿ ಪಡೆಯಲಾಗಿದೆ ಎಂದು ವೀಣಾ ಜಾರ್ಜ್ ಹೇಳಿದರು. ಯಾರೂ ಆತಂಕ ಪಡುವುದು ಬೇಡ. ಸುರಕ್ಷತೆಗಾಗಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮಂಕಿಪಾಕ್ಸ್ ಎಂದರೇನು ?
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಮಂಕಿಪಾಕ್ಸ್ ಒಂದು ವೈರಲ್ ಝೂನೊಸಿಸ್ (ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್) ಆಗಿದ್ದು, ಸಿಡುಬು ರೋಗಿಗಳಲ್ಲಿ ಹಿಂದೆ ಕಂಡುಬರುವ ರೋಗಲಕ್ಷಣಗಳನ್ನು ಹೋಲುತ್ತದೆ, ಆದರೂ ಇದು ಪ್ರಾಯೋಗಿಕವಾಗಿ ಕಡಿಮೆ ತೀವ್ರವಾಗಿರುತ್ತದೆ. 1980ರಲ್ಲಿ ಸಿಡುಬು ನಿರ್ಮೂಲನೆ ಮತ್ತು ಸಿಡುಬು ವ್ಯಾಕ್ಸಿನೇಷನ್ ನಂತರದ ನಿಲುಗಡೆಯೊಂದಿಗೆ, ಮಂಕಿಪಾಕ್ಸ್ ಸಾರ್ವಜನಿಕ ಆರೋಗ್ಯಕ್ಕೆ ಪ್ರಮುಖವಾದ ಆರ್ಥೋಪಾಕ್ಸ್ವೈರಸ್ ಆಗಿ ಹೊರಹೊಮ್ಮಿದೆ.
ಮಂಕಿಪಾಕ್ಸ್ ವೈರಸ್‌ನ ಲಕ್ಷಣಗಳೇನು ?
ಮಂಕಿಪಾಕ್ಸ್ ವೈರಸ್ ಸಾಮಾನ್ಯವಾಗಿ ಜ್ವರ, ದದ್ದು ಮತ್ತು ಊದಿಕೊಂಡ ದುಗ್ಧರಸ ಗ್ರಂಥಿಗಳೊಂದಿಗೆ ಕಾಣಿಸಿಕೊಳ್ಳುತ್ತದೆ. ಇದು ಹಲವಾರು ಆರೋಗ್ಯ ಸಮಸ್ಯೆಗ:ೊಗೆ ಕಾರಣವಾಗಬಹುದು. ಇದು ಸಾಮಾನ್ಯವಾಗಿ ಎರಡರಿಂದ ನಾಲ್ಕು ವಾರಗಳವರೆಗೆ ರೋಗಲಕ್ಷಣಗಳೊಂದಿಗೆ ಕಂಡು ಬರಬಹುದು. ಕೆಲವೊಮ್ಮೆ ಇದು ತೀವ್ರ ಅಸ್ವಸ್ಥತೆಗೂ ಕಾರಣವಾಗಬಹುದು.
ಲೈಂಗಿಕ ಸಂಪರ್ಕದ ಮೂಲಕವೂ ಹರಡುತ್ತಂತೆ ಮಂಕಿಪಾಕ್ಸ್ ವೈರಸ್ !
ಮಂಕಿಪಾಕ್ಸ್ ಹೇಗೆ ಹರಡುತ್ತದೆ ?
ವೈರಸ್ ಚರ್ಮ, ಉಸಿರಾಟದ ಮಾರ್ಗ ಅಥವಾ ಕಣ್ಣು, ಮೂಗು ಅಥವಾ ಬಾಯಿಯ ಮೂಲಕ ದೇಹವನ್ನು ಪ್ರವೇಶಿಸಬಹುದು. ಮಂಕಿಪಾಕ್ಸ್ ಸೋಂಕಿತ ವ್ಯಕ್ತಿ ಅಥವಾ ಪ್ರಾಣಿಯೊಂದಿಗೆ ನಿಕಟ ಸಂಪರ್ಕದಿಂದ ಸೋಂಕು ಮನುಷ್ಯರಿಗೆ ಹರಡುತ್ತದೆ. ವರದಿಗಳ ಪ್ರಕಾರ, ಇದು ಇಲಿಗಳು ಮತ್ತು ಅಳಿಲುಗಳಿಂದ ಹರಡುವ ಸಾಧ್ಯತೆ ಹೆಚ್ಚಿದೆ. ಮಂಕಿಪಾಕ್ಸ್ ರೋಗವು ಗಾಯಗಳು, ದೇಹದ ದ್ರವಗಳು, ಉಸಿರಾಟದ ಹನಿಗಳು ಮತ್ತು ಹಾಸಿಗೆಯಂತಹ ಕಲುಷಿತ ವಸ್ತುಗಳ ಮೂಲಕ ಹರಡುತ್ತದೆ ಎಂಬುದು ಸಾಬೀತಾಗಿದೆ.
ಮಂಕಿಪಾಕ್ಸ್‌ಗೆ ಚಿಕಿತ್ಸೆ
ಸಿಡುಬು ನಿರ್ಮೂಲನಾ ಕಾರ್ಯಕ್ರಮದ ಸಮಯದಲ್ಲಿ ಬಳಸಲಾದ ಲಸಿಕೆಗಳು ಮಂಕಿಪಾಕ್ಸ್ ವೈರಸ್ ವಿರುದ್ಧ ರಕ್ಷಣೆಯನ್ನು ಒದಗಿಸಿವೆ. ಹೊಸ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅವುಗಳಲ್ಲಿ ಒಂದನ್ನು ರೋಗವನ್ನು ತಡೆಗಟ್ಟಲು ಅನುಮೋದಿಸಲಾಗಿದೆ. ಸಿಡುಬಿನ ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಲಾದ ಆಂಟಿವೈರಲ್ ಏಜೆಂಟ್ ಅನ್ನು ಮಂಗನ ಕಾಯಿಲೆಯ ಚಿಕಿತ್ಸೆಗಾಗಿ ಬಳಸಲು ಸಹ ಪರವಾನಗಿ ನೀಡಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.