ಗುಡ್‌ನ್ಯೂಸ್‌ ! ಶುಗರ್ ಪೇಷೆಂಟ್ಸ್‌ ಗಾಯ ಗುಣಪಡಿಸುತ್ತೆ ಈ ಸ್ಲಿಪ್ಪರ್ಸ್‌

By Suvarna News  |  First Published Jun 14, 2022, 1:08 PM IST

ಮಧುಮೇಹ (Diabetes) ಇರುವವರಿಗೆ ಉಂಟಾಗೋ ಆರೋಗ್ಯ ಸಮಸ್ಯೆಗಳು (Health Problem) ಒಂದೆರಡಲ್ಲ. ಪಾದ (Foot)ಗಳಿಗೆ ಗಾಯವಾದರಂತೂ ಹೇಳೋದೇ ಬೇಡ. ಇದು ವಾಸಿಯಾಗಲು ವಾರಗಟ್ಟಲೆ ತೆಗೆದುಕೊಳ್ಳುತ್ತದೆ. ಇಂಥಾ ಸಂದರ್ಭದಲ್ಲಿ ರೋಗಿಗಳು ನಡೆದಾಡಲು ಸಹ ಕಷ್ಟಪಡುತ್ತಾರೆ. ಆದ್ರೆ ಇನ್ಮುಂದೆ ಅಂಥಾ ಕಷ್ಟ ಇರಲ್ಲ. 


ಇತ್ತೀಚಿನ ದಿನಗಳಲ್ಲಿ ಮಧುಮೇಹವು ಒಂದು ಸಾಮಾನ್ಯ ಕಾಯಿಲೆಯಾಗಿ ಬದಲಾಗಿದೆ. ಬಹಳಷ್ಟು ಜನರು, ವಿಶೇಷವಾಗಿ ಭಾರತದಲ್ಲಿ, ಇದರ ಮಧುಮೇಹ ರೋಗಕ್ಕೆ ಒಳಗಾಗುತ್ತಿದ್ದಾರೆ. ಒಬ್ಬ ವ್ಯಕ್ತಿಯು ಮಧುಮೇಹವನ್ನು (Diabetes) ಹೊಂದಿದ್ದರೆ, ವ್ಯಕ್ತಿಯ ದೇಹದ ಅನೇಕ ಭಾಗಗಳು ನಿಧಾನವಾಗಿ ಹಾನಿಗೊಳಗಾಗುತ್ತಿರುತ್ತವೆ. ಮಾತ್ರವಲ್ಲ ದೇಹದಲ್ಲಿ ಯಾವುದೇ ಗಾಯ (Injury)ವಾದರೂ ಸಹ ಇಂಥವರು ಅದನ್ನು ಗುಣಪಡಿಸಿಕೊಳ್ಳಲು ಒದ್ದಾಡಬೇಕಾಗುತ್ತದೆ. ಅದರಲ್ಲೂ  ಪಾದಗಳಲ್ಲಿ ನೋವಾದರಂತೂ ನಡೆಯಲೂ ಆಗದೆ, ಕೂರಲೂ ಆಗದೆ, ಗಾಯ ಗುಣವೂ ಆಗದೆ ಒದ್ದಾಡಬೇಕಾಗುತ್ತದೆ. ಆದ್ರೆ ಇನ್ಮುಂದೆ ಆ ಸಮಸ್ಯೆ ಇರೋದಿಲ್ಲ.

ಕರ್ನಾಟಕ ಅಂತಃಸ್ರಾವಶಾಸ್ತ್ರ ಮತ್ತು ಸಂಶೋಧನಾ ಸಂಸ್ಥೆ (KIER) ಸಹಯೋಗದೊಂದಿಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc) ನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಂಶೋಧಕರು ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ವಿಶಿಷ್ಟವಾದ ಸ್ವಯಂ-ನಿಯಂತ್ರಕ ಪಾದರಕ್ಷೆಗಳನ್ನು ಅಭಿವೃದ್ಧಿಪಡಿಸಿದ್ದಾರೆ.

Tap to resize

Latest Videos

ಪ್ರೆಗ್ನೆನ್ಸಿಯಲ್ಲಿ ಮಧುಮೇಹ, ಹುಷಾರಾಗಿದ್ದರೆ ನಿಯಂತ್ರಣ ಸುಲಭ

ಮಧುಮೇಹಿಗಳ ಪಾದಗಳಿಗೆ ಗಾಯಗಳಾದರೆ, ಅವು ವಾಸಿಯಾಗಲು ಸಾಕಷ್ಟು ಸಮಯ ಹಿಡಿಯುತ್ತದೆ. ಆರೋಗ್ಯವಂತ ವ್ಯಕ್ತಿಯಲ್ಲಿ ಗಾಯ ಬೇಗನೇ ವಾಸಿಯಾಗುತ್ತದೆ. ಗಾಯ ಒಣಗಲು ತಡವಾದಷ್ಟು ರೋಗಿ ಸೋಂಕಿಗೆ ಒಳಗಾಗುವ ಸಾಧ್ಯತೆಯೂ ಹೆಚ್ಚು. ಹೀಗಾಗಿ ಆರೋಗ್ಯ ಹದಗೆಟ್ಟ ಸಂದರ್ಭದಲ್ಲಿ ಕೆಲವೊಮ್ಮೆ ಬೆರಳು, ಪಾದ ಅಥವಾ ಕಾಲು ಕತ್ತರಿಸುವ ಅನಿವಾರ್ಯತೆಯೂ ಬರುತ್ತದೆ. ಇವೆಲ್ಲಾ ಸಮಸ್ಯೆಗಳನ್ನು ನಿಭಾಯಿಸಲು ವಿಜ್ಞಾನಿಗಳ ತಂಡ ಮಧುಮೇಹಿ ವ್ಯಕ್ತಿಯ ನಡಿಗೆಯ ಶೈಲಿ, ಪಾದಗಳ (Foot) ಅಳತೆ ಮತ್ತು ಆಕಾರಕ್ಕೆ ತಕ್ಕಂತೆ 3 ಡಿ ಪ್ರಿಂಟೆಡ್‌ ಪಾದರಕ್ಷೆಗಳನ್ನು ವಿನ್ಯಾಸಗೊಳಿಸಿದೆ. 

ಸ್ವಯಂ ನಿಯಂತ್ರಿತ ಚಿಕಿತ್ಸಕ ಗುಣ ಹೊಂದಿರುವ ಪಾದರಕ್ಷೆ
ಮಧುಮೇಹಿಗಳಿಗಾಗಿ ಮಾರುಕಟ್ಟೆಯಲ್ಲಿ ಈಗ ಲಭ್ಯವಿರುವ ಡಯಾಬಿಟಿಕ್ ಪಾದರಕ್ಷೆಗಿಂತ ಇದು ಸಂಪೂರ್ಣವಾಗಿ ವಿಭಿನ್ನವಾಗಿದೆ. ಈ ಪಾದರಕ್ಷೆಗಳು ಪಾದಗಳಿಗೆ ಆದ ಗಾಯ ಬೇಗನೆ ವಾಸಿಯಾಗಲು ನೆರವಾಗುತ್ತದೆ ಮತ್ತು ಪಾದಗಳಲ್ಲಿ ಇತರ ಕಡೆ ಗಾಯವಾಗುವುದನ್ನು ತಡೆಗಟ್ಟುವ ಸ್ವಯಂ ನಿಯಂತ್ರಿತ ಚಿಕಿತ್ಸಕ ಗುಣವನ್ನೂ ಹೊಂದಿದೆ. 

ಪಾದಗಳ ಮೇಲೆ ಸಮಾನ ಒತ್ತಡ ಹಂಚಿಕೆ
ಮಧುಮೇಹ ರೋಗಿಗಳಲ್ಲಿ ಪಾದಗಳು ಕ್ರಮೇಣ ಸಂವೇದನಾ ರಹಿತವಾಗುವುದರಿಂದ ನಡಿಗೆಯಲ್ಲೂ ವ್ಯತ್ಯಯವಾಗುತ್ತದೆ. ಸರಿಯಾಗಿ ನಡೆಯಲುಆ ಆಗದೆ ಎಡವುವಂತಾಗುತ್ತದೆ. ಆರೋಗ್ಯವಂತ ವ್ಯಕ್ತಿ ಸಾಮಾನ್ಯವಾಗಿ ಮೊದಲಿಗೆ ತನ್ನ ಹಿಮ್ಮಡಿಯನ್ನು ನೆಲದ ಮೇಲೆ ಊರುತ್ತಾನೆ. ಆದರೆ ಮಧುಮೇಹಿಗಳಿಗೆ ಇದು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ಪಾದರಕ್ಷೆ ಮಧುಮೇಹ ಇರುವವರು ಸಂಪೂರ್ಣ ಪಾದಗಳ ಸಮಾನ ಒತ್ತಡವನ್ನು ಹಂಚಿಕೊಳ್ಳುವ ಕಾರಣ ಮಧುಮೇಹಿಗಳಿಗೆ ಆರಾಮದಾಯಕವಾಗಿರಲಿದೆ. 

ಮಧುಮೇಹಿಗಳು ಈ ಕೆಲವು ಸಿಹಿತಿಂಡಿಗಳನ್ನು ಭಯಪಡದೆ ತಿನ್ಬೋದು

ಪಾದಗಳ ಹೊರಭಾಗದ ನರಗಳಿಗೆ ಹಾನಿಯಾಗಿದ್ದರೂ ನಡೆಯಲು ಸುಲಭ
ಡಯಾಬಿಟಿಕ್‌ ಪೆರಿಫೆರಲ್‌ ನ್ಯೂರೋಪತಿ ಅಂದರೆ, ಮಧುಮೇಹಿಯ ಪಾದಗಳ ಹೊರಭಾಗದ ನರಗಳಿಗೆ ಹಾನಿಯಾಗಿದ್ದರೆ, ಅಂತಹ ವ್ಯಕ್ತಿಗಳ ಪಾದಗಳ ಸಂವೇದನೆಯೇ ನಷ್ಟವಾಗಿರುತ್ತದೆ. ಗಾಯವಾಗಿ ರಕ್ತ ಸ್ರಾವವಾದರೂ ಅವರ ಗಮನಕ್ಕೇ ಬರುವುದಿಲ್ಲ. ಇಂತಹ ವ್ಯಕ್ತಿಗಳಿಗೆ ಈ ಪಾದರಕ್ಷೆಗಳು ಹೆಚ್ಚಿನ ಉಪಯೋವಾಗುತ್ತವೆ ಎನ್ನುತ್ತದೆ ತಜ್ಞರ ತಂಡ. ಈ ಪಾದರಕ್ಷೆ ಧರಿಸುವುದರಿಂದ ಮಧುಮೇಹಿಗಳ ಪಾದಗಳಲ್ಲಿ ಗಾಯವಾಗಿದ್ದರೂ ಬೇಗನೆ ಗುಣವಾಗುತ್ತದೆ, ಪಾದಗಳ ಇತರ ಭಾಗದಲ್ಲಿ ಗಾಯವಾಗುವುದನ್ನೂ ತಡೆಯುತ್ತದೆ' ಎನ್ನುತ್ತಾರೆ ಕರ್ನಾಟಕ ಮಧುಮೇಹ ಸಂಸ್ಥೆಯ ಪಾದಗಳ ವಿಭಾಗದ ಮುಖ್ಯಸ್ಥ ಪವನ್ ಬಿಳೇಹಳ್ಳಿ.

ವ್ಯಕ್ತಿಯ ವಾಕಿಂಗ್ ಶೈಲಿಗೆ ತಕ್ಕಂತೆ ಕಸ್ಟಮೈಸ್ ಮಾಡಬಹುದು
ಐಐಎಸ್‌ಸಿ ನೇತೃತ್ವದ ತಂಡವು ಅಭಿವೃದ್ಧಿಪಡಿಸಿದ, ವಿಶೇಷವಾಗಿ ವಿನ್ಯಾಸಗೊಳಿಸಿದ ಪಾದರಕ್ಷೆಗಳು, ತ್ರಿಡಿ ಮುದ್ರಿತ ಮತ್ತು ವ್ಯಕ್ತಿಯ ಪಾದದ ಆಯಾಮಗಳು ಮತ್ತು ವಾಕಿಂಗ್ ಶೈಲಿಗೆ ಕಸ್ಟಮೈಸ್ ಮಾಡಬಹುದು. ಸಾಂಪ್ರದಾಯಿಕ ಚಿಕಿತ್ಸಕ ಪಾದರಕ್ಷೆಗಳಿಗಿಂತ ಭಿನ್ನವಾಗಿ, ಈ ಸ್ಯಾಂಡಲ್‌ಗಳಲ್ಲಿನ ಸ್ನ್ಯಾಪಿಂಗ್ ಕಾರ್ಯವಿಧಾನವು ಪಾದಗಳನ್ನು ಸಮತೋಲಿತವಾಗಿರಿಸುತ್ತದೆ. ಮಾತ್ರವಲ್ಲ, ಗಾಯಗೊಂಡ ಪ್ರದೇಶವನ್ನು ವೇಗವಾಗಿ ಗುಣಪಡಿಸಲು ಮತ್ತು ಪಾದಗಳ ಇತರ ಪ್ರದೇಶಗಳಲ್ಲಿ ಉಂಟಾಗುವ ಗಾಯಗಳನ್ನು ತಡೆಯುತ್ತದೆ.

ತಂಡವು ತಮ್ಮ ಉತ್ಪನ್ನವನ್ನು ವಾಣಿಜ್ಯೀಕರಿಸಲು ಸ್ಟಾರ್ಟ್-ಅಪ್‌ಗಳಾದ ಫುಟ್ ಸೆಕ್ಯೂರ್ ಮತ್ತು ಯೋಸ್ಟ್ರಾ ಲ್ಯಾಬ್‌ಗಳೊಂದಿಗೆ ಸಹಯೋಗವನ್ನು ಹೊಂದಲಿದೆ. ಅದೇನೆ ಇರ್ಲಿ, ನಡೆಯೋಕೆ ತೊಂದರೆ ಅನುಭವಿಸುವ ಮಧುಮೇಹ ರೋಗಿಗಳಿಗೆ ಈ ಪಾದರಕ್ಷೆ ಉಪಯೋಗಕ್ಕೆ ಬರೋದಂತೂ ಖಂಡಿತ.

click me!