
ರೆಸ್ಟೋರೆಂಟ್ ಗಳಿಗೆ ಹೋಗಿ ಬಾಯಲ್ಲಿ ನೀರೂರಿಸುವ ಸ್ವಾದಭರಿತ ಆಹಾರವನ್ನು (Food) ಆರ್ಡರ್ ಮಾಡುತ್ತೇವೆ. ಅಲ್ಲಿ ಬೆಣ್ಣೆಯಲ್ಲಿ ಅದ್ದಿದ ಪಿಜ್ಜಾವನ್ನೋ, ಸ್ಯಾಂಡ್ ವಿಚ್ ಅನ್ನೋ ಸೇವಿಸಿ ಖುಷಿಯಾಗಿ ಬರುತ್ತೇವೆ. ಆದರೆ, ಆ ಆಹಾರಗಳಲ್ಲಿರುವ ಕ್ಯಾಲರಿ (Calorie) ಬಗ್ಗೆ ಎಂದಾದರೂ ವಿಚಾರ ಮಾಡುತ್ತೇವಾ? ಸಾಮಾನ್ಯವಾಗಿ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಉಪ್ಪು (Salt), ಎಣ್ಣೆ (Oil), ಬೆಣ್ಣೆ (Cheese) ಹಾಗೂ ಸಕ್ಕರೆ (Sugar)ಯನ್ನು ಅತ್ಯಧಿಕ ಪ್ರಮಾಣದಲ್ಲಿ ಬಳಕೆ ಮಾಡುತ್ತವೆ. ಹಾಗಾಗಿಯೇ ಅಲ್ಲಿನ ಆಹಾರ ಹೆಚ್ಚು ರುಚಿಕರವೆನಿಸುತ್ತದೆ. ಆದರೆ, ನೀವು ಕ್ಯಾಲರಿ ಬಗ್ಗೆ ಚಿಂತಿಸುವವರಾಗಿದ್ದರೆ ಕೆಲವು ಆಹಾರಗಳಿಂದ ದೂರವಿರಬೇಕಾಗುತ್ತದೆ. ಹಾಗೆಯೇ, ಹೃದಯ, ರಕ್ತದೊತ್ತಡ, ಮಧುಮೇಹ ಮುಂತಾದ ಸಮಸ್ಯೆ ನಿಮ್ಮೊಂದಿಗಿದ್ದರೆ ಆಹಾರದಲ್ಲಿರುವ ಕ್ಯಾಲರಿ ಬಗ್ಗೆ ನೀವು ಯೋಚನೆ ಮಾಡಬೇಕಾಗುತ್ತದೆ. ಬೊಜ್ಜು ಹೊಂದಿದ್ದರಂತೂ ಹೆಚ್ಚು ಎಚ್ಚರಿಕೆ ಅಗತ್ಯ.
ಬೆಣ್ಣೆ ಬೆರೆಸಿ ಮಾಡುವ ತಿನಿಸು ಸೇರಿದಂತೆ ಕೆಲವು ಆಹಾರಗಳು ಅಧಿಕ ಕ್ಯಾಲರಿ ಹೊಂದಿರುತ್ತವೆ. ಈ ವಿಚಾರದಲ್ಲಿ ಅವು ಆರೋಗ್ಯಕ್ಕೆ ನಿಜಕ್ಕೂ ಅಪಾಯಕಾರಿಯೇ ಆಗಿರುತ್ತವೆ.
• ಡೀಪ್ ಚೀಸ್ ಪಿಜ್ಜಾ (Deep Cheese Pizza)
ಸರಿಸುಮಾರು ಎರಡು ಸಾವಿರ ಕ್ಯಾಲರಿಗಳನ್ನು ಹೊಂದಿರುವ ಅಪಾಯಕಾರಿ ತಿಂಡಿ ಇದು. ಇದನ್ನು ಸೇವಿಸುವುದೆಂದರೆ, ಇಡೀ ದಿನದಲ್ಲಿ ಸೇವಿಸಬೇಕಾದ ಕ್ಯಾಲರಿಗಳನ್ನು ಒಂದೇ ಸಲಕ್ಕೆ ತಿನ್ನುವ ದುಸ್ಸಾಹಸ. ಇದನ್ನು ತಿಂದರೂ ಹೆಚ್ಚು ತೂಕ ಗಳಿಸದಿರುವ ಇಚ್ಛೆ ನಿಮಗಿದ್ದರೆ ಕನಿಷ್ಠ 4-5 ತಾಸುಗಳ ಕಾಲ ವಾಕ್ ಮಾಡಬೇಕು.
• ಚೀಸ್ ಫ್ರೈಸ್ (Cheese Fries)
ಆಲೂಗಡ್ಡೆಗಳನ್ನು ಹೊಂದಿರುವ ಚೀಸ್ ಫ್ರೈಸ್ ಅತ್ಯಧಿಕ ಪ್ರಮಾಣದಲ್ಲಿ ಉಪ್ಪು ಹೊಂದಿರುತ್ತದೆ ಹಾಗೂ ಅತಿಯಾಗಿ ಫ್ರೈ ಆಗಿರುತ್ತದೆ. ಸಾಮಾನ್ಯವಾಗಿ ಒಂದು ಚೀಸ್ ಫ್ರೈಸ್ ನಲ್ಲಿ 1300 ಕ್ಯಾಲರಿ ಇರುತ್ತದೆ. ಬಾಯಿಗೆ ಹಿತವಾದರೂ ದೇಹಕ್ಕೆ ಅಪಾಯ ತರುತ್ತದೆ.
• ಬ್ರೌನಿ ವಿತ್ ಐಸ್ ಕ್ರೀಮ್ (Browny With Ice Cream)
ಚಾಕೋಲೇಟ್ (Chocolate) ಜತೆಗೆ ಐಸ್ ಕ್ರೀಮ್ ಕೂಡ ಅಷ್ಟೇ ಅಪಾಯಕಾರಿಯಾದ ಆಹಾರ. ಚಾಕೋಲೇಟ್ ಪೀಸ್, ಚಾಕೋಲೇಟ್ ಸಾಸ್ ಹಾಗೂ ಒಂದು ಸ್ಕೂಪ್ (Scoop) ಐಸ್ ಕ್ರೀಮ್ ಸೇವಿಸುವುದು ಇತ್ತೀಚಿನ ಫ್ಯಾಷನ್. ಇದರಿಂದ ಸುಮಾರು ಒಂದು ಸಾವಿರ ಕ್ಯಾಲರಿಯನ್ನು ಒಂದೇ ಬಾರಿ ಸೇವಿಸಬೇಕಾಗುತ್ತದೆ. ಇದರಲ್ಲಿ ಸೋಡಿಯಂ ಅಪಾಯಕಾರಿ ಪ್ರಮಾಣದಲ್ಲಿರುತ್ತದೆ. 760 ಮಿಲಿಗ್ರಾಂ ನಷ್ಟು ಸೋಡಿಯಂ ಇರುತ್ತದೆ.
• ಆಲೂಗಡ್ಡೆ ಚಿಪ್ಸ್ (Aloo Chips)
ಸುಮಾರು ಎಂಟು ಆಲೂಗಡ್ಡೆ ಚಿಪ್ಸ್ ತಿಂದರೆ 700ಕ್ಕೂ ಅಧಿಕ ಮಿಲಿಗ್ರಾಮ್ ನಷ್ಟು ಸೋಡಿಯಂ ಇರುತ್ತದೆ. ಇದೂ ಸಹ ಅತ್ಯಂತ ಅಪಾಯಕಾರಿ ತಿಂಡಿ. ಮಕ್ಕಳಲ್ಲಿ ಬೊಜ್ಜು (Obesity), ಮಧುಮೇಹಕ್ಕೆ (Diabetes) ಕಾರಣವಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್ (Bad Cholesterol) ಮಟ್ಟ ಹೆಚ್ಚಿ ಹೃದ್ರೋಗದ ಅಪಾಯವೂ ಹೆಚ್ಚಾಗುತ್ತದೆ. ಗರ್ಭಿಣಿಯರು ಇದನ್ನು ತಿನ್ನಬಾರದು ಎಂದು ಸಲಹೆ ನೀಡುವುದು ಸಾಮಾನ್ಯ. ರಕ್ತದೊತ್ತಡದ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ಮಿದುಳಿಗೂ ಇದು ಹಾನಿಕರ ಎನ್ನುವುದು ಅಧ್ಯಯನಗಳಿಂದ ಸಾಬೀತಾಗಿದೆ.
• ಚಿಕನ್ ಮಸಾಲಾ ಟಿಕ್ಕಾ (Chicken Masala Tikka)
ಇದರಲ್ಲಿ 1 ಸಾವಿರ ಕ್ಯಾಲರಿ ಇರುತ್ತದೆ. ವಿಟಮಿನ್ ಎ, ಸಿ, ಕ್ಯಾಲ್ಸಿಯಂ ಮತ್ತು ಐರನ್ ಹೊಂದಿರುವ ಆಹಾರವಾಗಿದ್ದರೂ ಅಪಾಯಕಾರಿಯಾದ ಅಂಶವನ್ನೂ ಒಳಗೊಂಡಿರುತ್ತದೆ. ಕ್ರೀಮ್, ಮೊಸರು, ಅನ್ನ, ಟೊಮ್ಯಾಟೋ ಸಾಸ್ ಇತ್ಯಾದಿ ಎಲ್ಲವನ್ನೂ ಸೇರಿಸಿದಾಗ ಅತ್ಯಧಿಕ ಕ್ಯಾಲರಿಭರಿತ ಆಹಾರವಾಗುತ್ತದೆ. ಸ್ಯಾಚುರೇಟೆಡ್ (Saturated) ಕೊಬ್ಬು ಮತ್ತು ಸೋಡಿಯಂ ಅಂಶವೂ ಹೆಚ್ಚಿರುತ್ತದೆ.
• ಸ್ಯಾಂಡ್ ವಿಚ್ (Sandwich)
ಮಕ್ಕಳ ಅತ್ಯಂತ ಜನಪ್ರಿಯ ತಿಂಡಿ ಇದು. ಸಾಮಾನ್ಯವಾಗಿ ಎಲ್ಲೆಡೆ ಸಿಗುವುದರಿಂದ ಸುಲಭವಾಗಿ ಸೇವಿಸುತ್ತೇವೆ. ಆದರೆ, ಎರಡು ದಿನಕ್ಕೆ ಸಾಕಾಗುವಷ್ಟು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಹಾಗೆಯೇ ಸ್ಯಾಂಡ್ ವಿಚ್ ಅನ್ನು ಸಾಸ್ ಹಾಕಿಕೊಂಡು ತಿಂದಾಗ ಇನ್ನಷ್ಟು ಕ್ಯಾಲರಿ ಖಚಿತ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.