ಇವತ್ತಿನ ಕಾಲದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ಉದ್ಯೋಗದಲ್ಲಿ ತೊಡಗಿರುತ್ತಾರೆ. ಮಹಿಳೆಯರು ಸಹ ಪುರುಷರಷ್ಟೇ ಸಮಾನವಾಗಿ ಉದ್ಯೋಗ ಹಾಗೂ ಕುಟುಂಬ ಎರಡನ್ನೂ ನಿಭಾಯಿಸುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬರ ಜೀವನದಲ್ಲಿಯೂ ಒತ್ತಡವಿದೆ. ಸರಿಯಾಗಿ ನಿದ್ದೆ ಮಾಡದ ಕಾರಣ, ಆಹಾರ ಸೇವಿಸದ ಕಾರಣ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳು ಸಹ ಹೆಚ್ಚಾಗುತ್ತಿವೆ. ಹೀಗಾಗಿ ಆರೋಗ್ಯವಾಗಿರಲು ಏನ್ ಮಾಡ್ಬೇಕು ತಿಳಿಯೋಣ.
ಉದ್ಯೋಗದ ಕಾರಣದಿಂದ ಒತ್ತಡದ ಬದುಕು ನಿರ್ವಹಿಸುತ್ತಿರುವ ಪ್ರತಿಯೊಬ್ಬರು ತಮ್ಮ ಹೃದಯದ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳುವುದನ್ನು ಮರೆಯುತ್ತಿದ್ದಾರೆ. ಇದರಿಂದ ಹೃದಯಾಘಾತ, ಹೃದಯ ಸಂಬಂಧಿ ಕಾಯಿಲೆಯೂ ಹೆಚ್ಚಾಗುತ್ತಿದೆ. ಇತರೆ ದೇಶಗಳಿಗೆ ಹೋಲಿಸಿದರೆ ಶೇ.೪೦ರಷ್ಟು ಹೆಚ್ಚು ಹೃದಯಘಾತ ಭಾರತದಲ್ಲಿ ಸಂಭವಿಸುತ್ತಿದೆ. ಹೀಗಾಗಿ ಕೆಲಸಕ್ಕೆ ತೆರಳುವವರು ತಮ್ಮ ಹೃದಯದ ಆರೋಗ್ಯದ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ಎಂಬುದರ ಬಗ್ಗೆ ಫೊರ್ಟಿಸ್ ಆಸ್ಪತ್ರೆ ಹೃದಯ ತಜ್ಞ ಡಾ. ರಾಜ್‌ಪಾಲ್ ಸಿಂಗ್ ಒಂದಷ್ಟು ಸಲಹೆ ನೀಡಿದ್ದಾರೆ. ಆ ಬಗ್ಗೆ ತಿಳಿಯೋಣ.
ಆರೋಗ್ಯಕರ ಕೊಬ್ಬಿನ ಆಹಾರ ಸೇವಿಸಬೇಕು: ಬದಲಾದ ಜೀವನಶೈಲಿ (Lifestyle)ಯಿಂದ ಆರೋಗ್ಯಕರ ಆಹಾರ ಸೇವಿಸುವುದು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಕೆಲಸದ ಒತ್ತಡ (Pressure)ದಿಂದಾಗಿ ಮನೆಯಲ್ಲಿಯೇ ಅಡುಗೆ ಮಾಡಿ ಊಟ ಮಾಡುವ ಪದ್ಧತಿ ಕ್ರಮೇಣ ಕಡಿಮೆಯಾಗುತ್ತಿದೆ. ಬದಲಾಗಿ ಹೊರಗಿನ ಊಟಕ್ಕೆ ಜನರು ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಆರೋಗ್ಯದ (Health) ದೃಷ್ಟಿಯಿಂದ ನೋಡಿದಾಗ ಇದು ಅತ್ಯಂತ ಅಪಾಯಕಾರಿಯಾಗಿದೆ. ಸಾಧ್ಯವಾದಷ್ಟೂ ಮನೆಯಿಂದ ಹೊರಗಡೆ ನಾನ್‌ವೆಜ್ ತಿನ್ನುವುದನ್ನು ನಿಯಂತ್ರಿಸಿ. ಅಥವಾ ಎಣ್ಣೆರಹಿತ ಪದಾರ್ಥಗಳನ್ನು ಸೇವಿಸಿ.
ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಷ್ಟೂ ಹೃದಯದ (Heart) ಅಪಧಮನಿಗಳು ಮುಚ್ಚಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಇದು ಹೃದಯಾಘಾತ ಅಥವಾ ಪಾರ್ಶ್ವವಾಯು ಆಗಬಹುದು. ಹೀಗಾಗಿ ಸಾಧ್ಯವಾದಷ್ಟು, ಒಳ್ಳೆ ಕೊಲೆಸ್ಟ್ರಾಲ್ ಇರುವ ಪದಾರ್ಥ ಸೇವಿಸಿ. ಹೈಜಿನ್ ಇರುವ ಹೋಟೆಲ್‌ಗಳಲ್ಲಿ ಮಾತ್ರ ಸೇವಿಸಿ. ಜೊತೆಗೆ, ಕರಿದ, ಜಂಕ್ ಫುಡ್‌ಗಳ ಮೇಲೆ ಸಂಪೂರ್ಣ ನಿಯಂತ್ರಣವಿರಲಿ.
ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತ ಆಗೋದು ಯಾಕೆ ?
ವ್ಯಾಯಮ ದೇಹಕ್ಕೆ ಅತೀ ಅಗತ್ಯ: ಅನಾರೋಗ್ಯಕರ ಜೀವನಶೈಲಿಯನ್ನು ಅನುಸರಿಸುತ್ತಿರುವ ಪ್ರತಿಯೊಬ್ಬರೂ ಬೆಳಗ್ಗೆ ಅಥವಾ ಸಂಜೆ ಹೊತ್ತಿನಲ್ಲಿ ವ್ಯಾಯಾಮ (Exercise) ಮಾಡುವುದು ತುಂಬಾ ಒಳ್ಳೆಯದು. ಕನಿಷ್ಠ 30 ನಿಮಿಷಗಳ ಕಾಲ ಬ್ರಿಸ್ಕ್ ವಾಕ್ ಅಥವಾ ಇತರೆ ದೈಹಿಕ ಚಟುವಟಿಕೆ, ಯೋಗ ಮಾಡುವುದರಿಂದ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. ದೀರ್ಘಕಾಲ ಕುಳಿತುಕೊಳ್ಳುವ ಅಭ್ಯಾಸ ಸಹ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಿಶೇಷವಾಗಿ ಕೆಲಸ (Work) ಮಾಡುವವರು ಮೇಜಿನ ಮೇಲೆ ತುಂಬಾ ಹೊತ್ತು ಕುಳಿತುಕೊಳ್ಳುತ್ತಾರೆ. ಇದು ಅತ್ಯಂತ ಅಪಾಯಕಾರಿ. ಸಂಶೋಧನೆ ಪ್ರಕಾರ, ದೀರ್ಘಕಾಲ ಒಂದೇ ಕಡೆ ಕೂತುಕೊಳ್ಳುವುದರಿಂದ ರಕ್ತ ಹೆಪ್ಪುಗಟ್ಟುವಿಕೆ ಸಾಧ್ಯತೆ ಇದೆ.
ಹೆಚ್ಚು ನಿದ್ರಿಸುವುದು ಅಗತ್ಯ: ಒತ್ತಡದ ಜೀವನಶೈಲಿ ಹಲವರಲ್ಲಿ ನಿದ್ದೆಯ (Sleep) ಕೊರತೆಯ ಸಮಸ್ಯೆಗೆ ಕಾರಣವಾಗುತ್ತದೆ. ಕೆಲಸದ ನೆಪ ಹಾಗೂ ಗ್ಯಾಜೆಟ್ ಬಳಕೆಯಿಂದಾಗಿ ಇಂದು ಸರಿಯಾದ ಸಮಯಕ್ಕೆ ನಿದ್ರಿಸುವವರ ಸಂಖ್ಯೆ ಬಹುತೇಕ ಇಳಿದಿದೆ. ಮಧ್ಯರಾತ್ರಿವರೆಗೂ ಎದ್ದಿರುವುದರಿಂದ ಬೆಳಗ್ಗೆ ಕೆಲಸಕ್ಕಾಗಿ ಬೇಗ ಏಳುತ್ತಾರೆ. ಇದರಿಂದ ನಿದ್ರಾಹೀನತೆ ಸಮಸ್ಯೆ ಕಾಡಬಹುದು. ದಿನಕ್ಕೆ ಕನಿಷ್ಠ 7 ರಿಂದ 8 ನಿದ್ರೆ ಮಾಡುವುದು ಒಳ್ಳೆಯ ಅಭ್ಯಾಸ. ಅಧ್ಯಯನಗಳ ಪ್ರಕಾರ ಆರು ಗಂಟೆಗೂ ಕಡಿಮೆ ನಿದ್ರೆ ಮಾಡುವವರಲ್ಲಿ ಹೆಚ್ಚು ಹೃದಯಾಘಾತ ಹಾಗೂ ಪಾರ್ಶ್ವವಾಯು ಆಗಿರುವುದು ವರದಿಯಾಗಿದೆ. ಹೀಗಾಗಿ ಎಷ್ಟೇ ಕೆಲಸದ ಒತ್ತಡವಿದ್ದರೂ ನಿದ್ರೆಯಲ್ಲಿ ಯಾವುದೇ ಕಾಂಪ್ರಮೈಸ್ ಆಗದೇ ನಿದ್ರಿಸುವುದು ಒಳ್ಳೆಯದು.
ಹೃದಯಾಘಾತವಾದಾಗ ಜೀವ ಉಳಿಸಲು ತಕ್ಷಣಕ್ಕೆ ಏನು ಮಾಡಬೇಕು ?
ತಂಬಾಕಿನಿಂದ ದೂರವಿರಿ: ಸಿಗರೇಟ್ ಸೇದುವುದು ಇತ್ತೀಚಿಗೆ ಫ್ಯಾಷನೆಬಲ್ ಆಗಿಬಿಟ್ಟಿದೆ. ಆದ್ರೆ ಇದ್ರಿಂದ ಆರೋಗ್ಯಕ್ಕಾಗುವ ತೊಂದ್ರೆ ಒಂದೆರಡಲ್ಲ. ಪ್ರತಿ ವರ್ಷ ಸುಮಾರು 1.35 ಮಿಲಿಯನ್ ಜನರು ತಂಬಾಕಿನಿಂದ ಸಾವನ್ನಪ್ಪಿದ್ದಾರೆ. ಇದು ಹೃದಯದ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎನ್ನುವುದು ಸಾಬೀತಾಗಿದೆ. ಇನ್ನು, ರಸ್ತೆಯ ಕಲುಷಿತ ಹೊಗೆಯಿಂದಲೂ ಸಹ ಹೃದಯದ ನಾಳಗಳ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಸಿಗರೇಟು ಸೇವನೆ ಅತ್ಯಂತ ಅಪಾಯಕಾರಿ.
ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ: ಕನಿಷ್ಠ ವರ್ಷಕ್ಕೋಮ್ಮೆಯಾದರೂ ಇಡೀ ದೇಹದ ತಪಾಸಣೆ ಮಾಡಿಸಿ. ಇದರಿಂದ ಯಾವುದೇ ರೀತಿಯ ಕಾಯಿಲೆ (Disease)ಯಿದ್ದರೂ ಪ್ರಾರಂಭಿಕ ಹಂತದಲ್ಲಿ ಗೊತ್ತಾಗುತ್ತದೆ. ಇದರಿಂದ ಸುಲಭವಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತೆ. ಇದರಿಂದ ಭವಿಷ್ಯದಲ್ಲಾಗುವ ದೊಡ್ಡ ಅನಾಹುತವನ್ನು ತಡೆಗಟ್ಟಬಹುದು. ಕುಟುಂಬದಲ್ಲಿ ಹೃದಯ ಸಂಬಂಧಿಯ ಕಾಯಿಲೆಯ ಇತಿಹಾಸವಿದ್ದವರು ತಪ್ಪದೇ ಹೃದಯ ತಪಾಸಣೆ (Heart checkup) ಮಾಡಿಸುವುದು ಒಳ್ಳೆಯದು. 25 ವರ್ಷದ ಬಳಿಕ ಈ ತಪಾಸಣೆ ವರ್ಷಕೊಮ್ಮೆ ಕಡ್ಡಾಯವಾಗಿ ಆಗಬೇಕು. ಇಲ್ಲವಾದರೆ ಹೃದಯದ ಆರೋಗ್ಯ ಯಾವಾಗ ಬೇಕಾದರೂ ಕೈ ಕೊಡಬಹುದು.