
ನಿರಂತರವಾಗಿ ಬದಲಾಗುತ್ತಿರುವ ಹವಾಮಾನ (Weather) ಬಹಳ ಡೇಂಜರ್. ಬೇಸಗೆಯಲ್ಲಿ ಮಳೆ, ಮಳೆಯಲ್ಲಿ ಚಳಿ (cold) ಹೀಗೆ ನಿರಂತರವಾಗಿ ಹವಾಮಾನ ಬದಲಾವಣೆ ಆಗ್ತಿದೆ. ಇದ್ರಿಂದ ಒಂದ್ಕಡೆ ಬೆಳೆ ನಾಶ, ಬರಗಾಲದ ಭಯ ಶುರುವಾದ್ರೆ ಮತ್ತೊಂದು ಕಡೆ ಆರೋಗ್ಯ ಹಾಳಾಗ್ತಿದೆ. ಹೊಸ ಹೊಸ ರೋಗಗಳು ಮನುಷ್ಯನನ್ನು ಮುತ್ತಕೊಳ್ತಿವೆ. ಕೊರೊನಾ ಮಹಾಮಾರಿ ಭಯ ಈಗಾಗ್ಲೇ ಶುರುವಾಗಿದೆ. ಕ್ಯಾನ್ಸರ್, ಹೃದಯಾಘಾತ ಅಂತ ಪ್ರಾಯದ ಯುವಕರು ಸಾವನ್ನಪ್ತಿದ್ದಾರೆ. ಈ ಮಧ್ಯೆ ವಿಜ್ಞಾನಿಗಳು ಈಗ ಹೊಸ ಅಪಾಯದ ಎಚ್ಚರಿಕೆ ನೀಡಿದ್ದಾರೆ. ಹವಾಮಾನ ಬದಲಾವಣೆ ಆರ್ದ್ರತೆಯ ಶಾಖದ ಅಲೆಯನ್ನು ಹೆಚ್ಚಿಸುತ್ತಿದೆ. ಇದ್ರಿಂದ ಅಪಾಯಕಾರಿ ಶಿಲೀಂಧ್ರ ಮತ್ತಷ್ಟು ಬಲಪಡೆದು, ಇನ್ನಷ್ಟು ಅಪಾಯಕಾರಿಯಾಗುತ್ತಿದೆ. ಹವಾಮಾನ ಬದಲಾವಣೆ, ಶಿಲೀಂಧ್ರ (fungus) ಹೊಸ ಸ್ಥಳಗಳಲ್ಲಿ ವೇಗವಾಗಿ ಹರಡಲು ಕಾರಣವಾಗ್ತಿದೆ. ಈಗ್ಲೇ ನಾವು ಜಾಗರೂಕರಾಗಿರದಿದ್ದರೆ, ಮಾನವ ಸಾಕಷ್ಟು ನಷ್ಟ ಅನುಭವಿಸುತ್ತಾನೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಶಿಲೀಂಧ್ರ ಎಲ್ಲೆಡೆ ಇದೆ. ಅಣಬೆಗಳಿಂದ ಹಿಡಿದು ಕಪ್ಪು ಅಚ್ಚಿನವರೆಗೆ ಶಿಲೀಂಧ್ರಗಳು ಎಲ್ಲ ಕಡೆ ಕಂಡುಬರುತ್ತವೆ. ಮಣ್ಣು, ನೀರು, ಗೊಬ್ಬರ ಸೇರಿದಂತೆ ನಮ್ಮ ಉಸಿರಾಟದಲ್ಲಿಯೂ ಇರುವ ಈ ಸೂಕ್ಷ್ಮಜೀವಿಗಳು ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ರೆ ಇದೇ ಶಿಲೀಂಧ್ರಗಳು ಮಾನವನ ಆರೋಗ್ಯಕ್ಕೆ ಮಾರಕ. ಲಕ್ಷಾಂತರ ಮಂದಿ ಈ ಶಿಲೀಂಧ್ರ ಸೋಂಕಿಗೆ ಒಳಗಾಗ್ತಾರೆ. ವಿಜ್ಞಾನಿಗಳ ಪ್ರಕಾರ, ಪ್ರತಿ ವರ್ಷ ಅಂದಾಜು 2.5 ಮಿಲಿಯನ್ ಜನರು ಶಿಲೀಂಧ್ರ ಸೋಂಕಿಗೆ ಬಲಿಯಾಗ್ತಾರೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಅಧ್ಯಯನ ಹೇಳೋದೇನು? : ಯುಕೆಯ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಈ ಬಗ್ಗೆ ಅಧ್ಯಯನ ನಡೆಸಿದೆ. ಕಂಪ್ಯೂಟರ್ ಸಿಮ್ಯುಲೇಶನ್ ಬಳಸಿಕೊಂಡು ಆಸ್ಪರ್ಜಿಲಸ್ ಎಂಬ ಶಿಲೀಂಧ್ರವು ಹವಾಮಾನ ಬದಲಾವಣೆಯೊಂದಿಗೆ ಹೊಸ ಪ್ರದೇಶಗಳಿಗೆ ಹೇಗೆ ಹರಡಬಹುದು ಎಂಬುದನ್ನು ಅಧ್ಯಯನ ಮಾಡಿದೆ. ಈ ಶಿಲೀಂಧ್ರವು ಆಸ್ಪರ್ಜಿಲೋಸಿಸ್ ಎಂಬ ಮಾರಕ ಕಾಯಿಲೆಗೆ ಕಾರಣವಾಗುತ್ತದೆ. ಇದು ವಿಶೇಷವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ.
ಅಪಾಯ ಹೆಚ್ಚಾಗಲು ಕಾರಣ ಏನು? : ಭೂಮಿಯ ಉಷ್ಣತೆ ಹೆಚ್ಚಾದಂತೆ, ಆಸ್ಪರ್ಜಿಲಸ್ನ ಹಲವು ಪ್ರಭೇದಗಳು ಹೊಸ ಸ್ಥಳಗಳಿಗೆ ಹರಡುತ್ತವೆ. ವೈರಸ್ಗಳು ಅಥವಾ ಬ್ಯಾಕ್ಟೀರಿಯಾಗಳಂತಹ ಶಿಲೀಂಧ್ರಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆದಿಲ್ಲ. ಆದ್ರೆ ಮುಂದಿನ ದಿನಗಳಲ್ಲಿ ಇವು ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರಬಹುದು ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಶಿಲೀಂಧ್ರದಿಂದ ಏನಾಗುತ್ತದೆ? : ಗಾಳಿಯಲ್ಲಿ ಹರಡುವ ಸೂಕ್ಷ್ಮ ಕಣಗಳ ಮೂಲಕ ಆಸ್ಪರ್ಜಿಲಸ್ ನಮ್ಮ ದೇಹವನ್ನು ಸೇರುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿರುವ ಜನರಿಗೆ ಇದ್ರಿಂದ ಅಪಾಯವಿಲ್ಲ. ಅದೇ, ಅಸ್ತಮಾ, ಸಿಒಪಿಡಿ, ಕ್ಯಾನ್ಸರ್, ಮೂತ್ರಪಿಂಡ ಕಸಿ ಅಥವಾ ಕೋವಿಡ್ನಂತಹ ಕಾಯಿಲೆಗಳಿಂದ ಬಳಲುತ್ತಿರುವ ಜನರ ದೇಹವನ್ನು ಈ ಶಿಲೀಂಧ್ರ ವೇಗವಾಗಿ ಪ್ರವೇಶ ಮಾಡಿ ತನ್ನ ಕೆಲಸ ಶುರು ಮಾಡುತ್ತದೆ. ಒಳಗಿನಿಂದಲೇ ಅವರ ದೇಹ ತಿನ್ನಲು ಶುರು ಮಾಡುತ್ತದೆ. ಶ್ವಾಸಕೋಶದಲ್ಲಿ ಊತ, ಕೆಮ್ಮು, ಉಸಿರಾಟದ ತೊಂದರೆ, ಅಧಿಕ ಜ್ವರ ಸೇರಿದಂತೆ ಕೆಲ ಲಕ್ಷಣ ಕಾಣಿಸಿಕೊಳ್ಳುತ್ತದೆ. ಶೇಕಡಾ 20 ರಿಂದ 40 ರಷ್ಟು ಮರಣ ಪ್ರಮಾಣವನ್ನು ಆಸ್ಪರ್ಜಿಲೊಸಿಸ್ ಹೊಂದಿದೆ. ಔಷಧಿ ಜೊತೆ ಶಿಲೀಂಧ್ರ ಹೋರಾಡುವ ಶಕ್ತಿ ಪಡೆದ್ರೆ ಚಿಕಿತ್ಸೆ ಕಷ್ಟವಾಗುತ್ತದೆ.
ಶಿಲೀಂಧ್ರದಿಂದ ನಿಮ್ಮ ರಕ್ಷಣೆ ಹೇಗೆ? : ಶಿಲೀಂಧ್ರ ಸೋಂಕನ್ನು ಗಂಭೀರವಾಗಿ ಪರಿಗಣಿಸಬೇಕು. ಸ್ವಚ್ಛತೆಗೆ ಹೆಚ್ಚು ಆಧ್ಯತೆ ನೀಡ್ಬೇಕು. ರೋಗಲಕ್ಷಣವನ್ನು ಗುರುತಿಸಬೇಕು. ಆರಂಭದಲ್ಲಿಯೇ ಇದಕ್ಕೆ ಚಿಕಿತ್ಸೆ ಪಡೆಯಬೇಕು. ಸರ್ಕಾರ ಕೂಡ ಇದ್ರ ಬಗ್ಗೆ ಗಂಭೀರವಾಗ್ಬೇಕು. ಶಿಲೀಂದ್ರದಿಂದ ಏನೆಲ್ಲ ಸಮಸ್ಯೆ ಕಾಡ್ಬಹುದು ಎಂಬ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿ, ಅದಕ್ಕೆ ಔಷಧಿಗಳನ್ನು ಪತ್ತೆ ಮಾಡುವ ಜೊತೆಗೆ ಜನರಲ್ಲಿ ಇದ್ರ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.