
ಹೊಟ್ಟೆಯಲ್ಲಿ ಕೊಬ್ಬು (Fat) ಶೇಖರಣೆಯಾಗಿ ದೊಡ್ಡದಾಗುವ ಸಮಸ್ಯೆ ಆಲ್ಕೋಹಾಲ್ (Alcohol) ಸೇವನೆ ಮಾಡುವವರಲ್ಲಿ ಸಾಮಾನ್ಯ. ಆದರೆ, ಆಲ್ಕೋಹಾಲ್ ಸೇವನೆ ಮಾಡದವರನ್ನೂ ಸಹ ಫ್ಯಾಟಿ ಲಿವರ್ (Fatty Liver) ಕಾಡುತ್ತದೆ. ಇದನ್ನು ನಾಲ್ ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಎಂದೇ ಕರೆಯಲಾಗುತ್ತದೆ. ಒತ್ತಡದ ಜೀವನದಲ್ಲಿ ಆಹಾರ-ವಿಹಾರಗಳು ಬದಲಾಗಿವೆ, ದೈಹಿಕವಾಗಿ ಚಟುವಟಿಕೆ ಕಮ್ಮಿಯಾಗಿದೆ. ಪರಿಣಾಮವಾಗಿ, ಫ್ಯಾಟಿ ಲಿವರ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ.
ಶೇ.32ರಷ್ಟು ಜನರಲ್ಲಿ ಫ್ಯಾಟಿ ಲಿವರ್
ನಮ್ಮ ದೇಶದಲ್ಲಿ ಫ್ಯಾಟಿ ಲಿವರ್ ಅದೆಷ್ಟು ಸಾಮಾನ್ಯ ಸಮಸ್ಯೆ ಎಂದರೆ, ಶೇಕಡ 32ರಷ್ಟು ಜನರಲ್ಲಿ ಕಂಡುಬರುತ್ತಿದೆ. ನಾನ್ ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಇರುವವರಲ್ಲಿ ಹೊಟ್ಟೆಯ ಮೇಲ್ಭಾಗದಲ್ಲಿ ಉರಿಯುವಿಕೆ, ನೋವು ಹಾಗೂ ಒಂದು ರೀತಿಯ ಕಿರಿಕಿರಿ ಸಾಮಾನ್ಯ. ಇದನ್ನು ಹೊರತುಪಡಿಸಿ ಬೇರೆ ಅಂತಹ ದಟ್ಟವಾದ ಲಕ್ಷಣಗಳು ಬೇರೆ ಏನೂ ಕಂಡುಬರುವುದಿಲ್ಲ. ಹೊಟ್ಟೆ ದಪ್ಪಗಾಗುವುದೇ ಪ್ರಮುಖ ಲಕ್ಷಣ.
ಯಕೃತ್ತಿನಲ್ಲಿ (Liver) ಇನ್ನೊಂದು ರೀತಿಯ ಸಮಸ್ಯೆಯೂ ಉಂಟಾಗಬಹುದು. ಇದನ್ನು ನಾನ್ ಆಲ್ಕೋಹಾಲಿಕ್ ಸ್ಟೀಟೋಹೆಪಟಾಟೈಟಿಸ್ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯ ಫ್ಯಾಟಿ ಲಿವರ್ ಗಿಂತ ಭಿನ್ನವಾಗಿದ್ದು, ಹೊಟ್ಟೆಯಲ್ಲಿ ಕೊಬ್ಬು ಶೇಖರವಾಗುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಇದರಿಂದ ಲಿವರ್ ಕ್ಯಾನ್ಸರ್ ಅಥವಾ ಸಿರೋಸಿಸ್ ಅಪಾಯ ಹೆಚ್ಚು.
ನಾನ್ ಆಲ್ಕೋಹಾಲಿಕ್ ಫ್ಯಾಟಿ ಲಿವರ್ ನಿಂದಾಗಿ ಮಧುಮೇಹದ (Diabetes) ಸಮಸ್ಯೆ ಉಂಟಾಗುವುದು ಸಾಮಾನ್ಯ. ರಕ್ತದಲ್ಲಿ ಸಕ್ಕರೆ ಮಟ್ಟ ಹಾಗೂ ಕೊಬ್ಬಿನ ಮಟ್ಟ ಹೆಚ್ಚಾಗುತ್ತದೆ. ಈ ಸಮಸ್ಯೆಯನ್ನು ಕಡಿಮೆಗೊಳಿಸಲು ಕೊಲೈನ್ (Coline) ಎನ್ನುವ ಪೌಷ್ಟಿಕಾಂಶ ಸಹಾಯ ಮಾಡುತ್ತದೆ. ಕೊಲೈನ್ ಅಂಶವು ದೇಹದಲ್ಲಿ ಶೇಖರವಾಗಿರುವ ಹೆಚ್ಚುವರಿ ಕೊಬ್ಬನ್ನು ಕರಗಿಸಲು, ಕೋಶಗಳ ನಿರ್ವಹಣೆ ಮಾಡಲು ಹಾಗೂ ಮಿದುಳಿನಲ್ಲಿರುವ ಒಂದು ರೀತಿಯ ರಾಸಾಯನಿಕ ಎಸಿಟಾಯಿಲ್ ಕೊಲಾಯಿನ್ ಉತ್ಪಾದನೆಗೆ ಸಹಕಾರಿ.
ಹೊಟ್ಟೆ ದಪ್ಪವಾಗುತ್ತಿದ್ದರೆ ಏನು ಆರೋಗ್ಯ ಸಮಸ್ಯೆ?
ಲಿವರ್ ಆರೋಗ್ಯಕ್ಕೆ (Liver Health) ಬೇಕು ಕೊಲೈನ್
ಕೊಲಾಯಿನ್ ಹಾಗೂ ಲಿವರ್ ಗೆ ಭಾರೀ ಸಂಬಂಧವಿದೆ. ಫೋಲೇಟ್ ಹಾಗೂ ವಿಟಮಿನ್ ಬಿ12 (Vitamin B12) ಕೊರತೆ ಹೊಂದಿರುವ ಮಹಿಳೆಯರು ಮತ್ತು ಪುರುಷರ ಮೇಲೆ ನಡೆಸಲಾಗಿದ್ದ ಅಧ್ಯಯನದ ಪ್ರಕಾರ, ಕೊಲೈನ್ ರಹಿತ ಆಹಾರ ಸೇವನೆ ಮಾಡಿದವರಲ್ಲಿ ಫ್ಯಾಟಿ ಲಿವರ್ (Fatty Liver) ಸಮಸ್ಯೆ ಹೆಚ್ಚಾಗಿತ್ತು. ಜತೆಗೆ, ಮಾಂಸಖಂಡಗಳ (Muscle) ದೌರ್ಬಲ್ಯವೂ ಕಂಡುಬಂದಿತ್ತು. ಆದರೆ, ಕೊಲೈನ್ ಯುಕ್ತ ಆಹಾರ ಸೇವನೆ ಮಾಡಿದವರಲ್ಲಿ ಈ ಸಮಸ್ಯೆ ಕಡಿಮೆಯಾಗಿತ್ತು. ಕೊಲೈನ್ ದೇಹದಲ್ಲಿ ಮಹತ್ವಪೂರ್ಣ ಪಾತ್ರ ವಹಿಸುವುದು ನಿಚ್ಚಳವಾಗಿತ್ತು. ಒಟ್ಟಾರೆ, ಫ್ಯಾಟಿ ಲಿವರ್ ಸಮಸ್ಯೆಗೆ ಕಡಿವಾಣ ಹಾಕುವಲ್ಲಿ ಇದು ಅತ್ಯುಪಯುಕ್ತ ಎನ್ನುವುದು ಇದುವರೆಗಿನ ಸಂಶೋಧನೆಗಳ ಸಾರ.
ಕೊಲೈನ್ ಯುಕ್ತ ಆಹಾರ ಯಾವ್ದು?
• ಮೊಟ್ಟೆಯಲ್ಲಿ (Egg) ಕೊಲೈನ್ ಅಂಶ ಅಧಿಕವಾಗಿದೆ. ಒಂದು ಮೊಟ್ಟೆಯಲ್ಲಿ 147 ಎಂಜಿ ಕೊಲೈನ್ ದೊರೆಯುತ್ತದೆ. ನೆನಪಿಡಿ, ರಾಸಾಯನಿಕಮುಕ್ತ ವಿಧಾನದಲ್ಲಿ ಬೆಳೆಸಿದ ಮೊಟ್ಟೆಯನ್ನು ಮಾತ್ರ ಸೇವಿಸಬೇಕು.
ಅಪ್ಪನಿಗೆ ಲಿವರ್ ಸಮಸ್ಯೆ, ಅಂಗ ದಾನ ಮಾಡಲು ಕೋರ್ಟ್ ಮೆಟ್ಟಿಲೇರಿದ ಅಪ್ರಾಪ್ತೆ
• ಸೋಯಾಬೀನ್ (Soya Bean) ನಲ್ಲೂ ಕೊಲೈನ್ ಮಟ್ಟ ಉತ್ತಮವಾಗಿರುತ್ತದೆ. ಅರ್ಧ ಕತ್ತರಿಸಿದ ರೋಸ್ಟೆಡ್ ಸೋಯಾದಲ್ಲಿ 107 ಎಂಜಿ ಕೊಲೈನ್ ಸಿಗುತ್ತದೆ.
• ರೋಸ್ಟೆಡ್ ಚಿಕನ್ ನಲ್ಲೂ ಕೊಲೈನ್ ಇದೆ. ಸುಮಾರು 85 ಗ್ರಾಮ್ ರೋಸ್ಟೆಡ್ ಚಿಕನ್ ನಲ್ಲಿ 72 ಎಂಜಿ ಕೊಲೈನ್ ಇರುತ್ತದೆ.
• ಕೆಂಪು ಆಲೂಗಡ್ಡೆಯಲ್ಲಿ (Red Potato) 57 ಎಂಜಿ ಕೊಲೈನ್ ಇರುತ್ತದೆ.
• ಅರ್ಧ ಕಪ್ ರಾಜ್ಮಾದಲ್ಲಿ ಅಥವಾ ಕಿಡ್ನಿ ಬೀನ್ಸ್ (Kidney Beans) ನಲ್ಲಿ 45 ಎಂಜಿ ಕೊಲೈನ್ ಅಂಶ ಇರುವುದು ಸಾಬೀತಾಗಿದೆ. ಹೀಗಾಗಿಯೇ, ರಾಜ್ಮಾ ಅತ್ಯುತ್ತಮ ಆಹಾರ ಪದಾರ್ಥ ಎನಿಸಿದೆ.
• ಹೆಚ್ಚು ಕೊಬ್ಬಿನಂಶವಿಲ್ಲದ ಒಂದು ಕಪ್ ಹಾಲಿನಲ್ಲಿ (Milk) 42 ಎಂಜಿ ಕೊಲೈನ್ ಅಂಶವಿರುತ್ತದೆ.
• ಅರ್ಧ ಕಪ್ ಬ್ರೊಕೊಲಿಯಲ್ಲಿ 31 ಎಂಜಿ, ಒಂದು ಕಪ್ ಪನ್ನೀರಿ(Paneer)ನಲ್ಲಿ 26 ಎಂಜಿ, 85 ಗ್ರಾಮ್ ಟೂನಾ ಮೀನಿನಲ್ಲಿ 25 ಎಂಜಿಯಷ್ಟು ಕೊಲೈನ್ ಅಂಶ ಕಂಡುಬರುತ್ತದೆ. ಫ್ಯಾಟಿ ಲಿವರ್ ಸಮಸ್ಯೆಯಿಂದ ದೂರವಿರಲು ಈ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.