
ಕೆಲವು ಆಹಾರ ಪದಾರ್ಥಗಳನ್ನು ನಿಮ್ಮ ನಿತ್ಯ ಜೀವನದ ಭಾಗವಾಗಿಸಿಕೊಳ್ಳುವ ಮೂಲಕ ರೋಗನಿರೋಧಕ (immunity) ಶಕ್ತಿ ಹೆಚ್ಚಿಸಿಕೊಳ್ಳಬಹುದು. ಹೀಗೆ ಮಾಡಿದರೆ ಯಾವುದೇ ರೋಗಾಣುಗಳನ್ನೂ ಹೊಡೆದೋಡಿಸುವ ಶಕ್ತಿ ನಿಮ್ಮ ದೇಹಕ್ಕಿರುತ್ತದೆ. ಬರೀ ಕೊರೊನಾ ಅಥವಾ ಒಮಿಕ್ರೋನ್ ಮಾತ್ರವಲ್ಲ, ರೋಗನಿರೋಧಕ ಶಕ್ತಿ ಇದ್ದರೆ ಯಾವ ರೋಗವೂ ಹತ್ತಿರ ಸುಳಿಯುವುದಿಲ್ಲ. ಹಾಗಿದ್ದರೆ, ಇಂದಿನಿಂದಲೇ ನಿಮ್ಮ ಡಯಟ್‌ನಲ್ಲಿ ಈ ಆಹಾರ ಪದಾರ್ಥಗಳ ಸೇವನೆ ಹೆಚ್ಚಿಸಿ.
ತುಪ್ಪ (Ghee)
ಭಾರತೀಯ ಆಯುರ್ವೇದ ಪದ್ಧತಿಯಲ್ಲಿ ತುಪ್ಪಕ್ಕೆ ಮಹತ್ವದ ಸ್ಥಾನವಿದೆ. ಮನೆಯ ದಿನನಿತ್ಯ ಅಡುಗೆಯಲ್ಲಿ ತುಪ್ಪವನ್ನು ಬಳಸಿದರೆ ಇದು ನಿಮಗೆ ಅರಿವಾಗದೆ ಒಳ್ಳೆಯ ಪರಿಣಾಮವನ್ನು ದೇಹದಲ್ಲಿ ಉಂಟು ಮಾಡುತ್ತದೆ. ಆಯುರ್ವೇದದ ಪ್ರಕಾರ, ತುಪ್ಪವು ಬಹಳ ಬೇಗ ಜೀರ್ಣವಾಗುತ್ತದೆ ಹಾಗೂ ಇದರಿಂದಾಗಿ ದೇಹಕ್ಕೆ ಹೆಚ್ಚು ಶಕ್ತಿ ಸಿಗುತ್ತದೆ. ತುಪ್ಪವು ದೇಹವನ್ನು ಉಷ್ಣದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ. ತುಪ್ಪ ಬರೀ ದೇಹಕ್ಕೆ ಮಾತ್ರ ಒಳ್ಳೆಯದಲ್ಲ, ಇದು ಚರ್ಮಕ್ಕೂ ಉಪಯೋಗಕಾರಿ. ನಿತ್ಯದ ಅಡುಗೆಯಲ್ಲಿ ತುಪ್ಪವನ್ನು ಹೆಚ್ಚಾಗಿ ಬಳಕೆ ಮಾಡಿ. ಇದರಿಂದ ಅಡುಗೆಯ ರುಚಿಯೂ ಹೆಚ್ಚುತ್ತದೆ.
ಸಿಹಿ ಗೆಣಸು (Sweet Potato)
ಸಿಹಿ ಗೆಣಸಿನಲ್ಲಿ ವಿಟಮಿನ್ ಎ ಅಂಶವಿರುತ್ತದೆ. ಪೊಟಾಶಿಯಂ ಸೇರಿದಂತೆ ಸಾಕಷ್ಟು ನ್ಯೂಟ್ರಿಯೆಂಟ್ಸ್ ಇರುತ್ತದೆ. ನಿಮಗೇನಾದರೂ ಬೇಧಿ, ಉರಿಯೂತದಂತಹ ಸಮಸ್ಯೆಗಳಿದ್ದರೆ ಸಿಹಿ ಗೆಣಸು ಸೇವನೆ ಮಾಡಿ. ಇದರಿಂದ ನಿಮ್ಮ ಸಮಸ್ಯೆ ದೂರ ಆಗುವುದರ ಜೊತೆಗೆ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಇದನ್ನು ನೀವು ಹಾಲಿನೊಂದಿಗೆ ಅಥವಾ ಹಾಗೆಯೇ ಬೇಯಿಸಿ ತಿನ್ನಬಹುದು.
Sugar Tips: ಶುಗರ್ ಇದ್ಯಾ? ನಿಶ್ಚಿಂತೆಯಿಂದ ಇವುಗಳನ್ನು ಸೇವಿಸಿ
ನೆಲ್ಲಿಕಾಯಿ (Amla)
ನೀವು ನೆಲ್ಲಿಕಾಯಿಯನ್ನು ಇಷ್ಟ ಪಡುವವರ ಸಾಲಿನಲ್ಲಿದ್ದೀರಿ ಎಂದಾದರೆ ನಿಮಗಿದು ಸಿಹಿ ಸುದ್ದಿ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಆದ್ದರಿಂದ ಇದು ರೋಗಗಳಿಂದ ದೂರ ಉಳಿಯಲು ಸಹಾಯ ಮಾಡುತ್ತದೆ. ಇದು ಎಲ್ಲ ಕಾಲಗಳಲ್ಲಿಯೂ ಸಿಗುವುದಿಲ್ಲ. ಆದ್ದರಿಂದ ಸಿಕ್ಕಾಗ ಅದನ್ನು ತಿನ್ನುವ ಜೊತೆಗೆ ದೊಡ್ಡ ಪ್ರಮಾಣದಲ್ಲಿ ಉಪ್ಪಿನಕಾಯಿ ಹಾಕಿಟ್ಟುಕೊಂಡರೆ ವರ್ಷವಿಡೀ ಬಳಸಬಹುದು.
ಖರ್ಜೂರ (Dates)
ಖರ್ಜೂರದ ಸೇವನೆಯನ್ನು ಹಲವಾರು ರೀತಿಯಲ್ಲಿ ಮಾಡಬಹುದು. ಇದರಲ್ಲಿ ಉತ್ತಮ ವಿಟಮಿನ್ಸ್, ಮಿನರಲ್ಸ್ ಹಾಗೂ ನಾರಿನಂಶವಿರುತ್ತದೆ. ಅಷ್ಟೇ ಅಲ್ಲದೆ ಕ್ಯಾಲ್ಸಿಯಂ, ಐರನ್ ಹೇರಳವಾಗಿರುತ್ತದೆ. ಖರ್ಜೂರದ ಸೇವನೆಯಿಂದ ಮೂಳೆ ಹಾಗೂ ಹಲ್ಲುಗಳು ಗಟ್ಟಿಯಾಗುತ್ತವೆ. ಸಂಶೋಧಕರ ಪ್ರಕಾರ, ಪ್ರತಿದಿನ ಖರ್ಜೂರವನ್ನು ಸೇವಿಸುವುದರಿಂದ ಮೂಳೆಗೆ ಸಂಬಂಧಪಟ್ಟ ತೊಂದರೆಯನ್ನು ನಿವಾರಿಸಿಕೊಳ್ಳಬಹುದು.
ಬೆಲ್ಲ (Jaggery)
ಬೆಲ್ಲದಲ್ಲಿ ಕಬ್ಬಿಣ (iron) ಅಂಶ ಹೆಚ್ಚಿರುತ್ತದೆ. ಪ್ರತಿದಿನ ಸ್ವಲ್ಪ ಮಟ್ಟಿಗೆ ಬೆಲ್ಲವನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತಾ ಹೋಗುತ್ತದೆ. ಅದರ ಜೊತೆಗೆ ಆರೋಗ್ಯದಲ್ಲಿ ಆಗಾಗ ಕಂಡುಬರುವಂತಹ ಜ್ವರ, ಶೀತ ಹಾಗೂ ಮೈ ಬಿಸಿಯಾಗುವುದು ಇಂತಹ ತೊಂದರೆಗಳು ನಿವಾರಣೆಯಾಗುತ್ತವೆ. ಬೆಲ್ಲದಲ್ಲಿ ಕಬ್ಬಿಣಾಂಶದ ಜೊತೆಗೆ ಮೆಗ್ನೀಶಿಯಂ, ಝಿಂಕ್ (zink), ಹಾಗೂ ಪೊಟ್ಯಾಶಿಯಂ ಅಂಶ ಇರುತ್ತದೆ. ಈ ಎಲ್ಲ ಅಂಶಗಳು ನಿಮ್ಮ ಆರೋಗ್ಯ ಉತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ.
Intrusive Thoughts: ಒಳನುಗ್ಗುವ ಆಲೋಚನೆಗಳಿಗೆ ಕಡಿವಾಣ ಹಾಕುವುದು ಹೇಗೆ!
ಶುಂಠಿ (Ginger)
ಶುಂಠಿಯಲ್ಲಿ ಔಷಧೀಯ ಅಂಶ ಹೇರಳವಾಗಿರುತ್ತದೆ. ಶೀತ ,ಕೆಮ್ಮು, ಜ್ವರ, ಗಂಟಲು ನೋವು ಇಂತಹ ಸಮಸ್ಯೆಗಳಿಗೆ ಶುಂಠಿ ರಾಮಬಾಣದಂತೆ ಕೆಲಸ ಮಾಡುತ್ತದೆ. ಇವುಗಳ ಜೊತೆಗೆ ರೋಗನಿರೋಧಕ ಶಕ್ತಿ ಕೂಡ ಹೆಚ್ಚಿಸುತ್ತದೆ. ಇಷ್ಟೇ ಅಲ್ಲದೆ ಶುಂಠಿಯಲ್ಲಿ ಕ್ಯಾನ್ಸರ್ ನಿವಾರಣೆ ಮಾಡುವ ಶಕ್ತಿ ಇದೆ. ಹೊಟ್ಟೆ ಕೆಟ್ಟಿದ್ದರೆ ಶುಂಠಿ ಕಷಾಯ ಮಾಡಿ ಕುಡಿಯಿರಿ ಎಂಬ ಹಿರಿಯರ ಮಾತನ್ನು ನೀವು ಕೇಳಿರಬಹುದು, ಇಷ್ಟೆಲ್ಲ ಉಪಯೋಗ ಹೊಂದಿರುವ ಶುಂಠಿಯನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಿ.
ವಾಲ್ನಟ್ಸ್ (Walnuts) ಹಾಗೂ ಶೇಂಗಾ (Peanuts)
ವಾಲ್ನಟ್ ಪ್ರೋಟೀನ್ ಯುಕ್ತ ಆಹಾರ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಇಮ್ಯೂನಿಟಿ ಹೆಚ್ಚಿಸುವ ಅಂಶ ಹೆಚ್ಚಿದೆ. ಇನ್ನು ಶೇಂಗಾ ವಿಟಮಿನ್‌ಯುಕ್ತ ಆಹಾರ ಇದು ಕಾಡಿಯೋಗೆ ಸಂಬಂಧಪಟ್ಟ ರೋಗಗಳಿಂದ ನಿಮ್ಮನ್ನು ದೂರ ಇರಿಸುತ್ತದೆ ಜೊತೆಗೆ ಇದರ ಸೇವನೆಯಿಂದ ಕ್ಯಾನ್ಸರ್‌ನಿಂದ ಕೂಡ ದೂರವುಳಿಯಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.