Early Death: ಈ ಲಕ್ಷಣವಿದ್ದರೆ ಅಕಾಲಿಕ ಮರಣದ ಅಪಾಯ ಇರಬಹುದು

By Suvarna NewsFirst Published Jan 28, 2022, 7:44 PM IST
Highlights

ನಾವೆಲ್ಲ ಎಷ್ಟು ವರ್ಷಗಳ ಕಾಲ ಬದುಕಿರುತ್ತೇವೆ ಎನ್ನುವ ಅಂದಾಜು ಯಾರಿಗೂ ಇಲ್ಲ. ಇರುವಷ್ಟು ದಿನ ಆರೋಗ್ಯವಾಗಿ ಬದುಕಬೇಕು ಎನ್ನುವುದೊಂದೇ ಸಾಮಾನ್ಯವಾಗಿ ಎಲ್ಲರೂ ಬಯಸುವುದು. ಆದರೂ ಅಕಾಲಿಕ ಮರಣ ತಪ್ಪಿದ್ದಲ್ಲ. ದೇಹದಲ್ಲಿ ನಿಶ್ಯಕ್ತಿ ಇರುವುದು ಅಕಾಲಿಕ ಮರಣಕ್ಕೆ ತುತ್ತಾಗುವ ಲಕ್ಷಣ ಎಂದು ಅಧ್ಯಯನವೊಂದು ಹೇಳಿದೆ. 
 

ನಾವು, ನೀವು ಎಷ್ಟು ಕಾಲ (Time) ಬದುಕಿರುತ್ತೇವೆ? ಸಾವು (Death) ಯಾವಾಗ ಬರುತ್ತದೆ ಎಂದು ಯಾರಿಗೂ ಅಂದಾಜಿಸಲು ಸಾಧ್ಯವಿಲ್ಲ. ಯಾವಾಗ ಬೇಕಿದ್ದರೂ ಬರಬಹುದು. ಸಾಮಾನ್ಯವಾಗಿ, ವ್ಯಕ್ತಿಯ ಆಯುಷ್ಯ (Lifetime) ಆತನ ಆನುವಂಶಿಕತೆ (Heredity) ಹಾಗೂ ಜೀವನಶೈಲಿ (Life style)ಯನ್ನು ಅವಲಂಬಿಸಿರುತ್ತದೆ. ಆದರೆ, ಇತ್ತೀಚೆಗೆ ಏಕಾಏಕಿ ಸಾವಿಗೀಡಾಗುವವರ ಪ್ರಮಾಣ ಇತ್ತೀಚೆಗೆ ಅಧಿಕವಾಗಿದೆ.
ಎಲ್ಲರಿಗೂ ತಿಳಿದಿರುವಂತೆ ದೇಹಕ್ಕೆ ವಯಸ್ಸಾದಂತೆ ನಿಶ್ಯಕ್ತಿ ಕೂಡ ಹೆಚ್ಚಾಗುತ್ತದೆ. ಇತ್ತೀಚಿನ ಒಂದು ಅಧ್ಯಯನ(Study)ದ ಪ್ರಕಾರ, ಅಧಿಕ ನಿಶ್ಯಕ್ತಿ ಉಂಟಾಗುವುದು ಅಕಾಲಿಕ ಸಾವು ಬಂದೆರಗುವ ಸೂಚನೆಯಾಗಿದೆ. ಜರ್ನಲ್ ಆಫ್ ಜೆರೊಂಟೋಲಜಿ (Journal of Gerontology) ಎನ್ನುವ ನಿಯತಕಾಲಿಕದಲ್ಲಿ ಈ ಕುರಿತ ಅಧ್ಯಯನ ಪ್ರಬಂಧ ಪ್ರಕಟವಾಗಿದೆ. ಉದ್ವೇಗ (Anxiety) ಹಾಗೂ ಒತ್ತಡ(Stress)ದಿಂದ ಉಂಟಾಗುವ ಮಾನಸಿಕ (Mental) ಮತ್ತು ಶಾರೀರಿಕ (Physical) ನಿಶ್ಯಕ್ತಿಯಿಂದ ವ್ಯಕ್ತಿ ಅಕಾಲಿಕ ಮರಣಕ್ಕೀಡಾಗಬಹುದು ಎಂದು ಇದರಲ್ಲಿ ಹೇಳಲಾಗಿದೆ. 

ಈ ಅಧ್ಯಯನದಲ್ಲಿ 60ರ ವಯೋಮಾನದ ಸುಮಾರು 3 ಸಾವಿರ ಜನರನ್ನು ಬಳಸಿಕೊಳ್ಳಲಾಗಿತ್ತು. ಕೆಲವು ದೈಹಿಕ ಚಟುವಟಿಕೆಯ ಆಧಾರದ ಮೇಲೆ ಐದು ರೀತಿಯ ನಿಶ್ಯಕ್ತಿಯ ಹಂತಗಳನ್ನು ವಿಂಗಡಣೆ ಮಾಡಲಾಗಿತ್ತು. ಅದಕ್ಕೆ ತಕ್ಕಂತೆ ಅವರು ತಮ್ಮ ಸ್ಥಿತಿಗತಿಗಳನ್ನು ವಿವರಿಸಬೇಕಿತ್ತು.    

ಇದರಲ್ಲಿ 30 ನಿಮಿಷದ ನಡಿಗೆ (Walk), ಲಘುವಾದ ಮನೆಕೆಲಸ ಹಾಗೂ ಹೆಚ್ಚು ಶ್ರಮದಾಯಕ ಗಾರ್ಡನಿಂಗ್ (Gardening) ಚಟುವಟಿಕೆಗಳೂ ಇದ್ದವು. ಈ ಚಟುವಟಿಕೆಗಳನ್ನು ನಡೆಸುವಾಗ ಯಾರು ಹೆಚ್ಚು ಸುಸ್ತು, ನಿಶ್ಯಕ್ತಿಯನ್ನು ಅನುಭವಿಸಿದರೋ ಅವರು ಉಳಿದೆಲ್ಲರಿಗಿಂತ ಅಧಿಕ ಪ್ರಮಾಣದಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗುವ ಅಪಾಯವನ್ನು ಎದುರಿಸುತ್ತಿದ್ದರು. ಅವರಲ್ಲಿ ಬಹುತೇಕರು ಖಿನ್ನತೆ (Depression) ಅಥವಾ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವುದು ಕಂಡುಬಂತು. ಹಾಗೂ ಇಲ್ಲಿ ವಯಸ್ಸು (Age) ಹಾಗೂ ಲಿಂಗ(Sex)ದ ಪ್ರಭಾವ ಇರುವುದನ್ನೂ ಸಹ ಗುರುತಿಸಲಾಗಿದೆ. 

ಬೆಳಗ್ಗೆ ತಲೆ ಸುತ್ತುವುದ್ಯಾಕೆ?

ನಿಶ್ಯಕ್ತಿಯೆಂದರೆ, ಕೇವಲ ದೇಹದ್ದಷ್ಟೇ ಅಲ್ಲ. ಮಾನಸಿಕ ನಿಶ್ಯಕ್ತಿಯೂ ಇಲ್ಲಿ ಪರಿಗಣನೆಗೆ ಬರುತ್ತದೆ. ಮಾನಸಿಕವಾಗಿರುವ ನಿಶ್ಯಕ್ತಿಯೇ ಹೆಚ್ಚು ಪ್ರಧಾನವಾಗಿದ್ದರೆ ತಜ್ಞರ ನೆರವು ಪಡೆದುಕೊಳ್ಳಬೇಕು. ಆಪ್ತಸಮಾಲೋಚನೆ ಮೂಲಕ ಮನಸ್ಸನ್ನು ರಿಲ್ಯಾಕ್ಸ್ ಮಾಡಿಕೊಳ್ಳಬೇಕು. ಏಕೆಂದರೆ, ಮಾನಸಿಕವಾದ ಸುಸ್ತು, ನಿಶ್ಯಕ್ತಿ, ಉತ್ಸಾಹ ಇಲ್ಲದಿರುವ ಸಮಸ್ಯೆಗಳಿಂದ ಕ್ರಮೇಣ ದೈಹಿಕ ಸಮಸ್ಯೆಗಳು ಆರಂಭವಾಗಬಲ್ಲವು. ಹೀಗಾಗಿ, ಈ ಕುರಿತು ಎಚ್ಚರಿಕೆ ವಹಿಸುವುದು ಅಗತ್ಯ.
ಅಕಾಲಿಕ ಮರಣಕ್ಕೆ ನಿಶ್ಯಕ್ತಿ ಕಾರಣವಾಗಬಲ್ಲದು ಎಂದು ಹೇಳಿರುವ ಮೊದಲ ಅಧ್ಯಯನ ಇದಾಗಿದೆ. ಈ ನಿಶ್ಯಕ್ತಿ ಹಲವಾರು ಕಾರಣಗಳಿಂದ ಉಂಟಾಗಿರಬಹುದು. ಹೀಗಾಗಿ, ತುಂಬ ಸುಸ್ತು ಹಾಗೂ ನಿಶ್ಯಕ್ತಿಯಾಗುತ್ತಿದ್ದರೆ ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಬೇಕು. 

ನಿದ್ರೆ ಮತ್ತು ಆರೋಗ್ಯ

ಬೇರೆ ಯಾವುದೇ ಆರೋಗ್ಯ (Health) ಸಮಸ್ಯೆ ಇಲ್ಲದಿರುವವರಲ್ಲೂ ದೇಹದಲ್ಲಿ ಒಮ್ಮೊಮ್ಮೆ ನಿಶ್ಯಕ್ತಿ ಉಂಟಾಗುತ್ತದೆ. ಇದನ್ನು ಹೋಗಲಾಡಿಸುವ ಅತ್ಯುತ್ತಮ ಹಾಗೂ ಪರಿಣಾಮಕಾರಿ ಪರಿಹಾರವೆಂದರೆ, ದಿನವೂ ನಿಯಮಿತವಾಗಿ ವ್ಯಾಯಾಮ ಮಾಡುವುದು. ಪಿಟ್ಸ್ ಬರ್ಗ್ ಗ್ರ್ಯಾಜುಯೇಟ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಸಂಸ್ಥೆಯ ಪ್ರೊಫೆಸರ್ ಹಾಗೂ ಈ ಅಧ್ಯಯನದ ಪ್ರಮುಖ ಲೇಖಕರಾಗಿರುವ ನ್ಯಾನ್ಸಿ ಗ್ಲಿನ್ (Nancy Glynn) ಅವರ ಪ್ರಕಾರ, ದೈಹಿಕವಾಗಿ ಫಿಟ್ (Fit) ಆಗುವುದು ಇಂದಿನ ಅಗತ್ಯವಾಗಿದೆ. ಏಕೆಂದರೆ, ದೈಹಿಕ ಚಟುವಟಿಕೆಯಿಂದ ದೇಹ ಲವಲವಿಕೆ ಪಡೆದುಕೊಳ್ಳುತ್ತದೆ, ನಿಶ್ಯಕ್ತಿಯನ್ನು ಗೆಲ್ಲುತ್ತದೆ. ಅಷ್ಟೇ ಅಲ್ಲ, ದೇಹಾಲಸ್ಯ ದೂರವಾಗಿ ಮನಸ್ಸು ಉತ್ಸಾಹಭರಿತವಾಗುತ್ತದೆ. 
ಉತ್ತಮ ದೈಹಿಕ ಚಟುವಟಿಕೆ ನಡೆಸುವುದರಿಂದ ಆಂತರಿಕ ಸುಸ್ತು ಹಾಗೂ ನಿಶ್ಯಕ್ತಿ ಶಮನವಾಗುತ್ತದೆ ಎಂದು ಈ ಹಿಂದಿನ ಹಲವಾರು ಅಧ್ಯಯನಗಳು ಸಾಬೀತುಪಡಿಸಿವೆ. ದಿನವೂ ಬರೀ 15 ನಿಮಿಷಗಳ ಕಾಲ ವ್ಯಾಯಾಮ (Exercise) ಮಾಡುವುದರಿಂದ ಮೂರು ವರ್ಷಗಳಷ್ಟು ಆಯಸ್ಸು ವೃದ್ಧಿಯಾಗುತ್ತದೆ ಎಂದೂ ಅಧ್ಯಯನಗಳು ಹೇಳಿವೆ.           
 

click me!