ಎನರ್ಜಿ ಡ್ರಿಂಕ್ಸ್‌ ಕುಡಿತೀರಾ? ಕೂದಲು ಉದುರೋದು ಹೆಚ್ಚಾಗುತ್ತೆ

By Suvarna NewsFirst Published Jan 18, 2023, 5:19 PM IST
Highlights

ಕೂದಲು ಉದುರುವುದು ಒಬ್ಬಿಬ್ಬರ ಸಮಸ್ಯೆಯಲ್ಲ. ಎಲ್ಲರಲ್ಲೂ ಕಂಡುಬರುತ್ತಿರುವ ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಏನೇ ಮಾಡಿದರೂ, ಎಷ್ಟೇ ಔಷಧ, ಶ್ಯಾಂಪೂ ಬಳಕೆ ಮಾಡಿದರೂ, ಈರುಳ್ಳಿ, ಮೆಂತ್ಯೆ, ದಾಸವಾಳದ ಸೊಪ್ಪು ಏನೇ ಹಚ್ಚಿಕೊಂಡು ಸ್ನಾನ ಮಾಡಿದರೂ ಕೂದಲು ಉದುರುವ ಸಮಸ್ಯೆ ನಿಲ್ಲುವುದಿಲ್ಲ ಎನ್ನುವುದು ಹಲವರ ನೋವು. ಪುರುಷರಲ್ಲಿ ಇದಕ್ಕೆ ಬೇರೆಯದೇ ಕಾರಣವಿರಬಹುದು. ಎನರ್ಜಿ ಡ್ರಿಂಕ್ಸ್‌ ಸೇವನೆಯಿಂದಲೂ ಕೂದಲು ಉದುರುವ ಸಮಸ್ಯೆ ಹೆಚ್ಚಬಹುದು. 
 

ಕೂದಲು ಉದುರುವ ಸಮಸ್ಯೆ ಇತ್ತೀಚೆಗೆ ಮಿತಿ ಮೀರಿದೆ. ಮಹಿಳೆಯರಲ್ಲಿ ಮಾತ್ರವಲ್ಲ, ಪುರುಷರೂ ಕೂದಲು ಉದುರುವ ಸಮಸ್ಯೆಗೆ ಬೇಸತ್ತಿದ್ದಾರೆ. ಕೊರೋನಾ ಸೋಂಕಿನ ಬಳಿಕ ಕೂದಲು ಉದುರುವುದು ಹೆಚ್ಚಾಗಿದೆ ಎಂದು ಹೇಳುವವರೂ ಇದ್ದಾರೆ. ಹರೆಯದ ಹುಡುಗಿಯರಲ್ಲೂ ಇತ್ತೀಚೆಗೆ ಈ ಸಮಸ್ಯೆ ಮಿತಿ ಮೀರಿದೆ. ಏನೇ ಔಷಧಿ ಮಾಡಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಹಲವು ಹುಡುಗಿಯರು, ಅವರ ಅಮ್ಮಂದಿರು ಅಲವತ್ತುಕೊಳ್ಳುವುದು ಸಾಮಾನ್ಯವಾಗಿದೆ. ಪುರುಷರಲ್ಲೂ ಕೂದಲು ಉದುರುವುದು ಹಿಂದಿಗಿಂತ ಬಹಳಷ್ಟು ಪ್ರಮಾಣದಲ್ಲಿ ಏರಿಕೆಯಾಗಿದೆ. ಇದಕ್ಕೆ ಹಲವು ಕಾರಣಗಳಿವೆ. ಆನುವಂಶಿಕತೆ, ಖಿನ್ನತೆ, ವಯಸ್ಸಾಗುವಿಕೆ, ಕೆಟ್ಟ ಜೀವನಶೈಲಿ, ಕೆಲವು ಆಹಾರ ಪದ್ಧತಿಯೂ ಕೂದಲು ಉದುರುವುದಕ್ಕೆ ಕೊಡುಗೆ ನೀಡುತ್ತವೆ. ಇತ್ತೀಚೆಗೆ ಚೀನಾದಲ್ಲಿ ನಡೆದ ಒಂದು ಅಧ್ಯಯನ ಇನ್ನಷ್ಟು ಕುತೂಹಲಕರವಾದ ಅಂಶವನ್ನು ಹೇಳಿದೆ. ಅದೆಂದರೆ, ಪುರುಷರು ಸೇವನೆ ಮಾಡುವ ಎನರ್ಜಿ ಡ್ರಿಂಕ್ಸ್‌, ಸಾಫ್ಟ್‌ ಡ್ರಿಂಕ್‌ ಗಳಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಬಹುದು ಎನ್ನಲಾಗಿದೆ. ಪುರುಷರು ಹಲವು ರೀತಿಯ ಎನರ್ಜಿ ಡ್ರಿಂಕ್‌ ಗಳನ್ನು ಸಾಮಾನ್ಯವಾಗಿ ಸೇವಿಸುತ್ತಾರೆ. ಈ ಅಧ್ಯಯನದ ಪ್ರಕಾರ, ಪುರುಷರ ಈ ಅಭ್ಯಾಸ ಕೂದಲು ಉದುರುವ ಸಮಸ್ಯೆಯನ್ನು ಶೇ.30ರಷ್ಟು ಹೆಚ್ಚಿಸುತ್ತದೆ.

ಕೇವಲ ಎನರ್ಜಿ ಡ್ರಿಂಕ್‌ (Energy Drinks) ಒಂದೇ ಅಲ್ಲ, ಸಾಫ್ಟ್‌ (Soft) ಡ್ರಿಂಕ್ಸ್‌, ಸ್ಪೋರ್ಟ್ಸ್‌ (Sports) ಡ್ರಿಂಕ್‌ ಸೇರಿದಂತೆ ಅತಿಯಾದ ಸಕ್ಕರೆಭರಿತ (Sugar) ಚಹಾ ಹಾಗೂ ಕಾಫಿ ಸೇವನೆಯಿಂದಲೂ ಪುರುಷರಲ್ಲಿ (Male) ಕೂದಲು ಉದುರುವ ಸಮಸ್ಯೆ (Hairfall Problem) ಉಂಟಾಗಬಹುದು. ಚೀನಾದ ರಾಜಧಾನಿ ಬೀಜಿಂಗ್‌ ನ ವಿಶ್ವವಿದ್ಯಾಲಯವೊಂದು ಈ ಕುರಿತು ಅಧ್ಯಯನ ನಡೆಸಿತ್ತು. ಸಾಫ್ಟ್‌ ಕಾರ್ಬೋನೇಟೆಡ್‌ (Carbonated) ಡ್ರಿಂಕ್‌ ಅಂದರೆ, ಕೋಲಾ, ಪೆಪ್ಸಿಯಂತಹ ಪಾನೀಯಗಳು ಹಾಗೂ ಕ್ರೀಡೆಯ ಸಮಯದಲ್ಲಿ ಹಲವು ಕ್ರೀಡಾಪಟುಗಳು ಸೇವನೆ ಮಾಡುವ ಇಲೆಕ್ಟ್ರೊಲೈಟ್‌ (Electrolyte) ಅಂಶವುಳ್ಳ, ಬಹಳ ಬೇಗ ಶಕ್ತಿ ನೀಡುವ ಪಾನೀಯಗಳ ಸೇವನೆ ಮಾಡಿದರೆ ಈ ಸಮಸ್ಯೆ ಅತಿ ಹೆಚ್ಚು ಎಂದು ಹೇಳಲಾಗಿದೆ. ಈ ಅಧ್ಯಯನದಲ್ಲಿ ಪಾಲ್ಗೊಂಡ ಪುರುಷರು ವಾರಕ್ಕೊಮ್ಮೆ ನಿಯಮಿತವಾಗಿ 1-3 ಲೀಟರ್‌ ವರೆಗೆ ಇಂತಹ ಪಾನೀಯಗಳನ್ನು ಸೇವನೆ ಮಾಡುತ್ತಿದ್ದರು. ಇವರಲ್ಲಿ ಕೂದಲು ಉದುರುವಿಕೆ ಗಂಭೀರ ಪ್ರಮಾಣದಲ್ಲಿ ಕಂಡುಬಂದಿತ್ತು. 

Hair Health: ಕತ್ತರಿಸಿಲ್ಲವೆಂದ್ರೆ ಎಷ್ಟುದ್ದ ಬೆಳೆಯುತ್ತೆ ನಿಮ್ಮ ತಲೆ ಕೂದಲು?

ಸಕ್ಕರೆಭರಿತ ಟೀ (Tea), ಕಾಫಿ (Coffee) ಹಾಗೂ ಆತಂಕ
ಸಾಫ್ಟ್‌ ಡ್ರಿಂಕ್ಸ್‌ ಸೇರಿದಂತೆ ಇನ್ನಿತರ ಪಾನೀಯಗಳನ್ನು ಕೆಲವರು ನಿಯಮಿತವಾಗಿ ಸೇವನೆ ಮಾಡುವುದಿಲ್ಲ. ಆದರೆ, ಅತ್ಯಧಿಕ ಪ್ರಮಾಣದಲ್ಲಿ ಸಕ್ಕರೆ ಬೆರೆಸಿದ ಟೀ ಅಥವಾ ಕಾಫಿ ಕುಡಿಯುತ್ತಾರೆ. ಇವರಲ್ಲೂ ಶೇ.42ರಷ್ಟು ಪ್ರಮಾಣದಲ್ಲಿ ಕೂದಲು ಉದುರುವಿಕೆ ಹೆಚ್ಚು. ಇವರು ಕೋಕ್‌ ನಂತಹ ಪದಾರ್ಥಗಳನ್ನು ಅಲ್ಪ ಪ್ರಮಾಣದಲ್ಲಿ ಸಹ ಸೇವನೆ ಮಾಡಿರಲಿಲ್ಲ. ಆದರೂ ಇವರಲ್ಲಿ ಕೂದಲು ಉದುರುವುದಕ್ಕೆ ಸಕ್ಕರೆ ಬೆರೆಸಿದ ಟೀ, ಕಾಫಿಯೇ ಕಾರಣ ಎಂದು ಗುರುತಿಸಲಾಗಿದೆ. ಜತೆಗೆ, ಆತಂಕದ (Anxiety) ಸಮಸ್ಯೆ ಎದುರಿಸುತ್ತಿರುವ ಪುರುಷರಲ್ಲೂ ಕೂದಲು ಉದುರುವ ಸಮಸ್ಯೆ ಹೆಚ್ಚು. 

ಅರೆ ತೆಂಗಿನಕಾಯಿ ಚಿಪ್ಪಿನ ಇದ್ದಿಲ ಪುಡಿಯೂ ಹೆಚ್ಚಿಸುತ್ತೆ ಬ್ಯೂಟಿ? ಬಳಸೋದು ಹೀಗೆ!

ಆರೋಗ್ಯಕರ ಆಹಾರ ಮುಖ್ಯ
ಕೂದಲು ಉದುರುವನ್ನು ತಡೆಗಟ್ಟಲು ಆರೋಗ್ಯಕರ ಆಹಾರ (Healthy Food) ಮುಖ್ಯ ಎನ್ನುವುದನ್ನು ಈ ಹಿಂದೆಯೂ ಹಲವು ಅಧ್ಯಯನಗಳು ಹೇಳಿವೆ. ತಜ್ಞರ ಪ್ರಕಾರ, ಕೂದಲಿನಲ್ಲಿರುವ ಕೋಶಗಳು (Cells) ದೇಹದಲ್ಲಿ ಅತಿವೇಗವಾಗಿ ವಿಭಜನೆಗೊಳ್ಳುವ ಕೋಶಗಳಲ್ಲಿ ಒಂದಾಗಿವೆ. ಹೀಗಾಗಿ, ಇವುಗಳಿಗೆ ಆರೋಗ್ಯಕರ ಆಹಾರದ ಅಗತ್ಯ ಇರುತ್ತದೆ. ಎಲ್ಲ ಪೋಷಕಾಂಶಗಳು (Nutrients) ಬೇಕಿರುತ್ತವೆ. ಈ ಕೋಶಗಳಿಗೆ ಪ್ರೋಟೀನ್‌ (Protein) ಯುಕ್ತ ಆಹಾರದ ಅವಶ್ಯಕತೆ ಹೆಚ್ಚಿರುತ್ತದೆ. ಕೊಬ್ಬು (Fat), ಕಾರ್ಬೈಹೈಡ್ರೇಟ್ಸ್‌ ಅಂಶವಿರುವ ಆಹಾರ ಇವುಗಳಿಗೆ ಸರಿಹೊಂದುವುದಿಲ್ಲ. ಇನ್ನೊಂದು ಕುತೂಹಲಕಾರಿ ಅಂಶವಿದೆ. ನಮ್ಮ ದೇಹ (Body) ಕೂದಲ ಬೆಳವಣಿಗೆಗೆ ಅಷ್ಟೊಂದು ಆದ್ಯತೆ ನೀಡುವುದಿಲ್ಲವಂತೆ. ಕೂದಲ ಬೆಳವಣಿಗೆಗಾಗಿ ಪೋಷಕಾಂಶಗಳನ್ನು ಬಳಕೆ ಮಾಡುವ ಪದ್ಧತಿ ದೈಹಿಕ ವ್ಯವಸ್ಥೆಯಲ್ಲಿಲ್ಲ. ಹೀಗಾಗಿ, ಕೂದಲಿಗೆ ಬೇಕಾಗುವ ಉತ್ತಮ ಅಂಶಗಳನ್ನು ನಾವು ಉದ್ದೇಶಪೂರ್ವಕವಾಗಿ ಪೂರೈಕೆ (Supply) ಮಾಡಬೇಕಾಗುತ್ತದೆ.   
 

click me!