
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಇತ್ತೀಚಿನ ಒಂದು ಅಧ್ಯಯನದ ಪ್ರಕಾರ, ಭಾರತ, ನೇಪಾಳ ಮತ್ತು ಪಾಕಿಸ್ತಾನಗಳಲ್ಲಿ ಮಾರಾಟವಾಗುತ್ತಿರುವ ಅರಿಶಿನದಲ್ಲಿ ಆರೋಗ್ಯ ಸಂಸ್ಥೆಗಳು ನಿಗದಿಪಡಿಸಿರುವ ಆರೋಗ್ಯಕರ ಮಟ್ಟಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸೀಸದ (ಲೆಡ್) ಮಿಶ್ರಣ ಇರುವುದು ಕಂಡುಬಂದಿದೆ. ಅರಿಶಿನದ ಸಂಸ್ಕರಣೆಯ ಸಂದರ್ಭದಲ್ಲಿ, ಕಲುಷಿತ ಮಣ್ಣಿನಿಂದ, ನೀರಿನಿಂದ ಅಥವಾ ಉಪಕರಣಗಳಿಂದ ಅರಿಶಿನಕ್ಕೆ ಸೀಸ ಸೇರ್ಪಡೆಯಾಗುತ್ತದೆ. ಕೆಲವೊಂದು ಬಾರಿ, ಅರಿಶಿನದ ಬಣ್ಣವನ್ನು ಇನ್ನಷ್ಟು ಗಾಢವಾಗಿಸುವ ಸಲುವಾಗಿ ಅದಕ್ಕೆ ಸೀಸ ಲೇಪಿತ ಉತ್ಪನ್ನಗಳನ್ನೂ ಸೇರಿಸಲಾಗುತ್ತದೆ.
'ಸೈನ್ಸ್ ಆಫ್ ದ ಟೋಟಲ್ ಎನ್ವಿರಾನ್ಮೆಂಟ್' ಎಂಬ ನಿಯತಕಾಲಿಯಲ್ಲಿ ಪ್ರಕಟವಾದ 'ಡೌನ್ ಟು ಅರ್ತ್' ಎಂಬ ಅಧ್ಯಯನ, ಭಾರತದ ಪಾಟ್ನಾ, ಪಾಕಿಸ್ತಾನದ ಕರಾಚಿ ಮತ್ತು ಪೇಶಾವರಗಳಿಂದ ಸಂಗ್ರಹಿಸಿದ ಅರಿಶಿನದಲ್ಲಿ ಸೀಸದ (ಲೆಡ್) ಪ್ರಮಾಣ ಪ್ರತಿಯೊಂದು ಗ್ರಾಮಿಗೂ 1,000 ಮೈಕ್ರೋಗ್ರಾಮ್‌ಗಿಂತ ಹೆಚ್ಚಾಗಿತ್ತು ಎಂದು ತಿಳಿಸಿದೆ.
ಇನ್ನು ಗುವಾಹಟಿ ಮತ್ತು ಚೆನ್ನೈನಲ್ಲಿ ಸಂಗ್ರಹಿಸಿದ ಅರಿಶಿನದಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಫುಡ್ ಸೇಫ್ಟಿ ಆ್ಯಂಡ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ - FSSAI) ನಿಗದಿಪಡಿಸಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸೀಸ ಮಿಶ್ರವಾಗಿರುವುದು ಕಂಡುಬಂದಿದೆ.
ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯ ಆರೋಗ್ಯ ಪ್ರಯೋಜನಗಳು
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್ಎಸ್ಎಸ್ಎಐ) ನಿಯಮಾವಳಿಗಳ ಪ್ರಕಾರ, ಪ್ರತಿಯೊಂದು ಗ್ರಾಮ್ ಅರಿಶಿನದ ಗೆಡ್ಡೆ ಮತ್ತು ಅರಿಶಿನ ಪುಡಿಯಲ್ಲಿ ಗರಿಷ್ಠ 10 ಮೈಕ್ರೋಗ್ರಾಮ್ಸ್ ಸೀಸ (ಲೆಡ್) ಇರಬಹುದು. ಇದು ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಎಫ್ಎಸ್ಎಸ್ಎಐನ 2011ರ ನಿಯಮಾವಳಿಗಳನ್ನು ಆಧರಿಸಿದೆ. ಈ ನಿಯಮಾವಳಿ, ಸಾರ್ವಜನಿಕರ ಆರೋಗ್ಯ ರಕ್ಷಿಸುವ ಸಲುವಾಗಿ ಮಾಲಿನ್ಯಕಾರಕಗಳು, ವಿಷಕಾರಿ ವಸ್ತುಗಳು ಮತ್ತು ಅವಶೇಷ ವಸ್ತುಗಳನ್ನು ಸುರಕ್ಷತಾ ಪ್ರಮಾಣದಲ್ಲಿ ಇಡುವ ಉದ್ದೇಶ ಹೊಂದಿದೆ.
ಸಂಶೋಧಕರು ತಮ್ಮ ಅಧ್ಯಯನದಲ್ಲಿ, ಇಷ್ಟೊಂದು ಭಾರೀ ಪ್ರಮಾಣದ ಸೀಸವನ್ನು ಹೊಂದಿರುವ ಅರಿಶಿನವನ್ನು ಸೇವಿಸಿದರೆ, ಅದರಿಂದ ಸೀಸದ ವಿಷಪ್ರಾಶನವಾದೀತು (ಲೆಡ್ ಪಾಯ್ಸನಿಂಗ್). ಅದರಲ್ಲೂ ಸಣ್ಣ ಮಕ್ಕಳಿಗೆ ಇದು ಅತ್ಯಂತ ಅಪಾಯಕಾರಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸೀಸ ಒಂದು ತೂಕದ ಲೋಹವಾಗಿದ್ದು (ಹೆವಿ ಮೆಟಲ್), ಕ್ಯಾಲ್ಸಿಯಂ ರೀತಿಯಲ್ಲಿ ವರ್ತಿಸುತ್ತದೆ. ಆದ್ದರಿಂದ ಸೀಸವೂ ನಮ್ಮ ಮೂಳೆಗಳಲ್ಲಿ ಸಂಗ್ರಹಿಸಲ್ಪಡುತ್ತದೆ. ಈ ಲೋಹ ದೇಹದ ಸಹಜ ಪ್ರಕ್ರಿಯೆಗಳನ್ನು ಹಾಳುಗೆಡವುತ್ತದೆ. ಅದರೊಡನೆ ಹೃದಯ ಸಂಬಂಧಿ ಸಮಸ್ಯೆ, ಮೂತ್ರಪಿಂಡದ ವೈಫಲ್ಯ, ಮತ್ತು ಕೆಲವೊಂದು ಸಂದರ್ಭಗಳಲ್ಲಿ ಸಣ್ಣ ವಯಸ್ಸಿನಲ್ಲೇ ಸಾವಿಗೂ ಕಾರಣವಾಗುತ್ತದೆ.
ಮಕ್ಕಳ ದೇಹದಲ್ಲಿ, ಪ್ರತಿಯೊಂದು ಲೀಟರ್ ರಕ್ತದಲ್ಲಿ 10 ಮೈಕ್ರೋಗ್ರಾಮ್ ರಕ್ತದ ಸೀಸದ (ಬ್ಲಡ್ ಲೆಡ್) ಮಟ್ಟವಿದ್ದರೆ, ಅದರಿಂದ ಒಂದು ಐಕ್ಯೂ ಅಂಕ ಕಡಿಮೆಯಾಗುತ್ತದೆ. ಐಕ್ಯೂ ಅಥವಾ ಇಂಟಲಿಜೆನ್ಸ್ ಕ್ವೋಷಿಯೆಂಟ್ ಎನ್ನುವುದು ವ್ಯಕ್ತಿಯೊಬ್ಬನ ಆಲೋಚನೆ ಮತ್ತು ಸಮಸ್ಯಾ ಪರಿಹಾರ ನಡೆಸುವ ಸಾಮರ್ಥ್ಯದ ಅಳತೆಯಾಗಿದೆ. ಆದ್ದರಿಂದ, ರಕ್ತದಲ್ಲಿ ಒಂದು ಸಣ್ಣ ಪ್ರಮಾಣದ ಸೀಸವೂ ಸಹ ಮಕ್ಕಳ ಕಲಿಯುವ ಮತ್ತು ಮಾಹಿತಿಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಕುಂಠಿತಗೊಳಿಸಬಲ್ಲದು.
ಒಂದು ಅಂದಾಜಿನ ಪ್ರಕಾರ, ಪ್ರಪಂಚದಾದ್ಯಂತ 815 ಮಿಲಿಯನ್ ಮಕ್ಕಳ ರಕ್ತದ ಸೀಸದ ಪ್ರಮಾಣ ಪ್ರತಿ ಲೀಟರ್‌ಗೆ 50 ಮೈಕ್ರೋಗ್ರಾಮ್‌ಗಳಿಗಿಂತ ಹೆಚ್ಚಿದೆ. 413 ಮಿಲಿಯನ್ ಮಕ್ಕಳಲ್ಲಿ ರಕ್ತದ ಸೀಸದ (ಬ್ಲಡ್ ಲೆಡ್) ಪ್ರಮಾಣ ಪ್ರತಿ ಲೀಟರ್‌ಗೆ 100 ಮೈಕ್ರೋಗ್ರಾಮ್‌ಗಳಿಗಿಂತ ಹೆಚ್ಚಿದೆ. ಈ ಅಂಕಿಅಂಶಗಳು ಜಗತ್ತಿನಲ್ಲಿ ಅಪಾರ ಪ್ರಮಾಣದ ಮಕ್ಕಳು ಅಪಾಯಕಾರಿ ಮಟ್ಟದಲ್ಲಿ ಸೀಸದ ಅಂಶಕ್ಕೆ ತೆರೆದುಕೊಂಡಿದ್ದು, ಇದು ಅವರ ಆರೋಗ್ಯ ಮತ್ತು ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಸೂಚಿಸಿವೆ.
ಹಾಗೆಂದು ರಕ್ತದಲ್ಲಿ ಸೀಸದ ಸುರಕ್ಷಿತ ಪ್ರಮಾಣ ಎನ್ನುವ ವಿಚಾರವೇ ಬರುವುದಿಲ್ಲ. ಅತ್ಯಂತ ಕಡಿಮೆ ಪ್ರಮಾಣದ ಸೀಸ, ಅಂದರೆ ಪ್ರತಿ ಡೆಸಿಲೀಟರ್‌ಗೆ 3.5 ಮೈಕ್ರೋಗ್ರಾಮ್ ಸೀಸವೂ ಸಹ ಮಕ್ಕಳಲ್ಲಿ ಬುದ್ಧಿವಂತಿಕೆಯ ಕೊರತೆ, ವರ್ತನಾ ಸಮಸ್ಯೆಗಳು, ಮತ್ತು ಕಲಿಕಾ ಸಮಸ್ಯೆಗಳನ್ನು ತಂದೊಡ್ಡಬಲ್ಲವು. ಅಂದರೆ, ಅತ್ಯಂತ ಸಣ್ಣ ಪ್ರಮಾಣದಲ್ಲಿ ಸೀಸದ ಉಪಸ್ಥಿತಿಯೂ ಮಕ್ಕಳ ಬೆಳವಣಿಗೆಯ ಮೇಲೆ ಪರಿಣಾಮ ಉಂಟುಮಾಡುತ್ತದೆ.
ಸಂಶೋಧಕರು ಡಿಸೆಂಬರ್ 2020 ಮತ್ತು ಮಾರ್ಚ್ 2021ರ ನಡುವೆ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ನೇಪಾಳಗಳ 23 ದೊಡ್ಡ ನಗರಗಳಿಂದ ಅರಿಶಿನದ ಮಾದರಿಗಳನ್ನು ಸಂಗ್ರಹಿಸಿ, ಅವುಗಳನ್ನು ಪರೀಕ್ಷಿಸಿದರು.
ಈ ಪರೀಕ್ಷೆಗಳ ಪ್ರಕಾರ, 14% ಅರಿಶಿನದ ಮಾದರಿಗಳಲ್ಲಿ ಸೀಸದ ಪ್ರಮಾಣ ಪ್ರತಿಯೊಂದು ಗ್ರಾಮ್‌ನಲ್ಲಿ 2 ಮೈಕ್ರೋಗ್ರಾಮ್ ಗಿಂತಲೂ ಹೆಚ್ಚಿತ್ತು. ಇನ್ನು ವಿಶ್ವ ಆರೋಗ್ಯ ಸಂಸ್ಥೆ ಎಷ್ಟೇ ಸಣ್ಣ ಪ್ರಮಾಣದ ಸೀಸದ ಸೇವನೆಯೂ ಅಪಾಯಕಾರಿ ಎಂದು ಅಭಿಪ್ರಾಯ ಪಟ್ಟಿದೆ.
ಭಾರತದಲ್ಲಿ ನಡೆದ ಅಧ್ಯಯನದ ಅನುಸಾರ, ಪಾಟ್ನಾದಲ್ಲಿ ಅರಿಶಿನದಲ್ಲಿ ಪ್ರತಿ ಗ್ರಾಮಿಗೆ ಸೀಸದ ಪ್ರಮಾಣ 2,274 ಮೈಕ್ರೋಗ್ರಾಮ್ ಇದ್ದರೆ, ಗುವಾಹಟಿಯಲ್ಲಿ ಪ್ರತಿ ಗ್ರಾಮ್ ಅರಿಶಿನದಲ್ಲಿ 127 ಮೈಕ್ರೋಗ್ರಾಮ್ ಸೀಸವಿತ್ತು. ಇವೆರಡೂ ನಗರಗಳಲ್ಲಿ ಸಂಗ್ರಹಿಸಿದ ಅರಿಶಿನವನ್ನು ಬಿಹಾರದಿಂದ ತರಿಸಲಾಗಿತ್ತು ಎನ್ನಲಾಗಿದೆ.
ಈ ಅಧ್ಯಯನದ ಪ್ರಕಾರ, ಪಾಲಿಶ್ ಮಾಡಲಾದ ಅರಿಶಿನದ ಬೇರುಗಳು ಅತ್ಯಂತ ಹೆಚ್ಚು ಮಾಲಿನ್ಯ ಪ್ರಮಾಣ ಹೊಂದಿದ್ದವು. ಇದಾದ ನಂತರ ಪೊಟ್ಟಣವಲ್ಲದೆ ಮಾರಾಟ ಮಾಡುವ ಅರಿಶಿನದಲ್ಲಿ ಮಾಲಿನ್ಯ ಪ್ರಮಾಣವಿತ್ತು. ಆ ನಂತರ ವಿವಿಧ ಬ್ರ್ಯಾಂಡ್‌ಗಳ ಪ್ಯಾಕೇಜಿಂಗ್ ಹೊಂದಿದ್ದ ಅರಿಶಿನದಲ್ಲಿ ಮಾಲಿನ್ಯ ಪ್ರಮಾಣವಿತ್ತು. ಪಾಲಿಶ್ ಮಾಡಿರದ ಅರಿಶಿನದ ಬೇರುಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಾಲಿನ್ಯ ಹೊಂದಿದ್ದವು.
ಪಾಲಿಶ್ ಮಾಡಿರುವ ಅರಿಶಿನದ ಬೇರುಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಾಲಿನ್ಯ ಇರುವುದಕ್ಕೆ ಆ ಪಾಲಿಶ್ ಮಾಡುವ ಪ್ರಕ್ರಿಯೆಯೇ ಕಾರಣವಾಗಿರುವ ಸಾಧ್ಯತೆಗಳು ಹೆಚ್ಚಿವೆ. ಯಾಕೆಂದರೆ, ಅರಿಶಿನದ ಬೇರುಗಳಿಗೆ ಹೆಚ್ಚು ಹೊಳಪು ಮತ್ತು ಮನಸೆಳೆಯುವ ಬಣ್ಣ ನೀಡುವ ಸಲುವಾಗಿ ಸೀಸದ ಕ್ರೋಮೇಟ್‌ನಂತಹ (ಲೆಡ್ ಕ್ರೋಮೇಟ್) ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಈ ಹೆಚ್ಚುವರಿ ಪಾಲಿಶ್ ಅರಿಶಿನದ ಬೇರುಗಳಿಗೆ ಹೊಳಪು ನೀಡಿ, ಅವುಗಳು ತಾಜಾ ಆಗಿ ಕಾಣುವಂತೆ ಮಾಡುತ್ತದಾದರೂ, ಅದು ಅರಿಶಿನಕ್ಕೆ ಅಪಾಯಕಾರಿ ಮಾಲಿನ್ಯಗಳನ್ನೂ ಸೇರಿಸುತ್ತದೆ. ಇನ್ನು ಪ್ಯಾಕೆಟ್‌ಗಳಲ್ಲಿರದೆ, ಹಾಗೇ ಮಾರಾಟವಾಗುವ ಅರಿಶಿನಕ್ಕೆ ಬ್ರ್ಯಾಂಡೆಡ್ ಅರಿಶಿನದಂತೆ ಕಟ್ಟುನಿಟ್ಟಿನ ನಿಯಮಾವಳಿಗಳು ಇಲ್ಲದಿರುವುದರಿಂದ, ಅವುಗಳನ್ನು ಪೊಟ್ಟಣ ಕಟ್ಟಿ ಕೊಡುವಾಗಲೇ ಮಲಿನವಾಗುವ ಸಾಧ್ಯತೆಗಳಿವೆ. ಬ್ರ್ಯಾಂಡೆಡ್ ಅರಿಶಿನಗಳು ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟ ಪರೀಕ್ಷೆಗಳಿಗೆ ಒಳಗಾಗಿ, ಸಾಮಾನ್ಯವಾಗಿ ಕಡಿಮೆ ಮಾಲಿನ್ಯ ಹೊಂದಿರುತ್ತವೆ. ಪಾಲಿಶ್ ಮಾಡದಿರುವ ಅರಿಶಿನದ ಬೇರುಗಳು ಅತ್ಯಂತ ಕಡಿಮೆ ಮಾಲಿನ್ಯ ಹೊಂದಿರುತ್ತವೆ. ಇದಕ್ಕೆ ಮುಖ್ಯ ಕಾರಣವೆಂದರೆ, ಅವುಗಳು ಪಾಲಿಶಿಂಗ್ ಪ್ರಕ್ರಿಯೆಗೆ ಒಳಗಾಗುವುದಿಲ್ಲ, ಮತ್ತು ಅತ್ಯಂತ ಕನಿಷ್ಠ ಸಂಸ್ಕರಣೆ ಹೊಂದುವುದರಿಂದ ರಾಸಾಯನಿಕಗಳಿಗೆ ತೆರೆಯಲ್ಪಡುವುದಿಲ್ಲ.
ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳಲ್ಲಿ ಅರಿಶಿನದಲ್ಲಿ ಅನುಮತಿಸಿರುವ ಸೀಸದ (ಲೆಡ್) ಪ್ರಮಾಣ ಒಂದೇ ರೀತಿಯಲ್ಲಿದೆ. ರಾಷ್ಟ್ರೀಯ ಆಹಾರ ಸುರಕ್ಷತಾ ಸಂಸ್ಥೆಗಳು ಸೀಸದ ಮಾಲಿನ್ಯದ ಕುರಿತು ಅರಿಶಿನವನ್ನು ಪರಿಶೀಲಿಸುವ ಜವಾಬ್ದಾರಿ ಹೊಂದಿವೆ.
ಅಧ್ಯಯನದ ಪ್ರಕಾರ, ಕೇವಲ ಪಾಲಿಶ್ ಮಾಡಲಾದ ಅರಿಶಿನದ ಬೇರುಗಳು ಮತ್ತು ಹಾಗೆಯೇ ಮಾರಾಟವಾಗುವ ಅರಿಶಿನದ ಪುಡಿಗಳು 1,000 ಮೈಕ್ರೋಗ್ರಾಮ್‌ಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸೀಸವನ್ನು (ಲೆಡ್) ಹೊಂದಿದ್ದವು. ಅಂದರೆ, ಯಾವುದೇ ಪ್ಯಾಕೇಜಿಂಗ್ ಹೊಂದಿರದೆ, ಹಾಗೇ ಮಾರಾಟವಾಗುವ ಮಸಾಲೆ ಪದಾರ್ಥಗಳು ಬ್ರ್ಯಾಂಡೆಡ್ ಮಸಾಲೆ ಪದಾರ್ಥಗಳಿಗೆ ಹೋಲಿಸಿದರೆ ಮಲಿನಗೊಂಡಿರುವ ಸಾಧ್ಯತೆಗಳು ಹೆಚ್ಚಿವೆ.
ಅಧ್ಯಯನದ ವರದಿಯ ಪ್ರಕಾರ, ಲೆಡ್ ಕ್ರೋಮೇಟ್ ಎಂಬ, ಪೇಂಟ್, ರಬ್ಬರ್, ಪ್ಲಾಸ್ಟಿಕ್, ಹಾಗೂ ಸಿರಾಮಿಕ್ ಲೇಪನಗಳಿಗೆ ಬಳಕೆಯಾಗುವ ಹಳದಿ ವರ್ಣದ್ರವ್ಯವೇ ಅರಿಶಿನದ ಮಾದರಿಗಳಲ್ಲಿ ಸೀಸದ ಮುಖ್ಯ ಮೂಲವಾಗಿದೆ. ಸೀಸದ ಕ್ರೋಮೇಟ್ ಅಂಶವನ್ನು ಹೊಂದಿರುವ ಅರಿಶಿನದ ಸೇವನೆಯಿಂದಾಗಿ, ಬಾಂಗ್ಲಾದೇಶ, ಅಮೆರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಸೀಸದ ವಿಷಪ್ರಾಶನ ಉಂಟಾಗಿದೆ.
ಎಫ್ಎಸ್ಎಸ್ಎಐ ನಿಯಮಗಳ ಪ್ರಕಾರ, ಅರಿಶಿನ ಲೆಡ್ ಕ್ರೋಮೇಟ್, ಹೆಚ್ಚುವರಿ ಪಿಷ್ಟ (ಸ್ಟಾರ್ಚ್), ಅಥವಾ ಯಾವುದೇ ಬಣ್ಣದ ಏಜೆಂಟ್‌ಗಳಿಂದ ಮುಕ್ತವಾಗಿರಬೇಕು. ಡೌನ್ ಟು ಅರ್ತ್ ಮಾಧ್ಯಮ ತಂಡ ಈ ಕುರಿತು ಎಫ್ಎಸ್ಎಸ್ಎಐ ಪ್ರತಿಕ್ರಿಯೆಯನ್ನು ಕೋರಿತ್ತು.
ಭಾರತ ಸೇರಿದಂತೆ ಹಲವು ದೇಶಗಳಿಗೆ ಕಡಿಮೆ ಗುಣಮಟ್ಟದ ಉತ್ಪನ್ನ ಮಾರಾಟ; ಗ್ಲೋಬಲ್ ಕಂಪನಿಗಳ ಕಳ್ಳಾಟ ಬಯಲು
ಸಂಶೋಧಕರು ಬಾಂಗ್ಲಾದೇಶದ ಅರಿಶಿನ ಪೂರೈಕೆ ಸರಪಳಿಯನ್ನು ಅಧ್ಯಯನ ನಡೆಸಿದ್ದರು. ಆಗ ಅವರಿಗೆ ಅರಿಶಿನದ ಬೇರುಗಳಿಗೆ ಸೀಸದ ಕ್ರೋಮೇಟ್ (ಲೆಡ್ ಕ್ರೋಮೇಟ್) ಸೇರಿಸುವುದು ಅಲ್ಲಿ ಅತ್ಯಂತ ಸಾಮಾನ್ಯ ಅಭ್ಯಾಸ ಎಂದು ತಿಳಿದುಬಂತು. ಅರಿಶಿನದ ಬೇರುಗಳ ಬಣ್ಣವನ್ನು ಆಕರ್ಷಕಗೊಳಿಸಿ, ಕಡಿಮೆ ಗುಣಮಟ್ಟದ ಬೇರುಗಳನ್ನೂ ಮಾರಾಟ ಮಾಡುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿತ್ತು. 1980ರ ದಶಕದಿಂದಲೂ ಸೀಸದ ಕ್ರೋಮೇಟ್ (ಲೆಡ್ ಕ್ರೋಮೇಟ್) ಸೇರಿಸುವ ಅಭ್ಯಾಸ ಬಾಂಗ್ಲಾದೇಶದಲ್ಲಿದೆ ಎನ್ನಲಾಗಿದೆ.
ಈ ಸಮಸ್ಯೆ ಯಾವ ಪ್ರಮಾಣದಲ್ಲಿದೆ ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಮಸ್ಯೆ ಇರುವ ಪ್ರದೇಶಗಳಲ್ಲಿನ ಅರಿಶಿನದ ಪೂರೈಕೆ ಸರಪಳಿಯನ್ನು ಸಮರ್ಥವಾಗಿ ತನಿಖೆ ನಡೆಸುವುದು ಅನಿವಾರ್ಯವಾಗಿದೆ ಎಂದು ಈ ಅಧ್ಯಯನ ಸೂಚಿಸಿದೆ. ಅರಿಶಿನಕ್ಕೆ ಸೀಸದ ಕ್ರೋಮೇಟನ್ನು ಎಲ್ಲಿ ಸೇರಿಸಲಾಗುತ್ತದೆ ಮತ್ತು ಈ ಅಭ್ಯಾಸದ ಹಿಂದಿರುವ ಕಾರಣಗಳೇನು ಎನ್ನುವುದನ್ನು ತಿಳಿಯಬೇಕಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.