ಮುಂಜಾನೆ ಇಂತ ತಪ್ಪುಗಳನ್ನು ಮಾಡುತ್ತಿದ್ದರೆ, ಬಿಟ್ಟು ಬಿಡಿ, ಒಳ್ಳೇದಲ್ಲ ಆರೋಗ್ಯಕ್ಕೆ!

By Suvarna NewsFirst Published Nov 9, 2020, 4:35 PM IST
Highlights

ನಿಮ್ಮ ಇಡೀ ದಿನಕ್ಕೆ ಮುನ್ನುಡಿ ಬರೆಯುವುದು ಮುಂಜಾನೆ. ಮುಂಜಾನೆ ಉಲ್ಲಾಸಮಯವಾಗಿದ್ದರೆ ಇಡೀ ದಿನ ಪ್ರಫುಲ್ಲ. ಅಂಥ ವೇಳೆಯಲ್ಲಿ ಈ ತಪ್ಪುಗಳನ್ನು ಮಾಡ್ಲೇಬೇಡಿ.


ನಿಮ್ಮ ಮುಂಜಾನೆ ಹೇಗಿರುತ್ತೋ ಇಡೀ ದಿನವೂ ಹಾಗೇ ಇರುತ್ತೆ. ಮುಂಜಾನೆಯೇ ಹಾಳಾದರೆ ದಿನವೂ ಹಾಳಾಗುತ್ತದೆ. ನಾವೆಲ್ಲರೂ ಬೆಳಗ್ಗೆ ಎದ್ದು ಒಂದಲ್ಲ ಒಂದು ಇಂಥ ತಪ್ಪುಗಳನ್ನು ಮಾಡುತ್ತೇವೆ. ಈ ತಪ್ಪುಗಳನ್ನು ಮಾಡ್ಲೇಬೇಡಿ.
- ಧಡಕ್ಕನೆ ಏಳುವುದು- ಮುಂಜಾನೆ ಅಲಾರಂ ಇಟ್ಟಿರುತ್ತೀರಿ. ಅದು ಹೊಡೆದುಕೊಂಡ ಕೂಡಲೆ ಧಡಕ್ಕನೆ ಏಳುತ್ತೀರಿ. ಹೀಗೆ ಏಳುವುದು ಅಪಾಯ. ನಿಮ್ಮ ಮೆದುಳು, ರಕ್ತನಾಳ ಹಾಗೂ ನರಜಾಲಗಳು ಇನ್ನೂ ಎಚ್ಚರದ ಕಾರ್ಯಚಟುವಟಿಕೆಗೆ ಇನ್ನೂ ಒಗ್ಗಿಕೊಂಡಿರುವುದಿಲ್ಲ. ಹಾಸಿಗೆಯಲ್ಲಿಎದ್ದು ಒಂದು ನಿಮಿಷ ಕೂತಿರಿ. ಎರಡೂ ಕೈಗಳನ್ನು ಉಜ್ಜಿಕೊಂಡು ಕಣ್ಣಿಗೂ ಮುಖಕ್ಕೂ ತಿಕ್ಕಿಕೊಡು ನಿಧಾನವಾಗಿ ಕಣ್ಣು ತೆರೆಯಿರಿ. ನಿಮ್ಮ ಕುಲದೇವತೆಯನ್ನು ಈ ಸಂದರ್ಭದಲ್ಲಿ ಧ್ಯಾನಿಸಿಕೊಳ್ಳಬಹುದು. ಜೊತೆಗೆ ಯಾವುದಾದರೂ ಒಂದು ಒಳ್ಳೆಯ ನೆನಪನ್ನು, ಒಳ್ಳೆಯ ಸುಭಾಷಿತವನ್ನು ಮನಸ್ಸಿಗೆ ತಂದುಕೊಳ್ಳಿ. ಇದರಿಂದ ಇಡೀ ದಿನ ಪ್ರಫುಲ್ಲಿತವಾಗಿ ಇರುತ್ತದೆ. 

- ಅಲಾರಂ ಮೊಟಕುವುದು- ಆರು ಗಂಟೆಗೆ ಅಲಾರಂ ಇಟ್ಟಿದ್ದರೆ ಅದನ್ನು ಸ್ನೂಝ್ ಮಾಡುತ್ತಾ ಮಾಡುತ್ತಾ ಏಳು ಗಂಟೆಗೆ ಏಳುತ್ತೀರಿ. ಆಮೇಲೆ, ಇಷ್ಟೊಂದು ತಡವಾಗಿ ಎದ್ದೆನಲ್ಲಾ ಎಂದು ಇಡೀ ದಿನ ಬೇಜಾರಾಗಿ ಹೋಗುತ್ತದೆ. ಇದೂ ತಪ್ಪು.
- ಕಾಫಿ ಕುಡಿಯುವುದು- ಕೆಲವರಿಗೆ ಮುಂಜಾನೆ ಹಾಸಿಗೆಗೇ ಕಾಫಿ ಅಥವಾ ಚಹಾ ತರಿಸಿಕೊಂಡು ಗುಟುಕರಿಸುವ ಚಟವಿರುತ್ತದೆ. ಇದು ಕೆಟ್ಟ ರೂಢಿ. ಆಗ ದೇಹಕ್ಕೆ ಬೇಕಾಗಿರುವುದು ಕನಿಷ್ಠ ಅರ್ಧ ಲೀಟರ್‌ನಷ್ಟು ಉಗುರು ಬೆಚ್ಚಗಿನ ಅಥವಾ ಹದ ಬಿಸಿಯಾದ ನೀರು. ಇದರಿಂದ ಬೆಳಗಿನ ವಿಸರ್ಜನೆಗಳೆಲ್ಲಾ ಸಲೀಸಾಗಿ ಆಗುತ್ತವೆ. ಕಾಫಿ, ನಿಮ್ಮ ದೇಹಕ್ಕೆ ಕೆಫೀನನ್ನು ಸೇರಿಸಿ ಚುರುಕಾಗಿಸುತ್ತದೆ ನಿಜ. ಆದರೆ ಅದು ಕೃತಕವಾಗಿ ಉಂಟಾಗುವು ಹುರುಪು. ದೇಹ ಸಹಜವಾಗಿ ಹುರುಪು ಉಂಟುಮಾಡಿಕೊಳ್ಳಬೇಕು.

- ಮುನಿಸಿಕೊಳ್ಳುತ್ತಾ ಏಳುವುದು- ಬೆಳ್‌ಬೆಳಗ್ಗೇ ಎದ್ದು ಸಿಡಿಮಿಡಿ ಮಾಡುತ್ತಾ ಓಡಾಡಿದರೆ ನಿಮ್ಮ ಮನಸ್ಸೂ ಹಾಳು, ಜೊತೆಗೆ ಇರುವವರಿಗೂ ಕಿರಿಕಿರಿ. ಉಲ್ಲಾಸಮಯವಾಗಿ ಏಳಿ. ಕೆಲಸಕಾರ್ಯಗಳನ್ನು ನೆರವೇರಿಸಿಕೊಳ್ಳಿ.
- ಕತ್ತಲು ಬೇಡ- ಕಿಟಕಿಯ ಪರದೆಗಳನ್ನೆಲ್ಲಾ ಎಳೆದು ಹಾಕಿಕೊಂಡು ರೂಮನ್ನು ಕತ್ತಲು ಮಾಡಿಕೊಳ್ಳಬೇಡಿ. ಅದರಿಂದ ಇನ್ನೂ ಬೆಳಗಾಗಿಲ್ಲ ಎಂಬ ಭಾವನೆ ನಿಮಗೆ ಮೂಡುವ ಸಾಧ್ಯತೆಯಿದೆ. ಅಥವಾ ಹೊರಗೆ ಇನ್ನೂ ಕತ್ತಲಿದೆ, ಮೋಡ ತುಂಬಿದೆ, ತುಸು ತಡವಾಗಿ ಎದ್ದರೆ ಏನೂ ತೊಂದರೆಯಿಲ್ಲ ಅನಿಸಲು ಶುರುವಾಗುತ್ತದೆ. ಕಿಟಕಿ ತೆರೆದಿರಲಿ. ಬೆಳಕು ನಿಮ್ಮನ್ನು ಎಚ್ಚರಿಸಲಿ.


- ಧೂಮಪಾನ- ಬೆಳ್ಳಂಬೆಳಗ್ಗೆ ಎದ್ದು ಸಿಗರೇಟ್ ಸೇದುವವರು ಇದ್ದಾರೆ. ಇದಂತೂ ಅತ್ಯಂತ ಹಾನಿಕರ. ದಿನದ ಯಾವ ವೇಳೆಯಲ್ಲೇ ಆಗಲಿ ಧೂಮಪಾನವು ಹಾನಿಕರವೇ. ಆದರೆ ನಿದ್ರೆಯ ಬಳಿಕ ಎದ್ದಾಗ ನಿಮ್ಮ ರಕ್ತನಾಳಗಳು ಹಾಗೂ ಮೆದುಳಿಗೆ ಶುದ್ಧ ಆಕ್ಸಿಜೆನ್ ಬೇಕಿರುತ್ತದೆ. ಆಗ ನೀವು ಮಾಡುವ ಕ್ಯಾನ್ಸರ್‌ಕಾರಕ ಹೊಗೆ ನಿಮ್ಮ ಶ್ವಾಸಕೋಶವನ್ನು ಪ್ರವೇಶಿಸುತ್ತದೆ. ಕ್ಯಾನ್ಸರ್ ಸಂಭವ ಜಾಸ್ತಿ.

ಬರೀ ವ್ಯಾಯಾಮ ಮಾಡಿದರೆ ಸ್ಲಿಮ್ ಆಗೋಲ್ಲ, ಆಹಾರದೆಡೆಗೆ ಇರಲಿ ಗಮನ! ...

- ಹಾಸಿಗೆ ಹಾಗೇ ಬಿಡುವುದು- ಮುಂಜಾನೆ ಎದ್ದ ಕೂಡಲೆ ನಿಮ್ಮ ಹಾಸಿಗೆಯನ್ನು ಶುಭ್ರವಾಗಿ, ನೀಟಾಗಿ ಮಡಚಿಡಿ. ಅದು ಅತ್ಯಂತ ಅವಶ್ಯ. ಯಾಕೆಂದರೆ ಅದನ್ನು ನೋಡಿದ ಕೂಡಲೆ ಓಹೋ ನಾನು ಎಚ್ಚೆತ್ತಿದ್ದೇನೆ ಎಂಬ ಭಾವ ನಿಮ್ಮಲ್ಲಿ ಮೂಡುವಂತಿರಬೇಕು. ಹಾಸಿಗೆ ತೆರೆದೇ ಇದ್ದರೆ ಇನ್ನೂ ಮಲಗಿಯೇ ಇದ್ದೇನೆ ಎಂಬ ಭಾವನೆ ಮೂಡುತ್ತದೆ.
- ಬ್ರೇಕ್‌ಫಾಸ್ಟ್‌ ತಪ್ಪಿಸುವುದು- ಪ್ರತಿದಿನ ಮುಂಜಾನೆಯ ಬ್ರೇಕ್‌ಫಾಸ್ಟ್ ತಪ್ಪಿಸುವುದು ಒಳ್ಳೆಯದಲ್ಲ. ಕೆಲವೊಮ್ಮೆ ಒಂದು ಹಣ್ಣೋ, ಸೆರಿಯಲ್ಲೋ, ಜ್ಯೂಸೋ ಕುಡಿದು ಡಯಟ್‌ ಮಾಡುವುದು ಒಳ್ಳೆಯದೇ. ಆದರೆ ಪ್ರತಿದಿನವೂ ಬ್ರೇಕ್‌ಫಾಸ್ಟ್‌ ತಪ್ಪಿಸುವುದರಿಂದ ಬೊಜ್ಜು ಉಂಟಾಗಬಹುದು, ಮಾರ್ನಿಂಗ್ ಸಿಕ್‌ನೆಸ್‌ ಶುರು ಆಗಬಹುದು. 

ಆರೋಗ್ಯಕ್ಕೆ ಒಳ್ಳೇದಂತ ಬೇಕಾಬಿಟ್ಟಿ ಬೇಡ.. ಡ್ರೈ ಫ್ರುಟ್ಸ್ ಸೇವನೆಗೂ ಇರಲಿ ಮಿತಿ ...

- ಫೋನ್‌ ಚೆಕ್‌ ಮಾಡುವುದು- ಎದ್ದ ಕೂಡಲೆ ಫೋನ್‌ ನೋಡುವುದು- ಇದಂತೂ ಎಲ್ರಿಗೂ ಇಂದು ಅಭ್ಯಾಸ, ದುರಭ್ಯಾಸವೂ ಆಗಿಹೋಗಿದೆ. ಎದ್ದ ಕೂಡಲೇ ನಿದ್ದೆಗಣ್ಣಿನಲ್ಲಿ ಮೊಬೈಲ್ ಚೆಕ್‌ ಮಾಡುವುದು ಒಳ್ಳೆಯದಂತೂ ಅಲ್ಲ. ಯಾವುದೋ ಅನಿರೀಕ್ಷಿತ ಮೇಲ್‌, ಸಂದೇಶ ಅಥವಾ ನೋಟ ನಿಮ್ಮ ಮನಸ್ಸನ್ನು ಮುಂಜಾನೆಯೇ ಕೆಡಿಸಿಬಿಡಬಹುದು.
- ವ್ಯಾಯಾಮ ಮಾಡದಿರುವುದು- ನಿತ್ಯದ ವ್ಯಾಯಾಮ ತಪ್ಪಿಸಲೇಬೇಡಿ. ಚಳಿಗಾಲದ ದಿನಗಳಲ್ಲಿ ಇನ್ನೊಂದಷ್ಟು ಸಮಯ ಹಾಸಿಗೆಯಲ್ಲೇ ಮುರುಟುವುದು ಸುಖಕರವೇ. ಆದರೆ ವಾಕಿಂಗ್‌ ತಪ್ಪಿಸುವುದು ಆರೋಗ್ಯಕರವಲ್ಲ. 

ನಿಮ್ಮ ಅಡುಗೆಮನೆಯಲ್ಲಿಯೇ ಇದೆ PCOS‌ಗೆ ಪರಿಹಾರ..! ...

 

click me!