ವಯಸ್ಸಾದಂತೆ ಮಿದುಳಿನ ಕ್ಷಮತೆ ಕುಗ್ಗುವುದು ಸಹಜ. ಆದರೆ, ಡೆಮೆನ್ಷಿಯಾ ಎಂದು ಕರೆಯುವ ಮರೆವು ಹಾಗೂ ಅರಿವಿನ ಕೊರತೆ ಬಾಧಿಸಲು ಆರಂಭವಾದರೆ ಬದುಕು ಕಷ್ಟವಾಗುತ್ತದೆ. ಇಂದು, ದೇಶದಲ್ಲಿ ಡೆಮೆನ್ಷಿಯಾದಿಂದ ಬಳಲುವ ವೃದ್ಧರ ಸಂಖ್ಯೆ ಅಧಿಕವಾಗಿದೆ. ಹೊಸ ಅಧ್ಯಯನದ ಪ್ರಕಾರ, 80 ಲಕ್ಷಕ್ಕೂ ಅಧಿಕ ಹಿರಿಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಡೆಮೆನ್ಷಿಯಾ ವೃದ್ಧಾಪ್ಯವನ್ನು ಹೈರಾಣ ಮಾಡಿಬಿಡಬಹುದು. ವೃದ್ಧರನ್ನು ಇನ್ನಿಲ್ಲದಂತೆ ಕಾಡಿಬಿಡಬಹುದು. ಬೇರೆಲ್ಲ ವಿಚಾರದಲ್ಲಿ ಆರೋಗ್ಯದಿಂದಿದ್ದರೂ ಡೆಮೆನ್ಷಿಯಾ ಒಂದಿದ್ದರೆ ಸಾಕು, ವಯಸ್ಸಾದವರ ಬದುಕು ಅಸಹನೀಯವಾಗಬಲ್ಲದು. ಸರಿಯಾಗಿ ಕಾಳಜಿಯಿಂದ ನೋಡಿಕೊಳ್ಳುವವರು ಇಲ್ಲವಾದರೆ ಘನತೆಯಿಂದ ಜೀವಿಸಲೂ ಸಾಧ್ಯವಾಗದೆ ಹೋಗಬಹುದು. ಅಷ್ಟಕ್ಕೂ ಇದು ನಿರ್ದಿಷ್ಟ ರೋಗವಲ್ಲ. ಆದರೆ, ಮಿದುಳನ್ನು ಇನ್ನಿಲ್ಲದಂತೆ ಘಾಸಿಗೊಳಿಸಿಬಿಡುತ್ತದೆ. ಪರಿಣಾಮವಾಗಿ, ಮರೆವು ಆರಂಭವಾಗುತ್ತದೆ. ಯೋಚನಾ ಶಕ್ತಿ ಕುಂಠಿತವಾಗುತ್ತದೆ. ಕೊನೆಕೊನೆಗೆ ದೈನಂದಿನ ಚಟುವಟಿಕೆಗಳನ್ನು ನಡೆಸಲೂ ವಿಫಲರಾಗುವಂತೆ ಮಾಡಿಬಿಡುತ್ತದೆ. ಅಲ್ಝೈಮರ್ಸ್ ಕೂಡ ಡೆಮೆನ್ಷಿಯಾಕ್ಕೆ ಸಮನಾದ ಸಮಸ್ಯೆಯೇ. ಆದರೆ, ಡೆಮೆನ್ಷಿಯಾ ಕೇವಲ ವಯಸ್ಸಾದ ಬಳಿಕ ಕಾಡುವಂಥದ್ದು. ಇದೀಗ ಆಘಾತಕಾರಿ ಸುದ್ದಿ ಎಂದರೆ, ಭಾರತದ ಶೇ.7.4ರಷ್ಟು ಹಿರಿಯರು ಡೆಮೆನ್ಷಿಯಾದಿಂದ ಬಳಲುತ್ತಿದ್ದಾರೆ ಎನ್ನುವುದು. ಹೌದು, ದೇಶವ್ಯಾಪಿ ನಡೆಸಲಾಗಿದ್ದ ಅಧ್ಯಯನದ ಪ್ರಕಾರ, ದೇಶದ 80.8 ಲಕ್ಷ 60 ವರ್ಷ ಮೇಲ್ಪಟ್ಟ ಹಿರಿಯರು ಸ್ಮರಣೆ ಮತ್ತು ವಿವೇಚನೆ ಶಕ್ತಿ ಕಳೆದುಕೊಳ್ಳುವ ಈ ಸಮಸ್ಯೆಗೆ ತುತ್ತಾಗಿದ್ದಾರೆ. ಇದು ಈ ಹಿಂದಿನ ಅಂದಾಜಿಗಿಂತ ಹೆಚ್ಚು. 2010ರಲ್ಲಿ 3.7 ಮಿಲಿಯನ್ ಜನ ಡೆಮೆನ್ಷಿಯಾಕ್ಕೆ ತುತ್ತಾಗಿದ್ದರು. 2030ರ ಹೊತ್ತಿಗೆ ಈ ಪ್ರಮಾಣ ದುಪ್ಪಟ್ಟಾಗುವ ನಿರೀಕ್ಷೆ ಮಾಡಲಾಗಿತ್ತು, ಆದರೆ, ಅದಕ್ಕೂ ಏಳು ವರ್ಷಗಳ ಮುನ್ನವೇ ದುಪ್ಪಟ್ಟಿಗಿಂತ ಅಧಿಕವಾಗಿದೆ. ಅಂದರೆ, ಅತಿ ವೇಗವಾಗಿ ಜನರಲ್ಲಿ ಬುದ್ಧಿಮಾಂದ್ಯತೆ ಹೆಚ್ಚುತ್ತಿದೆ.
ಕಾಶ್ಮೀರದಲ್ಲಿ (Kashmir) ಅತಿ ಹೆಚ್ಚು!
ದೆಹಲಿ ಏಮ್ಸ್ ಸಂಸ್ಥೆ (AIIMS-Delhi) ಹಾಗೂ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸೇರಿದಂತೆ ದೇಶದ 18 ಸಂಸ್ಥೆಗಳು (Institutions) ಸೇರಿ ಇಂಥದ್ದೊಂದು ಅಧ್ಯಯನ (Study) ನಡೆಸಿದ್ದವು. ಇದರ ಪ್ರಕಾರ, ಲಿಂಗ (Gender) ಮತ್ತು ಭೌಗೋಳಿಕ ಪ್ರದೇಶಗಳಿಗೆ ಅನುಗುಣವಾಗಿ ಡೆಮೆನ್ಷಿಯಾ (Dementia) ಸಮಸ್ಯೆ ವಿಭಿನ್ನತೆ ಹೊಂದಿದೆ. ಮಿದುಳು (Brain) ಹಾನಿಗೆ ಒಳಗಾಗುವ ಈ ಸಮಸ್ಯೆ ಜಮ್ಮು-ಕಾಶ್ಮೀರದಲ್ಲಿ ಅತ್ಯಧಿಕ ಪ್ರಮಾಣದಲ್ಲಿದೆ ಎಂದರೆ ಅಚ್ಚರಿಯಾಗಬಹುದು. ಜಮ್ಮು-ಕಾಶ್ಮೀರದ ಶೇ.11ರಷ್ಟು ಹಿರಿಯರು ಮರೆವು ಹಾಗೂ ಅರಿವಿನ ಕುಸಿತದ ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ. ಕಾಶ್ಮೀರದ ವಿಚಾರದಲ್ಲಿ ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದೀರ್ಘಕಾಲದಿಂದ ಕಾಶ್ಮೀರದಲ್ಲಿರುವ ರಾಜಕೀಯ ಅಸ್ಥಿರತೆ ಹಾಗೂ ಭಯೋತ್ಪಾದನೆಯ ಕರಿನೆರಳಿನಿಂದಾಗಿ ಜನರಲ್ಲಿ ಮಡುಗಟ್ಟಿರುವ ಭಾವನೆಗಳಿಗೆ ಮತ್ತು ಡೆಮೆನ್ಷಿಯಾದೊಂದಿಗೆ ಸಂಬಂಧ ಇರಬಹುದು ಎಂದು ಹೇಳಲಾಗಿದೆ.
ಅಚ್ಚರಿ ಎಂದರೆ, ರಾಜಧಾನಿ ದೆಹಲಿಯಲ್ಲಿ ಶೇ.4.5ರಷ್ಟು ಹಿರಿಯರು ಡೆಮೆನ್ಷಿಯಾಕ್ಕೆ ತುತ್ತಾಗಿದ್ದು, ಇಡೀ ದೇಶದಲ್ಲೇ ಇದು ಅತಿ ಕಡಿಮೆ ಪ್ರಮಾಣವಾಗಿದೆ. ಪಕ್ಕದ ಹರಿಯಾಣದಲ್ಲಿ ಈ ಪ್ರಮಾಣ ಶೇ.5.8 ಇದೆ. ಪಶ್ಚಿಮ ಬಂಗಾಳದಲ್ಲಿ ಶೇ.9.2ರಷ್ಟು, ಒಡಿಶಾದಲ್ಲಿ ಶೇ.9.9ರಷ್ಟು ಹಿರಿಯರಿಗೆ (Elder People) ಡೆಮೆನ್ಷಿಯಾ ಇದೆ. ಇಡೀ ದೇಶಕ್ಕಿಂತ ಮಹಾರಾಷ್ಟ್ರದಲ್ಲಿ ಗಣನೀಯವಾಗಿ ಹೆಚ್ಚಿದೆ.
Health Tips : ಸದ್ದಿಲ್ಲದೆ ಬರುವ ಈ ಖಾಯಿಲೆ ತುಂಬಾ ಅಪಾಯಕಾರಿ
ಮಹಿಳೆಯರಿಗೇಕೆ ಡೆಮೆನ್ಷಿಯಾ?
ಪುರುಷರಿಗಿಂತ (Male) ಹೆಚ್ಚಿನ ಪ್ರಮಾಣದ ಮರೆವು ಕಾಡುವುದು ಮಹಿಳೆಯರಿಗೆ (Female) ಎಂದರೆ ವಿಚಿತ್ರ ಎನ್ನಿಸಬಹುದು. ಶೇ.9ಕ್ಕಿಂತ ಹಿರಿಯ ಮಹಿಳೆಯರು ಡೆಮೆನ್ಷಿಯಾಕ್ಕೆ ಒಳಗಾಗಿದರೆ ಗಂಡಸರ ಪ್ರಮಾಣ ಶೇ. 5.8 ರಷ್ಟಿದೆ. ಹಾಗೆಯೇ, ನಗರಕ್ಕಿಂತ (Urban) ಗ್ರಾಮೀಣ (Rural) ಭಾಗದಲ್ಲಿ ಈ ಸಮಸ್ಯೆ ಅಧಿಕವಾಗಿದೆ. ಗ್ರಾಮೀಣ ಭಾರತದಲ್ಲಿ ಸೂಕ್ತ ವೈದ್ಯಕೀಯ ನೆರವಿನ ಅಗತ್ಯವನ್ನು ಇದು ಬಿಂಬಿಸುತ್ತದೆ. ಇನ್ನೂ ಅಚ್ಚರಿಯೆಂದರೆ, ಅಶಿಕ್ಷಿತರಲ್ಲಿ ಡೆಮೆನ್ಷಿಯಾ ಸಮಸ್ಯೆ ಹೆಚ್ಚು ಎಂದು ಗುರುತಿಸಲಾಗಿದೆ.
Healthy Food : ಹಳಸಿದ ರೊಟ್ಟಿ ಎಸೆಯುವ ಮುನ್ನ ಇದನ್ನೊಮ್ಮೆ ಓದಿ
ನಿಭಾಯಿಸಲು ಏನೆಲ್ಲ ನೆರವು ಅಗತ್ಯ?
ಡೆಮೆನ್ಷಿಯಾ ತೊಂದರೆ ನಿಭಾಯಿಸಲು ಸೂಕ್ತ ಆಹಾರ (Diet), ನಿಯಮಿತ ವ್ಯಾಯಾಮ (Exercise) ಅತ್ಯಗತ್ಯ. ಜತೆಗೆ, ಒತ್ತಡರಹಿತರಾಗಿರುವುದು (Stress free) ಮುಖ್ಯ. ಚೆನ್ನಾಗಿ ನಿದ್ರೆ (Sleep) ಮಾಡಬೇಕು. ವಿಟಮಿನ್ ಮತ್ತು ಪೌಷ್ಟಿಕಾಂಶಗಳ (Nutrients) ಕೊರತೆ ಆಗದಂತೆ ನೋಡಿಕೊಳ್ಳಬೇಕು. ಸಾಮಾಜಿಕ ಒಡನಾಟ (Social Interaction) ಮತ್ತು ಕ್ರಿಯಾಶೀಲ ಮನಸ್ಸು ಮುಖ್ಯ. ಪ್ರಾಣಾಯಾಮ (Breathing Exercise) ಮಿದುಳಿನ ಕಾರ್ಯಕ್ಷಮತೆ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ.