ಭಾರತದಲ್ಲಿ ಹೆಚ್ಚಾಗುತ್ತಿದೆ ಕೊರೋನಾ ಕಾಟ, ಒಂದೇ ದಿನ 7,584 ಹೊಸ ಕೇಸ್ ಪತ್ತೆ, 24 ಮಂದಿ ಸಾವು

By Suvarna NewsFirst Published Jun 10, 2022, 12:46 PM IST
Highlights

ಕಳೆದ ಜನವರಿ (January) ಬಳಿಕ ತೀವ್ರಗತಿಯಲ್ಲಿ ಇಳಿಕೆಯಾಗಿದ್ದ ಭಾರತದ ಕೊರೊನಾ ವೈರಸ್ (Corona virus), ನಾಲ್ಕನೇ ಅಲೆ ಸೃಷ್ಟಿಸುವ ಭೀತಿ ಮೂಡಿಸಿದೆ. ದಿನದಿಂದ ದಿನಕ್ಕೆ ಕೋವಿಡ್ 19 ಪ್ರಕರಣಗಳು ಹೆಚ್ಚಾಗುತ್ತಿವೆ. ದೇಶದ ದೈನಂದಿನ ಕೋವಿಡ್ ಪ್ರಕರಣ, ಸುಮಾರು ಶೇ 40ರಷ್ಟು ಹೆಚ್ಚಳ ಕಂಡಿದೆ.

ಭಾರತದಲ್ಲಿ 4ನೇ ಅಲೆ ಭೀತಿಯ ನಡುವೆ ಕೋವಿಡ್  (Covid) ಆರ್ಭಟ ಮತ್ತಷ್ಟು ಹೆಚ್ಚಾಗಿದ್ದು, 24 ಗಂಟೆಗಳ ಅವಧಿಯಲ್ಲಿ 7,584 ಹೊಸ ಕೋವಿಡ್ ಪ್ರಕರಗಳು ದಾಖಲಾಗಿದ್ದು, ಇದು 100 ದಿನದ ಗರಿಷ್ಟವಾಗಿದೆ. 100 ದಿನಗಳ ನಂತರ ದೇಶದಲ್ಲಿ 7,000ಕ್ಕೂ ಹೆಚ್ಚು ದೈನಂದಿನ ಕೊರೋನಾ ಪ್ರಕರಣಗಳು ದಾಖಲಾಗಿದ್ದು, ಒಂದೇ ದಿನದಲ್ಲಿ ಶೇ.39ರಷ್ಟು ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. ಈ ಹಿಂದೆ ಮಾರ್ಚ್ 1ರಂದು 7,554 ಕೇಸುಗಳು ದಾಖಲಾಗಿದ್ದವು.

ಇದರೊಂದಿಗೆ ದೇಶದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 4,32,05,106ಕ್ಕೆ ಏರಿಕೆಯಾಗಿದೆ. ಅಲ್ಲದೇ, ಕೋವಿಡ್ ನಿಂದ ಸಾವನ್ನಪ್ಪಿರುವವರ ಸಂಖ್ಯೆ 5,24,747ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 36,267ಕ್ಕೆ ಇಳಿಕೆಯಾಗಿದೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ 3,791 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 4,26,44,092ಕ್ಕೆ ತಲುಪಿದೆ.

ಗರ್ಭಕಂಠ ಕ್ಯಾನ್ಸರ್‌ಗೆ ಸಿದ್ಧವಾಗಿದೆ ಮೊದಲ ದೇಸೀ ಲಸಿಕೆ

ಇನ್ನು ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,40,615 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಇದರೊಂದಿಗೆ ಈ ವರೆಗೂ 85,38,63,238 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಡ್ (Covishield) ಮತ್ತು ಕೋವ್ಯಾಕ್ಸಿನ್ (Cowaxin) ಕೊರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್'ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗಿತ್ತು. ಬಳಿಕ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೆ ಲಸಿಕೆ ನೀಡಲಾಗಿತ್ತು. ಮೇ.1ರಿಂದ 18-45 ವರ್ಷ ವಯಸ್ಸಿನ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ.

ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ 1,947,642,992 ಜನರಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದೆ.

ಗಾಳಿಯಲ್ಲೂ ಹರಡುತ್ತಂತೆ ಮಂಕಿಪಾಕ್ಸ್ ವೈರಸ್‌, ಮಾಸ್ಕ್ ಹಾಕಿಕೊಳ್ಳುವಂತೆ ತಜ್ಞರ ಸಲಹೆ

ರಾಜಧಾನಿ ಬೆಂಗಳೂರಿನಲ್ಲಿ ಮೂರು ತಿಂಗಳ ಬಳಿಕ ಸತತ ಎರಡನೇ ದಿನ 300ಕ್ಕೂ ಅಧಿಕ ಸೋಂಕು ಪ್ರಕರಣ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.2.01ಕ್ಕೆ ಹೆಚ್ಚಾಗಿದೆ. ಕಳೆದ ಮಂಗಳವಾರ 339 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಬುಧವಾರ 358 ಪ್ರಕರಣ ಪತ್ತೆಯಾಗಿತ್ತು, 222 ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್‌ ಸಾವು ದಾಖಲಾಗಿಲ್ಲ.

ನಗರದಲ್ಲಿ ಸದ್ಯ ಒಟ್ಟು 2,526 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ಇಬ್ಬರು ತೀವ್ರ ನಿಗಾ ಘಟಕ ಹಾಗೂ 20 ಮಂದಿ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆ ಆರೈಕೆಯಲ್ಲಿದ್ದಾರೆ.11,728 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 1,062 ಮಂದಿ ಮೊದಲ ಡೋಸ್‌, 5,758 ಮಂದಿ ಎರಡನೇ ಡೋಸ್‌ ಮತ್ತು 4,938 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ.​​ ಒಟ್ಟು 15,623 ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 12,483 ಆರ್‌ಟಿಪಿಸಿಆರ್‌ ಹಾಗೂ 3,140 ರಾರ‍ಯಪಿಡ್‌ ಆ್ಯಂಟಿಜನ್‌ ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

click me!