Health Tips: ರಾತ್ರಿ ಉಗುರು ಕತ್ತರಿಸಬಾರದು ಅಂತಾರಲ್ಲ, ಏಕಿರಬಹುದು?

By Suvarna News  |  First Published Mar 4, 2022, 12:35 PM IST

ರಾತ್ರಿ ಉಗುರು ಕತ್ತರಿಸ್ಬೇಡ ಅಂತಾ ನಿಮ್ಮ ತಂದೆ-ತಾಯಿಯೂ ಹೇಳಿರಬಹುದು. ಇಲ್ಲ ನಿಮ್ಮ ಮಕ್ಕಳಿಗೆ ನೀವು ಇದನ್ನು ಹೇಳಿರ್ತೀರಿ. ಅವರು ವಾಪಸ್ ಯಾಕೆ ಎಂದು ಪ್ರಶ್ನೆ ಮಾಡ್ತಾರೆ. ಆಗ ಏನು ಉತ್ತರ ನೀಡಬೇಕು ಗೊತ್ತಾಗುವುದಿಲ್ಲ. ಇನ್ಮುಂದೆ ಕಾರಣ ಸಮೇತ ಮಕ್ಕಳಿಗೆ ಉತ್ತರ ನೀಡಿ. 
 


ಫ್ಯಾಷನ್ (Fashion) ಗಾಗಿ ಜನರು (People) ಉದ್ದುದ್ದ ಉಗುರು (Nail) ಬಿಡ್ತಾರೆ. ಆದ್ರೆ ಉಗುರುಗಳನ್ನು ಕತ್ತರಿಸುವುದು ಆರೋಗ್ಯಕರ ಅಭ್ಯಾಸ. ಇದು ಉಗುರುಗಳು ಮತ್ತು ಬೆರಳುಗಳ ನಡುವಿನ ಜಾಗದಲ್ಲಿ ಕೊಳಕು ಮತ್ತು ಸೂಕ್ಷ್ಮಜೀವಿಗಳ ಶೇಖರಣೆಯನ್ನು ತಡೆಯಲು ಸಹಾಯ ಮಾಡುತ್ತದೆ. ಅನಾರೋಗ್ಯದಿಂದ ನಮ್ಮನ್ನು ದೂರವಿಡುತ್ತದೆ. ಉಗುರಿನಲ್ಲಿ ಸಿಕ್ಕಿಬಿದ್ದಿರು ಕೊಳಕು ಆಹಾರದ ಮೂಲಕ ದೇಹ ಸೇರಿದ್ರೆ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಪ್ರತಿಯೊಬ್ಬರೂ ನಿಯಮಿತವಾಗಿ ಉಗುರನ್ನು ಕತ್ತರಿಸಬೇಕು. ಹಾಗೆ ಉಗುರಿನ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಬೇಕು. ಭಾರತದಲ್ಲಿ ಉಗುರು ಕತ್ತರಿಸುವ ಬಗ್ಗೆ ಕೆಲ ರೂಢಿಯಿದೆ.  ಭಾರತದಲ್ಲಿ ಸ್ನಾನದ ನಂತ್ರ ಉಗುರು ಕತ್ತರಿಸಬಾರದು ಎನ್ನುತ್ತಾರೆ. ಅದ್ರಲ್ಲೂ ರಾತ್ರಿ ಉಗುರನ್ನು ಕತ್ತರಿಸಬಾರದು ಎಂದು ಹಿರಿಯರು ಹೇಳ್ತಾರೆ. ನಾವು ಯಾಕೆ ರಾತ್ರಿ ಉಗುರು ಕತ್ತರಿಸಬಾರದು ಎಂದು ಮರುಪ್ರಶ್ನೆ ಮಾಡಿದ್ರೆ ಅನೇಕರಿಗೆ ಅದ್ರ ಬಗ್ಗೆ ತಿಳಿದಿಲ್ಲ. ಹಿರಿಯರು ಹೇಳ್ತಾರೆ,ಅದಕ್ಕೆ ಕತ್ತರಿಸಬಾರದು,ಕಾರಣ ಕೇಳ್ಬೇಡಿ ಎನ್ನುತ್ತಾರೆ. ಇಂದು ಯಾಕೆ ರಾತ್ರಿ ಉಗುರು ಕತ್ತರಿಸಬಾರದು? ಅದಕ್ಕೆ ಕಾರಣವೇನು ಎಂಬುದನ್ನು ನಾವು ಹೇಳ್ತೇವೆ.

ಇದು ಮೂಢನಂಬಿಕೆಯೇ?:
ಅನೇಕರು ಇದನ್ನು ಮೂಢನಂಬಿಕೆ ಎಂದುಕೊಂಡಿದ್ದಾರೆ. ಆದ್ರೆ ಇದಕ್ಕೆ ಯಾವುದೇ ದೃಢವಾದ ಆಧಾರ ಅಥವಾ ತರ್ಕಬದ್ಧ ವಿವರಣೆಯಿಲ್ಲ. ಆದಾಗ್ಯೂ, ಮೂಢನಂಬಿಕೆಗಳನ್ನು ತಳ್ಳಿಹಾಕುವ ಹೆಸರಿನಲ್ಲಿ ನಾವು ತಲೆಮಾರುಗಳಿಂದ ನಮಗೆ ಹಸ್ತಾಂತರಿಸಲ್ಪಟ್ಟ ಬಹಳಷ್ಟು ಉಪಯುಕ್ತ ಸಲಹೆಗಳನ್ನು ನಿರ್ಲಕ್ಷಿಸುತ್ತಿದ್ದೇವೆ. ಇದು ಮೂಢನಂಬಿಕೆ ಎನ್ನುವ ಮೊದಲು ಅದರ ಹಿಂದಿನ ಕಾರಣವನ್ನು ತಿಳಿಯಬೇಕಾಗುತ್ತದೆ.

ಕಾರಣ ಒಂದು : ಆ ದಿನಗಳಲ್ಲಿ ವಿದ್ಯುತ್ ಇರಲಿಲ್ಲ. ಆದುದರಿಂದ ಜನರು ರಾತ್ರಿ ಹೆಚ್ಚು ಗಾಢವಾದ ಬೆಳಕನ್ನು ಹೊಂದಿರಲಿಲ್ಲ. ಅನೇಕರು ರಾತ್ರಿಯಾಗ್ತಿದ್ದಂತೆ ಮಲಗ್ತಿದ್ದರು. ಮತ್ತೆ ಕೆಲವರು ಮಂದ ಬೆಳಕಿನ ವ್ಯವಸ್ಥೆ ಮಾಡಿಕೊಳ್ತಿದ್ದರು. ಉಗುರು ನಮ್ಮ ದೇಹದ ಸೂಕ್ಷ್ಮ ಭಾಗಗಳಲ್ಲಿ ಒಂದು. ಸ್ವಲ್ಪ ಹೆಚ್ಚು ಕಡಿಮೆಯಾದ್ರೂ ಸಂಪೂರ್ಣ ಉಗುರು ಕಿತ್ತು ಬರುತ್ತದೆ. ಹಾಗಾಗಿ ಉಗುರು ಕತ್ತರಿಸುವಾಗ ಜಾಗೃತೆ ವಹಿಸಬೇಕು. ಆಗ ನೇಲ್ ಕಟರ್ ಇರಲಿಲ್ಲ. ಜನರು ಕತ್ತಿ,ಬ್ಲೇಡ್ ನಂತಹ ಅಪಾಯಕಾರಿ ಆಯುಧಗಳಿಂದ ಉಗುರನ್ನು ಕತ್ತರಿಸುತ್ತಿದ್ದರು. ಉಗುರಿನ ಬದಲು ಕತ್ತಲಿನಲ್ಲಿ ಬೆರಳು ತುಂಡಾದ್ರೆ, ರಾತ್ರಿಯಲ್ಲಿ ವೈದ್ಯಕೀಯ ಚಿಕಿತ್ಸೆ ಕಷ್ಟ. ಈ ಕಾರಣಕ್ಕೆ ಕತ್ತಲಿನಲ್ಲಿ ಉಗುರು ಕತ್ತರಿಸಬಾರದು ಎಂಬ ನಿಯಮ ರೂಢಿಗೆ ಬಂತು.

Tap to resize

Latest Videos

undefined

HEALTH TIPS: ಫ್ರಿಡ್ಜ್‌ನಲ್ಲಿ ಶೇಖರಿಸಿಟ್ಟ ಮೊಟ್ಟೆಗಳನ್ನು ತಿನ್ನಬಹುದಾ ?

ಕಾರಣ ಎರಡು : ಮೇಲೆ ಹೇಳಿದಂತೆ ರಾತ್ರಿ ಸರಿಯಾದ ಬೆಳಕಿರದ ಕಾರಣ ಕತ್ತರಿಸಿದ ಉಗುರಿನ ತುಣುಕುಗಳನ್ನು ಸಂಗ್ರಹಿಸುವುದು ಕಷ್ಟವಾಗಿತ್ತು. ಕೆಲವು ಅಲ್ಲಿಯೇ ಉಳಿದು ಹೋಗ್ತಿದ್ದವು. ಸ್ವಚ್ಛತೆಗೆ ಇದು ಅಡ್ಡಿಯಾಗ್ತಿತ್ತು. ಸಣ್ಣ ಮನೆಗಳಲ್ಲಿ ಜನರು ಅದೇ ಜಾಗದಲ್ಲಿ ಅಡುಗೆ,ಊಟ ತಯಾರಿಸುತ್ತಿದ್ದರು. ಈ ಉಗುರು ಆಹಾರಕ್ಕೆ ಸೇರಿ ಹೊಟ್ಟೆಯೊಳಗೆ ಹೋಗುವ ಅಪಾಯವಿತ್ತು. ಇದನ್ನು ಗಮನದಲ್ಲಿಟ್ಟುಕೊಂಡ ಜನರು ರಾತ್ರಿ ಉಗುರು ಕತ್ತರಿಸಬಾರದು ಎಂಬ ನಿಯಮ ಜಾರಿಗೆ ತಂದರು. 

ಕಾರಣ ಮೂರು : ನಮ್ಮ ಉಗುರುಗಳು ಕೆರಾಟಿನ್ ನಿಂದ ಮಾಡಲ್ಪಟ್ಟಿದೆ. ಅದಕ್ಕಾಗಿಯೇ ಸ್ನಾನದ ನಂತರ ನಮ್ಮ ಉಗುರುಗಳನ್ನು ಕತ್ತರಿಸುವುದು ಉತ್ತಮ ಎಂದು ಪರಿಗಣಿಸಲಾಗಿದೆ. ಏಕೆಂದರೆ ಆಗ ನಮ್ಮ ಉಗುರುಗಳು ನೀರಿನಲ್ಲಿ ಅಥವಾ ಸಾಬೂನಿನ ನೀರಿನಲ್ಲಿ ನೆನೆಯಲ್ಪಟ್ಟು ಸ್ವಲ್ಪ ಮೃದುವಾಗಿರುತ್ತವೆ. ಉಗುರನ್ನು ಕತ್ತರಿಸುವುದು ಆಗ ಸುಲಭವಾಗುತ್ತದೆ. ಆದರೆ ನಾವು ರಾತ್ರಿಯಲ್ಲಿ ಉಗುರುಗಳನ್ನು ಕತ್ತರಿಸಿದಾಗ, ಅವು ದೀರ್ಘಕಾಲದವರೆಗೆ ನೀರಿನ ಸಂಪರ್ಕಕ್ಕೆ ಬರಲು ಸಾಧ್ಯವಾಗದೆ ಗಟ್ಟಿಯಾಗುತ್ತವೆ. ಆಗ ಉಗುರನ್ನು ಸರಿಯಾಗಿ ಕತ್ತರಿಸಲು ಸಾಧ್ಯವಾಗುವುದಿಲ್ಲ.  

Health Tips : ಮದುವೆಯಲ್ಲಿ ಹೊಟ್ಟೆತುಂಬ ಊಟ ಮಾಡುವಾಗ ಇದು ನೆನಪಿರಲಿ

ಕಾರಣ ನಾಲ್ಕು : ಇದರ ಹಿಂದೆ ಧಾರ್ಮಿಕ ಕಾರಣವೂ ಇರುವಂತಿದೆ. ಸಂಜೆ ಸಮಯದಲ್ಲಿ ಲಕ್ಷ್ಮಿ ಮನೆಗೆ ಪ್ರವೇಶಿಸುತ್ತಾಳೆಂಬ ನಂಬಿಕೆಯಿದೆ.   ಸಮೃದ್ಧಿ ಮತ್ತು ಸಂಪತ್ತನ್ನು ನೀಡಲು ರಾತ್ರಿ ಮನೆಯಲ್ಲಿಯೇ ಇರುತ್ತಾಳೆ ಎಂದು ನಂಬಲಾಗಿದೆ. ಉಗುರು ಕತ್ತರಿಸುವುದು ಲಕ್ಷ್ಮಿ ದೇವಿಗೆ ಅಗೌರವ ತೋರಿದಂತೆ. ಹಾಗಾಗಿ ರಾತ್ರಿ ಉಗುರನ್ನು ಕತ್ತರಿಸಬಾರದು.

ಏನು ಮಾಡ್ಬೇಕು ?: ಉಗುರನ್ನು ಕತ್ತರಿಸುವಾಗ ಸದಾ ದೊಡ್ಡ ಬೆಳಕಿಗೆ ಆದ್ಯತೆ ನೀಡಿ. ಎಲ್ಲೆಂದರಲ್ಲಿ ಕತ್ತರಿಸಿದ ಉಗುರನ್ನು ಎಸೆಯಬೇಡಿ. ಕತ್ತರಿಸಿದ ಉಗುರನ್ನು ಕಸಕ್ಕೆ ಹಾಕಿ. 

click me!