ರಾಯಚೂರಿನ ಕೋಳಿ ಕ್ಯಾಂಪ್‌ನ 5 ವರ್ಷದ ಮಗುವಿನಲ್ಲಿ ಝಿಕಾ ವೈರಸ್ ಪತ್ತೆ ಬೆನ್ನಲ್ಲೇ ಮಕ್ಕಳ ರಾಜ್ಯ ಆರೋಗ್ಯ ಇಲಾಖೆಯಿಂದ ವೃದ್ಧರು ಮತ್ತು ಮಕ್ಕಳ ಆರೋಗ್ಯ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ.
ರಾಯಚೂರು (ಡಿ.12): ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕೋಳಿ ಕ್ಯಾಂಪ್‌ನಲ್ಲಿ ೫ ವರ್ಷದ ಮಗುವಿನಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ತುರ್ತಾಗಿ ಆರೋಗ್ಯ ಇಲಾಖೆ ಸಚಿವ ಡಾ.ಕೆ. ಸುಧಾಕರ್ ಎಲ್ಲ ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಮಕ್ಕಳು ಮತ್ತು ವೃದ್ಧರ ಆರೋಗ್ಯದ ಬಗ್ಗೆ ಮಾರ್ಗಸೂಚಿಯನ್ನು ಹೊರಡಿಸಲಾಗುವುದು ಎಂದು ತಿಳಿಸಿದರು.
ಕೋಳಿ ಕ್ಯಾಂಪ್‌ನ ಮಗುವಿಗೆ ಜ್ವರ ಹೆಚ್ಚಾದ ಹಿನ್ನೆಲೆ ಬಳ್ಳಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಗುವಿನ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಿದಾಗ ಝಿಕಾ ವೈರಸ್ ಇರುವ ಶಂಕೆ ವ್ಯಕ್ತವಾಗಿದೆ. ಮಗುವಿಗೆ ಚಿಕತ್ಸೆ ಮುಂದುವರೆಸಿದ್ದು, ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಇನ್ನು ಈ ಬಗ್ಗೆ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರಾಜ್ ನೇತೃತ್ವದ ತಂಡದಿಂದ ಕೋಳಿ ಕ್ಯಾಂಪ್‌ಗೆ ತೆರಳಿ ತುರ್ತಾಗಿ ತಾತ್ಕಾಲಿಕ ಶಿಬಿರವನ್ನು ಆಯೋಜನೆ ಮಾಡಿ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನು ಮಗು ವಾಸವಾಗಿದ್ದ ಸ್ಥಳದಲ್ಲಿ ಸ್ವಚ್ಚತೆಯನ್ನು ಕಾಪಾಡುವಂತೆ ಆರೋಗ್ಯಾಧಿಕಾರಿ ಸೂಚನೆ ನೀಡಿದ್ದರು.
undefined
ಮಹಾರಾಷ್ಟ್ರದ ಏಳು ವರ್ಷದ ಬಾಲಕಿಯಲ್ಲಿ ಝಿಕಾ ವೈರಸ್ ಪತ್ತೆ
ಮಕ್ಕಳ ಆರೋಗ್ಯಕ್ಕೆ ಮಾರ್ಗಸೂಚಿ ಬಿಡುಗಡೆ: ರಾಯಚೂರಿನಲ್ಲಿ ಮಗುವಿಗೆ ಝಿಕಾ ವೈರಸ್ ಪತ್ತೆಯಾದ ಬೆನ್ನಲ್ಲೇ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸಾಂಕ್ರಾಮಿಕ ರೋಗಗಳ ಕುರಿತ ನಡೆದ ಸಭೆ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನವೆಂಬರ್ ಹಾಗೂ ಡಿಸೆಂಬರ್ ಚಳಿಗಾಲ ಸಮಯವಾಗಿದೆ. ಈ ವೇಳೆ ಚಂಡಮಾರುತ ಎಫೆಕ್ಟ್ ಕೂಡಾ ಎದುರಾಗಿದೆ. ಹೀಗಾಗಿ ಜನರು ಕೊಂಚ ಎಚ್ಚರಿಕೆ ವಹಿಸಬೇಕಿದೆ. ಮಕ್ಕಳು ಹಾಗೂ ವೃದ್ಧರಲ್ಲಿ ಜ್ವರ ಕಾಣಿಸಿಕೊಳ್ಳುತ್ತಿದೆ. ಜೊತೆಗೆ, ಶ್ವಾಸಕೋಶದ ಸಮಸ್ಯೆ ಉಲ್ಬಣ ಆಗುತ್ತಿದೆ. ಇದಕ್ಕೆಲ್ಲ ತಾಪಮಾನದಲ್ಲಿ ಉಂಟಾದ ಬದಲಾವಣೆ ಮತ್ತು ಮಳೆ ಕಾರಣವಾಗಿದೆ. ಶೀಘ್ರವಾಗಿ ಮಕ್ಕಳ ಆರೋಗ್ಯದ ಕುರಿತು ಗೈಡ್ ಲೈನ್ಸ್ ಕೊಡಲಾಗುವುದು. ಈಗಾಗಲೇ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
5 ವರ್ಷದ ಬಾಲಕಿಗೆ ಝಿಕಾ ವೈರಸ್ ದೃಢ: ಝಿಕಾ ವೈರಸ್ ಪತ್ತೆಯ ಬಗ್ಗೆ ಡಿಸೆಂಬರ್ 5 ರಂದು ಪೂಣೆ ಲ್ಯಾಬ್ ಗೆ ಮಾದರಿಯನ್ನು ಕಳುಹಿಸಲಾಗಿತ್ತು. ಈಗ ಲ್ಯಾಬ್‌ನಿಂದ ರಿಪೋರ್ಟ್ ಬಂದಿದ್ದು ಝಿಕಾ ವೈರಸ್ ಇರುವುದು ಪತ್ತೆಯಾಗಿದೆ. ಮೂರು ಸ್ಯಾಂಪಲ್ ಟೆಸ್ಟ್ ಪ್ರೋಸಸಿಂಗ್ ನಡೆದಿದ್ದು, ಅದರಲ್ಲಿ ಒಬ್ಬರಿಗೆ ಪಾಸಿಟಿವ್ ಬಂದಿದೆ. ಇದು ರಾಜ್ಯದಲ್ಲಿ 5 ವರ್ಷದ ಬಾಲಕಿಗೆ ವೈರಸ್ ಪತ್ತೆ ಆಗಿರುವುದು ಮೊದಲನೆ ಖಚಿತ ಪ್ರಕರಣವಾಗಿದೆ. ನಾವು ಈ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದೇವೆ. ಈ ಬಗ್ಗೆ ಹೆಚ್ಚಿನ ಸೂಚನೆಯನ್ನು ನೀಡಿದ್ದೇವೆ. ಯಾವುದೇ ರೀತಿಯ ಲಕ್ಷಣಗಳು ಕಂಡು ಬಂದರೆ ತಕ್ಷಣ ಸ್ಯಾಂಪಲ್ ಕಳಿಸುವಂತೆ ಹೇಳಿದ್ದೇವೆ. ಇಂದು ಸಂಜೆಯೊಳಗೆ ರಾಜ್ಯಕ್ಕೆ ಅನುಗುಣವಾಗುವ ನಿಟ್ಟಿನಲ್ಲಿ ಗೈಡ್ ಲೈನ್ಸ್ ನೀಡಲಾಗುತ್ತದೆ. ಜೀಕಾ ವೈರಸ್ ಗೆ ಪ್ರತ್ಯೇಕ ಗೈಡ್ ಲೈನ್ಸ್ ನೀಡಲಾಗುವುದು. ಜೊತೆಗೆ ಚಳಿಗಾಲದ ಮಾರ್ಗಸೂಚಿ ಸಹ ಅಧಿಕೃತವಾಗಿ ಪ್ರಕಟಣೆಯಾಗಲಿದೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದರು.
ಕೇರಳದಲ್ಲಿ ಝಿಕಾ ವೈರಸ್ ಮತ್ತೆ ಪತ್ತೆ, ರೋಗದ ಲಕ್ಷಣಗಳೇನು ?
ಆರೋಗ್ಯ ಇಲಾಖೆಯಿಂದ ನಿಗಾ: ಮಕ್ಕಳು ಹಾಗೂ ವೃದ್ಧರ ಆರೋಗ್ಯದ ದೃಷ್ಟಿಯಿಂದ ಮಾರ್ಗಸೂಚಿ ಹೊರಡಿಸುತ್ತೇವೆ. ಈಗಾಗಲೇ ಎಲ್ಲ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎರಡು ಜಿಲ್ಲೆಗಳಲ್ಲಿ ಈಗಾಗಲೇ ಶಾಲೆಗಳಿಗೆ ರಜೆ ನೀಡಲಾಗಿದೆ. ನಾಳೆಗೆ ಚಂಡಮಾರತ ಸಹಜ ಸ್ಥಿತಿಗೆ ಬರುವ ಸಾಧ್ಯತೆ ಇದೆ. ಹೀಗಾಗಿ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಎಚ್ಚರಿಕೆ ವಹಿಸಬೇಕಿದೆ. ಆದರೆ ಚಳಿಗಾಲ ಮುಂದುವರೆಯುತ್ತಿದ್ದು, ಮಕ್ಕಳು ಹಾಗೂ ವೃದ್ಧರು ಉಸಿರಾಟದ ಸಮಸ್ಯೆ ಇರುವವರು ಎಚ್ಚರ ವಹಿಸಬೇಕು ಈ ಬಗ್ಗೆ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.
ಕೇಂದ್ರ ತಂಡದಿಂದ ಪರಿಶೀಲನೆ: ನಂತರ ಝಿಕಾ ವೈರಸ್ ಪತ್ತೆಯಾದ ಮಗುವಿನ ಮನೆಗೆ ರಾಯಚೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುರೇಂದ್ರ ಬಾಬು ಭೇಟಿ ನೀಡಿದ್ದಾರೆ. ಮಗುವಿನ ಕುಟುಂಬಸ್ಥರ ರಕ್ತ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಸದ್ಯ ಮಗುವಿನ ಆರೋಗ್ಯ ದಲ್ಲಿ ಸುಧಾರಣೆ ಕಂಡುಬಂದಿದ್ದು, ಯಾವುದೇ ಪೋಷಕರು ಆತಂಕಕ್ಕೆ ಒಳಗಾಗಬಾರದು. ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡರೇ ಕೂಡಲೇ ವೈದ್ಯರನ್ನು ಸಂಪರ್ಕಿಸಲು ಸೂಚನೆ ನೀಡಿದ್ದಾರೆ. ಇನ್ನು ಝಿಕಾ ವೈರಸ್ ಬಗ್ಗೆ ಕೇಂದ್ರಕ್ಕೆ ಮಾಹಿತಿ ರವಾನಿಸಲಾಗಿದ್ದು, ಕೇಂದ್ರದ ವೈದ್ಯರ ತಂಡದಿಂದ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ.