ಹಸಿ ಬೆಳ್ಳುಳ್ಳಿ ಎಂದಾಗ ಅನೇಕರು ಮೂಗು ಮುರಿಯುತ್ತಾರೆ. ಅದ್ರ ವಾಸನೆ ಹಿಂಸೆ ಎನ್ನಿಸುತ್ತದೆ. ಅದು ಕಟುವಾಗಿರುವ ಕಾರಣ ತಿನ್ನೋದು ಸುಲಭ ಕೂಡ ಅಲ್ಲ. ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ನೀವು ಎಲ್ಲ ಮರೆತು ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಒಂದು ಎಸಳು ಬೆಳ್ಳುಳ್ಳಿ ತಿನ್ಲೇಬೇಕು.
ಅಡುಗೆ ಮನೆ ಅಂದ್ಮೇಲೆ ಬೆಳ್ಳುಳ್ಳಿ ಇರ್ಲೇಬೇಕು. ಕೆಲವೊಂದು ಮಸಾಲೆ ಆಹಾರಕ್ಕೆ ಬೆಳ್ಳುಳ್ಳಿ ಇಲ್ಲವೆಂದ್ರೆ ರುಚಿ ಬರೋದಿಲ್ಲ. ಪ್ರತಿ ದಿನ ಬೆಳ್ಳುಳ್ಳಿ ಸೇವನೆ ಮಾಡುವವರಿದ್ದಾರೆ. ಬಹುತೇಕರು ಆಹಾರದ ಜೊತೆ ಬೆಳ್ಳುಳ್ಳಿ ತಿಂದ್ರೆ ಮತ್ತೆ ಕೆಲವರು ಹಸಿ ಬೆಳ್ಳುಳ್ಳಿ ಸೇವನೆ ಮಾಡ್ತಾರೆ. ಹಸಿ ಬೆಳ್ಳುಳ್ಳಿ ತಿನ್ನೋದು ಸ್ವಲ್ಪ ಕಷ್ಟ. ಅದು ರುಚಿಯಾಗಿರೋದಿಲ್ಲ. ಸ್ವಲ್ಪ ಖಾರವಾಗಿರುತ್ತದೆ. ಆದ್ರೆ ಈ ಹಸಿ ಬೆಳ್ಳುಳ್ಳಿ ಆರೋಗ್ಯಕ್ಕೆ ಒಳ್ಳೆಯದು.
ಬೆಳ್ಳುಳ್ಳಿ (Garlic) ಯಲ್ಲಿ ವಿಟಮಿನ್ ಬಿ-6, ವಿಟಮಿನ್-ಸಿ, ಫೈಬರ್, ಪ್ರೊಟೀನ್ ಮತ್ತು ಮ್ಯಾಂಗನೀಸ್ ಮುಂತಾದ ಪೋಷಕಾಂಶವಿದೆ. ಹಸಿ ಬೆಳ್ಳುಳ್ಳಿ ಇಷ್ಟ ಎನ್ನುವವರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಬೆಳ್ಳುಳ್ಳಿ ಎಸಳನ್ನು ತಿನ್ನುವುದು ಒಳ್ಳೆಯದು. ಇದ್ರಿಂದ ಆರೋಗ್ಯ (Health) ಕ್ಕೆ ಸಂಬಂಧಿಸಿದ ಅನೇಕ ಪ್ರಯೋಜನಗಳನ್ನು ನೀವು ಪಡೆಯಬಹುದು. ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿ ಸೇವನೆ ಮಾಡಿದ್ರೆ ಏನೆಲ್ಲ ಲಾಭವಿದೆ ಎಂಬುದನ್ನು ನಾವು ಹೇಳ್ತೇವೆ.
ಬಿಳಿ ಸಕ್ಕರೆ ಸೈಡಿಗಿಡಿ, ಕಂದು ಸಕ್ಕರೆ ಬಳಸಿ ನೋಡಿ, ಆರೋಗ್ಯ ಸಮಸ್ಯೆ ಕಾಡಲ್ಲ
ಬೆಳ್ಳುಳ್ಳಿ ಸೇವನೆ ಹೇಗೆ ? : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಬೆಳ್ಳುಳ್ಳಿ ಎಸಳನ್ನು ಜಗಿದು ತಿನ್ನಬೇಕು. ನಂತ್ರ ಬೆಚ್ಚಗಿನ ನೀರನ್ನು ಕುಡಿಯಬೇಕು. ಬೆಳ್ಳುಳ್ಳಿಯನ್ನು ನೀವು ಸೇವನೆ ಮಾಡುವ ಮೊದಲು ಅದರ ಸಿಪ್ಪೆ ತೆಗೆದು, ಕತ್ತರಿಸಿ ಅಥವಾ ಜಜ್ಜಿ ಅದನ್ನು ಹಾಗೆಯೇ ಇಡಿ. 10 ನಿಮಿಷ ಬೆಳ್ಳುಳ್ಳಿ ಜಜ್ಜಿಟ್ಟ ನಂತ್ರ ಅದನ್ನು ತಿನ್ನಿ. ಈ ಸಮಯದಲ್ಲಿ ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಗುಣ ಹೆಚ್ಚಾಗುತ್ತದೆ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಬೆಳ್ಳುಳ್ಳಿ ಒಂದು ಎಸಳು ಸೇವನೆಯಿಂದಾಗುವ ಲಾಭ :
ರೋಗನಿರೋಧಕ ಶಕ್ತಿ ಹೆಚ್ಚಳ : ಬೆಳ್ಳುಳ್ಳಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಉರಿಯೂತವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಪ್ರತಿರಕ್ಷಣಾ ಕಾರ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಆಗಾಗ ಖಾಯಿಲೆ ಬೀಳುವವರು, ರೋಗನಿರೋಧಕ ಶಕ್ತಿ ಕಡಿಮೆ ಇದೆ ಎನ್ನುವವರು ಬೆಳ್ಳುಳ್ಳಿ ಸೇವನೆ ಮಾಡಬಹುದು.
ನ್ಯಾಚ್ಯುರಲ್ ಆಂಟಿ ಬಯೋಟಿಕ್, ಆಂಟಿ ವೈರಲ್ ಮತ್ತು ಆಂಟಿ ಫಂಗಲ್ ಆಗಿ ಕೆಲಸ : ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ಶತಮಾನಗಳಿಂದ ಬೆಳ್ಳುಳ್ಳಿಯನ್ನು ಬಳಸಲಾಗುತ್ತಿದೆ. ಬೆಳ್ಳುಳ್ಳಿಯನ್ನು ನಿಯಮಿತವಾಗಿ ತಿನ್ನುವುದರಿಂದ ನೆಗಡಿ, ಜ್ವರ, ಹೊಟ್ಟೆಯ ಸೋಂಕುಗಳು, ಉಸಿರಾಟದ ಸೋಂಕುಗಳು ಮತ್ತು ಯುಟಿಐಗಳನ್ನು ತಡೆಯಬಹುದು. ಅನಾರೋಗ್ಯದಿಂದ ಬಳಲುತ್ತಿರುವವರು ಬೆಳ್ಳುಳ್ಳಿ ಸೇವನೆ ಮಾಡಿದ್ರೆ ರೋಗದ ತೀವ್ರತೆಯಿಂದ ರಕ್ಷಣೆ ಪಡೆಯಬಹುದು. ಹಾಗೆ ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಲು ನೆರವಾಗುತ್ತದೆ.
ಜೀರ್ಣಕ್ರಿಯೆ (Digestion) ಗೆ ಒಳ್ಳೆಯದು, ಆಮ್ಲೀಯತೆಯಿಂದ ಮುಕ್ತಿ : ಪ್ರತಿದಿನ 1 ಎಸಳು ಬೆಳ್ಳುಳ್ಳಿ ಸೇವಿಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆಯಾಗುತ್ತದೆ. ಜೀರ್ಣಕ್ರಿಯೆಯಲ್ಲಿ ಸುಧಾರಣೆಯಾಗುತ್ತದೆ. ಬೆಳ್ಳುಳ್ಳಿಯಲ್ಲಿರುವ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಕರುಳಿನಲ್ಲಿರುವ ವಿವಿಧ ಪರಾವಲಂಬಿ ಮತ್ತು ಸೂಕ್ಷ್ಮಜೀವಿಯ ಸೋಂಕುಗಳನ್ನು ಕೊಲ್ಲುತ್ತವೆ. ಅಲ್ಸರ್ ಸೇರಿದಂತೆ ಜಠರಗರುಳಿನ ಕಾಯಿಲೆ ಅಪಾಯ ಬೆಳ್ಳುಳ್ಳಿ ಸೇವನೆ ಮಾಡುವುದ್ರಿಂದ ಕಡಿಮೆಯಾಗುತ್ತದೆ ಎಂಬುದು ಅನೇಕ ಅಧ್ಯಯನದಿಂದ ಹೊರಬಿದ್ದಿದೆ.
ರಕ್ತ ಹೆಪ್ಪುಗಟ್ಟುವಿಕೆಗೆ ಪರಿಹಾರ,ಕಡಿಮೆಯಾಗುತ್ತೆ ರಕ್ತದೊತ್ತಡ : ಬೆಳ್ಳುಳ್ಳಿ ರಕ್ತದೊತ್ತಡವನ್ನು ಕಡಿಮೆ ಮಾಡಲು ಬಹಳ ಪ್ರಯೋಜನಕಾರಿಯಾಗಿದೆ. ಇದು ಸಾರಜನಕ ಆಕ್ಸೈಡ್‌ಗಳು ಮತ್ತು H2S ನಂತಹ ವಾಸೋಡಿಲೇಟಿಂಗ್ ಏಜೆಂಟ್‌ಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ.
ಕೊಲೆಸ್ಟ್ರಾಲ್ (cholesterol) ನಿಯಂತ್ರಣಕ್ಕೆ ಬೆಳ್ಳುಳ್ಳಿ ಬೆಸ್ಟ್ : ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರು ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವನೆ ಮಾಡಬೇಕು. ಬೆಳ್ಳುಳ್ಳಿಯ ಸಾಂದ್ರತೆಯು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸೈಕ್ಲಿಂಗ್ ಆರೋಗ್ಯಕ್ಕೆ ಒಳ್ಳೇದು ನಿಜ, ಆದರೆ ಇಂಥವರಿಗಲ್ಲ !
ಮೂತ್ರಪಿಂಡ ಕಾಯಿಲೆಯಿಂದ ದೂರವಿರಲು ಬೆಳ್ಳುಳ್ಳಿ : ಅಲಿಸಿನ್ ಎಂಬುದು ಬೆಳ್ಳುಳ್ಳಿಯಲ್ಲಿ ಕಂಡುಬರುವ ಸಂಯುಕ್ತವಾಗಿದೆ. ಇದು ಮೂತ್ರಪಿಂಡದ ಅಪಸಾಮಾನ್ಯ ಕ್ರಿಯೆ, ರಕ್ತದೊತ್ತಡ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಆಂಟಿಹೈಪರ್ಟೆನ್ಸಿವ್, ಉತ್ಕರ್ಷಣ ನಿರೋಧಕ ಮತ್ತು ನೆಫ್ರೋಪ್ರೊಟೆಕ್ಟಿವ್ ಪರಿಣಾಮಗಳನ್ನು ಹೊಂದಿದೆ.