
ಲಕ್ನೋ: ಒಮ್ಮೆ ರೆಬೀಸ್ (Rabies) ಲಕ್ಷಣಗಳು ಕಾಣಿಸಿಕೊಂಡರೆ ಸಾವು ಖಚಿತ ಎಂಬುದು ವೈದ್ಯಕೀಯ ಲೋಕದ ನಂಬಿಕೆ. ಉತ್ತರ ಪ್ರದೇಶದ ಮಿರ್ಜಾಪುರದ 15 ವರ್ಷದ ಬಾಲಕನೊಬ್ಬ ರೆಬೀಸ್‌ನ ಅಂತಿಮ ಹಂತದಿಂದ ಗುಣಮುಖನಾಗಿ ಮನೆಗೆ ಮರಳಿರುವುದು ಇಡೀ ವಿಶ್ವವನ್ನೇ ಅಚ್ಚರಿಗೊಳಿಸಿದೆ. ವೈದ್ಯಕೀಯ ಇತಿಹಾಸದಲ್ಲೇ ಇದು ಅತ್ಯಂತ ಅಪರೂಪದ ಘಟನೆ ಎಂದು ಹೇಳಲಾಗುತ್ತಿದೆ.
ಮಿರ್ಜಾಪುರದ ಕರಣ್ ಎಂಬ 15 ವರ್ಷದ ಬಾಲಕನಿಗೆ 2025ರ ಡಿಸೆಂಬರ್‌ನಲ್ಲಿ ಬೀದಿ ನಾಯಿ ಕಚ್ಚಿತ್ತು. ಆರಂಭದಲ್ಲಿ ಎರಡು ಲಸಿಕೆಗಳನ್ನು ಪಡೆದಿದ್ದರೂ 2026ರ ಮಾರ್ಚ್ ವೇಳೆಗೆ ಆತನ ಆರೋಗ್ಯ ಹದಗೆಟ್ಟಿತ್ತು. ಆತನಲ್ಲಿ ಹೈಡ್ರೋಫೋಬಿಯಾ (ನೀರು ಕಂಡರೆ ಭಯ), ಅತಿಯಾದ ಜೊಲ್ಲು ಸುರಿಸುವುದು ಮತ್ತು ವಿಚಿತ್ರವಾಗಿ ವರ್ತಿಸುವಂತಹ ರೆಬೀಸ್‌ನ ಗಂಭೀರ ಲಕ್ಷಣಗಳು ಕಾಣಿಸಿಕೊಂಡಿದ್ದವು.
ಕೂಡಲೇ ಆತನನ್ನು ವಾರಣಾಸಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಸತತ 22 ದಿನಗಳ ಕಾಲ ಚಿಕಿತ್ಸೆ ನೀಡಲಾಯಿತು. ಐದು ನಿಯಮಿತ ಲಸಿಕೆಗಳ ಜೊತೆಗೆ ಎರಡು ವಿಶೇಷ ಡೋಸ್ ಸೇರಿದಂತೆ ಒಟ್ಟು 7 ಇಂಜೆಕ್ಷನ್‌ಗಳನ್ನು ನೀಡಲಾಯಿತು. ಅಚ್ಚರಿಯೆಂದರೆ ಬಾಲಕ ಚಿಕಿತ್ಸೆಗೆ ಸ್ಪಂದಿಸಿ ಸಂಪೂರ್ಣ ಗುಣಮುಖನಾಗಿ ಈಗ ಶಾಲೆಗೂ ಹೋಗುತ್ತಿದ್ದಾನೆ.
ಸಾಮಾನ್ಯವಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ..ರೆಬೀಸ್ ವೈರಸ್ ಮೆದುಳು ಮತ್ತು ನರಮಂಡಲವನ್ನು ತಲುಪಿ ಲಕ್ಷಣಗಳು ಕಾಣಿಸಿಕೊಂಡ ನಂತರ ರೋಗಿ ಬದುಕುವುದು ಅಸಾಧ್ಯ . ಆದರೆ, ಶಾರದಾ ಕೇರ್ ಆಸ್ಪತ್ರೆಯ ಡಾ. ಚಿರಾಗ್ ಟಂಡನ್ ಹೇಳುವಂತೆ, ಇದು ಅತ್ಯಂತ ಅಸಾಧಾರಣ ವೈದ್ಯಕೀಯ ವಿದ್ಯಮಾನ (Extraordinary Medical Event). ಇತಿಹಾಸದಲ್ಲಿ ಇಂತಹ ಕೆಲವೇ ಕೆಲವು ಪ್ರಕರಣಗಳು ದಾಖಲಾಗಿವೆ. 2004ರಲ್ಲಿ ಅಮೆರಿಕದ 15 ವರ್ಷದ ಜೀನಾ ಗೀಸ್ ಎಂಬ ಹುಡುಗಿ 'ಮಿಲ್ವಾಕಿ ಪ್ರೋಟೋಕಾಲ್' ಎಂಬ ವಿಶೇಷ ಚಿಕಿತ್ಸೆಯ ಮೂಲಕ ಬದುಕುಳಿದಿದ್ದಳು. ಆದರೆ ಇದು ಪ್ರತಿಯೊಬ್ಬರಿಗೂ ಕೆಲಸ ಮಾಡುತ್ತದೆ ಎಂದು ಹೇಳಲಾಗದು.
ರೆಬೀಸ್ ವೈರಸ್ ನರಗಳ ಮೂಲಕ ಮೆದುಳನ್ನು ತಲುಪುತ್ತದೆ. ಒಮ್ಮೆ ಮೆದುಳಿಗೆ ಹಾನಿಯಾದ ಮೇಲೆ ಅದನ್ನು ಸರಿಪಡಿಸುವುದು ಕಷ್ಟ. ಜ್ವರ, ಸುಸ್ತು ಆರಂಭಿಕ ಲಕ್ಷಣಗಳಾದರೆ ಮುಂದಿನ ಹಂತದಲ್ಲಿ ಗೊಂದಲ, ಭ್ರಮೆ, ಪಾರ್ಶ್ವವಾಯು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಲಕ್ಷಣಗಳು ಕಾಣಿಸಿಕೊಂಡ ಮೇಲೆ ಚಿಕಿತ್ಸೆಗಿಂತ ಹೆಚ್ಚಾಗಿ ಜೀವ ಉಳಿಸುವ ಬೆಂಬಲವನ್ನಷ್ಟೇ (Supportive Care) ನೀಡಲು ಸಾಧ್ಯ.
ಈ ಬಾಲಕ ಬದುಕಿದ್ದಾನೆ ಎಂಬ ಕಾರಣಕ್ಕೆ ರೆಬೀಸ್ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ವೈದ್ಯರು ಎಚ್ಚರಿಸಿದ್ದಾರೆ. ನಾಯಿ ಅಥವಾ ಯಾವುದೇ ಪ್ರಾಣಿ ಕಚ್ಚಿದ ತಕ್ಷಣ ಗಾಯವನ್ನು 15 ನಿಮಿಷಗಳ ಕಾಲ ಸೋಪು ಮತ್ತು ಹರಿಯುವ ನೀರಿನಲ್ಲಿ ತೊಳೆಯಿರಿ. ಕೂಡಲೇ ವೈದ್ಯರನ್ನು ಭೇಟಿ ಮಾಡಿ ಲಸಿಕೆ (PEP) ಪಡೆಯಿರಿ. ಪ್ರಾಣಿಗಳಲ್ಲಿ ಲಕ್ಷಣ ಕಾಣಿಸಿಕೊಳ್ಳುವವರೆಗೆ ಕಾಯಬೇಡಿ. ಮನೆಯ ಸಾಕುಪ್ರಾಣಿಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ. ಮಿರ್ಜಾಪುರದ ಈ ಘಟನೆ ವೈದ್ಯಕೀಯ ಪವಾಡವೆನಿಸಿದರೂ ರೆಬೀಸ್ ಲಕ್ಷಣ ಕಾಣಿಸಿಕೊಳ್ಳುವ ಮೊದಲೇ ಲಸಿಕೆ ಪಡೆಯುವುದು ಪ್ರಾಣ ಉಳಿಸಿಕೊಳ್ಳಲು ಇರುವ ಏಕೈಕ ಖಚಿತ ದಾರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.