ಭಾರತವೊಂದರಲ್ಲೇ ಶೇ.37ರಷ್ಟು ಜನ ಒಂದಿಲ್ಲೊಂದು ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಾ, ಆ ಬಗ್ಗೆ ಅರಿವಿಲ್ಲದೆಯೇ ದಿನದೂಡುತ್ತಿದ್ದಾರೆ. ಇವುಗಳಲ್ಲಿ ಖಿನ್ನತೆ, ಆತಂಕದ್ದು ದೊಡ್ಡ ಪಾಲು.
ಕೈತುಂಬಾ ದುಡ್ಡು, ಹೆಸರು, ಬೇಕಾಗಿದ್ದೆಲ್ಲ ಕಾಲ ಬುಡಕ್ಕೆ ಬಂದು ಬೀಳುವ ಸೌಕರ್ಯ- ಇವೆಲ್ಲ ಇದ್ದಾಗ ಯಾವ ಚಿಂತೆಯಿಲ್ಲದೆ ಸಂತೋಷವಾಗಿರಬಹುದು ಎಂಬುದು ನಮ್ಮಲ್ಲಿ ಬಹುತೇಕರ ಅಭಿಪ್ರಾಯ. ಆದರೆ, ಇಷ್ಟೆಲ್ಲ ಇದ್ದವರಿಗೂ ಖಿನ್ನತೆ, ಆತಂಕ ಮುಂತಾದ ಮಾನಸಿಕ ಸಮಸ್ಯೆಗಳು ಸಂತೋಷ ಕಿತ್ತುಕೊಳ್ಳುತ್ತವೆ ಎಂದು ನಿಮಗೆ ಗೊತ್ತಾ?
ವಿಶ್ವ ಆತ್ಮಹತ್ಯೆ ತಡೆ ದಿನ : ನಮ್ಮ ಪಾತ್ರವೇನು?
ಹೌದು, ಬಾಲಿವುಡ್‌ನ ಹೆಸರಾಂತ ನಟನಟಿಯರು, ನಿರ್ದೇಶಕರು ಕೂಡಾ ಈ ಸಮಸ್ಯೆ ಎದುರಿಸಿದವರೇ. ಅವರೆಲ್ಲರೂ ಬಾಯಿ ಬಿಟ್ಟು ಈ ಬಗ್ಗೆ ಹೇಳಿಕೊಳ್ಳುತ್ತಿರುವುದು ಜನರಲ್ಲಿ ಮಾನಸಿಕ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸಲು ಸಹಾಯವಾಗುತ್ತಿದೆಯಲ್ಲದೆ, ಈ ಕುರಿತು ಸಾಮಾಜಿಕವಾಗಿ ಇರುವ ಕಳಂಕ ತೊಡೆದು ಹಾಕುವಲ್ಲಿ ಕೂಡಾ ಇದು ಕೆಲಸ ಮಾಡುತ್ತದೆ.
ಶ್ರದ್ಧಾ ಕಪೂರ್
ಆಶಿಕಿ 2 ಚಿತ್ರದಿಂದ ಹಿಟ್ ಆದ ನಟಿ ಶ್ರದ್ಧಾ ಕಪೂರ್ ಆ ಬಳಿಕ ವಿಚಿತ್ರ ನೋವಿನಿಂದ ನರಳುತ್ತಿದ್ದಳಂತೆ. ಯಾವ ವೈದ್ಯರಿಗೆ ತೋರಿಸಿದರೂ ಎಲ್ಲ ಸರಿಯಾಗಿದೆ ಎಂಬ ರಿಪೋರ್ಟ್ ಬರುತ್ತಿತ್ತು. ಬಹಳ ವರ್ಷದವರೆಗೆ ತನಗೆ ಆತಂಕದಿಂದಾಗಿ ಹೀಗಾಗುತ್ತಿದೆ ಎಂಬ ಅರಿವೇ ಇರಲಿಲ್ಲ ಎನ್ನುತ್ತಾಳೆ ಆಕೆ. ಆತಂಕವು ದೈಹಿಕ ನೋವಿನ ಮೂಲಕ ಹೊರಬರುತ್ತಿತ್ತು. ಸುಮಾರು 6 ವರ್ಷಗಳ ಕಾಲ ಆತಂಕದಲ್ಲೇ ಕಾಲ ದೂಡಿರುವ ಶ್ರದ್ಧಾ ಈಗ ಕೂಡಾ ಅದರಿಂದ ಸಂಪೂರ್ಣ ಮುಕ್ತಳಾಗಿಲ್ಲವಂತೆ. ಬದಲಿಗೆ ಅದನ್ನು ಒಪ್ಪಿಕೊಂಡು ನಿಭಾಯಿಸಲು ಶಕ್ತಳಾಗಿದ್ದೇನೆ ಎನ್ನುತ್ತಾಳೆ 'ಸಾಹೋ' ನಟಿ.
ಒತ್ತಡ, ಖಿನ್ನತೆ ಹಾಗೂ ಆತಂಕದ ವಿರುದ್ಧ ಹೋರಾಡೋ ಆಹಾರಗಳಿವು
ಆಲಿಯಾ ಭಟ್
ಆಲಿಯಾ ಕೂಡಾ ಇತ್ತೀಚಿನ ಸಂದರ್ಶನವೊಂದರಲ್ಲಿ, ತಾನು ಖಿನ್ನತೆಯಿಂದ ಬಳಲಿದ ಅನುಭವ ಹಂಚಿಕೊಂಡಿದ್ದಾಳೆ. ಕೆಲಸ, ಹೆಸರಿನ ನಡುವೆ ಮಾನಸಿಕ ಆರೋಗ್ಯ ನಿಭಾಯಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಅದೆಷ್ಟೋ ದಿನಗಳ ಕಾಲ ಕಾರಣವಿಲ್ಲದೆ ಸುಮ್ಮನೇ ದಿನವಿಡೀ ಅಳುತ್ತಿರುತ್ತಿದ್ದೆ. ಅಕ್ಕ ಶಹೀನ್ ಈ ಮಾನಸಿಕ ಯುದ್ಧದಲ್ಲಿ ಗೆದ್ದು ಬಂದುದನ್ನು ನೋಡಿದ ಬಳಿಕ ತಾನು ಕೂಡಾ ಇದರ ವಿರುದ್ಧ ಹೋರಾಡಬೇಕೆಂದು ತೀರ್ಮಾನಿಸಿದೆ ಎಂದಿದ್ದಾಳೆ.
ದೀಪಿಕಾ ಪಡುಕೋಣೆ
ಬಾಲಿವುಡ್‌ನಲ್ಲಿ ತನ್ನ ಸ್ಥಾನವನ್ನು ಭದ್ರವಾಗಿಸಿಕೊಂಡಿರುವ ದೀಪಿಕಾ ಪಡುಕೋಣೆ ಕೂಡಾ ತನ್ನ ಖಿನ್ನತೆಯ ದಿನಗಳ ಕುರಿತು ಈ ಹಿಂದೆ ಹೇಳಿಕೊಂಡಿದ್ದಳು. 2014ರಲ್ಲಿ ಆತಂಕ ಹಾಗೂ ಖಿನ್ನತೆಗೆ ಒಳಗಾಗಿದ್ದ ದೀಪಿಕಾ, ಅದರಿಂದ ಹೊರಬಂದಿದ್ದಷ್ಟೇ ಅಲ್ಲ, ಹೀಗೆ ಮಾನಸಿಕ ಸಮಸ್ಯೆಯಿಂದ ಒದ್ದಾಡುತ್ತಿರುವ ಜನರಿಗಾಗಿ ಮೆಂಟಲ್ ಹೆಲ್ತ್ ಸೆಂಟರನ್ನು ಕೂಡಾ ತೆರೆದಿದ್ದಾಳೆ.
ಹನಿ ಸಿಂಗ್
ಬಾಲಿವುಡ್ ರ್ಯಾಪ್‌ನ ರಾಜ ಯೋ ಯೋ ಹನಿ ಸಿಂಗ್. ತಮ್ಮ ಸಂಗೀತದಿಂದಲೇ ನಮ್ಮೆಲ್ಲರನ್ನು ಕುಣಿಸುವ ತಾಕತ್ತಿರುವ ಸಿಂಗ್‌ಗೆ ಬೈಪೋಲಾರ್ ಡಿಸಾರ್ಡರ್‌ನಿಂದ ರಕ್ಷಿಸಲು ಸಂಗೀತಕ್ಕೆ ಕೂಡಾ ಸಾಧ್ಯವಾಗದಿರುವುದು ಆಶ್ಚರ್ಯ. ಜೀವನದ ಒಂದು ಹಂತದಲ್ಲಿ ಎಲ್ಲೆಡೆ ಸೋಲೇ ಆವರಿಸಿ ಬೈಪೋಲಾರ್ ಡಿಸಾರ್ಡರ್ ಆವರಿಸಿಕೊಂಡಿದ್ದನ್ನು ಯಾವುದೇ ಭಿಡೆ ಇಲ್ಲದೆ ಹೇಳಿಕೊಂಡಿದ್ದಾರೆ ರಾಕ್ ಸ್ಟಾರ್.
ನಾನೂ ಡಿಪ್ರೆಶನ್ ಗೆ ಒಳಗಾಗಿದ್ದೆ ಎಂದ ಡ್ರೀಮ್ ಗರ್ಲ್!
ಅನುಷ್ಕಾ ಶರ್ಮ
"ಡಿಪ್ರೆಶನ್ ಎಂಬುದು ಜೈಲಿನಂತೆ, ನೀವಲ್ಲಿ ಒದ್ದಾಡುವ ಖೈದಿಯೂ, ಕ್ರೂರ ಜೈಲರೂ ಆಗಿರುತ್ತೀರಿ" ಎಂದು ಅನುಷ್ಕಾ ಶರ್ಮಾ ಟ್ವೀಟ್ ಮಾಡಿದಾಗ ಅಭಿಮಾನಿಗಳಿಗೆ ಶಾಕ್ ಆಗಿದ್ದು ಸುಳ್ಳಲ್ಲ. ತದನಂತರದಲ್ಲಿ ಆಕೆ ತಾನು ಆ್ಯಂಕ್ಸೈಟಿಗಾಗಿ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಳು. ಆತಂಕ ಎಂಬುದು ಸಂಪೂರ್ಣ ನಾರ್ಮಲ್ ವಿಷಯವಾಗಿದ್ದು ಅದರಲ್ಲಿ ಮುಚ್ಚಿಡಲು ಅಥವಾ ಅವಮಾನ ಪಡಲು ಏನೂ ಇಲ್ಲ ಎಂದು ಅನುಷ್ಕಾ ಹೇಳಿ ಎಲ್ಲರ ಮನಸ್ಸನ್ನು ಗೆದ್ದಿದ್ದಳು.
ವರುಣ್ ಧವನ್
ಬಾಲಿವುಡ್‌ನಲ್ಲಿ ಚಿನಕುರಳಿಯಂತಿರುವ ನಟ ವರುಣ್ ಧವನ್‌ನನ್ನು ಕೂಡಾ ಖಿನ್ನತೆ ಬಿಟ್ಟಿರಲಿಲ್ಲವೆಂದರೆ ನಂಬಲು ಕಷ್ಟವೆನಿಸುತ್ತದೆ. ಬದ್ಲಾಪುರ್ ಚಿತ್ರಕ್ಕೆ ಸೈಕೋ ಪಾತ್ರ ಮಾಡಬೇಕಾದಾಗ ಖಿನ್ನತೆಯ ಭೂತ ವರುಣ್‌ನನ್ನು ಆವರಿಸಿತ್ತಂತೆ.
ಆಮಿರ್ ಖಾನ್
ಪರ್ಫೆಕ್ಷನಿಸ್ಟ್ ಎಂದೇ ಕರೆಸಿಕೊಳ್ಳುವ ಆಮಿರ್ ತಾನು ಖಿನ್ನತೆ ವಿರುದ್ಧ ಸೆಣೆಸಾಡಿದ್ದನ್ನು ಹೇಳಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಸತ್ಯಮೇವ ಜಯತೇಯ ಕಡೆ ಎಪಿಸೋಡ್ ಮುಗಿದ ದಿನ ಆತ ಹಾಗೂ ಅವರ ಸಂಪೂರ್ಣ ತಂಡ ಪೋಸ್ಟ್ ಟ್ರಮ್ಯಾಟಿಕ್ ಡಿಸಾರ್ಡರ್‌ಗೆ ಒಳಗಾಗಿತ್ತಂತೆ. ಅದರಿಂದ ಹೊರಬರಲು ಪ್ರತಿಯೊಬ್ಬರೂ ವೈದ್ಯರ ಸಹಾಯ ಪಡೆಯಬೇಕಾಯಿತು. ಸಮಾಜದ ನೋವಿನ ಸತ್ಯಗಳನ್ನು ಬಿಡಿಸಿ ನೋಡುವುದು ಸುಲಭದ ಕೆಲಸವಲ್ಲ. ಅಂಥ ನೋವುಂಡ ಜನರನ್ನೇ ಭೇಟಿಯಾಗುವುದರಿಂದ ಹೃದಯ ಒಡೆದಂತಾಗುತ್ತದೆ ಎಂದಿದ್ದರು ಆಮಿರ್.
ಶಾರುಖ್ ಖಾನ್
ಕಿಂಗ್ ಖಾನ್ಗೆ ಕೂಡಾ ಖಿನ್ನತೆ ತಪ್ಪಲಿಲ್ಲವಂತೆ. 2010ರಲ್ಲಿ ಭುಜದ ಸರ್ಜರಿ ಬಳಿಕ ಶಾರುಖ್, ಈ ನೋವಿನಿಂದಾಗಿ ತಾನು ಖಿನ್ನತೆಗೆ ಜಾರಿದ್ದೆ. ಆದರೆ ಈಗ ಅದರಿಂದ ಹೊರಬಂದು ಸಂತೋಷವಾಗಿದ್ದೇನೆ ಎಂದು ಹೇಳಿದ್ದರು.
ಮನಿಶಾ ಕೊಯಿರಾಲಾ
ತನ್ನ ಕಾಲದಲ್ಲಿ ಭದ್ರವಾಗಿ ಬಾಲಿವುಡ್‌ನಲ್ಲಿ ತಳವೂರಿದ್ದ ನಟಿ ಮನಿಶಾ. ಆದರೆ ಆಕೆಯ ಯಶಸ್ಸಿನ ಕತೆ ಜೊತೆಗೆ ಬದುಕಿನಲ್ಲಿ ಕರಾಳ ಮುಖವೂ ಇದೆ. ಆಕೆ ತನ್ನ ಹಳೆಯ ಪತಿ ಸಾಮ್ರಾಟ್ ದಹಾಲ್ ಕಾರಣದಿಂದಾಗಿ ಕ್ಲಿನಿಕಲ್ ಡಿಪ್ರೆಶನ್‌ಗೆ ಹೋಗಿದ್ದರು. ಅಷ್ಟೇ ಅಲ್ಲ, ಕ್ಯಾನ್ಸರ್ ಕೂಡಾ ಅವರನ್ನು ಕಾಡಿತ್ತು. ಆದರೆ, ಅವರೆಡರ ವಿರುದ್ಧವೂ ಧೈರ್ಯವಾಗಿ ಹೋರಾಡಿ ಗೆದ್ದ ಸಾಧನೆ ಮನಿಶಾಳದ್ದು.