ತೆಳ್ಳಗಿರುವ ಹುಡುಗಿಯ ಕಷ್ಟಸುಖಗಳು; ಬಿ ಹ್ಯಾಪಿ ವಿತ್‌ ವಾಟ್‌ ಯು ಹ್ಯಾವ್‌

By Kannadaprabha NewsFirst Published May 9, 2020, 3:25 PM IST
Highlights

- ನನ್ನನ್ನು ನೋಡಿದವರು ಕ್ಷೇಮ ಸಮಾಚಾರ ಕೇಳುವುದಕ್ಕೂ ಮೊದಲು ಕೇಳುವ ಪ್ರಶ್ನೆಯಿದು. ನಾನು ಅಷ್ಟೂಹಲ್ಲುಗಳನ್ನು ತೋರುವ ಹಾಸ ಬೀರಿ ‘ಇನ್ನೇನು ಹೋಗ್ಬಿಡ್ತೀನಿ’ ಎಂದೋ, ‘ನಿಮ್ಮ ಹಾಗೆ ದಪ್ಪ ಆಗುದಂದ್ರೆಂತ’ ಅಂತಲೋ ವಿಷಮಕ್ಕೆ ತಿರುಗಬಹುದಾದ ಸ್ಥಿತಿಯನ್ನು ತಿಳಿಗೊಳಿಸಿಬಿಡುತ್ತೇನೆ. ಯಾರೇ ಯಾರನ್ನೇ ಭೇಟಿಯಾಗಲಿ ಚಿತ್ತ ಮೊದಲು ಗಮನ ಕೊಡುವುದು ಸೈಜಿನ ಕಡೆಗೆ. 

ವಿಭಾ ಡೋಂಗ್ರೆ

ಈ ಸೈಜಿನಲ್ಲಾದ ವ್ಯತ್ಯಾಸವನ್ನು ಕೆಲವೊಮ್ಮೆ ನಾವು ಕಾಳಜಿಯಿಂದ ಹೇಳುವ ಪ್ರಯತ್ನ ಮಾಡಿದರೂ, ಎಷ್ಟೋ ಬಾರಿ ಎದುರಿನವರಿಗೆ ತೊಂದರೆಯಾಗುವಂತೆ ಅಥವಾ ಯೋಚನೆಗೀಡು ಮಾಡುವಂತೆ ಹೇಳಿಬಿಡುತ್ತೇವೆ. ಹಲವು ವರ್ಷಗಳಿಂದ ಈ ಬಾಡಿ ಶೇಮಿಂಗ್‌ ತತ್ವಕ್ಕೆ ಹೇಳಿಮಾಡಿಸಿದಂತೆ ನನ್ನ ಬಗ್ಗೆ ಕೇಳಿಬಂದ ಇಂಥಾ ಕಾಮೆಂಟ್‌ಗಳು ನನ್ನ ಮನೋಬಲವನ್ನು ಜರ್ಜರಿತಗೊಳಿಸಿರುವುದುಂಟು.

ಕನ್ನಡಿಯನ್ನು ಶತ್ರುವೆಂದ ದಿನಗಳು

ನಿರಂತರವಾಗಿ ಕಿವಿಮೇಲೆ ಬೀಳುತ್ತಿದ್ದ ನನ್ನ ದೇಹದ ಬಗೆಗಿನ ಟೀಕೆಗಳು ನನ್ನನ್ನು ಕನ್ನಡಿಯಿಂದ ಸಂಪೂರ್ಣ ದೂರ ಇಟ್ಟಿದ್ದವು. ಕನ್ನಡಿಯೆದುರು ನಿಂತಾಗಲೆಲ್ಲ ಜಿಜ್ಞಾಸೆ-ನಿರಾಸೆಗಳು ಒಟ್ಟಿಗೇ ಕಾಡುತ್ತಿದ್ದವು. ಕುಟುಂಬದ ಕಾರ್ಯಕ್ರಮಗಳಿರಲಿ, ಕಾಲೇಜಿನ ಎಥ್ನಿಕ್‌ ಡೇ ಇರಲಿ ಮನಸು ತಪ್ಪಿಸಿಕೊಳ್ಳುವ ಬಗ್ಗೆಯೇ ಯೋಚಿಸುತ್ತಿರುತ್ತಿತ್ತು. ಹಲವು ಸಾರಿ ನಾನು ಮಲಗಿ ಏಳುವುದರೊಳಗೆ ದಪ್ಪಗಾಗಿರುವಂತೆ ಕನಸು ಕಂಡು ಎಚ್ಚೆತ್ತು, ಮತ್ತೆ ‘ಅಯ್ಯೋ ನನಸಾಗಿರಬಾರದಿತ್ತೇ’ ಎಂದು ನೊಂದುಕೊಂಡಿದ್ದ ದಿನಗಳೂ ಇವೆ.

ಸುಲಭವಾಗಿ ತೂಕ ಹೆಚ್ಚಿಸಿಕೊಳ್ಳಬೇಕ? ಈ ಆಹಾರಗಳನ್ನು ಸೇವಿಸಿ

ಪುಕ್ಸಟ್ಟೆಸಲಹೆಗಳು

ನಾನು ಗಮನಿಸಿರುವಂತೆ ನನ್ನಂಥವರಿಗೆ ಸಲಹೆ ಕೊಡುವವರಿಗೇನೂ ಕೊರತೆ ಇಲ್ಲ. ಸೂತಕದ ಮನೆಗೆ ಸಾಂತ್ವನ ಹೇಳುವವರಂತೆ ಅವರ ಸಮಾಧಾನದ ಮಾತಿನ ಪಟ್ಟಿಶುರುವಾಗುತ್ತದೆ. ಮೊದಲಿಗೆ ‘ಚೆನ್ನಾಗಿ ತಿನ್ನು, ಊಟ ಮಾಡು’. ದಿನಕ್ಕೆ ನಾಲ್ಕು ಹೊತ್ತು ಆರೋಗ್ಯಕರ, ಮನೆ ಅಡುಗೆ ತಿನ್ನುವ ನನ್ನಂಥವಳಿಗೆ ಇಂಥಾ ಸಲಹೆ ಎದುರಿನವರನ್ನು ಕೊಲ್ಲುವಷ್ಟುರೇಗಿಸುತ್ತದೆ. ನಾನು ‘ಸರಿ’ ಎಂದರೆ ಅಷ್ಟಕ್ಕೇ ಮುಗಿಯುವುದಿಲ್ಲ. ‘ನೀನು ಇನ್ನೊಂದ್‌ ಚೂರ್‌ ದಪ್ಪ ಇದ್ದಿದ್ರೆ ಇನ್ನೂ ಚಂದ ಕಾಣ್ತಿ’ ಎಂದು ನನ್ನ ಚಂದದ ಬಗ್ಗೆ ಕಾಳಜಿ ತೋರಿಸುವವರೂ, ‘ನೀವು ಕೂಡ ಮಾತನಾಡದೇ, ಬಾಯಿ ಮುಚ್ಚಿ ಕೂತರೆ ತುಂಬಾ ಚಂದ ಕಾಣ್ತೀರಿ’ ಅನ್ನುವವರೆಗೆ ಸುಮ್ಮನಾಗುವುದಿಲ್ಲ.

ವಿಕೃತ ಟೀಕೆಗಳು

ಟೀಕೆಗಳು ಎಷ್ಟುವಿಕೃತವೋ, ಅಷ್ಟೇ ಸೃಜನಾತ್ಮಕ. ಗಾಳಿಗೆ ತೂರಿಕೊಂಡ್‌ ಹೋಗ್ತೀಯ, ಕೋಲು, ಕಡ್ಡಿ, ಎರಡು ಊದಿನ ಕಡ್ಡಿ ಜೋಡಿಸಿದಂತೆ, ಒಂದು ಬೆರಳಲ್ಲಿ ಎತ್ತಬಹುದು, ಹ್ಯಾಂಗರ್‌ ಹೀಗೆ ನಮ್ಮನ್ನು ತರಹೇವಾರಿಯಾಗಿ ಗುರುತಿಸುವವರೂ ಇದ್ದಾರೆ.

ಎಷ್ಟೇ ತಿಂದ್ರೂ ಕೆಲವರು ದಪ್ಪವಾಗೋಲ್ಲವೇಕೆ?

ಈ ಸ್ಥಿತಿ ಕಲಿಸಿಕೊಟ್ಟಸತ್ಯ

ನಮ್ಮ ಮೇಲೆ, ನಮ್ಮ ಸುತ್ತಲಿನವರ ಮೇಲೆ ದೈಹಿಕ ಚರ್ಯೆ, ತೋರ್ಪಡಿಕೆಯ ಸೌಂದರ್ಯ ಎಷ್ಟುಗಾಢ ಪರಿಣಾಮ ಬೀರಿದೆಯಲ್ಲವೇ? ದಪ್ಪಗಿರುವವರು ಜಿಮ್‌ಗೆ ಓಡುತ್ತೇವೆ, ತೆಳ್ಳಗಿರುವವರು ಯಾವ್ಯಾವ ಸಪ್ಲಿಮೆಂಟ್‌ ತಿನ್ನುತ್ತೇವೆ, ಬಿಳಿಯಾಗಲು ಕಾಂಪ್ಲೆಕ್ಷನ್‌ ಥೆರಪಿ ಮಾಡಿಸಿಕೊಳ್ಳುತ್ತೇವೆ, ಕೂದಲನ್ನು ಕಿತ್ತು ಅಂಟಿಸಿಕೊಳ್ಳುತ್ತೇವೆ. ದೇಹ ಹುರಿಗೊಳಿಸಿ, ಬಣ್ಣ ತಿಳಿಗೊಳಿಸಿ ನಾವು ಸೌಂದರ್ಯವನ್ನು ವ್ಯಾಪರಕ್ಕಿಟ್ಟಿದ್ದೇವಾ? ನಿಜ ಪ್ರಕೃತಿಯನ್ನು ಮರೆತೆವಾ. ನಮಗೆ ಬೇಕಾಗಿರುವುದು ಬೇರೆಯವರ ಪ್ರೀತಿ. ಅವರ ಬಾಯಲ್ಲಿ ‘ಚಂದ’ ಅನ್ನಿಸಿಕೊಳ್ಳಬೇಕಷ್ಟೆ.

ದೇಹದ ತೂಕ ಹೆಚ್ಚಿಸಿಕೊಳ್ಳ ಬೇಕೇ? ಹಾಗಾದರೆ ಈ ಆಹಾರ ಸೇವಿಸಿ!

ಇಂಥಾ ಅನೇಕ ವಿಚಾರಗಳು ಇಂದಿಗೂ ನನ್ನ ತಲೆಯನ್ನು ಕೆಣಕುತ್ತಿರುತ್ತವೆ. ನಾನು ಒಂದು ಸರಳ ತತ್ವವನ್ನು ಅಳವಡಿಸಿಕೊಂಡಿದ್ದೇನೆ. ‘ನನ್ನನ್ನು ನಾನು ನನ್ನಂತೆ ಒಪ್ಪಿಕೊಳ್ಳದೇ, ಪ್ರೀತಿಸದೇ ಇದ್ದರೇ. ಬೇರೆಯವರು ನನ್ನನ್ನು ಇಷ್ಟಪಡಲಿ ಎಂದು ಆಶಿಸುವುದು ನ್ಯಾಯವಲ್ಲ’. ಈ ಯೋಚನೆ ನಿಜಕ್ಕೂ ನನ್ನನ್ನು ಅತ್ಯಂತ ಸಂತೋಷದಿಂದಿರುವಂತೆ ನೋಡಿಕೊಳ್ಳುತ್ತಿದೆ. ಯಾವುದೇ ಟೀಕೆಗಳು ಈಗ ನನ್ನನ್ನು ಧೃತಿಗೆಡಿಸುವುದಿಲ್ಲ. ‘ಬಿ ಹ್ಯಾಪಿ ವಿತ್‌ ವಾಟ್‌ ಯು ಹ್ಯಾವ್‌’ ಎಂಬ ವಿಲಿಯಮ್‌ ಗ್ಲಾಡ್‌ಸ್ಟರ್‌ನ ಮಾತು ಸರ್ವಥಾ ಅನ್ವಯ ಅಲ್ಲವೇ?

click me!