100 ವರ್ಷಗಳ ಹಿಂದೆಯೂ ಇಂಥದ್ದೇ ಸ್ಥಿತಿ; ಕ್ಷಯಕ್ಕೆ ಬಲಿಯಾದ ಮೈಸೂರು ರಾಜಕುಮಾರಿ

By Suvarna News  |  First Published Apr 12, 2020, 9:56 AM IST

ತಲೆಮಾರುಗಳು ಉರುಳಿದಂತೆ ಜೀವನ ಶೈಲಿ, ಆಹಾರ ಪದ್ಧತಿ ಎಲ್ಲವೂ ಬದಲಾಗಿದೆ. ಅಂತೆಯೇ ಅನ್ನ ಎಂಬುದು ಶ್ರೀಮಂತರ ಆಹಾರವಾಗಿದ್ದ ಕಾಲದಿಂದ ಇಂದಿನ ಪಿಜ್ಜಾ, ಬರ್ಗರ್‌ ದಿನಮಾನದವರೆಗೂ ಒಂದಿಲ್ಲೊಂದು ರೋಗ ಕಾಡಿದೆ.


- ಮಹೇಂದ್ರ ದೇವನೂರು

ಮಾರಣಾಂತಿಕವಾದ ಮಲೇರಿಯಾ, ಕ್ಷಯ, ಪ್ಲೇಗ್‌, ವಾಂತಿ- ಭೇದಿ, ಚಿಕೂನ್‌ಗುನ್ಯಾ, ಡೆಂಘೀ, ಎಚ್‌1ಎನ್‌1, ಹಕ್ಕಿಜ್ವರ, ಹಂದಿಜ್ವರ ಮುಂತಾಗಿ ಸಾಂಕ್ರಾಮಿಕವಾಗಿ ಹರಡಬಲ್ಲ ರೋಗಗಳು ಮನುಷ್ಯನನ್ನು ಕುಗ್ಗುವಂತೆ ಮಾಡಿವೆ. ಆದರೆ ಕೊರೋನಾ ಇದೆಲ್ಲವನ್ನೂ ಮೀರಿ, ಇಡೀ ಜಗತ್ತನ್ನೇ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಮನುಷ್ಯ ಸಂಕುಲವನ್ನೇ ನಾಶಪಡಿಸಬಲ್ಲ ಇಂತಹ ರೋಗ ಹರಡಿದಾಗ ಅವುಗಳ ನಿಯಂತ್ರಣಕ್ಕೆ ಸರ್ಕಾರ ಕೈಗೊಳ್ಳುವ ತೀರ್ಮಾನಗಳು ಸಾರ್ವಜನಿಕರನ್ನು ಇಕ್ಕಟ್ಟಿಗೆ ಸಿಲುಕಿಸುವುದು, ತೊಂದರೆ ಎದುರಾಗುವುದು ಸಹಜ. ಈಗ ಕೊರೋನಾ ಮನೆ ಮುಂದೆ ಬಂದು ನಿಂತಾಗಿದೆ. ಆದರೂ ಸರ್ಕಾರ ನೀಡುತ್ತಿರುವ ಎಚ್ಚರಿಕೆ ಅನೇಕರ ಪಾಲಿಗೆ ಸಂಕೋಲೆಯಾಗಿದೆ. ಈ ತೆರನಾದ ವ್ಯತ್ಯಯಗಳು ಇಂದು, ನಿನ್ನೆಯದಲ್ಲ. ಹಿಂದೆಯೂ ಇತ್ತು ಎಂಬುದಕ್ಕೆ ಉದಾಹರಣೆಗಳಿವೆ.

Tap to resize

Latest Videos

ಮೈಸೂರಿನಲ್ಲಿಂದು ಮತ್ತೆ 5 ಕೊರೋನಾ ಸೋಂಕು ಪ್ರಕರಣಗಳು ಪತ್ತೆ..!

ಸುಮಾರು 1808-09ರ ಆಸುಪಾಸಿನಲ್ಲಿ ಇಡೀ ದೇಶವನ್ನು ತಲ್ಲಣಗೊಳಿಸಿದ್ದು ಪ್ಲೇಗ್‌. ಭಾರತ ಅತ್ಯಂತ ಬಡತನದಲ್ಲಿದ್ದ ಕಾಲ. ಇಡೀ ದೇಶ ಬ್ರಿಟಿಷರ ವಶದಲ್ಲಿತ್ತು. ಆಧುನಿಕತೆಯ ಪರಿಚಯವೇ ಇಲ್ಲದ ದಿನಗಳವು. ಆಗ ಮೈಸೂರು ಸಂಸ್ಥಾನದಲ್ಲಿ ಮಹಾರಾಣಿ ಲಕ್ಷ್ಮಮ್ಮಣ್ಣಿ ಅವರು ಆಡಳಿತ ಉಸ್ತುವಾರಿ ವಹಿಸಿದ್ದರು. ದತ್ತುಪುತ್ರ ಮುಮ್ಮಡಿ ಕಷ್ಣರಾಜ ಒಡೆಯರ್‌ ಆಗಿನ್ನೂ ಬಾಲಕ.

undefined

ಅಂದಿನ ಬ್ರಿಟಿಷ್‌ ಕಮಿಷನರ್‌ ಕಾಲರಾ ನಿವಾರಣೆಗೆ ವ್ಯಾಕ್ಸಿನೇಷನ್‌ ಕೊಡಿಸಲು ಸೂಚಿಸಿದರು. ಅಲ್ಲೊಂದು ಇಲ್ಲೊಂದು ಪಟ್ಟಣಗಳಲ್ಲಿ ತೆರೆಯಲಾದ ಆಸ್ಪತ್ರೆಗಳು, ಶಾಲೆಗಳ ಮೂಲಕ ಪ್ಲೇಗ್‌ ಬಾರದಂತೆ ತಡೆಯಲು ಸಾರ್ವಜನಿಕರೆಲ್ಲರಿಗೂ ವ್ಯಾಕ್ಸಿನೇಷನ್‌ ನೀಡಲು ಬ್ರಿಟಿಷರು ಉದ್ದೇಶಿಸಿದ್ದರು. ಆದರೆ ವ್ಯಾಕ್ಸಿನೇಷನ್‌ ಪಡೆಯಲು ಜನರೇ ಸಿದ್ಧರಿರಲಿಲ್ಲ.

ಕಾರಣ, ಅಷ್ಟೊತ್ತಿಗಾಗಲೇ ಬ್ರಿಟಿಷ್‌ ಆಳ್ವಿಕೆಯ ವಿರುದ್ಧ ಭಾರತದಲ್ಲಿ ಅಸಮಾಧಾನ ಮತ್ತು ಭಯದ ವಾತಾವರಣ ನಿರ್ಮಾಣವಾಗಿತ್ತು. ಬ್ರಿಟಿಷರು ಬಂದಿರುವುದು ನಮ್ಮೆಲ್ಲರ ನಾಶಕ್ಕಾಗಿ ಎಂಬ ಮನೋಭಾವ ಹಳ್ಳಿಗರಲ್ಲಿ ಮಾತ್ರವಲ್ಲದೆ ಅನೇಕ ನಗರವಾಸಿಗಳಲ್ಲಿಯೂ ಇತ್ತು. ಹೀಗಿರುವಾಗ ಅವರು ನೀಡುತ್ತಿರುವ ವ್ಯಾಕ್ಸಿನೇಷನ್‌ ನಮ್ಮನ್ನು ನಾಶಪಡಿಸುತ್ತದೆ ಎಂಬ ಮನೋಭಾವದಿಂದ ಬಹುತೇಕರು ವ್ಯಾಕ್ಸಿನೇಷನ್‌ನಿಂದ ದೂರ ಉಳಿದರು. ಅವರ ಕಣ್ಣೆದುರೇ ಪ್ರತಿನಿತ್ಯ ಅನೇಕರು ಮೃತಪಡುತ್ತಿದ್ದರೂ ತಮ್ಮ ಆರೋಗ್ಯ ರಕ್ಷಣೆಗೆ ಯಾರೂ ಮುಂದಾಗಲಿಲ್ಲ.

ಮೈಸೂರಿನಂತ ಪ್ರಮುಖ ನಗರಗಳಲ್ಲಿನ ಕೆಲವಾರು ಮಂದಿ ವಿದ್ಯಾವಂತರು, ಸ್ಥಿತಿವಂತರು ತಾವಾಗಿಯೇ ಹೋಗಿ ಔಷಧ ಪಡೆದರೆ, ಮಕ್ಕಳಿಗೆ ಶಾಲೆಯಲ್ಲಿಯೇ ಔಷಧ ನೀಡಲಾಗುತ್ತಿತ್ತು. ಸಮೀಪದಲ್ಲಿ ಆಸ್ಪತ್ರೆಗಳಿರದ ಬಡಾವಣೆಯಲ್ಲಿ ಮನೆ ಮನೆಗೆ ಹೋಗಿ ಔಷಧ ನೀಡಲಾಗುತ್ತಿತ್ತು. ಆದರೆ ಶುಚಿತ್ವದ ಕುರಿತಾದ ಅರಿವನ್ನು ಆಗಲೂ ಮೂಡಿಸಲಾಗಿತ್ತು. ಪ್ಲೇಗ್‌ಪೀಡಿತ ಪ್ರದೇಶಗಳಿಗೆ ಮತ್ತು ಅಂದು ಬ್ರಿಟಿಷರು ಆರಂಭಿಸಿದ್ದ ಮಿಷನ್‌ ಆಸ್ಪತ್ರೆ ಕಡೆಗೆ ತೆರಳದಂತೆ ಮಕ್ಕಳಿಗೆ ಪೋಷಕರು ಸೂಚಿಸುತ್ತಿದ್ದರು. ಮೈಸೂರಿನಲ್ಲಿ ಲಕ್ಷ್ಮಮ್ಮಣ್ಣಿ ಅವರೇ ಆಳ್ವಿಕೆ ಇದ್ದ ಕಾರಣ ಬಹುಪಾಲು ಎಲ್ಲರಿಗೂ ಔಷಧ ಲಭ್ಯವಾಗುವಂತೆ ನೋಡಿಕೊಂಡರು.

ಕೋಟೆಯೊಳಗೆ ಟೌನ್‌ಶಿಪ್‌ ನಿರ್ಮಾಣ

ಟಿಪ್ಪು ಮರಣಾನಂತರ ಸೆರೆಯಿಂದ ಬಿಡುಗಡೆಯಾದ ಲಕ್ಷ್ಮಮ್ಮಣ್ಣಿ ಅವರು, ಬಾಲಕ ಮುಮ್ಮಡಿ ಕೃಷ್ಣರಾಜ ಒಡೆಯರ್‌ಗೆ ಪಟ್ಟಕಟ್ಟಿದ ಕೆಲವು ವರ್ಷಗಳ ನಂತರ ಪ್ಲೇಗ್‌ ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಇಡೀ ಸಂಸ್ಥಾನದ ಜವಾಬ್ದಾರಿ ಲಕ್ಷ್ಮಮ್ಮಣ್ಣಿ ಅವರ ಮೇಲೆಯೇ ಇತ್ತು. ಆಡಳಿತದ ಹಿತದೃಷ್ಟಿಯಿಂದ ಕೋಟೆಯ ಒಳಗೇ ಪ್ರತ್ಯೇಕ ಟೌನ್‌ಶಿಪ್‌ ನಿರ್ಮಿಸಿದರು.

ಈ ಟೌನ್‌ಶಿಪ್‌ನಲ್ಲಿ ಅರಮನೆ ಕುಟುಂಬದವರು, ಪ್ರಮುಖ ಮಂತ್ರಿಗಳು, ದಿವಾನರು, ಸೇವಕರು, ಪಂಡಿತರು, ವಿದ್ವಾಂಸರು ಹಾಗೂ ಆಡಳಿತ ವಿಭಾಗದ ಪ್ರಮುಖರಿಗೆ ತಾತ್ಕಾಲಿಕವಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಜೀವನಕ್ಕೆ ಅಗತ್ಯವಿರುವ ದಿನಸಿ, ತರಕಾರಿ, ಸೊಪ್ಪಿನ ಅಂಗಡಿ, ಹಾಲು, ಚಿನಿವಾರಪೇಟೆ ಮುಂತಾದ ಅಂಗಡಿಗಳಿಗೂ ಅವಕಾಶವಿತ್ತು. ಆ ಮೂಲಕ ಅರಮನೆಗೆ ಸಂಬಂಧಿಸಿದ ಪರಿವಾರದವರು ಹೊರಗಿನವರ ಜೊತೆ ಹೆಚ್ಚು ಸಂಪರ್ಕ ಇರದಂತೆ ನೋಡಿಕೊಳ್ಳಲಾಗಿತ್ತು. ಹೊರಗಿನವರ ಆರೋಗ್ಯದ ಹಿತದೃಷ್ಟಿಯಿಂದ ವ್ಯಾಕ್ಸಿನೇಶನ್‌ ಹಾಕಿಸಲಾಗಿತ್ತು.

ಇಂತದ್ದೇ ಪರಿಸ್ಥಿತಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವಧಿಯಲ್ಲಿಯೂ ನಿರ್ಮಾಣವಾಯಿತು. ಆ ಸಂದರ್ಭದಲ್ಲಿ ಜನರನ್ನು ಹೆಚ್ಚು ಕಾಡಿದ್ದು ಕ್ಷಯ. ಆ ಸಂದರ್ಭದಲ್ಲಿ ಕ್ಷಯ ರೋಗಕ್ಕೆ ಮದ್ದಿರಲಿಲ್ಲ. ರಾಜಮನೆತನದಲ್ಲೂ ರಾಜಕುಮಾರಿ ಕೃಷ್ಣಾಜಮ್ಮಣ್ಣಿ 1904 ನವೆಂಬರ್‌ 22 ರಂದು ಸಾವಿಗೀಡಾದರು. ಅವರಿಗೆ ಆಗ ಕೇವಲ 21 ವರ್ಷ. ಅವರ ಮೂವರು ಪುತ್ರಿಯರು ಕೂಡ ಕ್ಷಯ ರೋಗಕ್ಕೆ ಬಲಿಯಾದರು.

ಪ್ರಾಣಿ ಕೊಂಬುಗಳ ಅಕ್ರಮ ದಾಸ್ತಾನು ಮಳಿಗೆಗೆ ದಾಳಿ..!

ಇದು ರಾಜಮಾತೆ ಮತ್ತು ನಾಲ್ವಡಿ ಅವರಿಗೆ ಸಹಿಸಲಾಗದ ಹೊಡೆತ ನೀಡಿತು. ಜೊತೆಗೆ ಅರಮನೆಯ ಕಥೆಯೇ ಹೀಗಾದರೆ ಪ್ರಜೆಗಳ ಪಾಡೇನು? ಎಂದು ಚಿಂತಿಸಿ, 1918ರಲ್ಲಿ ರಾಜಕುಮಾರಿ ಕೃಷ್ಣಾಜಮ್ಮಣ್ಣಿ ಕ್ಷಯರೋಗ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದರು. ಕೃಷ್ಣಾಜಮ್ಮಣ್ಣಿ ಅವರ ಆಸ್ತಿಯಿಂದ ರೋಗಿಗಳ ಚಿಕಿತ್ಸೆಗೆ 75 ಸಾವಿರ ರೂ. ನೀಡಿದರು. ಮೈಸೂರು ರಾಜ್ಯದ ಅಭಿವೃದ್ಧಿಗೆ ಮತ್ತು ಆಧುನಿಕ ಭಾರತ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದ ನಾಲ್ವಡಿ ಅವರು, 1921ರ ನವೆಂಬರ್‌ 18 ರಂದು ಈ ಆಸ್ಪತ್ರೆಯನ್ನು ಉದ್ಘಾಟಿಸಿದರು. ಈಗ ಈ ಆಸ್ಪತ್ರೆಯನ್ನು ಪಿ.ಕೆ. ಸ್ಯಾನಿಟೋರಿಯಂ (ಪ್ರಿನ್ಸಸ್‌ ಕೃಷ್ಣಾಜಮ್ಮಣ್ಣಿ ಆಸ್ಪತ್ರೆ) ಆಸ್ಪತ್ರೆ ಎಂದು ಕರೆಯಲಾಗುತ್ತದೆ.

ಕ್ಷಯ ರೋಗ ಸಂದರ್ಭದಲ್ಲಿಯೂ ತಾತ್ಕಾಲಿಕವಾಗಿ ಟೌನ್‌ಶಿಪ್‌ ನಿರ್ಮಿಸಲಾಗಿತ್ತು. ಸೊಳ್ಳೆಗಳ ನಿಯಂತ್ರಣಕ್ಕೆ ಅರಮನೆ ಮುಂದಿನ ದೊಡ್ಡಕೆರೆಯಲ್ಲಿನ ನೀರನ್ನು ನಂಜನಗೂಡು ರಸ್ತೆಯ ದಳವಾಯಿ ಕೆರೆಗೆ ಹರಿಸಿದ್ದರು.

ಆಗ ದೇಶ ವೈದ್ಯಕೀಯವಾಗಿ ಮುಂದುವರೆಯದಿದ್ದರೂ ಒಂದಷ್ಟುಸಾವು ನೋವು ಕಾಣಬೇಕಾಯಿತು. ಈಗ ಕೊರೋನಾ ಅದೇ ಪರಿಸ್ಥಿತಿ ತಂದೊಡ್ಡಿದೆ. ಇಡೀ ದೇಶದ ಜನ ಮನೆಯಿಂದ ಹೊರ ಬರಲಾಗದೆ ಕ್ವಾರಂಟೈನ್‌ಗಳನ್ನಾಗಿ ಮಾರ್ಪಡಿಸಿದೆ. ದೇಶ ತಾಂತ್ರಿಕವಾಗಿ, ವೈದ್ಯಕೀಯವಾಗಿ ಎಷ್ಟೇ ಮುಂದುವರೆದಿದ್ದರೂ, ಪ್ರಕೃತಿ ತಂದೊಡ್ಡುವ ಸವಾಲಿನ ಮುಂದೆ ನಾವು ಮುದುಡಿ ಹೋಗಿದ್ದೇವೆ.

click me!