ಇಂಥ ಫೋಬಿಯಾಗಳೆಲ್ಲ ಇದೆ ಅಂದ್ರೆ ನೀವು ನಂಬೋಲ್ಲ, ಆದ್ರೆ ಇದು ನಿಮಗೂ ಇರಬಹುದು!

By Web DeskFirst Published Nov 13, 2019, 12:38 PM IST
Highlights

ಒಂದಿಲ್ಲೊಂದು ವಿಷಯಕ್ಕೆ ಭಯ ಎಲ್ಲರಿಗೂ ಇರುತ್ತದೆ. ಈ ಭಯವೆಲ್ಲ ಫೋಬಿಯಾವಲ್ಲ. ಆದರೆ, ಯಾವಾಗ ಈ ಭಯ ದೈನಂದಿನ ಚಟುವಟಿಕೆಗಳಿಗೆ ಅಡ್ಡಿ ಪಡಿಸುವಷ್ಟು ಹೆಚ್ಚಾಗುತ್ತದೋ ಆಗ ಅದು ಫೋಬಿಯಾ ಎನಿಸಿಕೊಳ್ಳುತ್ತದೆ. ಇಲ್ಲಿ ನೀಡಿರುವ ಚಿತ್ರವಿಚಿತ್ರ ಫೋಬಿಯಾಗಳ ಒಂದಂಶ ನಿಮ್ಮಲ್ಲೂ ಇರಬಹುದು. ಆದರೆ, ಅದು ಫೋಬಿಯಾ ಮಟ್ಟಕ್ಕಿದ್ದರೆ ಮಾತ್ರ ವೈದ್ಯರನ್ನು ಕಾಣಲೇಬೇಕು. 

ಮುಚ್ಚಿದ ಕೋಣೆಯೊಳಗಿರುವ ಭಯ- ಕ್ಲಾಸ್ಟ್ರೋಫೋಬಿಯಾ ಬಗ್ಗೆ ನೀವು ಕೇಳಿರಬಹುದು. ನಿಮ್ಮ ಸುತ್ತಮುತ್ತಲೇ ಯಾರಾದರೂ ಹಾಗೆ ಭಯಪಡುವವರನ್ನು ನೋಡಿರಬಹುದು. ಇನ್ನು ಎತ್ತರದ ಸ್ಥಳಗಳ ಭಯ ಆಕ್ರೋಫೋಬಿಯಾ ಕೂಡಾ ಕಾಮನ್. ನೆಲ ಬಿಟ್ಟು ಎತ್ತರದಲ್ಲಿ ನಿಂತರೆ ಸಾಕು ಎದೆಬಡಿತ ಹಕ್ಕಿಯ ರೆಕ್ಕೆಯಂತೆ ಪಟಪಟನೆ ಬಡಿದುಕೊಳ್ಳುತ್ತದೆ. ಇದು ನಿಮಗೇ ಇದ್ದರೂ ಆಶ್ಚರ್ಯವಿಲ್ಲ.

ಸ್ಟ್ರೋಕ್ ಯಾವ ಕ್ಷಣದಲ್ಲಿ ಯಾರಿಗೆ ಆಗ ಬಹುದು?

ಹೋಮೋಸೆಕ್ಷುಯಲ್ ಜನರನ್ನು ಕಂಡರಾಗುವುದಿಲ್ಲ ಎನ್ನುವ ಹೋಮೋಫೋಬಿಯಾ ಕೂಡಾ ನಮ್ಮ ದೇಶದಲ್ಲಿ ಬಹುತೇಕರಿಗಿದೆ. ಆದರೆ, ಹೊಕ್ಕುಳೆಂದರೆ ಭಯ ಪಡುವವರನ್ನು ನೋಡಿದ್ದೀರಾ? ಬಾಯಲ್ಲಿ ನೀರೂರಿಸುವ ಚೀಸ್ ನೋಡಿದರೆ ಚೀರಿಕೊಳ್ಳುವವರನ್ನು ಕಂಡಿದ್ದೀರಾ? ಬೆಳ್ಳುಳ್ಳಿ ಹತ್ತಿರವಿದ್ದರೆ ಉಸಿರಾಟವೇ ಏರುಪೇರಾಗುವಂಥ ಭಯ, ನಕ್ಷತ್ರಗಳೆಂದರೆ ಭೀತಿ... ಇಂಥ ಭಯಗಳೂ ಇವೆ ಸ್ವಾಮಿ. ಇದಿಷ್ಟೇ ಅಲ್ಲ, ವಿಚಿತ್ರ ಎನಿಸುವ, ಸಿಲ್ಲಿ ಎನಿಸುವ ಇಂಥ ಹಲವಾರು ಫೋಬಿಯಾಗಳಿಂದ ಕೆಲವರು ನರಳುತ್ತಾರೆಂದರೆ ಆಶ್ಚರ್ಯವಾಗದಿರದು. ಇಷ್ಟಕ್ಕೂ ಯಾವುದಾದರೂ ಫೋಬಿಯಾ ನನಗಿರಬಹುದು ಎಂಬ ವಿಚಿತ್ರ ಸಂಕಟ, ಭಯದಿಂದ ಒದ್ದಾಡುವುದೂ ಒಂದು ಫೋಬಿಯಾವೇ. ಇದು ಫೋಬೋಫೋಬಿಯಾ.  

ಸಿಯಾಫೋಬಿಯಾ

'ಸಿಯೋ' ಎಂದರೆ ಗ್ರೀಕ್ ಭಾಷೆಯಲ್ಲಿ ನೆರಳು ಎಂದರ್ಥ. ಈ ಫೋಬಿಯಾ ಕೂಡಾ ನೆರಳಿನ ಕುರಿತ ಭೀತಿಯೇ ಆಗಿದೆ. ಪುಟ್ಟ ಪುಟ್ಟ ಮಕ್ಕಳೇ ನೆರಳಿನೊಂದಿಗೆ ಆಟವಾಡುತ್ತಾರೆ. ಅಂಥದರಲ್ಲಿ ನೆರಳನ್ನು ನೋಡಿ ಭಯ ಬೀಳುವವರಿದ್ದಾರಾ ಎನಿಸದಿರದು.

ಕುಡಿಬೇಡಿ, ಸೇದ್ಬೇಡಿ: ಆರೋಗ್ಯದ ವಿಷಯದಲ್ಲಿ @40ಕ್ಕೆ ಯಾಮಾರಬೇಡಿ!

ಟುರೋಫೋಬಿಯಾ

ತಮಾಷೆ ಎನಿಸಬಹುದು. ಪೊಟ್ಯಾಟೋ ಟ್ವಿಸ್ಟರ್ ಮೇಲೆ ಕುಳಿತು ಬರ ಸೆಳೆವ, ಪಿಜ್ಜಾ ಮೇಲಿಂದ ಇಳಿಯುತ್ತಾ ನಾಲಿಗೆಯನ್ನು ನೆಕ್ಕುವಂತೆ ಮಾಡುವ, ಸ್ಯಾಂಡ್‌ವಿಚ್‌ಗೆ ರಸಸ್ವಾದ ನೀಡುವ ಈ ಚೀಸ್ ಎಂದರೆ ಕೂಡಾ ಭಯ ಪಡುವವರಿದ್ದಾರೆ. ಈ ಚೀಸ್ ಕುರಿತ ಭಯಕ್ಕೇ ಟುರೋಫೋಬಿಯಾ ಎನ್ನುವುದು. 

ಐಕ್ಮೋಫೋಬಿಯಾ 

ಪಿನ್ನಿನಲ್ಲೋ, ಸೂಜಿಯಲ್ಲೋ ಚುಚ್ಚುತ್ತಾರೆಂದರೆ ಭಯವಾಗುತ್ತದೆ ನಿಜ. ಆದರೆ, ಯಾವುದೇ ಚೂಪಾಗಿರುವ ವಸ್ತು ನೋಡಿದರೂ, ಅಕಸ್ಮಾತ್ ಇದೀಗ ಚುಚ್ಚಿಬಿಟ್ಟರೆ, ಗಾಯ ಮಾಡಿದರೆ ಎಂದು ಅನವಶ್ಯಕ ಅತಿಯಾಗಿ ಹೆದರುತ್ತಾ ಕೂರುವುದೇ ಐಕ್ಮೋಫೋಬಿಯಾ.

ಊಂಫಾಲೋಫೋಬಿಯಾ

ಇದು ಹೊಕ್ಕುಳ ಭಯ, ಅಲ್ಲಲ್ಲ, ಹೊಕ್ಕುಳನ್ನು ಯಾರಾದರೂ ಮುಟ್ಟಿ ಬಿಟ್ಟರೆ ಎಂಭ ಭೀತಿ. 

ಉರಿ, ಕೆಂಪು ಗುಳ್ಳೆ, ತುರಿಕೆಯುಳ್ಳ ಚರ್ಮ ಸಮಸ್ಯೆ ಇದ್ರೆ ಈ ಆಹಾರ ಬೇಡ

ಸೋಮ್ನಿಫೋಬಿಯಾ

ನಿದ್ದೆ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ನಿದ್ರೆಗಾಗಿ ಪ್ರತಿಯೊಬ್ಬರೂ ಹಂಬಲಿಸುತ್ತೀವಿ. ಎಷ್ಟೇ ನಿದ್ರಿಸಿದರೂ ಇನ್ನು ಅರ್ಧ ಗಂಟೆ ಮಲಗೋಣ ಎನಿಸುತ್ತಲೇ ಇರುತ್ತದೆ. ಆದರೆ, ಕೆಲವರಿರುತ್ತಾರೆ ಅವರಿಗೆ ನಿದ್ರೆಯೆಂದರೇ ಭಯವಂತೆ. ಅಬ್ಬಾ, ಹೀಗೂ ಉಂಟಾ ಅನ್ಬೋದು ನೀವು. ಆದರೆ ಪದೇ ಪದೆ ಕೆಟ್ಟ ಕನಸುಗಳು ಬಿದ್ದು, ಆತಂಕವಾಗಿ ನಿದ್ರೆ ಎಂದರೇ ಹೆದರಿ ಹಾರುವಷ್ಟು ಭೀತಿ ಇವರನ್ನಾವರಿಸಿರುತ್ತದೆ. 

ಪೋಗೋನೋಫೋಬಿಯಾ

ಈ ಭಯ ಇರುವವರು ಕೆಜಿಎಫ್ ಚಿತ್ರ ನೋಡಿದರೆ ಹಾರರ್ ಮೂವಿ ನೋಡಿದ್ದಕ್ಕಿಂತ ಹೆಚ್ಚಾಗಿ ಹೆದರಿ ಚೀರಬಹುದು. ಏಕೆಂದರೆ ಪೋಗೋನೋಫೋಬಿಯಾ ಎಂದರೆ ಗಡ್ಡದ ಕುರಿತ ಭಯ!  ಒಬ್ಬರಿಗಿಂತ ಒಬ್ಬರು ದೊಡ್ಡ ಗಡ್ಡ ಬಿಟ್ಟು ಅದರದೇ ಸ್ಪರ್ಧೆಗೆ ಬಿದ್ದಂತಿರುವ ಕೆಜಿಎಫ್ ಖಂಡಿತಾ ಇವರಲ್ಲಿ ಭಯ ಹುಟ್ಟಿಸುತ್ತದೆ. ಅಂದ ಹಾಗೆ 'ಪೊಗೋನ್' ಎಂದರೆ ಗ್ರೀಕ್‌ನಲ್ಲಿ ಗಡ್ಡ ಎಂದರ್ಥ. 

ಫಿಲೋಫೋಬಿಯಾ

ಲವ್ವಲ್ಲಿ ಬೀಳೋಕೆ ಸಾಯೋರು ಒಂದು ಗುಂಪಾದ್ರೆ ಲವ್ವಲ್ಲಿ ಬೀಳೋಕೆ ಹೆದರೋರು ಮತ್ತೆ ಕೆಲವರು. ಅಪ್ಪಅಮ್ಮ ಬೈತಾರೆಂದೋ, ಮದುವೆಗೆ ಒಪ್ಪೋಲ್ಲವೆಂದೋ ಯಾವುದೋ ಕಾರಣಕ್ಕೆ ಲವ್ವಲ್ಲಿ ಬೀಳೋಕೆ ಹೆದರೋದು ಓಕೆ. ಆದರೆ ಕಾರಣವೇ ಇಲ್ಲದೆ ಲವ್ವಲ್ಲಿ ಬೀಳೋಕೆ ಸುಮ್‌ಸುಮ್ನೆ ಹೆದರೋರಿಗಿರೋ ಕಾಯಿಲೆನೇ ಫಿಲೋಫೋಬಿಯಾ.

ಗೆರೊಂಟೋಫೋಬಿಯಾ 

ಇದು ಬಹುತೇಕ ನಮಗೆಲ್ಲರಿಗೋ ಇರುವ ಫೋಬಿಯಾವೇ. ಆದರೆ ಕೆಲವರಲ್ಲಿ ಮಾನಸಿಕ ಕಾಯಿಲೆಯಾಗುವ ಮಟ್ಟಿಗೆ ಹೆಚ್ಚಾಗಿರುತ್ತದೆ ಅಷ್ಟೇ. ಏನಪ್ಪಾ ಈ ಫೋಬಿಯಾ ಎಂದಿರಾ? ಇದು ವಯಸ್ಸಾಗುವ ಭಯ, ವಯಸ್ಸಾಗುವ ಕುರಿತ ತಿರಸ್ಕಾರ, ಅಯ್ಯೋ ಆಂಟಿ, ಅಜ್ಜಿ ಎನ್ನುತ್ತಾರಲ್ಲ ಎಂಬ ಹಿಂಸೆ... ಹೌದು, ವಯಸ್ಸಾಗುತ್ತದೆ ಎಂದೇ ಹೆದರಿ ಕುಳಿತುಕೊಳ್ಳುವ ಈ ಭೀತಿಗೆ ಗೆರೆಂಟೋಫೋಬಿಯಾ ಎಂದು ಹೆಸರು.

ಕ್ಯಾಲಿಗೈನ್‌ಫೋಬಿಯಾ

ಸುಂದರವಾದ ಯುವತಿಯರೆಂದರೆ ಎಲ್ಲರೂ ಬಾಯ್ಬಾಯ್ ಬಿಡುವವರೇ. ಅಂಥವರು ತಮ್ಮತ್ತ ಒಂದು ದೃಷ್ಟಿ ಹರಿಸಿದರೆ ಸಾಕು, ಅವರು ಒಂದು ಸ್ಮೈಲ್ ಕೊಟ್ಟರೆ ಸಾಕು, ಕೈಕುಲುಕಿದರೆ ಈ ಜನ್ಮ ಪಾವನ ಎಂದೆಲ್ಲ ನಂಬಿ ಕಾಯುವವರು ಪುರುಷ ಜಾತಿಯಲ್ಲಿ ಮೆಜಾರಿಟಿ. ಆದರೆ, ಇನ್ನೊಂದು ಮೈನಾರಿಟಿ ಇದೆ, ಈ ಪುರುಷರು ಸಿಕ್ಕಾಪಟ್ಟೆ ಸುಂದರವಾಗಿರುವ ಮಹಿಳೆ ಎಂದರೆ ಸಾಕು ಹೆದರಿ ನಡುಗುತ್ತಾರಂತೆ. ಇದಕ್ಕೇ ಕ್ಯಾಲಿ‌ಗೈನ್‌ಫೋಬಿಯಾ ಎನ್ನುವುದು. ಆದರೆ, ಕೇವಲ ಪುರುಷರಷ್ಟೇ ಅಳ್ಲ, ಕೆಲ ಮಹಿಳೆಯರಿಗೆ ಕೂಡಾ ಈ ಕಾಯಿಲೆ ಇರುತ್ತದೆ ಎಂಬುದು ವಿಪರ್ಯಾಸ. 

ನೋಮೋಫೋಬಿಯಾ

ಫೋನ್ ಒಂದು ಕ್ಷಣ ಕಣ್ಣೆದುರು ಇಲ್ಲವೆಂದರೆ ಟೆನ್ಷನ್ ಆಗುತ್ತಾ? ಹೌದಾದಲ್ಲಿ ಬಹುಷಃ ನೀವು ನೋಮೋಫೋಬಿಯಾದಿಂದ ಬಳಲುತ್ತಿರಬಹುದು. ಮೊಬೈಲ್ ಫೋನ್ ಕಾಂಟ್ಯಾಕ್ಟ್ ತಪ್ಪುವ ಭೀತಿ ಅತಿರೇಖವಾಗಿದ್ದಲ್ಲಿ ಅದು ನೋಮೋಫೋಬಿಯಾವೇ ಅಗಿರುತ್ತದೆ. 

click me!