ನಿಮಗೆ ತಿಳಿಯದಿರಬಹುದು, ನಿಜವಲ್ಲ ಎನಿಸಬಹುದು. ಆದರೂ ಸುಕುಮಾರಿ, ಏಳು ಮಲ್ಲಿಗೆ ತೂಕದ ರಾಜಕುಮಾರಿ, ಸುರಸುಂದರಿ ಎಂದುಕೊಂಡವರೂ ಇದನ್ನು ಹೊರ ಬಿಡುತ್ತಾರೆ. ಹೌದು, ಪ್ರತಿಯೊಬ್ಬರೂ ಗ್ಯಾಸ್ ಬಿಡುಗಡೆ ಮಾಡುತ್ತಲೇ ಇರುತ್ತಾರೆ.
ಡರಂ ಪುರಂ ಭಯಂ ನಾಸ್ತಿ, ಪಿಯ ಪಿಯಂಚ ಮಧ್ಯಮಃ, ಪಿಸಾಕಾರಂ ಮಹಾಘೋರಂ, ನಿಶಬ್ಧಂ ಪ್ರಾಣಸಂಕಟಂ...
ಇದೇನು ಶ್ಲೋಕವಲ್ಲ ಸ್ವಾಮಿ, ಶಬ್ದದ ಆಧಾರದ ಮೇಲೆ ಅಪಾನವಾಯುವಿನ ವಾಸನೆ ಮಟ್ಟ ಹೇಳುವ ಒಂದು ಹಾಸ್ಯವಾಕ್ಯವಷ್ಟೇ. ಅಧೋವಾಯು, ಹೂಸು ಏನೇ ಹೇಳಿ, ಇದನ್ನು ಬಿಡದವರು ಜಗತ್ತಿನಲ್ಲೇ ಇರಲಿಕ್ಕಿಲ್ಲ, ಅಪಾನವಾಯುವಿನ ಕುರಿತ ಕೆಲ ಆಸಕ್ತಿಕರ ಸಂಗತಿಗಳು ಇಲ್ಲಿವೆ.
ಸೆಕ್ಸೀ ಫಾರ್ಟ್
ಐರಿಶ್ ಕಾದಂಬರಿಕಾರ ಜೇಮ್ಸ್ ಜಾಯ್ಸ್ ಎಂಬಾತನ ಪ್ರಕಾರ ಹೂಸು ಬಹಳ ಸೆಕ್ಸೀಯಂತೆ. ಆತ ತನ್ನ ಪ್ರೇಯಸಿ ಬಿಡುವ ಹೂಸನ್ನು ಎಲ್ಲಿಂದ ಬೇಕಾದರೂ ಗುರುತಿಸಬಲ್ಲೆ. ಹೀಗೆ ಕೋಣೆಯ ತುಂಬಾ ಹೆಂಗಸರನ್ನು ನಿಲ್ಲಿಸಿ ಎಲ್ಲರೂ ಅಪಾನವಾಯು ಹೊರ ಹಾಕಿದರೂ, ಅದರಲ್ಲಿ ತನ್ನ ಪ್ರೇಯಸಿ ಬಿಡುವ ಹೂಸನ್ನು ಗುರುತಿಸಬಲ್ಲೆ ಎಂದಾತ ಹೇಳಿಕೊಳ್ಳುತ್ತಿದ್ದ!
ಈತನಷ್ಟೇ ಅಲ್ಲ, 22 ವರ್ಷದ ವ್ಯಕ್ತಿಯೊಬ್ಬ ಹೂಸಿನ ಶಬ್ದ ಹಾಗೂ ವಾಸನೆಗೆ ಲೈಂಗಿಕವಾಗಿ ಉದ್ವೇಗಗೊಳ್ಳುತ್ತಿದ್ದ ಬಗ್ಗೆ 2013ರಲ್ಲಿ ಆರ್ಕೈವ್ಸ್ ಆಫ್ ಸೆಕ್ಷುಯಲ್ ಬಿಯೇವಿಯರ್‌ನ ಪೇಪರ್‌ನಲ್ಲಿ ಪಬ್ಲಿಶ್ ಆಗಿದೆ. ಈ ವರ್ತನೆಗೆ ಎಪ್ರೋಕ್ಟೋಫಿಲಿಯ ಎಂದು ಹೆಸರು.
ಇನ್ನು ಅಮೆರಿಕದ 38ನೇ ಅಧ್ಯಕ್ಷರಾಗಿದ್ದ ಗೆರಾಲ್ಡ್ ಫೋರ್ಡ್, ತಾವು ಬಿಟ್ಟ ವಾಸನೆಯ ಗ್ಯಾಸಿನ ಹೊಣೆಯನ್ನು ಸೀಕ್ರೆಟ್ ಸರ್ವೀಸ್ ಏಜೆಂಟ್ ಮೇಲೆ ಹಾಕುತ್ತಿದ್ದರಂತೆ! ಜೀಸಸ್, ನೀನಾ ಬಿಟ್ಟಿದ್ದು, ಸ್ವಲ್ಪ ಮೇಲ್ದರ್ಜೆಯವನಂತೆ ವರ್ತಿಸು ಎಂದು ಆತನಿಗೆ ಹೇಳುತ್ತಿದ್ದರಂತೆ.
ಅಧ್ಯಯನಗಳು
2011ರ ಅಧ್ಯಯನವೊಂದರ ಪ್ರಕಾರ, ಜನರು ಕಾಳುಕಡಿಗಳನ್ನು ಹೆಚ್ಚಾಗಿ ತಿಂದರೆ ಹೆಚ್ಚು ಗ್ಯಾಸ್ ಬಿಡುವುದಿಲ್ಲವಂತೆ. ಇದ್ದಕ್ಕಿದ್ದಂತೆ ಕಾಳುಕಡಿ ತಿನ್ನುವುದು ಹೆಚ್ಚಿಸಿದಾಗ ಕೆಲವರಲ್ಲಿ ಗ್ಯಾಸ್ ಉತ್ಪತ್ತಿ ಹೆಚ್ಚಬಹುದು. ಆದರೆ, ಸ್ವಲ್ಪ ದಿನಗಳಲ್ಲಿ ದೇಹ ಅಡ್ಜಸ್ಟ್ ಆದಂತೆ ಅದು ಕಡಿಮೆಯಾಗುತ್ತದೆ ಎಂದಿದೆ.
1996ರಲ್ಲಿ ಸೈಕೋಅನಲಿಸ್ಟ್ ಒಬ್ಬರು ಹುಡುಗನೊಬ್ಬನ ಕೇಸ್ ಸ್ಟಡಿ ಪಬ್ಲಿಶ್ ಮಾಡಿದ್ದರು. ಆತ ಪೋಷಕರಿಂದ ಕಡೆಗಣನೆಗೊಳಗಾಗಿ ಕಡೆಗೆ ಅನಾಥವಾಗಿದ್ದ. ಹೀಗಾಗಿ ಜಗತ್ತಿನ ವಿರುದ್ಧವೇ ಸಿಟ್ಟಿಗೆದ್ದಿದ್ದ ಆತ ಅದನ್ನು ವ್ಯಕ್ತಪಡಿಸಲು ಹಾಗೂ ತನ್ನ ಅಸ್ಥಿತ್ವವನ್ನು ಫೀಲ್ ಮಾಡಲು ತನ್ನ ದೇಹದ ವಾಸನೆ ಹಾಗೂ ಹೂಸಿನ ವಾಸನೆಯಿಂದ ತುಂಬಿದ ಬಾಟಲೊಂದನ್ನು ತಯಾರಿಸಿದ್ದ. ಇದನ್ನೇ ಡಿಫೆನ್ಸಿವ್ ಫ್ಲ್ಯಾಟುಲೆನ್ಸ್ ಎನ್ನುವುದು.
ಮನೋರೋಗ
33 ವರ್ಷದ ಮಹಿಳೆಯೊಬ್ಬರು ಸದಾ ಕಾಲ ಹೂಸಿನ ಬಗ್ಗೆಯೇ ಯೋಚಿಸುತ್ತಿದ್ದ ಮನೋಕಾಯಿಲೆಗೀಡಾಗಿದ್ದರಂತೆ. ಅವರಿಗೆ ನೀಡಿದ ಚಿಕಿತ್ಸೆ ಏನು ಗೊತ್ತಾ? ಒಂದಿಡೀ ವರ್ಷ ಸಾಧ್ಯವಾದಷ್ಟು ಜೋರಾಗಿ ಹೂಸು ಬಿಡುತ್ತಿರಕಬೇಕೆಂಬುದು. ಈ ವರ್ತನೆಯಿಂದ ಅವರಿಗೆ ಹೂಸಿನ ಯೋಚನೆಯಿಂದ ಬಿಡುಗಡೆ ಸಿಕ್ಕಿತಂತೆ.
ಹೂಸು ಕಡಿಮೆ ಮಾಡುವ ತಿಂಡಿ
2001ರಲ್ಲಿ ಮಸೂದ್ ಕಝೆಮ್ಝಾದೇ ಎಂಬ ಫುಡ್ ಎಂಜಿನಿಯರ್ ಒಬ್ಬ ಹೂಸು ಕಡಿಮೆ ಮಾಡುವ ಬೇಳೆಕಾಳುಗಳ ತಿಂಡಿಗೆ ಪೇಟೆಂಟ್ ಪಡೆದ. ಸ್ನ್ಯಾಕ್ಸ್‌ನಲ್ಲಿ ಬೇಳೆಯಿಂದ ಸಿಗುವಷ್ಟೇ ಪೋಷಕಸತ್ವಗಳು ಸಿಗುವಂತೆ ಮಾಡುವುದು ಆದರೆ ಗ್ಯಾಸ್ ಆಗದಂತೆ ನೋಡಿಕೊಳ್ಳುವಂತೆ ಮಾಡಲಾಗಿದೆ ಎಂದಿದ್ದ. ಆದರೆ, ಬೇಳೆಕಾಳುಗಳನ್ನು ದಿನಾ ತಿನ್ನುವುದರಿಂದ ಕ್ರಮೇಣ ಅದು ಗ್ಯಾಸ್ ಆಗುವುದು ಕಡಿಮೆ ಆಗುತ್ತದೆ ಎಂಬುದು ಈಗಾಗಲೇ ತಿಳಿದಿರುವುದರಿಂದ ಈ ಸ್ನ್ಯಾಕ್ಸ್‌ನ ಅಗತ್ಯವಿಲ್ಲ ಬಿಡಿ.
ಚಾಕೋಲೇಟ್ ಪರಿಮಳದ ಹೂಸು!
230 ವರ್ಷಗಳ ಹಿಂದೆ ಬೆಂಜಮಿನ್ ಫ್ರ್ಯಾಂಕ್ಲಿನ್ ಹಾಕಿದ್ದ ಚಾಲೆಂಜ್‌ಗೆ ಫ್ರೆಂಚ್ ಮ್ಯಾನ್ ಕ್ರಿಸ್ಚಿಯನ್ ಪಾಯಿನ್‌ಶೆವಲ್ ಎಂಬಾತ ಉತ್ತರಿಸಿದ್ದಾನೆ. ಹೌದು, ಈತ ಕೆಲ ಮಾತ್ರೆಗಳನ್ನು ಕಂಡುಹಿಡಿದಿದ್ದು, ಅವನ್ನು ತಿಂದರೆ ಚಾಕೋಲೇಟ್‌ನಂತೆ, ಗುಲಾಬಿ ಹೂವಿನಂತೆ, ಶುಂಠಿಯಂತೆ- ಹೀಗೆ ನಮಗಿಷ್ಟ ಬಂದ ಪರಿಮಳದಲ್ಲಿ ಹೂಸು ಬಿಡಬಹುದು. ಫ್ಲೇವರ್‌ಗಳ ಆಯ್ಕೆ ಮಾತ್ರೆ ಕೊಳ್ಳುವವರದೇ ಆಗಿರುತ್ತದೆ. ಇದು 1 ಮಾತ್ರೆಗೆ 21 ಡಾಲರ್‌ನಂತೆ ಆತ ಮಾರಾಟ ಮಾಡುತ್ತಾನೆ.
ಅತಿ ಪುರಾತನ ಜೋಕ್
ಜಗತ್ತಿನ ಅತಿ ಹಳೆಯ ದಾಖಲಾದ ಜೋಕ್ ಕೂಡಾ ಅಪಾನವಾಯುವಿನ ಕುರಿತೇ ಆಗಿದೆ. ಹೌದು, 1900 ಬಿಸಿಯಲ್ಲಿ ಸುಮೇರಿಯನ್ನರ ನಡುವೆ ಹರಿದಾಡುತ್ತಿದ್ದ ಜೋಕ್ ಇದಾಗಿದೆ. ಅದು ಹೀಗಿದೆ - ಎ ಯಂಗ್ ವುಮನ್ ಡಿಡ್ ನಾಟ್ ಫಾರ್ಟ್ ಇನ್ ಹರ್ ಹಸ್ಬಂಡ್ಸ್ ಲ್ಯಾಪ್.
ಕೆಲಸ ಕಳೆಸುವ ಹೂಸು
2014ರಲ್ಲಿ ಒಪೆರಾ ಗಾಯಕಿಯೊಬ್ಬರು ತಮಗೆ ಹೆರಿಗೆ ಮಾಡಿಸಿದ ಆಸ್ಪತ್ರೆ ಮೇಲೆ ಕೇಸ್ ದಾಖಲಿಸಿದ್ದರು. ಕೇಸ್ ಏನಾಗಿತ್ತು ಗೊತ್ತೇ? ಮಗು ಹುಟ್ಟುವಾಗ ತೆಗೆದುಕೊಂಡ ಆಸ್ಪತ್ರೆಯ ವಿಧಾನಗಳಿಂದ ತನಗೆ ವಿಪರೀತ ಅಪಾನವಾಯು ಆರಂಭವಾಗಿದೆ. ಇದರಿಂದ ತನಗೆ ಕೆಲಸ ಮಾಡಲೇ ಸಾಧ್ಯವಾಗುತ್ತಿಲ್ಲ ಎಂದಾಕೆ ದೂರಿನಲ್ಲಿ ತಿಳಿಸಿದ್ದರು.
ವಾಸನೆ ಹೀರುವ ಬಟ್ಟೆ
ಹೂಸಿನ ವಾಸನೆ ಹಿಡಿದಿಡುವ ಬಟ್ಟೆ ತಯಾರಿಸುವುದೇ ದೊಡ್ಡ ಬಿಸ್ನೆಸ್ ಆಗಿದೆ. ಉದಾಹರಣೆಗೆ ಶ್ರೆಡ್ಡೀಸ್ ಅಂಡರ್ವೇರ್‌ನಲ್ಲಿ ಆ್ಯಕ್ಟಿವೇಟೆಡ್ ಕಾರ್ಬನ್ ಬಳಸಲಾಗುತ್ತದೆ. ಇದು ಅತಿ ಕೆಟ್ಟ ದುರ್ನಾತವನ್ನು ಕೂಡಾ ಹೀರಿಕೊಳ್ಳಬಲ್ಲದು.
ಹೂಸುವುದೂ ವೃತ್ತಿಯೇ!
ಮಿಥೇನ್ ಬಿಲ್ಸ್ ಎಂಬಾತ ಹೂಸು ಬಿಡುವುದನ್ನೇ ತನ್ನ ವೃತ್ತಿಯನ್ನಾಗಿ ಸ್ವೀಕರಿಸಿದ್ದಾನೆ. ಈತ ವಿವಿಧ ಸಂಗೀತಗಳ ರಾಗದಲ್ಲಿ ಹೂಸನ್ನು ಬಿಟ್ಟು ಜನರನ್ನು ರಂಜಿಸಬಲ್ಲ.