ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚೀನಾ ಪ್ರವಾಸವು ಸೈಬರ್ ಭದ್ರತಾ ಭೀತಿಯಿಂದಾಗಿ 'ಡಿಜಿಟಲ್ ಲಾಕ್‌ಡೌನ್' ಅಡಿಯಲ್ಲಿ ನಡೆಯಿತು. ಈ ಭೇಟಿಯಲ್ಲಿ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವಿನ ಮಾತುಕತೆ ಯಾವುದೇ ಒಪ್ಪಂದವಿಲ್ಲದೆ ಮುಕ್ತಾಯಗೊಂಡಿತು.
ಬೀಜಿಂಗ್: ಚೀನಾದಲ್ಲಿ ನಡೆಯುತ್ತಿರುವ ಉನ್ನತ ಮಟ್ಟದ ರಾಜತಾಂತ್ರಿಕ ಚಟುವಟಿಕೆಗಳ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚೀನಾ ಪ್ರವಾಸವು ಭದ್ರತಾ ಹಾಗೂ ರಾಜಕೀಯ ಕಾರಣಗಳಿಂದ ಜಾಗತಿಕ ಗಮನ ಸೆಳೆದಿದೆ. ಸೈಬರ್ ಭದ್ರತಾ ಭೀತಿ ಹಿನ್ನೆಲೆ, ಈ ಭೇಟಿ ವಿಶೇಷ ಕ್ರಮಗಳೊಂದಿಗೆ ನಡೆಯುತ್ತಿರುವುದು ಗಮನಾರ್ಹವಾಗಿದೆ. ಚೀನಾ ಹ್ಯಾಕ್ ಮಾಡಬಹುದು ಎಂಬ ಭಯದಲ್ಲಿ ವೈಯಕ್ತಿಕ ಮೊಬೈಲ್ ಮತ್ತು ಲ್ಯಾಪ್‌ಟಾಪ್ , ಗ್ಯಾಜೇಟ್‌ಗಳನ್ನು ಅಮೆರಿಕದಲ್ಲೇ ಬಿಟ್ಟು ತೆರಳಿದ್ದಾರೆ ಎಂಬ ವಿಚಾರ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
27
ಸೈಬರ್ ಭೀತಿ ಹಿನ್ನೆಲೆ ಡಿಜಿಟಲ್ ಲಾಕ್‌ಡೌನ್
ಚೀನಾದಲ್ಲಿ ಮೊಬೈಲ್ ಹ್ಯಾಕಿಂಗ್ ಅಪಾಯ ಹೆಚ್ಚಿದೆ ಎಂಬ ಅಂದಾಜಿನ ಹಿನ್ನೆಲೆಯಲ್ಲಿ, ಟ್ರಂಪ್ ಸೇರಿದಂತೆ ಅಮೆರಿಕದ ಸಚಿವರು, ಅಧಿಕಾರಿಗಳು ಹಾಗೂ ಉದ್ಯಮಿಗಳು ತಮ್ಮ ವೈಯಕ್ತಿಕ ಮೊಬೈಲ್ ಫೋನ್‌ಗಳನ್ನು ಅಮೆರಿಕದಲ್ಲೇ ಬಿಟ್ಟು ಬಂದಿದ್ದಾರೆ. ಬದಲಿಗೆ ಸುರಕ್ಷತಾ ದೃಷ್ಟಿಯಿಂದ ತಯಾರಿಸಲಾದ ಸರಳ ಫೋನ್‌ಗಳು ಮತ್ತು ತಾತ್ಕಾಲಿಕ ಬಳಕೆಗೆ ಅನುಕೂಲವಾದ ಲ್ಯಾಪ್‌ಟಾಪ್‌ಗಳನ್ನು ಮಾತ್ರ ಬಳಕೆ ಮಾಡುತ್ತಿದ್ದಾರೆ. ಈ ಕ್ರಮವನ್ನು ‘ಪೂರ್ಣ ಡಿಜಿಟಲ್ ಲಾಕ್‌ಡೌನ್’ ಎಂದು ಕರೆಯಲಾಗುತ್ತಿದ್ದು, ಚೀನಾದಲ್ಲಿ ಯಾವುದೇ ಡಿಜಿಟಲ್ ಸಾಧನವು ಸೈಬರ್ ದಾಳಿಗೆ ಒಳಗಾಗುವ ಸಾಧ್ಯತೆ ಇದೆ ಎಂಬ ಭೀತಿಯೇ ಇದಕ್ಕೆ ಕಾರಣವಾಗಿದೆ.
37
‘ಜ್ಯೂಸ್ ಜ್ಯಾಕಿಂಗ್’ ಭೀತಿ
ಅನ್ಯರ ಯುಎಸ್‌ಬಿ ಪೋರ್ಟ್‌ಗಳಲ್ಲಿ ಫೋನ್ ಚಾರ್ಜ್ ಮಾಡಿದರೆ ‘ಜ್ಯೂಸ್ ಜ್ಯಾಕಿಂಗ್’ ಮೂಲಕ ಡೇಟಾ ಕಳವು ಸಂಭವಿಸಬಹುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಭದ್ರತಾ ನಿಯಮಗಳು ಕೇವಲ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗದೆ,ಆ್ಯಪಲ್, ಬೋಯಿಂಗ್, ಕ್ವಾಲ್‌ಕಾಮ್ ಮತ್ತು ಬ್ಲಾಕ್‌ರಾಕ್‌ನಂತಹ ಜಾಗತಿಕ ಕಂಪನಿಗಳ ಉನ್ನತ ಅಧಿಕಾರಿಗಳಿಗೂ ಇದೇ ಭೀತಿಯಿಂದ ಇದೇ ನಿಯಮಗಳನ್ನು ಪಾಲಿಸುತ್ತಿದ್ದಾರೆ.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಾಗೂ ಟ್ರಂಪ್ ನಡುವಿನ ಮೂರು ದಿನಗಳ ಉನ್ನತ ಮಟ್ಟದ ಮಾತುಕತೆ ಯಾವುದೇ ಸ್ಪಷ್ಟ ಒಪ್ಪಂದವಿಲ್ಲದೆ ಅಂತ್ಯಗೊಂಡಿದೆ. ಆದಾಗ್ಯೂ, ಇಬ್ಬರೂ ನಾಯಕರು ಈ ಸಭೆಯನ್ನು “ಐತಿಹಾಸಿಕ” ಮತ್ತು “ಹೆಗ್ಗುರುತು ಮೂಡಿಸಿದ” ಸಭೆ ಎಂದು ಬಣ್ಣಿಸಿದ್ದಾರೆ. ಬೀಜಿಂಗ್‌ನ ಝೋಂಗ್ನಾನ್ಹೈನಲ್ಲಿ ನಡೆದ ಈ ಸಭೆಯಲ್ಲಿ ಜಾಗತಿಕ ರಾಜಕೀಯ, ಇರಾನ್ ಸಂಘರ್ಷ, ದ್ವಿಪಕ್ಷೀಯ ವ್ಯಾಪಾರ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಿತು. ಪರಸ್ಪರ ಸಹಕಾರ ವಿಸ್ತರಣೆ ಮತ್ತು ಆರ್ಥಿಕ ಸಂಬಂಧಗಳನ್ನು ಸ್ಥಿರಗೊಳಿಸುವ ಬಗ್ಗೆ ಸಾಮಾನ್ಯ ಅರಿವು ಮೂಡಿದೆ ಎಂದು ಉಭಯ ನಾಯಕರು ತಿಳಿಸಿದ್ದಾರೆ.
57
ತೈವಾನ್ ವಿಷಯ: ಚೀನಾದ ಎಚ್ಚರಿಕೆ
ಸಭೆಯ ವೇಳೆ ಕ್ಸಿ ಜಿನ್‌ಪಿಂಗ್ ತೈವಾನ್ ವಿಚಾರವನ್ನು ಅತ್ಯಂತ ನಾಜೂಕಾಗಿ ನಿರ್ವಹಿಸಬೇಕು ಎಂದು ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ. ತೈವಾನ್ ಪ್ರಶ್ನೆಯನ್ನು ಸರಿಯಾಗಿ ನಿರ್ವಹಿಸಿದರೆ ಮಾತ್ರ ಉಭಯ ರಾಷ್ಟ್ರಗಳ ಸಂಬಂಧ ಸ್ಥಿರವಾಗಿರುತ್ತದೆ, ಇಲ್ಲದಿದ್ದರೆ ಅದು ಸಂಘರ್ಷಕ್ಕೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ. ಈ ಕುರಿತು ಟ್ರಂಪ್ ನೇರ ಪ್ರತಿಕ್ರಿಯೆ ನೀಡದೆ ತಪ್ಪಿಸಿಕೊಂಡಿದ್ದು ಗಮನಾರ್ಹವಾಗಿದೆ. ಚೀನಾ ತನ್ನ ಭಾಗವೆಂದು ಪರಿಗಣಿಸುವ ತೈವಾನ್ ಮಾತ್ರ ಪ್ರಾದೇಶಿಕ ಶಾಂತಿಗೆ ಚೀನಾ ಅಪಾಯಕಾರಿಯಾಗಿದೆ ಎಂದು ತಿರುಗೇಟು ನೀಡಿದೆ.
67
ಇರಾನ್ ಕುರಿತು ಭರವಸೆ
ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇರಾನ್‌ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುವುದಿಲ್ಲ ಹಾಗೂ ಹೋರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡಲು ಪ್ರಯತ್ನಿಸುವುದಾಗಿ ಕ್ಸಿ ಭರವಸೆ ನೀಡಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.
77
ಬೈಡನ್ ಅವಧಿಯ ಬಗ್ಗೆ ಟ್ರಂಪ್ ಟೀಕೆ
ಅಮೆರಿಕದ ಸ್ಥಿತಿ ಕುಸಿತದ ಕುರಿತು ಕ್ಸಿ ಹೇಳಿದ್ದನ್ನು ಟ್ರಂಪ್ ಒಪ್ಪಿಕೊಂಡರೂ, ಅದು ತನ್ನ ಆಡಳಿತದಲ್ಲಲ್ಲ, ಹಿಂದಿನ ಅಧ್ಯಕ್ಷ Joe Biden ಅವಧಿಯಲ್ಲಿ ಸಂಭವಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ. ತನ್ನ ಆಡಳಿತದಲ್ಲಿ ಅಮೆರಿಕ ಪುನಃ ಬೆಳವಣಿಗೆ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಸಂಪೂರ್ಣ ಚೀನಾ ಪ್ರವಾಸವು ಸೈಬರ್ ಭದ್ರತೆ, ಜಾಗತಿಕ ರಾಜಕೀಯ ಒತ್ತಡಗಳು ಮತ್ತು ಅಮೆರಿಕ–ಚೀನಾ ಸಂಬಂಧಗಳ ಸಂಕೀರ್ಣತೆಯನ್ನು ಮತ್ತೊಮ್ಮೆ ಎತ್ತಿಹಿಡಿದಿದೆ. ಯಾವುದೇ ಅಧಿಕೃತ ಒಪ್ಪಂದವಿಲ್ಲದೆ ಸಭೆ ಮುಕ್ತಾಯವಾದರೂ, ಭವಿಷ್ಯದ ರಾಜತಾಂತ್ರಿಕ ದಿಕ್ಕು ಹಾಗೂ ಜಾಗತಿಕ ಶಕ್ತಿಸಾಮ್ಯದಲ್ಲಿ ಈ ಭೇಟಿ ಮಹತ್ವದ ಪ್ರಭಾವ ಬೀರುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ