ಸುಡಾನ್‌ನಲ್ಲಿ ಬಂಗಾರ ಹೆಕ್ಕುತ್ತಿದ್ದವರ ಜೀವಂತ ಸಮಾಧಿ, 80ಕ್ಕೂ ಹೆಚ್ಚು ಸಾವು! ಆಫ್ರಿಕಾದಲ್ಲೇಕೆ ಈ ಪರಿಯ ದುರಂತ?

Published : Sep 19, 2026, 03:53 PM IST

ಆಫ್ರಿಕಾದ ಸುಡಾನ್ ನಲ್ಲಿ ಚಿನ್ನದ ಗಣಿಯಲ್ಲಿ 82 ಜನರು ಸಾವನ್ನಪ್ಪಿದ್ದು, ರಕ್ಷಣಾ ಕಾರ್ಯಾಚರಣೆಗೆ ಸಲಕರಣೆಗಳಿಲ್ಲದೆ ಸಿಕ್ಕಾಪಟ್ಟೆ ಕಷ್ಟವಾಗಿದೆ ಬಡತನ ಮತ್ತು ದುರಾಸೆಯಿಂದಾಗಿ ಯಾವುದೇ ಸುರಕ್ಷತೆ ಇಲ್ಲದ ಗಣಿಗಳಲ್ಲಿ ಕೆಲಸ ಮಾಡುವ ಇವರು ಮಣ್ಣಿನಡಿ ಜೀವಂತ ಸಮಾಧಿಯಾಗುತ್ತಿದ್ದಾರೆ.

PREV
19
ಜೀವಕ್ಕಿಂತಲೂ ಚಿನ್ನವೇ ಮುಖ್ಯ ಸಾವಿನ ಮೈನಿಂಗ್ !

ಆಫ್ರಿಕಾ ಬಡರಾಷ್ಟ್ರಗಳ ಬದುಕು ನಿಜಕ್ಕೂ ಯಾರಿಗೂ ಬೇಡ. ಅಲ್ಲಿನ ಜನ್ರ ಪ್ರಾಣಕ್ಕೆ ಕಿಂಚಿತ್ತು ಬೆಲೆಯೇ ಇಲ್ಲ. ಬದುಕು ಕಟ್ಟಿಕೊಳ್ಳುವ ಆಸೆಗೆ ಅಲ್ಲಿನ ಜನ್ರು ಏನೇನೋ ಕೆಲಸಗಳನ್ನ ಮಾಡ್ತಾರೆ. ಅಕ್ರಮ ಅಂತ ಗೊತ್ತಿದ್ರೂ ವಿಧಿಯಿಲ್ದೆ ಆ ಕೆಲಸಗಳಲ್ಲಿ ತೊಡಗಿಕೊಳ್ತಾರೆ. ಸಿಗೋ ಅಲ್ಪಸ್ವಲ್ಪ ದುಡ್ಡಿಗಾಗಿ ತಮ್ಮ ಜೀವವನ್ನೇ ಒತ್ತೆಯಿಟ್ಟು ಕೆಲಸ ಮಾಡ್ತಾರೆ. ಇದು ಆಫ್ರಿಕಾದ ಅಕ್ರಮ ಚಿನ್ನದ ಗಣಿಗಾರಿಕೆಗಳ ಕಥೆ. ಇದಕ್ಕೆ ಕಾರಣವಾಗಿರೋದು ಸುಡಾನ್ನ ಚಿನ್ನದ ಗಣಿಗಾರಿಕೆಯಲ್ಲಿ 80ಕ್ಕೂ ಹೆಚ್ಚು ಜನ್ರು ಜೀವ ಸಮಾಧಿಯಾಗಿರೋದು. ಸುಡಾನ್‌ನ ಪಶ್ಚಿಮ ಕೊರ್ಡೊಫಾನ್ ರಾಜ್ಯದಲ್ಲಿ ಸೆ.16ರಂದು ಈ ದುರಂತ ನಡೆದಿದೆ. ಈವರೆಗೆ ಕನಿಷ್ಠ 82 ಜನರು ಸಾವನ್ನಪ್ಪಿದ್ದು, ನೂರಾರು ಜನ ನಾಪತ್ತೆಯಾಗಿರುವ ಬಗ್ಗೆ ವರದಿ ತಿಳಿಸಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

ಮನುಷ್ಯ ಬಂಗಾರಕ್ಕಾಗಿ ಏನು ಬೇಕಾದ್ರು ಮಾಡ್ತಾನೆ. ಅದನ್ನ ಕೆಜಿಎಫ್ ಸಿನಿಮಾ ಸರಣಿಗಳಲ್ಲಿ ಅದ್ಭುತವಾಗಿ ತೋರಿಸಿದ್ದಾರೆ. ಚಿನ್ನದ ಗಣಿಗಾರಿಕೆಗಳು ಹೇಗಿರುತ್ತವೆ. ಕೆಲಸಗಾರರ ಪರಿಸ್ಥಿತಿ ಏನು ಅನ್ನೋದನ್ನ ಕೆಜಿಎಫ್ ಸಿನಿಮಾ ಅನಾವರಣ ಮಾಡಿದೆ ಅಂದ್ರೆ ತಪ್ಪಲ್ಲ. ಅಲ್ಲಿ ಚಿನ್ನಕ್ಕಷ್ಟೆ ಬೆಲೆ. ಜೀವಗಳಿಗೆ ಬೆಲೆಯೇ ಇಲ್ಲ. ಚಿನ್ನ ಹೆಕ್ಕುವ ತಾಕತ್ತು ಇರೋವ್ರಿಗಷ್ಟೆ ಅಲ್ಲಿ ಬದುಕು. ಆ ಬದುಕು ಎಷ್ಟು ದಿನದ್ದು ಅನ್ನೋದು ಮಾತ್ರ ಯಾರಿಗೂ ಗೊತ್ತಿಲ್ಲ. ಯಾಕಂದ್ರೆ, ಚಿನ್ನದ ಗಣಿಯಲ್ಲಿ ಏನು ಬೇಕಾದ್ರೂ ಆಗಬಹುದು. ಯಾವ ಕ್ಷಣದಲ್ಲಿ ಬೇಕಾದ್ರು ಜೀವ ಹೋಗಬಹುದು. ಅದಕ್ಕೆ ಕಣ್ಣೀರು ಹಾಕುವವರು ಯಾರೋ ಇರೋದಿಲ್ಲ.

ಆ ಸಾವಿನ ಸುದ್ದಿ ಕೂಡ ಹೊರ ಜಗತ್ತಿಗಾಗಲಿ, ಕನಿಷ್ಠ ಕುಟುಂಬದವ್ರಿಗೂ ತಲುಪುತ್ತದೆ ಅನ್ನೋ ಗ್ಯಾರಂಟಿ ಇರೋಲ್ಲ. ಇದೆಲ್ಲವನ್ನು ಆ ಸಿನಿಮಾದಲ್ಲಿ ತುಂಬಾನೆ ಚೆನ್ನಾಗಿ ಕಣ್ಣಿಗೆ ಕಟ್ಟುವಂತೆ ಕಟ್ಕೊಟ್ಟಿದ್ದಾರೆ. ಹಾಗಂತ ಇದು ಸಿನಿಮಾ ಅನ್ನೋ ತಾತ್ಸಾರ ಖಂಡಿತ ಬೇಡಾ. ಯಾಕಂದ್ರೆ ರಿಯಲ್ ಚಿನ್ನದ ಗಣಿಗಾರಿಕೆಯ ಲೈಫ್ ಇದಕ್ಕಿಂತಲೂ ಕ್ರೂರವಾಗಿರುತ್ತೆ.

29
ಸಾವಿನ ಚಿನ್ನ ಜೀವಕ್ಕಿಲ್ಲ ಗ್ಯಾರಂಟಿ, ಜೀವಕ್ಕಿಂತಲೂ ಚಿನ್ನವೇ ಮುಖ್ಯ !

ಮನುಷ್ಯನ ದುರಾಸೆ ಹಾಗೂ ಬಡತನದ ಅತ್ಯಂತ ಕ್ರೂರ ಮುಖಕ್ಕೆ ಈ ಚಿನ್ನದ ಗಣಿಗಳೇ ಕನ್ನಡಿ ಅಂದ್ರೆ ತಪ್ಪಿಲ್ಲ. ಜಗತ್ತಿನ ಕಣ್ಣಿಗೆ ಇಲ್ಲಿನ ಹೊಳೆಯುವ ಚಿನ್ನ ಮಾತ್ರವೇ ಕಾಣಿಸುತ್ತದೆ. ಆದರೆ, ಆ ಗಣಿಗಳ ಕತ್ತಲು ಸುರಂಗಗಳಲ್ಲಿ ಬೆವರು ಸುರಿಸಿ, ಪ್ರಾಣ ಕಳೆದುಕೊಳ್ಳುವ ಕೂಲಿ ಕಾರ್ಮಿಕರ ನೈಜ ಬದುಕು ಮಾತ್ರ ನರಕಯಾತನೆ. ಜೀವಕ್ಕಿಂತ ಚಿನ್ನಕ್ಕೆ ಹೆಚ್ಚು ಬೆಲೆ ಕಟ್ಟುವ ಈ ವ್ಯವಸ್ಥೆಯಲ್ಲಿ ಪ್ರಾಣ ಕಳೆದುಕೊಂಡವರ ಸರಿಯಾದ ಲೆಕ್ಕವೂ ಸಿಗೋದಿಲ್ಲ. ಇದಕ್ಕೆ ನೂರಾರು ನೈಜ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಕೇವಲ ಮಣ್ಣಲ್ಲಿ ಮಣ್ಣಾಗಿ ಹೋಗುವ ಅಸಹಾಯಕ ಜೀವಿಗಳ ಕಥೆ ಇದು. ಅದರಲ್ಲೂ ಆಫ್ರಿಕಾದ ಬಡ ರಾಷ್ಟ್ರಗಳಲ್ಲಿ ನಡೆಯುವ ಅನಧಿಕೃತ ಚಿನ್ನದ ಗಣಿಗಾರಿಕೆ ದೃಶ್ಯಗಳು ಎದೆ ನಡುಗಿಸುತ್ತವೆ. ಹೊಟ್ಟೆಪಾಡಿಗಾಗಿ ಬದುಕು ಹುಡುಕಿಕೊಂಡು ಹೋಗುವ ಕಾರ್ಮಿಕರಿಗೆ ಅಲ್ಲಿ ಸಿಗೋದು ಬದುಕಿನ ದಾರಿಯಲ್ಲ, ಬದಲಿಗೆ ಸಮಾಧಿಯ ದಾರಿ.

ಈಗ್ಯಾಕೆ ಚಿನ್ನದ ಗಣಿಗಾರಿಕೆಯವ್ರ ಬದುಕಿನ ಕಥೆ ಅಂತ ಯೋಚನೆ ಮಾಡ್ತಿದ್ರೆ, ಆಫ್ರಿಕಾದ ಯುದ್ಧಪೀಡಿತ ಸುಡಾನ್ ದೇಶದಲ್ಲಿ ಚಿನ್ನದ ಗಣಿಯೊಂದು ಭೀಕರವಾಗಿ ಕುಸಿದು ಹೋಗಿದೆ. ಗಣಿಯೊಳಗಿನ ಸರುಂಗಗಳು ಆ ಕುಸಿತಕ್ಕೆ ಮುಚ್ಚಿಹೋಗಿವೆ. ಒಳಗಿದ್ದವ್ರು ಎಷ್ಟು? ಏನಾದ್ರೂ ಅನ್ನೋ ಲೆಕ್ಕವೇ ಸಿಗದಂತಾಗೋಗಿದೆ. ಇಲ್ಲಿನ ಪಶ್ಚಿಮ ಕಾರ್ಡೊಫಾನ್ ಪ್ರಾಂತ್ಯದ ಅಲ್-ನುಹುದ್ ಪಟ್ಟಣದ ಬಳಿಯಿರುವ ಅಲ್-ಝರಾಚಿನ್ನದ ಗಣಿಯಲ್ಲಿ ಈ ದುರ್ಘಟನೆ ನಡೆದಿದೆ. ವಿಚಿತ್ರ ಅಂದ್ರೆ, ಈ ಗಣಿಗಾರಿಕೆಯಲ್ಲಿ ಕೆಲಸ ಮಾಡ್ತಿದ್ದವ್ರಿಗಾಗಿ ಯಾವುದೇ ಸುರಕ್ಷತಾ ಮಾನದಂಡಗಳು ಇರಲಿಲ್ಲ ಅನ್ನೋದು. ಅತ್ಯಂತ ಕಿರಿದಾದ ಸುರಂಗಗಳಲ್ಲಿ ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಈ ಭೀಕರ ದುರಂತ ಸಂಭವಿಸಿದೆ.

ಆರಂಭದಲ್ಲಿ ಸಾವು-ನೋವುಗಳ ಸಂಖ್ಯೆ ಕಡಿಮೆ ಇರಬಹದು ಎಂದು ಕೊಳ್ಳಲಾಗಿತ್ತು. ಆದ್ರೆ, ಸ್ಥಳೀಯ ಆಡಳಿತ ಹಾಗೂ ತುರ್ತು ಸೇವೆಯವರ ವರದಿಯ ಪ್ರಕಾರ ಈ ದುರಂತದಲ್ಲಿ ಕನಿಷ್ಠ 82 ಜನ್ರು ಬಲಿಯಾಗಿದ್ದಾರೆ. ಈ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ದಿನಗೂಲಿಗಾಗಿ ಹೋದ ನೂರಾರು ಜೀವಗಳು ಕೆಲವೇ ಕ್ಷಣಗಳಲ್ಲಿ ಮಣ್ಣಿನಡಿ ಸಮಾಧಿಯಾ ಹೋಗಿದ್ದಾರೆ. ಈ ದುರ್ಘಟನೆಯಿಂದಾಗಿ ಇಡೀ ಪ್ರದೇಶ ಶೋಕ ಸಾಗರದಲ್ಲಿ ಮುಳುಗಿದೆ. ಇಲ್ಲಿನ ಅವಶೇಷಗಳ ಅಡಿಯಲ್ಲಿ ಇನ್ನೂ ಅನೇಕರು ಸಿಲುಕಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

39
ಗಣಿಗಾರಿಕೆ ಮಹಾದುರಂತಕ್ಕೆ ಕಾರಣ ಏನು ?

ಈ ಭೀಕರ ದುರಂತಕ್ಕೆ ಮುಖ್ಯ ಕಾರಣ ಏನಂದ್ರೆ? ಯಾವುದೇ ನಿಯಮಗಳಿಲ್ಲದ ಕಳಪೆ ಹಾಗೂ ಅನಧಿಕೃತ ಗಣಿಗಾರಿಕೆ ಅನ್ನೋದು. ಗಣಿಯ ಸುರಂಗ ಮಾರ್ಗಗಳು ಒಂದಕ್ಕೊಂದು ತೀರಾ ಹತ್ತಿರದಲ್ಲಿದ್ದು, ಒಂದು ಕುಸಿದರೆ ಪಕ್ಕದ ಎಲ್ಲಾ ಸುರಂಗಗಳೂ ಸರಪಳಿ ರೀತಿಯಲ್ಲಿ ಕುಸಿದುಬೀಳುವ ಅತ್ಯಂತ ಅಪಾಯಕಾರಿ ರಚನೆಯನ್ನು ಇಲ್ಲಿ ಬಳಸಲಾಗಿತ್ತು. ಮರಳು ಮಿಶ್ರಿತ ಸಡಿಲ ಮಣ್ಣಿನ ಗುಡ್ಡವನ್ನು ಕೊರೆದು ಒಳಗೆ ಸುರಂಗಗಳನ್ನು ನಿರ್ಮಿಸಿರುವುದೇ ಈ ಭೂಕುಸಿತಕ್ಕೆ ನೇರ ಕಾರಣವಾಗಿದೆ.

ಅಸಾಧ್ಯವಾಗಿರೋ ರಕ್ಷಣಾ ಕಾರ್ಯಾಚರಣೆ!

ಈ ಗಣಿ ದುರಂತದಲ್ಲಿ ಸಿಲುಕಿದವ್ರ ರಕ್ಷಣಾ ಕಾರ್ಯಾಚರಣೆಯ ಪರಿಸ್ಥಿತಿಯಂತೂ ಅತ್ಯಂತ ದಯನೀಯ. ಗಣಿ ಪ್ರದೇಶವು ಅತ್ಯಂತ ದುರ್ಗಮ ಜಾಗದಲ್ಲಿದೆ. ಹೊರ ಜಗತ್ತಿನ ಸಂಪರ್ಕಕ್ಕೆ ಇದು ಸಿಗದಷ್ಟು ದೂರದಲ್ಲಿದೆ. ಅತ್ಯಾಧುನಿಕ ಯಂತ್ರೋಪಕರಣಗಳಾಗಲಿ, ಜೆಸಿಬಿಗಳಾಗಲಿ ಇಲ್ಲಿ ಲಭ್ಯವಿಲ್ಲ. ಕೇವಲ ಒಂದೇ ಒಂದು ಖಾಸಗಿ ಫೋರ್ಕ್‌ಲಿಫ್ಟ್ ಹೊರತುಪಡಿಸಿ ಬೇರೆ ಯಾವುದೇ ಯಂತ್ರಗಳಿಲ್ಲದೆ, ಸ್ಥಳೀಯರು ಬರಿಗೈಯಲ್ಲಿ ಹಾಗೂ ಹಳೆಯ ಸಲಕರಣೆಗಳನ್ನು ಬಳಸಿ ರಕ್ಷಣಾ ಕಾರ್ಯಚರಣೆ ನಡೆಸಿದ್ದಾರೆ.

ಇಲ್ಲಿನ ಮಣ್ಣು ಅತ್ಯಂತ ಸಡಿಲವಾಗಿರೋದ್ರಿಂದ ರಕ್ಷಣೆಗೆ ಹೋದವ್ರು ಸಮಾಧಿಯಾಗಿ ಬಿಡುವ ಸಾಧ್ಯತೆಗಳು ಹೆಚ್ಚಾಗಿದೆ. ಹೀಗಾಗಿ ಯಾರು ಒಳಗಿಳಿದು ರಕ್ಷಣೆ ಮಾಡುವ ಧೈರ್ಯ ತೋರುತ್ತಿಲ್ಲ. 30 ಮೀಟರ್‌ಗಳಿಗೂ ಹೆಚ್ಚು ಆಳದಲ್ಲಿ ಇನ್ನೂ ಕೆಲವರು ಜೀವಂತವಾಗಿರಬಹುದು ಅನ್ನೋ ಆಶಾಭಾವನೆ ಇದ್ದರೂ, ತಳ ಮುಟ್ಟಲು ಸೂಕ್ತ ಯಂತ್ರಗಳಿಲ್ಲದೆ ರಕ್ಷಣಾ ತಂಡಗಳು ಅಸಹಾಯಕವಾಗಿವೆ.

49
ಜನರ ರಕ್ಷಣೆಗೆ ಸರ್ಕಾರದ ನೆರವೇ ಇಲ್ಲ !

ಅಷ್ಟು ದೊಡ್ಡ ದುರಂತವಾಗಿದ್ರೂ ಈ ವರೆಗೂ ಅಲ್ಲಿಗೆ ಯಾವುದೇ ಆಧುನಿಕ ಯಂತ್ರೋಪಕರಣಗಳು ತಲುಪಿಲ್ಲ. ಜನ್ರು ಗುದ್ದಲಿ ಪಿಕಾಸಿಗಳಿಂದಲೇ ರಕ್ಷಣೆ ಮಾಡುವ ಸಾಹಸ ಮಾಡ್ತಿದ್ದಾರೆ. ಹಾಗಾದ್ರೆ, ಸುಡನ್ ಸರ್ಕಾರ ಏನು ಮಾಡ್ತಿದೆ ಅನ್ನೋ ಪ್ರಶ್ನೆ ಮೂಡೋದು ಸಹಜ. ಇಲ್ಲೊಂದು ಗಂಭೀರವಾದ ಸಮಸ್ಯೆಯಿದೆ. ಆ ಸಮಸ್ಯೆಯಿಂದಾಗಿಯೇ ಈ ದುರಂತದ ಸ್ಥಳಕ್ಕೆ ಸರ್ಕಾರದ ನೆರವು ಸಿಕ್ತಿಲ್ಲ. ಈ ಗಣಿ ಇರುವ ವೆಸ್ಟ್ ಕೊರ್ಡೋಫಾನ್ ಪ್ರಾಂತ್ಯದ ನುಹುದ್ ಪ್ರದೇಶವು ಪ್ರಸ್ತುತ ಸುಡಾನ್‌ನ ಅರೆಸೈನಿಕ ಪಡೆಯಾದ ರ್ಯಾಪಿಡ್ ಸಪೋರ್ಟ್ ಫೋರ್ಸಸ್ ನಿಯಂತ್ರಣದಲ್ಲಿದೆ. ಸುಡಾನ್ ಸೇನೆ ಹಾಗೂ ಈ RSF ನಡುವೆ ಹಲವು ದಿನಗಳಿಂದ ಅಂತರ್ಯುದ್ಧ ನಡೀತಿದೆ. ಹೀಗಾಗಿ ಈ ಅರೆಸೈನಿಕ ಪಡೆಗಳು ತಮ್ಮ ಯುದ್ಧ ಹಾಗೂ ಶಸ್ತ್ರಾಸ್ತ್ರಗಳಿಗೆ ಹಣಕಾಸು ಒದಗಿಸಿಕೊಳ್ಳೊಕೆ ಅಂತಾನೇ ಇಂತಹ ಚಿನ್ನದ ಗಣಿಗಳನ್ನು ಬಳಸಿಕೊಳ್ಳುತ್ತಿವೆ.. ಇಲ್ಲಿ ಸಿಗೋ ಚಿನ್ನವನ್ನು ದೇಶದಿಂದ ಹೊರಗೆ ಕಳ್ಳಸಾಗಣೆ ಮಾಡುತ್ತಿವೆ ಅಂತ ವಿಶ್ವಸಂಸ್ಥೆಯ ತಜ್ಞರೇ ವರದಿ ಮಾಡಿದ್ದಾರೆ. ತನಗೆ ಮಾರಕವಾಗುವ ಕೆಲಸವನ್ನು ಮಾಡ್ತಿರುವ RSF ಸಹಾಯಕ್ಕೆ ಇಲ್ಲಿನ ಸೇನೆ ನಿಲ್ಲುತ್ತಾ? ಹೀಗಾಗಿ ಈ ಅಕ್ರಮದಲ್ಲಿ ತೊಡಗಿರುವ ಜನ್ರ ಬದುಕಿನ ಬಗ್ಗೆ ಸರ್ಕಾರಕ್ಕೂ ತಾತ್ಸಾರವಿದೆ. ಹೀಗಾಗಿ ಅಕ್ರಮದ ಹೆಸರನ್ನು ಮುಂದಿಟ್ಟು ಕೈಕಟ್ಟು ಕುಳಿತ್ಕೊಂಡಿದೆ.

59
ಆಫ್ರಿಕನ್ ಗಣರಾಜ್ಯದಲ್ಲೂ ನಡೆದಿತ್ತು ಗಣಿ ದುರಂತ !

ಸುಡಾನ್ನಲ್ಲಿ ನಡೆದ ದುರಂತಕ್ಕೆ ಎರಡು ವಾರಗಳ ಹಿಂದೆ ಇದಕ್ಕೂ ಭೀಕರ ಗಣಿ ದುರಂತಕ್ಕೆ ಆಫ್ರಿಕಾ ಸಾಕ್ಷಿಯಾಗಿತ್ತು. ಸೆಂಟ್ರಲ್ ಆಫ್ರಿಕದ ರಿಪಬ್ಲಿಕ್ನಲ್ಲಿ ಆ ಗಣಿ ದುರಂತ ನಡೆದಿತ್ತು. ಆ ದುರಂತದ ಲೈವ್ ದೃಶ್ಯಗಳನ್ನು ಜನ್ರು ಮೊಬೈಲ್ನಲ್ಲಿ ಸೆರೆಹಿಡಿದಿದ್ರು. ಹೀಗಾಗಿ ಆ ಮೃತ್ಯಕೂಪಗಳ ದರ್ಶನ ಮಾಡೋದಕ್ಕೆ ಸಾಧ್ಯವಾಗಿದೆ. ಭೀಕರ ಗುಡ್ಡ ಕುಸಿತವಾಗುತ್ತಲ್ಲ ಅದೇ ಮಾದರಿಯಲ್ಲಿ ಗಣಿಗಾರಿಕೆಯ ಜಾಗದಲ್ಲಿ ಗುಡ್ಡು ಕುಸಿದಿದೆ. ಆ ಸ್ಥಳದಲ್ಲಿ ಸಾವಿರಾರು ಜನ್ರು ಕೆಲಸ ಮಾಡ್ತಿದ್ರು. ನೂರಾರು ಜನ್ರು ಆ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ರು. ಕೆಲವ್ರು ತಾವಾಗಿಯೇ ಎದ್ದು ಹೊರಕ್ಕೆ ಬಂದ್ರು. ಇನ್ನು ಕೆಲವ್ರನ್ನ ಅಕ್ಕಪ್ಕದವ್ರು ಕೈ ಹಿಡಿದು ಮೇಲಕ್ಕೆ ಎಳೆದುಕೊಂಡ್ರು. ಇನ್ನು ಮಣ್ಣಲ್ಲಿ ಮಣ್ಣಾದವ್ರು ನೂರಾರು ಜನ! ಈ ಭೀಕರ ದುರಂತ ನಡೆದಿದ್ದು ಕ್ಯಾಮರೂನ್ ಗಡಿ ಭಾಗದ ಗಣಿಗಾರಿಕೆ ಪ್ರದೇಶದಲ್ಲಿ. ಬಂಡವಾಳಶಾಹಿಗಳ ಕಣ್ತಪ್ಪಿಸಿ, ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿ ನಡೆಸುತ್ತಿದ್ದ ಅಕ್ರಮ ಗಣಿಗಾರಿಕೆಯಲ್ಲಿ ಇಡೀ ಗುಡ್ಡವೇ ಕುಸಿದುಬಿದ್ದಿತ್ತು. ಸುಮಾರು 100ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರು. ಮಣ್ಣಿನ ಬೃಹತ್ ರಾಶಿ ಏಕಾಏಕಿ ನುಗ್ಗಿ ಬಂದಿದ್ದರಿಂದ ತಪ್ಪಿಸಿಕೊಳ್ಳಲು ಯಾರಿಗೂ ಸ್ವಲ್ಪವೂ ಅವಕಾಶ ಸಿಕ್ಕಿರಲಿಲ್ಲ. ಪರಿಣಾಮವಾಗಿ ನೂರಾರು ಕೂಲಿ ಕಾರ್ಮಿಕರು ಕಣ್ಣು ಮುಚ್ಚಿ ತೆರೆಯುವುದರೊಳಗೆ ಜೀವಂತ ಸಮಾಧಿಯಾಗಿದ್ದರು.

69
ಆಫ್ರಿಕಾ ದೇಶಗಳಲ್ಲಿ ಚಿನ್ನದ ಗಣಿಗಾರಿಕೆಯ ಕರಾಳ ಸಾಮ್ರಾಜ್ಯ !

ದಿನದಿಂದ ದಿನಕ್ಕೆ ಆಫ್ರಿಕಾದ ಬಡ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಈ ಗಣಿ ದುರಂತಗಳು, ಜಾಗತಿಕ ಚಿನ್ನದ ದಾಹಕ್ಕೆ ಬಲಿಯಾಗುತ್ತಿರುವ ಕಾರ್ಮಿಕರ ಅಸುರಕ್ಷಿತ ಬದುಕಿನ ದಾರುಣ ಚಿತ್ರಣವನ್ನ ಜಗತ್ತಿನೆದುರು ಮತ್ತೆ ಮತ್ತೆ ಬೆತ್ತಲು ಮಾಡುತ್ತಲೆ ಇದೆ. ಆಫ್ರಿಕಾದ ದೇಶಗಳಲ್ಲಿ ಹೆಜ್ಜೆ ಹೆಜ್ಜೆಗೂ ಅಕ್ರಮ ಚಿನ್ನದ ಗಣಿಗಾರಿಕೆಗಳು ನಡೆಯುತ್ತವೆ. ಈ ಅಕ್ರಮ ಗಣಿಗಾರಿಕೆಗಳಲ್ಲಿ ಸುಡನ್ ದುರಂತದಂತಹ ಘಟನೆಗಳು ಒಂದಲ್ಲ ಒಂದು ಕಡೆ ಸಂಭವಿಸುತ್ತಲೆ ಇರುತ್ತದೆ. ದುರಂತ ನಡೆದಾಗ ಸುದ್ದಿಯಾಗೋ ಈ ವಿಚಾರಗಳು ಮತ್ತೆ ಮಾಮೂಲಿಯಂತೆಯೇ ನಡೆದುಕೊಂಡು ಹೋಗುತ್ತದೆ. ಅಲ್ಯಾಕೆ ಯಾವ ಬದಲಾವಣೆಗಳು ಸಾಧ್ಯವಾಗಿಲ್ಲ ಅನ್ನೋ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ. ಆಫ್ರಿಕಾ ದೇಶಗಳು ಅಂತಿದ್ದಾಗೆಯೇ ನಮ್ಮ ಕಲ್ಪನೆಗೆ ಬರೋದು ಕೇವಲ ಅಕ್ರಮ ಚಟುವಟಿಕೆಗಳೇ. ಗಾಂಜಾ, ಡ್ರಗ್ಸ್, ಸ್ಮಗ್ಲಿಂಗ್, ಜಗತ್ತಿನ ಯಾವುದೇ ಮೂಲೆಗೆ ಹೋದ್ರು ಇದೇ ಅಭಿಪ್ರಾಯ ವ್ಯಕ್ತವಾಗುತ್ತದೆ. ಅಷ್ಟರ ಮಟ್ಟಿಗೆ ಇಲ್ಲಿನ ದೇಶಗಳು ಹಾಗೂ ಆ ದೇಶದ ಜನ್ರು ತಮ್ಮ ಹೆಸ್ರನ್ನು ಕೆಡಿಸಿಕೊಂಡಿದ್ದಾರೆ. ಇದಕ್ಕೆಲ್ಲಾ ಕಾರಣ ಏನು ಅಂತ ಪ್ರಶ್ನೆ ಮಾಡಿದ್ರೆ, ಅಲ್ಲಿನ ಬಡತನವನ್ನು ತೋರಿಸ್ತಾರೆ. ಆದ್ರೆ, ಜಾಗತಿಕವಾಗಿ ಅತೀ ಹೆಚ್ಚು ಚಿನ್ನವನ್ನು ಉತ್ಪಾದನೆ ಮಾಡೋ ಈ ದೇಶಗಳಲ್ಲಿ ಬಡತನ ಹೇಗಿರೋದಕ್ಕೆ ಸಾಧ್ಯ ಅಲ್ವಾ? ಆದ್ರೆ, ಅದ್ಯಾವುದು ಲೀಗಲ್ ಆಗಿಲ್ಲ

79
ಅಕ್ರಮ ಗಣಿಗಾರಿಕೆಯ ಹಿಂದಿದೆ ಹಲವು ಕಾರಣ !

ಜಾಗತಿಕ ಚಿನ್ನದ ಮಾರುಕಟ್ಟೆಯಲ್ಲಿ ಆಫ್ರಿಕಾ ದೇಶಗಳದ್ದೇ ಸಿಂಹಪಾಲು. ಆದರೆ, ಈ ಸಂಪತ್ತಿನ ಹಿಂದೆ ಬಡತನ, ಹಿಂಸಾಚಾರ ಹಾಗೂ ಲಕ್ಷಾಂತರ ಕಾರ್ಮಿಕರ ರಕ್ತದ ಕಥೆಯಿದೆ. ಅಧಿಕೃತ ಗಣಿಗಳಿಗಿಂತಲೂ ಅಕ್ರಮ ಹಾಗೂ ಸಣ್ಣ ಪ್ರಮಾಣದ ಗಣಿಗಾರಿಕೆಗಳು ಆಫ್ರಿಕಾದಲ್ಲಿ ಬಹುಬೇಗನೆ ವಿಸ್ತರಿಸುತ್ತಿವೆ. ಖಂಡದ ಒಟ್ಟು ಚಿನ್ನದ ಉತ್ಪಾದನೆಯಲ್ಲಿ ಸುಮಾರು ಶೇ. 32 ರಿಂದ ಶೇ. 41ರಷ್ಟು ಚಿನ್ನವು ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಅಕ್ರಮವಾಗಿ ಉತ್ಪಾದನೆಯಾಗಿ ಕಳ್ಳಸಾಗಣೆಯಾಗುತ್ತಿದೆ. ಆಫ್ರಿಕಾ ದೇಶಗಳಲ್ಲಿ ಅಕ್ರಮ ಗಣಿಗಾರಿಕೆ ಅನ್ನೋದು ಅಪರಾಧವಲ್ಲ, ಅದೊಂದು ಬಡತನದ ಅನಿವಾರ್ಯತೆಯಾಗಿದೆ. ಈ ದೇಶಗಳ ಕೈಗಾರಿಕಾ ರಂಗದಲ್ಲಿ ಉದ್ಯೋಗ ಸಿಗದೆ, ಬದುಕಿನ ದಾರಿ ಕಾಣದ ಲಕ್ಷಾಂತರ ಯುವಕರು ಹಾಗೂ ಸ್ಥಳೀಯರು ದಿನಗೂಲಿಗಾಗಿ ಈ ಅಪಾಯಕಾರಿ ಗಣಿಗಳನ್ನು ಆಶ್ರಯಿಸುತ್ತಿದ್ದಾರೆ. ಯಾವುದೇ ಪರವಾನಗಿ ಪಡೆಯದೆ, ತೆರಿಗೆ ಕಟ್ಟದೆ ರಾತ್ರೋರಾತ್ರಿ ಶ್ರೀಮಂತರಾಗುವ ಕನಸು ಕಾಣುವ ದೊಡ್ಡ ಮಟ್ಟದ ಅಪರಾಧ ಸಿಂಡಿಕೇಟ್‌ಗಳು ಹಾಗೂ ಮಾಫಿಯಾಗಳು ಇದರ ಹಿಂದೆ ಕೆಲಸ ಮಾಡುತ್ತಿವೆ. ಇನ್ನು ಬೃಹತ್ ಬಹುರಾಷ್ಟ್ರೀಯ ಕಂಪನಿಗಳು ದೊಡ್ಡ ಗಣಿಗಳನ್ನು ಮುಚ್ಚಿದಾಗ ಅಥವಾ ಕೈಬಿಟ್ಟಾಗ, ಅಲ್ಲಿ ಉಳಿದಿರುವ ಚಿನ್ನದ ಅವಶೇಷಗಳನ್ನು ಪಡೆಯಲು ಸ್ಥಳೀಯರು ಅಕ್ರಮವಾಗಿ ಸುರಂಗಗಳನ್ನು ಕೊರೆಯಲು ಶುರು ಮಾಡ್ತಾರೆ.

89
ಆಫ್ರಿಕಾದ ಯವ್ಯಾವ ದೇಶದಲ್ಲಿದೆ ಅಕ್ರಮ ಗಣಿಗಾರಿಕೆ ?

ಆಫ್ರಿಕಾದ ಭೂಮಿಯಲ್ಲಿ ಹೇರಳವಾಗಿ ಚಿನ್ನದ ಖನಿಜಸಂಪೂನ್ಮೂಲವಿದೆ. ಇದು ಜನ್ರಿಗೆ ಸುಲಭವಾಗಿ ಸಿಗುತ್ತದೆ ಕೂಡ. ಜಾಗತಿಕವಾಗಿ ಒಳ್ಳೆಯ ಲಾಭ ಇರೋದ್ರಿಂದ ಈ ಸಂಪನ್ಮೂಲ ಅವ್ರನ್ನು ಅಕ್ರಮದಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತದೆ. ಅಷ್ಟಕ್ಕೂ ಈ ಅಕ್ರಮ ಗಣಿಗಾರಿಕೆಗಳು ಆಫ್ರಿಕಾದ ಯಾವ್ಯಾವ ದೇಶದಲ್ಲಿ ಇದೆ ಅಂತ ನೋಡುವುದಾದ್ರೆ, ಈಗ ದುರಂತ ನಡೆದಿರೋ ಸುಡಾನ್ ಹಾಗೂ ದಕ್ಷಿಣಾ ಆಫ್ರಿಕಾ ಮೊದಲ ಸ್ಥಾನದಲ್ಲಿವೆ. ಸುಡಾನ್‌ನ ಡಾರ್ಫುರ್ ಹಾಗೂ ಕಾರ್ಡೊಫಾನ್ ಪ್ರದೇಶಗಳು ಹಾಗೂ ದಕ್ಷಿಣ ಆಫ್ರಿಕಾದ ಹಳೆಯ ತ್ಯಜಿಸಲ್ಪಟ್ಟ ಗಣಿಗಳಲ್ಲಿ ಇದು ಅತೀ ಹೆಚ್ಚು ಕಾಣಿಸುತ್ತದೆ. ಮಧ್ಯ ಆಫ್ರಿಕನ್ ಗಣರಾಜ್ಯ, ಕ್ಯಾಮರೂನ್ ಹಾಗೂ ಡಿ.ಆರ್.ಕಾಂಗೋ ದೇಶಗಳ ಗಡಿ ಭಾಗಗಳಲ್ಲಿ ವಿದೇಶಿ ಹೂಡಿಕೆದಾರರ ನೇತೃತ್ವದಲ್ಲಿ ಸಾವಿರಾರು ಅನಧಿಕೃತ ಮುಕ್ತ ಗಣಿಗಳು ಕಾರ್ಯಾಚರಣೆ ನಡೆಸುತ್ತಿವೆ. ಇನ್ನು ಘಾನಾ, ಮಾಲಿ ಹಾಗೂ ಬುರ್ಕಿನಾ ಫಾಸೊ ಈ ಪಶ್ಚಿಮ ಆಫ್ರಿಕಾದ ಈ ದೇಶಗಳಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಚಿನ್ನದ ಕಳ್ಳಸಾಗಣೆಯು ಬಿಲಿಯನ್‌ಗಟ್ಟಲೆ ಡಾಲರ್ ಮೌಲ್ಯದ ಕಪ್ಪುಹಣವನ್ನು ಸೃಷ್ಟಿಸುತ್ತಿದೆ.

99
ಸಕ್ರಮಕ್ಕಿಂತ ಅಕ್ರಮ ಗಣಿಗಾರಿಕೆಯೇ ಏಕೆ ? ಅಕ್ರಮ ಚಿನ್ನದ ಗಣಿಗಾರಿಕೆ ಏಕೆ ಬಂದ್ ಆಗ್ತಿಲ್ಲ ?

ಇಷ್ಟೊಂದು ಅಕ್ರಮ ಗಣಿಗಾರಿಕೆಗಳು ಕೆಲಸ ಮಾಡುತ್ತಿವೆ ಏಂದಾದ್ರೆ, ಸಕ್ರಮ ಏಕಿಲ್ಲ ಅನ್ನೋ ಪ್ರಶ್ನೆ ಮೂಡತ್ತದೆ.. ಹೌದು, ಕಠಿಣ ಹಾಗೂ ದುಬಾರಿ ಪರವಾನಗಿ ಪ್ರಕ್ರಿಯೆ.. ಸರ್ಕಾರಗಳು ಗಣಿಗಾರಿಕೆಗೆ ವಿಧಿಸುವ ಕಾನೂನುಗಳು ಅತ್ಯಂತ ಸಂಕೀರ್ಣವಾಗಿದ್ದು, ಸಾಮಾನ್ಯ ಬಡ ಕಾರ್ಮಿಕರಿಗೆ ಲೈಸನ್ಸ್ ಪಡೆಯುವುದು ಅಸಾಧ್ಯ. ಅಕ್ರಮ ಚಿನ್ನವನ್ನು ಸುಲಭವಾಗಿ ದುಬೈ, ಟರ್ಕಿ ಹಾಗೂ ಯುರೋಪಿಗೆ ಕಳ್ಳಸಾಗಣೆ ಮಾಡಲು ಇಲ್ಲಿ ಬಲವಾದ ಜಾಲಗಳಿವೆ. ಇಲ್ಲಿನ ಸರ್ಕಾರಿ ಮಾರುಕಟ್ಟೆಗಿಂತ ಬ್ಲಾಕ್ ಮಾರ್ಕೆಟ್ನಲ್ಲಿ ಹೆಚ್ಚು ಲಾಭ ಸಿಗುತ್ತದೆ. ಆಫ್ರಿಕಾ ದೇಶಗಳಲ್ಲಿ ಅಕ್ರಮ ಚಿನ್ನದ ಗಣಿಗಾರಿಕೆಗಳು ತುಂಬಿ ತುಳುಕುತ್ತಿವೆ. ಈ ವಿಷ್ಯ ಇಲ್ಲಿನ ಸರ್ಕಾರಗಳಿಗೆ ಗೊತ್ತಿಲ್ಲದೆ ಏನಿಲ್ಲ ಎಲ್ಲವೂ ಗೊತ್ತಿದೆ. ಹೀಗಿದ್ರೂ ಇಲ್ಲಿನ ಅಕ್ರಮ ಗಣಿಗಾರಿಕೆಯನ್ನಾಗಲಿ. ಚಿನ್ನದ ಸ್ಮಗ್ಲಿಂಗ್ನಾಗಲಿ ನಿಲ್ಲಿಸೋದಕ್ಕೆ ಸಾಧ್ಯವಾಗ್ತಿಲ್ಲ.

ಆಫ್ರಿಕಾದ ಬಹುತೇಕ ರಾಷ್ಟ್ರಗಳಲ್ಲಿ ಅಕ್ರಮ ಚಿನ್ನದ ಗಣಿಗಾರಿಕೆ ನಡೆಯುತ್ತಿದೆ ಅನ್ನೋದು ಜಗತ್ತಿಗೆ ಗೊತ್ತಿದೆ. ಇಷ್ಟಾದ್ರೂ ಸರ್ಕಾರಗಳು ಇದನ್ನು ತಡೆಯೋದಕ್ಕೆ ಸಂಪೂರ್ಣವಾಗಿ ವಿಫಲವಾಗಿವೆ. ಯಾಕಂದ್ರೆ? ವ್ಯಾಪಕ ಭ್ರಷ್ಟಾಚಾರ ಇರೋದು ಅತ್ಯಂತ ಮುಖ್ಯ ಕಾರಣವಾಗಿದೆ. ಗಣಿ ಇಲಾಖೆಗಳು, ಭದ್ರತಾ ಪಡೆಗಳು ಹಾಗೂ ರಾಜಕೀಯ ಪ್ರಭಾವಿಗಳು ಅಕ್ರಮ ಗಣಿಗಾರಿಕೆ ಮಾಫಿಯಾದಿಂದ ಕೋಟ್ಯಂತರ ರೂಪಾಯಿ ಲಂಚ ಪಡೆದುಕೊಳ್ಳುತ್ತವೆ. ಹೀಗಾಗಿ ತಮ್ಮ ಮುಂದೆಯೇ ಅಕ್ರಮ ನಡೆಯುತ್ತಿದ್ರೂ ತಮಗೂ ಅದಕ್ಕೂ ಸಂಬಂಧವೇ ಇಲ್ಲ ಅನ್ನೋ ರೀತಿಯಲ್ಲಿ ಇರ್ತಾರೆ. ಸರ್ಕಾರದ ಹಿಡಿತವಿಲ್ಲದ ಪ್ರದೇಶಗಳೇ ಇಲ್ಲಿ ಹೆಚ್ಚಾಗಿವೆ. ಸುಡಾನ್ ಹಾಗೂ ಡಿ.ಆರ್.ಕಾಂಗೋದಂತಹ ದೇಶಗಳಲ್ಲಿ ಅಂತರ್ಯುದ್ಧ ನಡೆಯುತ್ತಿದ್ದು, ಸರ್ಕಾರದ ಬದಲಿಗೆ ಪ್ರತ್ಯೇಕತಾವಾದಿ ಬಂಡಾಯ ಗುಂಪುಗಳು ಮತ್ತು ಅರೆಪರಾಮರಿಕ ಪಡೆಗಳು ಈ ಗಣಿಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಆದಾಯ ಗಳಿಸುತ್ತಿವೆ. ಸರ್ಕಾರದ ಬಳಿ ವಿಶಾಲವಾದ ಗಣಿ ಪ್ರದೇಶಗಳನ್ನು ಕಾವಲು ಕಾಯಲು ಅಥವಾ ರಕ್ಷಿಸಲು ಅಗತ್ಯವಿರುವ ಆಧುನಿಕ ತಂತ್ರಜ್ಞಾನ ಮತ್ತು ಸಿಬ್ಬಂದಿ ಬಲವಿಲ್ಲದಿರುವುದು ಇಲ್ಲಿನ ಕಳ್ಳರಿಗೆ ವರದಾನವಾಗಿದೆ. ಹೀಗಾಗಿ ಸರ್ಕಾರದ ನಿರ್ಲಕ್ಷ್ಯ , ವ್ಯವಸ್ಥೆಯ ವೈಫಲ್ಯದಿಂದಾಗಿ ಆಫ್ರಿಕಾದ ಮಣ್ಣಿನಲ್ಲಿ ಪ್ರತಿದಿನ ನೂರಾರು ಬಡ ಕಾರ್ಮಿಕರ ರಕ್ತ ಹರಿಯುತ್ತಲೇ ಇದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories