ಸುರಂಗದಲ್ಲಿ ಬರೋಬ್ಬರಿ ಒಂಭತ್ತು ದಿನಗಳ ಕಾಲ ಸಿಲುಕಿಕೊಂಡಿದ್ದ ಕಾರ್ಮಿಕರಲ್ಲಿ ಮೊದಲಿಗೆ ರಕ್ಷಿಸಿದ್ದು ಸಂಜಯ್ ಶಾ. 30 ವರ್ಷದ ಸಂಜಯ್ ಶಾ. ಅವರು ನೇಪಾಳ ವಿದ್ಯುತ್ ಪ್ರಾಧಿಕಾರದಲ್ಲಿ ಮೆಕ್ಯಾನಿಕಲ್ ಫೋರ್‌ಮನ್ ಆಗಿ ಕೆಲಸ ಮಾಡುತ್ತಿದ್ದರು. ಜೀವಂತ ರಕ್ಷಿಸಿದ ಬಳಿಕ ಸಂಜಯ್ ಅವರನ್ನು ತಕ್ಷಣವೇ ತ್ರಿಶೂಲಿ ಸೇನಾ ಬ್ಯಾರಕ್‌ಗೆ ಕರೆದೊಯ್ದು ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಅದಾದ ಬಳಿಕ 45 ವರ್ಷದ ಕಬೀರ್ ಮಹರ್ಜನ್ ಅವರನ್ನೂ ಸುರಂಗದಿಂದ ಸುರಕ್ಷಿತವಾಗಿ ಹೊರತರಲಾಯಿತು. ಅವರು ತ್ರಿಶೂಲಿ-3 'ಎ' ಜಲವಿದ್ಯುತ್ ಯೋಜನೆಯಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು.
ಅಧಿಕಾರಿಗಳ ಪ್ರಕಾರ, ಇಬ್ಬರೂ ಸುರಂಗದ ಸುಮಾರು 170 ಮೀಟರ್ ಒಳಗೆ ಸಿಲುಕಿಕೊಂಡಿದ್ದರು ಎಂಬುದೇ ಅದೆಷ್ಟು ಭಯಾನಕ ಸೃಷ್ಟಿಯಾಗಿತ್ತು ಎಂಬುದು ಊಹಿಸಿ. ಭೀಕರ ಪ್ರವಾಹ, ಸುರಂಗದೊಳಗಿಂದ ಹೊರಬರಲಾಗದೆ ಮುಂದೇನು ಎಂಬ ಆತಂಕದ ನಡುವೆ ಒಂಭತ್ತು ದಿನಗಳ ಕಾಲ ಜೀವಂತವಾಗಿದ್ದರು.
ಈಗ ನನ್ನ ಹೃದಯ ಹಗುರವಾಗಿದೆ
ಸುರಂಗದೊಳಗೆ ಕೆಟ್ಟ ಅನುಭವ ನೆನೆದು ಕಾರ್ಮಿಕ ಕಬೀರ್ ಮಹರ್ಜನ್ ಕುಟುಂಬಸ್ಥರು ಪ್ರತಿಕ್ರಿಯಿಸಿದ್ದು ಕಬೀರ್ ಮಹರ್ಜನ್ ರಕ್ಷಿಸಲ್ಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿತು. 'ನನಗೆ ತುಂಬಾ ಸಂತೋಷವಾಗಿದೆ. ನನ್ನ ಹೃದಯ ಹಗುರವಾಗಿದೆ' ಎಂದು ಕಬೀರ್ ಅವರ ಸಹೋದರ ಅಮೀರ್ ಮಹರ್ಜನ್ ಭಾವುಕರಾದರು. ಕಬೀರ್ ಅವರ ಪತ್ನಿ ಕೂಡ ಪತಿಯ ಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದು, ಸುರಂಗದಿಂದ ಹೊರತೆಗೆದಾಗ ಅವರು ಪ್ರಜ್ಞೆಯಲ್ಲಿದ್ದರು. ಅವರನ್ನು ಕಠ್ಮಂಡುವಿನ ಛೌನಿ ಸೇನಾ ಆಸ್ಪತ್ರೆಗೆ ಕರೆದೊಯ್ಯಲಾಯ್ತು ಎಂದು ತಿಳಿಸಿದ್ದಾರೆ..
ಕೆಸರು ಮಣ್ಣಿನ ನಡುವೆ ಬದುಕುವ ಭರವಸೆ
ರಕ್ಷಣಾ ಕಾರ್ಯಾಚರಣೆಯ ದೃಶ್ಯಗಳು ಮನಕಲಕುವಂತಿದ್ದವು. ನೇಪಾಳ ಸೇನೆಯ ಸಿಬ್ಬಂದಿ ಸುರಂಗದಿಂದ ಹೊರಬರುವಾಗ ಕಾರ್ಮಿಕರು ಕೆಸರು ಮತ್ತು ಮಣ್ಣಿನಿಂದ ಸಂಪೂರ್ಣ ಮುಚ್ಚಿಕೊಂಡಿದ್ದರು. ಒಬ್ಬ ಕಾರ್ಮಿಕನನ್ನು ಸಿಬ್ಬಂದಿ ಹೆಗಲ ಮೇಲೆ ಹೊತ್ತು ತಂದರೆ, ಮತ್ತೊಬ್ಬರನ್ನು ಸ್ಟ್ರೆಚರ್‌ನಲ್ಲಿ ಹೊರಗೆ ತರಲಾಯಿತು. ಈ ದೃಶ್ಯಗಳು ಸುರಂಗದ ಆಳಕ್ಕೆ ರಕ್ಷಣಾ ತಂಡ ತಲುಪಿರುವುದನ್ನು ಮಾತ್ರವಲ್ಲ, ಅದರೊಳಗೆ ಸಿಲುಕಿದ್ದವರು ಇನ್ನೂ ಬದುಕಿರುವ ಸಾಧ್ಯತೆಯನ್ನೂ ಹೆಚ್ಚಿಸಿವೆ.