ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿಯಲ್ಲಿ (Seetha Raama) ಕಥೆ ಏನಾಗ್ತಿದೆ ಅನ್ನೋದು ನಿಮಗೆ ಗೊತ್ತೆ ಇದೆ. ಪುಟಾಣಿ ಸಿಹಿ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ. ಸೀತಾ ತಲೆಗೆ ಪೆಟ್ಟಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ. ಎಚ್ಚರವಾದ ತಕ್ಷಣ ಸಿಹಿ ಬಗ್ಗೆ ವಿಚಾರಿಸಿದ್ದಾಳೆ. ಸಿಹಿ ಮನೆಯಲ್ಲಿ ಕಾಯ್ತಿದ್ದಾಳೆ ಎನ್ನುವ ಸುಳ್ಳು ನಂಬಿಕೆಯಲ್ಲಿ ಮನೆಗೆ ಹಿಂದಿರುಗಿದ್ದಾಳೆ ಸೀತಾ.
ಸೀತಾ ಮನೆಯೊಳಗೆ ಕಾಲಿಡುತ್ತಿದ್ದಂತೆ ಸಿಹಿ ತನಗಾಗಿ ಏನೋ ಮಾಡಿದ್ದಾಳೆ, ಎನ್ನುವ ಕಾತರದಲ್ಲಿ ಸಿಹಿಗಾಗಿ ಮನೆಯೆಲ್ಲಾ ಹುಡುಕಾಟ ನಡೆಸಿದ್ದಾಳೆ. ಎಲ್ಲಾದಕ್ಕಿಂತ ಮೊದಲು ಸಿಹಿಯನ್ನು ನೋಡಬೇಕು, ಸಿಹಿ ಜೊತೆ ಮಾತನಾಡಬೇಕು, ಎನ್ನುವ ಕಾತರದಲ್ಲಿ ಮನೆಯ ಮೂಲೆ ಮೂಲೆಯಲ್ಲಿ ಹುಡುಕಾಡುತ್ತಿದ್ದಾಳೆ.
ಇನ್ನೊಂದು ಕಡೆ ಸಿಹಿ ಸಾವನ್ನಪ್ಪಿದ ನಂತರ ಪ್ರೇತಾತ್ಮವಾಗಿ ಅಲೆದಾಡುತ್ತಿದ್ದಾಳೆ ಸಿಹಿ, ಯಾಕೆ ನನ್ನನ್ನು ಯಾರು ನೋಡ್ತಾ ಇಲ್ಲ, ಯಾರಿಗೂ ಯಾಕೆ ನಾನು ಕಾಣಿಸ್ತಾ ಇಲ್ಲ ಎನ್ನುವ ಗೊಂದಲದಲ್ಲಿದ್ದಾಳೆ. ಸಿಹಿಯನ್ನು ಪ್ರೇತವಾಗಿ ನೋಡಿ ವೀಕ್ಷಕರು ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡಿದ್ದಾರೆ. ಸಿಹಿಯ ಸಾವಿನ ನಂತ್ರ ಹೆಚ್ಚಿನ ವೀಕ್ಷಕರು ನಾವಿನ್ನು ಸೀರಿಯಲ್ ನೋಡೋದಿಲ್ಲ ಅಂತಾನೂ ಹೇಳಿದ್ರು.
ಆದ್ರೆ ಸಿಹಿ ಸಾವನ್ನಪ್ಪಿದ್ದರೂ ಸಹ ಆಕೆ ಎಂದಿಗೂ ದೂರ ಹೋಗದ ಹಾಗೇ ಆಕೆಯ ಆತ್ಮವನ್ನು ವೀಕ್ಷಕರಿಗೆ ಕಾಣಿಸುವಂತೆ ಮಾಡಿದ್ದಾರೆ. ಆ ಮೂಲಕ ಸಿಹಿ ಪಾತ್ರವನ್ನು ಒಂದು ರೀತಿಯಲ್ಲಿ ಕೊನೆಗೊಳಿಸಿ ಸಹ, ಕೊನೆಯಾಗದಂತೆ ಮಾಡಿದ್ದಾರೆ. ಇನ್ನು ಮುಂದೆ ಸುಬ್ಬಿ ಪಾತ್ರದ ಎಂಟ್ರಿಯಾದ ಮೇಲೆ ಎಪಿಸೋಡ್ ಗಳು ತುಂಬಾನೆ ಇಂಟ್ರೆಸ್ಟಿಂಗ್ ಆಗಲಿದೆ ಎನ್ನುವ ಕುತೂಹಲ ಇದೆ.
ಯಾಕಂದರೆ ಈಗಾಗಲೇ ತೋರಿಸಿರುವ ಪ್ರೊಮೋದಂತೆ ಯಾರಿಗೂ ಕಾಣದ ಸಿಹಿ ಸುಬ್ಬಿಗೆ ಮಾತ್ರ ಕಾಣಿಸುತ್ತಾಳೆ. ಹಾಗಾಗಿ ಮುಂದೆ ಭಾರ್ಗವಿಯ ಪ್ಲ್ಯಾನ್ ಗಳನ್ನು ಅರಿಯುವ ಸಿಹಿ, ಅದನ್ನ ಸುಬ್ಬಿಗೆ ತಿಳಿಸಿ, ಸುಬ್ಬಿ ಮೂಲಕ ಹುಚ್ಚಿಯಾಗಿರುವ ಸೀತಾಳನ್ನು ಸರಿ ಪಡಿಸುವ ಹಾಗೂ ಭಾರ್ಗವಿಯ ಕಳ್ಳ ಮುಖವಾಡವನ್ನು ಕಳಚುವ ಕೆಲಸ ಖಂಡಿತವಾಗಿಯೂ ಮಾಡುವ ಸಾಧ್ಯತೆ ಇದೆ.
ಇದೆಲ್ಲದರ ನಡುವೆ ಇದೀಗ ಭಾರ್ಗವಿ ಲುಕ್ (Bhargavi Look) ಬದಲಾಗಿದೆ. ಮೊದಲೆಲ್ಲಾ ದೊಡ್ಡ ದೊಡ್ಡ ಕಿವಿಯೋಲೆ, ದೊಡ್ಡದಾದ ನೆಕ್ಲೆಸ್, ಝರಿ ಸೀರೆಯುಟ್ಟು ಮೆರೆಯುತ್ತಿದ್ದ ಭಾರ್ಗವಿ, ಇದೀಗ ಸಿಂಪಲ್ ಆಗಿ ಸೀರೆಯುಟ್ಟು, ಸಿಂಪಲ್ ಆಗಿ ಕರಿಮಣಿ ತೊಟ್ಟು, ಬೊಟ್ಟು ಹಾಕಿಕೊಂಡಿರೋದು ನೋಡಿ ಖುಷಿಯಾಯ್ತು ಅಂತಿದ್ದಾರೆ ವೀಕ್ಷಕರು.
ಅಷ್ಟೇ ಅಲ್ಲ, ಭಾರ್ಗವಿಯ ಮುಖವಾಡ ಕಳಚಿ ಬೀಳೋ ಥರ ಮಾಡಿ, ಅವಾಗಲಾದರೂ ಸಿಹಿ ಆತ್ಮಕ್ಕೆ ಶಾಂತಿ ಸಿಗುತ್ತೆ. ಭಾರ್ಗವಿಯನ್ನು ಗೆಲ್ಲುವ ಹಾಗೆ ಮಾಡಿ ಕಥೆಯನ್ನೇ ಹಾಳು ಮಾಡಬೇಡಿ. ಸೀತಾ ನೋವನ್ನ ನೋಡೋದಕ್ಕೆ ಆಗಲ್ಲ, ದಯವಿಟ್ಟು ಭಾರ್ಗವಿಗೆ ಶಿಕ್ಷೆ ಆಗುವಂತೆ ಮಾಡಿ ಎನ್ನುತ್ತಿದ್ದಾರೆ ಜನ.