ಸ್ಟಾರ್ ಸುವರ್ಣದಲ್ಲಿ (Star Suvarna) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಗಿ ನೀನಾದೆ ನಾ, ತನ್ನ ವಿಭಿನ್ನ ಕಥೆಯಿಂದಲೇ ಜನರಿಗೆ ಇಷ್ಟವಾಗಿದೆ. ವೇದಾ ವಿಕ್ರಂ ಪಾತ್ರವನ್ನು ಭಾರಿ ಜನಪ್ರಿಯತೆ ಪಡೆದಿದೆ. ಅದರೊಂದಿಗೆ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶೈಲೂ ಪಾತ್ರವನ್ನು ಸಹ ಜನ ಇಷ್ಟಪಟ್ಟಿದ್ದಾರೆ.
ಯಾವಾಗಲೂ ವೇದಾ ಮತ್ತು ವಿಕ್ರಂರನ್ನು ಕೀಳಾಗಿ ಕಾಣುವ, ವೇದಾಳಿಗೆ ಹಿಂಸೆ ಕೊಡಲು ಏನೇನೋ ಕಿತಾಪತಿ ನೀಡುವ, ಯಾವಾಗಲೂ ತನ್ನ ಬಗ್ಗೆ ಮಾತ್ರ ಚಿಂತಿಸುವ ಸ್ವಾರ್ಥಿ ಶೈಲೂ ಪಾತ್ರದಲ್ಲಿ ಭವ್ಯ ಪೂಜಾರಿ (Bhavya Poojary) ನಟಿಸಿದ್ದರು.
ರಮೇಶ್ ಅರವಿಂದ್ ನಿರ್ಮಾಣದ ನೀನಾದೆ ನಾ (Neenade Naa) ಸೀರಿಯಲ್ 300 ಸಂಚಿಕೆಗಳನ್ನು ಪೂರ್ಣಗೊಳಿಸಿದ್ದು, ಈ ಎಲ್ಲಾ ಸಂಚಿಕೆಗಳಲ್ಲೂ ಶೈಲೂ ಪಾತ್ರದಲ್ಲಿ ಭವ್ಯ ಪೂಜಾರಿ ಅದ್ಭುತವಾಗಿ ನಟಿಸಿದ್ದರು, ಜನರಿಗೂ ಸಹ ಈ ಪಾತ್ರ ಇಷ್ಟವಾಗಿತ್ತು, ಇದೀಗ ಶೈಲೂ ಪಾತ್ರದಿಂದ ತಾನು ಹೊರಬಂದಿರೋದಾಗಿ ಭವ್ಯ ಹೇಳಿಕೊಂಡಿದ್ದಾರೆ.
ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಭವ್ಯ ಪೂಜಾರಿ ನಮಸ್ಕಾರ. ಕಳೆದ ಒಂದು ವರ್ಷದಿಂದ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನೀನಾದೆ ನಾ' ಧಾರಾವಾಹಿಯಲ್ಲಿ ನನ್ನ 'ಶೈಲೂ' ಪಾತ್ರಕ್ಕೆ ಜೀವ ತುಂಬಿ, ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ... ಇದೀಗ ವೈಯುಕ್ತಿಕ ಕಾರಣಗಳಿಂದ, ಆ ಪಾತ್ರದಿಂದ ಹೊರ ಬಂದಿದ್ದೇನೆ.
ಈ ಸಂದರ್ಭದಲ್ಲಿ ಇಂತಹ ಅದ್ಭುತವಾದ ಅವಕಾಶವನ್ನು ನೀಡಿದ ರಮೇಶ್ ಅರವಿಂದ್ (Ramesh Aravind) ಸರ್ ಅವರಿಗೆ, ರವಿ ಜೋಶಿ ಸಾರ್ ಅವರಿಗೆ ಹಾಗೂ ಸ್ಟಾರ್ ಸುವರ್ಣವಾಹಿನಿಯವರಿಗೆ ನನ್ನ ಹೃದಯಂತರಾಳದ ಧನ್ಯವಾದಗಳು. ನನ್ನ ಈ ಪಯಣದಲ್ಲಿ ಜೊತೆಯಾದ ಧಾರಾವಾಹಿಯ ಎಲ್ಲಾ ತಾಂತ್ರಿಕ ಕುಟುಂಬಕ್ಕೆ ಹಾಗೂ ಕಲಾವಿದ ಸ್ನೇಹಿತರಿಗೆ ನನ್ನ ನಮನ ಎಂದಿದ್ದಾರೆ.
ಜೊತೆಗೆ ಇಷ್ಟು ದಿನ ನೀವೆಲ್ಲರೂ ನನ್ನ 'ಶೈಲೂ' ಪಾತ್ರವನ್ನು ಮನಸಾರೆ ಮೆಚ್ಚಿ, ಹರಸಿದಿರಿ. ನಿಮ್ಮ ಪ್ರೀತಿಗೆ ನಾನು ಋಣಿ. ನಿಮಗೆಲ್ಲ ನನ್ನ ಕೋಟಿ ನಮನ. ಭೂಮಿ ದುಂಡಗಿದೆ...ಮತ್ತೊಂದು ಪಾತ್ರದೊಂದಿಗೆ, ಮತ್ತೆ ನಿಮ್ಮ ಮುಂದೆ ಬರುತ್ತೆನೆ. ಆಗ ಮತ್ತೆ ಭೇಟಿಯಾಗೋಣ. ಸದಾ ನಿಮ್ಮ ಆಶೀರ್ವಾದ, ಪ್ರೀತಿ ಇರಲಿ. ಧನ್ಯವಾದಗಳು ಎಂದು ಭವ್ಯಾ ಬರೆದುಕೊಂಡಿದ್ದಾರೆ.
ಮಂಗಳೂರು ಮೂಲದ ನಟಿ ಭವ್ಯ ಪೂಜಾರಿ ಸೀರಿಯಲ್ ನಿಂದ ಹೊರಬಂದದ್ದು ಕೇಳಿ ಅಭಿಮಾನಿಗಳು ನಿರಾಸೆಗೊಂಡಿದ್ದು, ನಿಮ್ಮ ಪಾತ್ರ ತುಂಬಾನೆ ಚೆನ್ನಾಗಿತ್ತು, ನಿಮ್ಮನ್ನು ಮಿಸ್ ಮಾಡಲಿದ್ದೇವೆ, ನಿಮ್ಮ ನಟನೆ ತುಂಬಾನೆ ಚೆನ್ನಾಗಿತ್ತು. ಆ ಪಾತ್ರದಿಂದ ಹೊರ ಬರಬೇಡಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.