ಜಾಲಿವುಡ್‌ ಸ್ಟುಡಿಯೋ ಕಾರ್ಯಾಚರಣೆಗೆ ಅನುಮತಿ ಇಲ್ಲ, ಡಿಕೆಶಿ ಆದೇಶ ಬೆನ್ನಲ್ಲೇ ರೆಸಾರ್ಟ್‌ನಿಂದ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ ಶಿಫ್ಟ್!

Published : Oct 09, 2025, 01:13 PM IST

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆದೇಶದ ಮೇರೆಗೆ, ಮಾಲಿನ್ಯ ನಿಯಮ ಉಲ್ಲಂಘನೆಗಾಗಿ ಸೀಲ್ ಮಾಡಲಾಗಿದ್ದ ಬಿಡದಿಯ ಜಾಲಿವುಡ್ ಸ್ಟುಡಿಯೋವನ್ನು ಮಧ್ಯರಾತ್ರಿ ತೆರೆಯಲಾಗಿದೆ.  ರೆಸಾರ್ಟ್‌ಗೆ ಸ್ಥಳಾಂತರಗೊಂಡಿದ್ದ ಸ್ಪರ್ಧಿಗಳು ಮತ್ತೆ ಮನೆಗೆ ವಾಪಸ್ಸಾಗಿದ್ದಾರೆ. 

PREV
15
ಬಿಗ್ ಬಾಸ್ ಮನೆಗೆ ಸ್ಪರ್ಧಿಗಳು ವಾಪಸ್

ಕನ್ನಡದ ರಿಯಾಲಿಟಿ ಶೋ ಬಿಗ್‌ಬಾಸ್ 12ನೇ ಆವೃತ್ತಿ ಎಂದಿನಂತೆ ಮತ್ತೆ ಶುರುವಾಗಿದೆ. ಎರಡು ದಿನಗಳಿಂದ ಖಾಲಿಯಾಗಿದ್ದ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳು ವಾಪಸ್ಸಾಗಿದ್ದಾರೆ. ಕಲರ್ಸ್‌ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ರಿಲೀಸ್ ಆಗಿರುವ ಪ್ರೊಮೋದಲ್ಲಿ ಬಿಗ್‌ಬಾಸ್‌ ಮನೆಯ ಒಂದೊಂದು ಭಾಗವನ್ನು ತೋರಿಸಿದ್ದಾರೆ. ಮನೆಯಲ್ಲಿ ಯಾವುದೇ ಸ್ಪರ್ಧಿಗಳು ಇಲ್ಲ. ಇದಾದ ಬಳಿಕ ಎಂದಿನಂತೆ ಅದೇ ಸಮಯದಲ್ಲಿ ಬಿಗ್‌ಬಾಸ್ ರಾತ್ರಿ 9.30ಕ್ಕೆ ಎಂದು ಹೇಳಿದ್ದಾರೆ.

25
ಡಿಕೆಶಿ ಆದೇಶಕ್ಕೆ ಬಿಗ್‌ಬಾಸ್ ಮನೆ ಓಪನ್

ರಾಮನಗರ: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಆದೇಶದ ಬೆನ್ನಲ್ಲೇ ಮಧ್ಯರಾತ್ರಿ ಬಿಡದಿ ಬಳಿ ಇರುವ ಬಿಗ್‌ಬಾಸ್‌ ಮನೆಯನ್ನು ತೆರೆಯಲಾಗಿದ್ದು ಸ್ಪರ್ಧಿಗಳನ್ನು ಮತ್ತೆ ಬಿಗ್‌ಬಾಸ್‌ ಮನೆಗೆ ಶಿಫ್ಟ್‌ ಮಾಡಲಾಗಿದೆ. ನಸುಕಿನ ಜಾವ 2:45ಕ್ಕೆ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಎಸ್‌ಪಿ ಶ್ರೀನಿವಾಸ್ ಗೌಡ, ತಹಶಿಲ್ದಾರ್ ತೇಜಸ್ವಿನಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಆಗಮಿಸಿ ಜಾಲಿವುಡ್‌ ಸ್ಟುಡಿಯೋದ ಗೇಟ್‌ ಸೀಲ್‌ ಓಪನ್‌ ಮಾಡಿದ್ದಾರೆ.

ಈ ವೇಳೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಿರ್ದೇಶನದಂತೆ ತೆರೆದಿದ್ದೇವೆ. ಜಾಲಿವುಡ್‌ ಸಂಪೂರ್ಣ ಕಾರ್ಯಾಚರಣೆ ನಡೆಸಲು ಅವಕಾಶ ನೀಡಿಲ್ಲ. ಕೇವಲ ಬಿಗ್ ಬಾಸ್ ಶೋ ಸ್ಪರ್ಧಿಗಳು, ಸಿಬ್ಬಂದಿ ಓಡಾಟ ಹಾಗೂ ಅಗತ್ಯ ವಸ್ತುಗಳ ಬಳಕೆಗೆ ಅವಕಾಶ ಕೊಡಲಾಗಿದೆ. ಬಿಗ್ ಬಾಸ್ ಶೂಟಿಂಗ್ ಆರಂಭದ ಬಗ್ಗೆ ನಾಳೆ ತೀರ್ಮಾನ ಆಗಲಿದೆ ಎಂದು ತಿಳಿಸಿದರು.

35
ಕಳೆದ ಎರಡು ದಿನಗಳಿಂದ ಸ್ಟುಡಿಯೋ ಸೀಜ್

ಕಳೆದ ಎರಡು ದಿನಗಳಿಂದ ಜಾಲಿವುಡ್ ಸ್ಟುಡಿಯೋವನ್ನು ಸೀಜ್ ಮಾಡಲಾಗಿತ್ತು. ಹೀಗಾಗಿ ಬಿಗ್‌ಬಾಸ್ ಶೂಟಿಂಗ್ ಸ್ಥಗಿತಗೊಂಡಿತ್ತು. ಸದ್ಯ ಬಿಗ್‌ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳನ್ನು ಸಮೀಪದ ಈಗಲ್ಟನ್‌ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿತ್ತು. ಇದೀಗ ಮತ್ತೆ ಬಿಗ್‌ಬಾಸ್ ಮನೆಗೆ 17 ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸಂಸ್ಥೆಯು ಮನರಂಜನೆ ಹಾಗೂ ಇತರ ಸಾಹಸ ಚಟುವಟಿಕೆಗಳನ್ನು ನಡೆಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿರಲಿಲ್ಲ. ಹೀಗಾಗಿ ಮಂಡಳಿಯು ಜಾಲಿವುಡ್‌ನಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ, ಪೊಲೀಸ್ ಭದ್ರತೆಯಲ್ಲಿ ಜಾಲಿವುಡ್‌ಗೆ ಬೀಗ ಹಾಕಲಾಗಿತ್ತು.

45
ಡಿ.ಕೆ ಶಿವಕುಮಾರ್ ಹೇಳಿದ್ದೇನು?

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡ ಡಿಸಿಎಂ ಡಿ.ಕೆ ಶಿವಕುಮಾ‌ರ್ ಅವರು, 'ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗೆ ಬಿಡದಿಯಲ್ಲಿರುವ 'ಬಿಗ್ ಬಾಸ್ ಕನ್ನಡ' ಚಿತ್ರೀಕರಣ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ಡೆಂಚರ್ಸ್ ಪಾರ್ಕ್‌ನ ಬೀಗ ತೆರವುಗೊಳಿಸುವಂತೆ ಸೂಚಿಸಿದ್ದೇನೆ. ಪರಿಸರ ನಿಯಮ ಪಾಲನೆ ಆದ್ಯತಾ ವಿಷಯವಾಗಿದ್ದರೂ, ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡಗಳಿಗೆ ಅನುಗುಣವಾಗಿ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ವಿಇಎಲ್‌ಎಸ್ ಸ್ಟುಡಿಯೋಸ್ ಆ್ಯಂಡ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್‌ ಲಿಮಿಟೆಡ್‌ಗೆ ಸಮಯಾವಕಾಶ ನೀಡಲಾಗುವುದು. ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿ ಎತ್ತಿಹಿಡಿಯವುದರ ಜತೆಗೆ, ಕನ್ನಡ ಮನರಂಜನಾ ಉದ್ಯಮಕ್ಕೆ ನನ್ನ ಬೆಂಬಲ ಸದಾ ಇರುತ್ತದೆ' ಎಂದು ಬರೆದುಕೊಂಡಿದ್ದಾರೆ.

55
ಕಿಚ್ಚ ಸುದೀಪ್ ಹೇಳಿದ್ದೇನು?

ಇನ್ನು, ಡಿ.ಕೆ ಶಿವಕುಮಾರ್ ಅವರ ಟ್ವಿಟ್ ಅನ್ನು ರೀಟ್ವಿಟ್ ಮಾಡಿದ ಕಿಚ್ಚ ಸುದೀಪ್, 'ಸಕಾಲದಲ್ಲಿ ಬೆಂಬಲ ನೀಡಿದ ಮಾನ್ಯ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾ‌ರ್ ಅವರಿಗೆ ಧನ್ಯವಾದಗಳನ್ನ ತಿಳಿಸುತ್ತೇನೆ. ಇತ್ತೀಚಿನ ಅವ್ಯವಸ್ಥೆ ಅಥವಾ ಗೊಂದಲಗಳಲ್ಲಿ 'ಬಿಗ್‌ ಬಾಸ್ ಕನ್ನಡ' ಭಾಗಿಯಾಗಿರಲಿಲ್ಲ ಎಂದು ಒಪ್ಪಿಕೊಂಡಿದ್ದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಕರೆಗೆ ತಕ್ಷಣ ಸ್ಪಂದಿಸಿದ್ದಕ್ಕಾಗಿ ಡಿಸಿಎಂ ಅವರಿಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ನಲಪಾಡ್ ಅವರ ಪ್ರಾಮಾಣಿಕ ಪ್ರಯತ್ನಗಳಿಗೆ ನನ್ನ ಧನ್ಯವಾದ. 'ಬಿಗ್ ಬಾಸ್ ಕನ್ನಡ 12' ಇಲ್ಲಿಯೇ ಇರುತ್ತದೆ' ಎಂದು ಬರೆದುಕೊಂಡಿದ್ದಾರೆ. ಸದ್ಯ ಡಿ.ಕೆ ಶಿವಕುಮಾ‌ರ್ ಅವರ ನಿರ್ದೇಶನದ ಮೇರೆಗೆ ಜಾಲಿವುಡ್ ಸ್ಟುಡಿಯೋಗೆ ಹಾಕಲಾಗಿದ್ದ ಬೀಗವನ್ನು ತೆರವು ಮಾಡಲಾಗಿದ್ದು, 'ಬಿಗ್‌ಬಾಸ್' ಮತ್ತೆ ಎಂದಿನಂತೆ ಶುರುವಾಗಲಿದೆ.

Read more Photos on
click me!

Recommended Stories