ಸೋಡಾಬುಡ್ಡಿ, ಕಪ್ಪು ವರ್ಣ, ಹಲ್ಲಿಗೆ ಕ್ಲಿಪ್, ಎಣ್ಣೆ ಬಳಿದ ಎರಡು ಜಡೆ, ಅದಕ್ಕೊಂದು ರಿಬ್ಬನ್.... ಹೌದು. ಇವಳೇ ಜೀ ಕನ್ನಡ ಬ್ರಹ್ಮಗಂಟು ಧಾರಾವಾಹಿಯ ನಾಯಕಿ ದೀಪಾ. ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ನಿಜ ಜೀವನದಲ್ಲಿ ಅದೆಷ್ಟೋ ಮಂದಿ ಮದುವೆಯಾಗಿ ಮೋಸ ಹೋದವರಿದ್ದಾರೆ. ಹುಡುಗ ಮತ್ತು ಹುಡುಗಿ ಇಬ್ಬರದ್ದೂ ಇದೇ ಕಥೆ. ಯುವತಿಯ ಬಾಹ್ಯ ಸೌಂದರ್ಯಕ್ಕೆ ಮನಸೋತು ಹುಡುಗರು ಅವರ ಹಿಂದೆ ಬಿದ್ದರೆ, ಹುಡುಗ ಸೌಂದರ್ಯದ ಜೊತೆಗೆ ಅವರಲ್ಲಿರುವ ಐಷಾರಾಮಿ ಸೌಲಭ್ಯ ನೋಡಿ ಹುಡುಗಿಯರೇ ಹುಡುಗರ ಹಿಂದೆ ಬಿದ್ದು ನರಕವನ್ನು ನೋಡುತ್ತಿರುವ ಹಲವಾರು ಉದಾಹರಣೆಗಳು ನಮ್ಮ ಕಣ್ಣೆದುರೇ ಇವೆ. ಒಂದಿಷ್ಟು ವರ್ಷಗಳಲ್ಲಿ ಕೊನೆಯಾಗುವ ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ಬದುಕುವ ಮನಸ್ಥಿತಿಯವರೇ ಬಹಳಷ್ಟು ಮಂದಿ ಇದ್ದಾರೆ. ಅದಕ್ಕಾಗಿಯೇ ಆಂತರಿಕ ಸೌಂದರ್ಯ ಗೌಣವಾಗಿಬಿಡುತ್ತದೆ. ಅದಕ್ಕೆ ಸಾಕ್ಷಿಯಾಗಿ ನಿಂತಿದೆ ಈ ಬ್ರಹ್ಮಗಂಟು ಸೀರಿಯಲ್. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮೇಲು ಎನ್ನುವ ಕ್ಯಾರೆಕ್ಟರ್ ನಾಯಕಿ ದೀಪಾಳದ್ದು.