ರೂಪಾಲಿ ಬಗ್ಗೆ ತಿಳಿಯದೇ ಇರುವವರ ಅರಿವಿಗಾಗಿ ಹೇಳುವುದಾದರೆ ರೂಪಾಲಿ ಅವರು 1998ರಲ್ಲಿ ಸುಕನ್ಯಾ ಎಂಬ ಟಿವಿ ಸಿರೀಯಲ್ ಮೂಲಕ ತಮ್ಮ ಚೊಚ್ಚಲ ಟಿವಿ ವೃತ್ತಿ ಜೀವನ ಆರಂಭಿಸಿದ್ದರು.
ಇದಾದ ನಂತರ 2004ರಲ್ಲಿ ಸಾರಭಾಯ್ ವರ್ಸಸ್ ಸಾರಭಾಯ್ ಸೀರಿಯಲ್‌ನಲ್ಲಿ ಅವರು ಮಾಡಿದ ಮೋನಿಷಾ ಸಾರಭಾಯ್ ಪಾತ್ರವೂ ಮನೆ ಮಾತಾಗಿತ್ತು.
ಆದರೆ ಒಂದು ಮಗುವಿನ ನಂತರ 7 ವರ್ಷಗಳ ಕಾಲ ಬ್ರೇಕ್ ತೆಗೆದುಕೊಂಡು ಮತ್ತೆ ಸೀರಿಯಲ್ ಲೋಕಕ್ಕೆ ಕಾಲಿರಿಸಿದ ರೂಪಾಲಿ ಇಂದು ಕಿರುತೆರೆ ಲೋಕದಲ್ಲಿ ಅತ್ಯಧಿಕ ವೇತನ ಪಡೆಯುವ ನಟಿಯರಲ್ಲಿ ಒಬ್ಬರೆನಿಸಿದ್ದಾರೆ. ಅನುಪಮ ಸೀರಿಯಲ್ ಮೂಲಕ ಮರಳಿ ಬಂದ ಅವರು ಈಗ ತಮ್ಮ ಆರಂಭಿಕ ದಿನಗಳ ಬಗ್ಗೆ ಮಾತನಾಡಿದ್ದಾರೆ.
ಸಿಎನ್‌ಬಿಸಿಗೆ ನೀಡಿದ ಸಂದರ್ಶನದಲ್ಲಿ ರೂಪಾಲಿ ಮನಬಿಚ್ಚಿ ಮಾತನಾಡಿದ್ದು, ತಾವು ಸೀರಿಯಲ್‌ನಲ್ಲಿ ನಟಿಸಲು ಶುರು ಮಾಡಿದ ಆರಂಭಿಕ ದಿನಗಳಲ್ಲಿ ತನ್ನನ್ನು ಬೆಂಗಾಲಿ ಸಮುದಾಯದಲ್ಲಿ ಬಹಿಷ್ಕರಿಸಲ್ಪಟ್ಟವರಂತೆ ನಡೆಸಿಕೊಳ್ಳಲಾಗುತ್ತಿತ್ತು.
ಕೆಲವರು ನಾನು ಸೀರಿಯಲ್‌ನಲ್ಲಿ ನಟಿಸುತ್ತಿದ್ದೇನೆ ಎಂಬ ಕಾರಣಕ್ಕೆ ತುಂಬಾ ತುಚ್ಛವಾಗಿ ಕಾಣುತ್ತಿದ್ದರು. ಆದರೆ ಕುಟುಂಬವನ್ನು ಸಲಹುವ ಜವಾಬ್ದಾರಿ ನನ್ನ ಮೇಲಿದ್ದಿದ್ದರಿಂದ ನಾನು ಇದ್ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ ಎಂದು ರೂಪಾಲಿ ಹೇಳಿಕೊಂಡಿದ್ದಾರೆ.
ವ್ಯವಸ್ಥೆಗಳೇ ಸರಿ ಇಲ್ಲದ ಸರ್ಕಾರಿ ಆಸ್ಪತ್ರೆಯಲ್ಲಿ ನನ್ನ ತಂದೆಗೆ ಚಿಕಿತ್ಸೆ ನೀಡುವುದು ನನಗೆ ಇಷ್ಟವಿರಲಿಲ್ಲ, ನಾನು ನನ್ನ ತಂದೆಗೆ ಲೀಲಾವತಿಯಂತಹ ಉತ್ತಮವಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಬಯಸಿದ್ದೆ. ಇದೇ ಕಾರಣಕ್ಕೆ ನಾನು ಆರಂಭದಲ್ಲಿ ಸೀರಿಯಲ್‌ಗಳಲ್ಲಿ ನಟನೆಗೆ ಒಪ್ಪಿಕೊಂಡಿದೆ.
ತಂದೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದರ ಹೊರತಾಗಿ ಬೇರೆ ಕನಸು ಆಸೆ ನನ್ನ ಮುಂದಿರಲಿಲ್ಲ, ಜೊತೆಗೆ ತಾನು ಆ ಸಂದರ್ಭದಲ್ಲಿ ಆಯ್ಕೆ ಮಾಡಿದ ಸಣ್ಣ ಸಣ್ಣ ಪಾತ್ರಗಳ ಬಗ್ಗೆ ನನಗೆ ಬೇಸರವಿಲ್ಲ ಎಂದು ಹೇಳಿದ್ದಾರೆ.
ಬಂದ ಸಣ್ಣ ಮೊತ್ತದಲ್ಲೇ ನಮಗೆ ಎಷ್ಟು ಸಾಧ್ಯವೋ ಅಷ್ಟು ಮಾಡುತ್ತಿದ್ದೆವು. ನನ್ನ ಪಾಲಿಗೆ ನನ್ನ ತಂದೆ ದೇವರು, ಅವರು ನನ್ನ ಸ್ಪೂರ್ತಿ, ಅವರಿಗಾಗಿ ನಾನು ಏನು ಮಾಡುವುದಕ್ಕೂ ಸಿದ್ಧವಿದ್ದೆ. ತನ್ನ ತಂದೆ ಅನಿಲ್ ಗಂಗೂಲಿ ಅವರನ್ನು ಒಳ್ಳೆಯ ಆಸ್ಪತ್ರೆಗೆ ಸೇರಿಸುವುದಕ್ಕಾಗಿ ನಾನು ಸ್ಯಾಲರಿ ಸೇರಿದಂತೆ ಯಾವುದರ ಬಗ್ಗೆಯೂ ಮಾತುಕತೆ ನಡೆಸದೇ ನೇರವಾಗಿ ಟಿವಿ ಸೀರಿಯಲ್ ಪಾತ್ರಗಳಿಗೆ ಒಪ್ಪಿಕೊಂಡಿದ್ದೇನೆ ಎಂದು ರೂಪಾಲಿ ಹೇಳಿದ್ದಾರೆ.
ಟಿವಿ ಸೀರಿಯಲ್ ಲೋಕ ತನಗೆ ನೀಡಿದ ಈ ಅದ್ಭುತವಾದ ಪ್ರಯಾಣದ ಬಗ್ಗೆ ಕೃತಜ್ಞತೆ ಸಲ್ಲಿಸಿದ ರೂಪಾಲಿ, ತನ್ನ ತಂದೆ ಪ್ರಸಿದ್ದ ಸಿನಿಮಾ ನಿರ್ಮಾಪಕರಾಗಿದ್ದರೂ, ತನ್ನ ಆರಂಭಿಕ ದಿನಗಳಲ್ಲಿ ಅವರು ತಮಗಿದ್ದ ಪ್ರಭಾವ ಬಳಸಿಕೊಂಡು ಯಾವುದೇ ಸಹಾಯ ಮಾಡಲು ಬಯಸಲಿಲ್ಲ ಎಂದು ರೂಪಾಲಿ ಹೇಳಿದ್ದಾರೆ.
ಇನ್ನು ರೂಪಾಲಿ ವೈಯಕ್ತಿಕ ಬದುಕಿನ ಬಗ್ಗೆ ಹೇಳುವುದಾದರೆ ಅಶ್ವಿನ್ ಕೆ ವರ್ಮಾ ಅವರನ್ನು ವಿವಾಹವಾಗಿರುವ ರೂಪಾಲಿ ಗಂಗೂಲಿ ಅವರಿಗೆ ರುದ್ರಾಂಶ್ ಎಂಬ ಪುತ್ರನಿದ್ದಾನೆ. ವಿವಾಹ ಹಾಗೂ ಮಗನ ಜನನದ ನಂತರ ಆರೂವರೆ ವರ್ಷಗಳ ಕಾಲ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದ ಅನುಪಮಾ ಆ ಆರು ವರ್ಷಗಳನ್ನು ಸಂಪೂರ್ಣ ತಮ್ಮ ಕುಟುಂಬ ಪತಿ ಮಗನಿಗಾಗಿ ಮೀಸಲಿಟ್ಟಿದ್ದರು. ಚಿತ್ರ ನಿರ್ದೇಶಕ ಅನಿಲ್ ಗಂಗೂಲಿ ಪುತ್ರಿಯಾಗಿರುವ ರೂಪಾಲಿ ಇವರು ಬಾಲನಟಿಯಾಗಿ ವೃತ್ತಿಗೆ ಪಾದಾರ್ಪಣೆ ಮಾಡಿದ್ದರು. ಈ ಹಿಂದೆ ನಟ ಸಲ್ಮಾನ್ ಖಾನ್ ಹಿಂದಿ ಬಿಗ್ ಬಾಸ್ ಸೀಸನ್ 16ಕ್ಕೆ 1,000 ಕೋಟಿ ರು. ಸಂಭಾವನೆ ಪಡೆದಿದ್ದರು ಎನ್ನಲಾಗಿದೆ.