ಧಾರವಾಡದಲ್ಲಿ ಅಪಘಾತವೆಂದು ಬಿಂಬಿಸಲಾಗಿದ್ದ ಮಹಿಳೆಯ ಸಾವಿನ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಅಪಘಾತ ಮಾಡಿದ ವಾಹನದ ಹಿಂದಿದ್ದ ಬಸ್‌ನಲ್ಲಿರುವ ಡ್ಯಾಶ್ ಕ್ಯಾಮರಾದಲ್ಲಿ ಈ ಭಯಾನಕ ದೃಶ್ಯ ಸೆರೆಯಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಧಾರವಾಡ: ವಾಹನ ಡಿಕ್ಕಿ ಹೊಡೆಸಿ ಮಹಿಳೆಯನ್ನು ಕೊಲೆ ಮಾಡಿ ಪ್ರಕರಣವನ್ನು ಅಪಘಾತ ಎಂದು ಬಿಂಬಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಸವದತ್ತಿ ರಸ್ತೆಯಲ್ಲಿ ಫೆ. 26ರಂದು ನಡೆದ ಅಪಘಾತ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಘಟನೆಯಲ್ಲಿ ಲಲಿತಾ ಹತ್ತರಗಿ ಎಂಬ ಮಹಿಳೆ ತೀರಿಕೊಂಡಿದ್ದರು. ಆದರೆ ಇದೊಂದು ಉದ್ದೇಶ ಪೂರ್ವಕ ಕೊಲೆ, ಅಪಘಾತವಲ್ಲ ಎಂಬುದು ಸಾಬೀತಾಗಿದೆ.
ಫೆ. 26ರಂದು ಸವದತ್ತಿ ರಸ್ತೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಅಪರಿಚಿತ ವಾಹನ ಡಿಕ್ಕಿಯಾಗಿ 40 ವರ್ಷದ ಮಹಿಳೆ ಲಲಿತಾ ಹತ್ತರಗಿ ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ರಸ್ತೆ ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದರು.
25
ಬಸ್‌ನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ
ಆದರೆ ಈ ಸಾವಿನ ಬಗ್ಗೆ ಲಲಿತಾ ಹತರಕಿ ಅವರ ತಂದೆ ಅನುಮಾನಗೊಂಡಿದ್ದು, ಇದು ರಸ್ತೆ ಅಪಘಾತವಲ್ಲ ಇದು ಕೊಲೆ ಎಂದು ದೂರು ದಾಖಲಿಸಿದ್ದರು. ಧಾರವಾಡ ಗ್ರಾಮೀಣ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿತ್ತು. ಲಲಿತಾ ಅವರ ತಂದೆಯ ದೂರಿನ ನಂತರ ಪೊಲೀಸರು ತನಿಖೆಗೆ ಇಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮಹಿಳೆ ಲಲಿತಾ ಅವರಿಗೆ ಡಿಕ್ಕಿ ಹೊಡೆದ ಮಹಿಂದ್ರಾ ಥಾರ್ ವಾಹನದ ವಿಡಿಯೋ ಅದರ ಹಿಂದಿದ್ದ ಬಸ್‌ನ ಡ್ಯಾಶ್ ಬೋರ್ಡ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರಿಂದ ಪ್ರಕರಣ ಬೆಳಕಿಗೆ ಬಂದಿದೆ. ನಂತರ ವಿಚಾರಣೆ ಕೈಗೊಂಡ ಪೊಲೀಸರಿಗೆ ಲಲಿತಾ ಹತ್ತರಗಿ ಅವರ ಪತಿಯೇ ಈ ಕೃತ್ಯದ ಹಿಂದಿರುವುದು ತಿಳಿದು ಬಂದಿದೆ.
35
ಪತ್ನಿ ಕೊಲೆಗೆ ಪತಿಯೇ ನೀಡಿದ್ದ 40 ಲಕ್ಷ ರೂ ಸುಪಾರಿ
ಪತಿಯಿಯಿಂದಲೇ ಪತ್ನಿಯ ಹತ್ಯೆಗೆ 40 ಲಕ್ಷ ಸುಪಾರಿ ಸುಪಾರಿ. ಹೌದು ಪತ್ನಿ ಲಲಿತಾ(43) ಕೊಲೆಗೆ ಅವರ ಪತಿಯಾದ ಉದಯ ಹತ್ತರಗಿ ಸುಪಾರಿ ನೀಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಲಲಿತಾ ಅವರು ಧಾರವಾಡ ತಾಲೂಕಿನ ಸೋಮಾಪುರ ಗ್ರಾಮದ ಮಹಿಳೆಯಾಗಿದ್ದು, 2000ನೇ ಇಸವಿಯಲ್ಲಿ ಉದಯ್ ಹಾಗೂ ಲಲಿತಾ ಮದುವೆಯಾಗಿತ್ತು.
ಪತಿ ಉದಯ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದವನಾಗಿದ್ದು, ದಂಪತಿ ಮಧ್ಯೆ ಹತ್ತು ವರ್ಷಗಳಿಂದ ಸಂಬಂಧ ಹದಗೆಟ್ಟಿತ್ತು. ಹೀಗಾಗಿ ಲಲಿತಾ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್‌ನಲ್ಲಿ ವಿಚಾರಣೆ ನಡೆದು ಅಂತಿಮ ಹಂತಕ್ಕೆ ತಲುಪಿತ್ತು. ವಿಚಾರಣೆ ವೇಳೆ ಪರಿಹಾರವಾಗಿ ಲಲಿತಾ ಎರಡು ಎಕರೆ ಜಮೀನು ಕೇಳಿದ್ದು, ಭೂಮಿ ನೀಡುವುದಕ್ಕೆ ಉದಯ್ ನಿರಾಕರಿಸಿದ್ದರು.
ಈ ಹಿನ್ನೆಲೆಯಲ್ಲಿ ಭೂಮಿ ಕೇಳಿದ ಪತ್ನಿಯ ಕೊಲೆಗೆ ಪತಿಯೇ ಸುಪಾರಿ ನೀಡಿ ಕೊಲೆ ಮಾಡಿಸಿದ್ದಾನೆ. ಉದಯ ತನ್ನ ಗೆಳೆಯನಾದ ನಾಗಪ್ಪ ಪಡೇಕಲ್‌ಗೆ ಸುಪಾರಿ ನೀಡಿದ್ದು, ಬಳಿಕ ಅಭಿಷೇಕ್ ವರಗಣ್ಣವರ್, ನಾಗರಾಜ ಉಪ್ಪಿನ್ ಸೇರಿದಂತೆ ಮೂವರು ಸೇರಿ ಈ ಕೊಲೆ ಮಾಡಿದ್ದಾರೆ.
ಘಟನೆ ನಡೆದಂದು ಆರೋಪಿ ಪತಿ ಉದಯ್ ಪತ್ನಿ ಲಲಿತಾಗೆ ಮಾತನಾಡೋದಿದೆ ಅಂತ ಅಮ್ಮಿನಬಾವಿ ಗ್ರಾಮದ ಬಳಿ ಬರುವಂತೆ ಹೇಳಿದ್ದ. ಪತಿ ಹೇಳಿದ್ದ ಸ್ಥಳಕ್ಕೆ ಲಲಿತಾ ಆಗಮಿಸಿದಾಗ ಅಲ್ಲಿ ಸುಪಾರಿ ಪಡೆದ ಆರೋಪಿಗಳು ಮಹೀಂದ್ರ ಥಾರ್ ವಾಹನದೊಂದಿಗೆ ಕಾಯುತ್ತಿದ್ದರು. ಇತ್ತ ಆಕೆ ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವಾಗ ಹಿಂದಿನಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡಿದ್ದಾರೆ.
55
ಆರೋಪಿಗಳ ಬಂಧನ, ಕೃತ್ಯಕ್ಕೆ ಬಳಸಿದ್ದ ಥಾರ್ ಗಾಡಿ ಜಪ್ತಿ
ಥಾರ್ ಗಾಡಿ ಹಿಂಬದಿ ಬರುತ್ತಿದ್ದ ಬಸ್‌ನಲ್ಲಿದ್ದ ಡ್ಯಾಶ್ ಕ್ಯಾಮರಾದಲ್ಲಿ ಅಪಘಾತದ ವೀಡಿಯೋ ರೆಕಾರ್ಡ್ ಅಗಿತ್ತು. ಡಿಕ್ಕಿ ನೋಡಿದ್ದ ಬಸ್ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದ. ಹೀಗಾಗಿ ಲಲಿತಾ ತಂದೆಯ ದೂರಿನ ಜೊತೆಗೆ ಅನುಮಾನದ ಹಿನ್ನೆಲೆಯಲ್ಲಿ ಪ್ರಕರಣದ ಬೆನ್ನು ಬಿದ್ದ ಪೊಲೀಸರು ಇದೀಗ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ. ಜೊತೆಗೆ ಕೊಲೆಗೆ ಬಳಸಿದ್ದ ಥಾರ್ ವಾಹನ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಧಾರವಾಡ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ