ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ

Published : Dec 11, 2025, 06:45 PM IST

ವಿಶ್ವವಿಖ್ಯಾತ ಮೈಸೂರು ಅರಮನೆಯ ವರಹ ಗೇಟ್‌ನ ಮೇಲ್ಛಾವಣಿ ಕುಸಿದು, ನಿರ್ವಹಣೆಯ ನಿರ್ಲಕ್ಷ್ಯವನ್ನು ಮತ್ತೊಮ್ಮೆ ಬಯಲು ಮಾಡಿದೆ.  ಈ ಹಿಂದೆ ದರ್ಬಾರ್ ಹಾಲ್ ಸೋರಿಕೆಯಂತಹ ಘಟನೆಗಳು ನಡೆದಿದ್ದು, ಐತಿಹಾಸಿಕ ಕಟ್ಟಡದ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿದೆ.

PREV
16
ಮೈಸೂರು ಅರಮನೆ ವರಾಹ ದ್ವಾರ

ವಿಶ್ವವಿಖ್ಯಾತ ಮೈಸೂರು ಅರಮನೆಯ ನಿರ್ವಹಣೆ ಕುರಿತು ನಿರ್ಲಕ್ಷ್ಯ ಮುಂದುವರೆದಿರುವುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ಮೈಸೂರು ಅರಮನೆಯ ಪ್ರಮುಖ ಪ್ರವೇಶ ದ್ವಾರಗಳಲ್ಲಿ ಒಂದಾದ ವರಹ ಗೇಟ್‌ನ ಮುಖ್ಯದ್ವಾರದ ಮೇಲ್ಛಾವಣಿಯು ದಿಢೀರ್ ಕುಸಿತಗೊಂಡಿದ್ದು, ಈ ದ್ವಾರದ ಮೂಲಕ ಓಡಾಡುವ ಪ್ರವಾಸಿಗರ ಗೈರಿನಿಂದ ಭಾರೀ ಅನಾಹುತವೊಂದು ಸದ್ಯಕ್ಕೆ ತಪ್ಪಿದೆ.

ಘಟನೆ ನಡೆದ ಸ್ಥಳದಲ್ಲಿ ಸಿಬ್ಬಂದಿ ನಿಲ್ಲಿಸಿದ್ದ ಒಂದು ಬೈಕ್ ಸಂಪೂರ್ಣವಾಗಿ ಜಖಂಗೊಂಡಿದ್ದು, ಅರಮನೆಯ ಕಟ್ಟಡಗಳ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.

26
ಬೈಕ್ ಜಖಂ, ತಪ್ಪಿದ ಪ್ರಾಣಾಪಾಯ

ಸಾರ್ವಜನಿಕರು ಮತ್ತು ಪ್ರವಾಸಿಗರು ಅರಮನೆಗೆ ಆಗಮಿಸುವ ಪ್ರಮುಖ ಗೇಟ್‌ಗಳಲ್ಲಿ ಈ ವರಹ ಗೇಟ್ ಕೂಡ ಒಂದು. ಘಟನೆ ನಡೆದ ಸಂದರ್ಭದಲ್ಲಿ ಪ್ರವಾಸಿಗರು ಆ ಭಾಗದಲ್ಲಿ ಓಡಾಟ ಮಾಡದ ಕಾರಣ ದೊಡ್ಡ ಪ್ರಾಣಾಪಾಯವನ್ನು ತಪ್ಪಿಸಿದಂತಾಗಿದೆ. ಕುಸಿದ ಮೇಲ್ಛಾವಣಿಯ ಮಣ್ಣು ಮತ್ತು ಕಲ್ಲುಗಳು ಗೇಟ್‌ನ ಕೆಳಗೆ ನಿಲ್ಲಿಸಿದ್ದ ಅರಮನೆ ಸಿಬ್ಬಂದಿಗೆ ಸೇರಿದ ಬೈಕ್‌ನ ಮೇಲೆ ಬಿದ್ದಿದ್ದು, ಬೈಕ್ ಸಂಪೂರ್ಣ ಜಖಂಗೊಂಡಿದೆ.

36
ಬ್ಯಾರಿಕೇಡ್‌ಗಳನ್ನು ಅಳವಡಿಕೆ

ಘಟನೆ ನಡೆದ ತಕ್ಷಣ ಅರಮನೆ ಆಡಳಿತ ಮಂಡಳಿ ಕಾರ್ಯಪ್ರವೃತ್ತರಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಗೇಟ್ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಸ್ವಚ್ಛತಾ ಸಿಬ್ಬಂದಿಯು ಕುಸಿದು ಬಿದ್ದಿದ್ದ ಮಣ್ಣು ಮತ್ತು ಅವಶೇಷಗಳನ್ನು ತೆರವುಗೊಳಿಸುವ ಕಾರ್ಯವನ್ನು ಕೈಗೊಂಡರು.

46
ನಿರ್ವಹಣೆಯ ನಿರ್ಲಕ್ಷ್ಯಕ್ಕೆ ಕನ್ನಡಿ

ಮೈಸೂರು ಅರಮನೆಯ ನಿರ್ವಹಣೆಯಲ್ಲಿನ ಈ ನಿರ್ಲಕ್ಷ್ಯ ಇದೇ ಮೊದಲಲ್ಲ. ಇತ್ತೀಚೆಗೆ ಅರಮನೆಯ ಮುಖ್ಯ ಕಟ್ಟಡದ ದರ್ಬಾರ್ ಹಾಲ್‌ನ ಮೇಲ್ಛಾವಣಿಯೂ ಸೋರುತ್ತಿರುವ ಬಗ್ಗೆ ನಿಮ್ಮ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಮಾಡಿತ್ತು. ಮಳೆ ನೀರಿನಿಂದ ಕಟ್ಟಡಕ್ಕೆ ಹಾನಿಯಾಗುವುದನ್ನು ತಡೆಯಲು ಅರಮನೆ ಆಡಳಿತ ಮಂಡಳಿಯು ದುರಸ್ತಿ ಕಾರ್ಯಕ್ಕೆ ಮುಂದಾಗುವ ಬದಲು, ತಾತ್ಕಾಲಿಕವಾಗಿ ಮೇಲ್ಛಾವಣಿಗೆ ಟಾರ್ಪಲ್ ಹೊದಿಕೆ ಹಾಕಿ ನಿರ್ವಹಣೆ ಮುಂದುವರೆಸಿತ್ತು.

56
ಮಳೆನೀರು ಸೋರಿಕೆ ತಡೆಯಲು ಟಾರ್ಪಲ್ ಹೊದಿಸಿದ್ದ ಸಿಬ್ಬಂದಿ

ಸುದ್ದಿ ಪ್ರಸಾರಗೊಂಡ ನಂತರವೂ ಕಾಯಂ ಪರಿಹಾರ ಕಂಡುಕೊಳ್ಳದೆ ಟಾರ್ಪಲ್ ಮೂಲಕವೇ ನಿರ್ವಹಣೆಯನ್ನು ಮುಂದುವರೆಸಿರುವ ಅರಮನೆ ಆಡಳಿತ ಮಂಡಳಿಯ ನಿರ್ಲಕ್ಷ್ಯ ಇದೀಗ ವರಹ ದ್ವಾರದ ಮೇಲ್ಛಾವಣಿ ಕುಸಿತದ ರೂಪದಲ್ಲಿ ಗೋಚರಿಸಿದೆ.

66
ಪ್ರವಾಸಿಗರ ಭದ್ರತೆಗೆ ಆತಂಕ

ಹೊಯ್ಸಳ ಮತ್ತು ಇಂಡೋ-ಸಾರ್ಸೆನಿಕ್ ವಾಸ್ತುಶೈಲಿಯ ಸಮ್ಮಿಲನದಿಂದ ನಿರ್ಮಿಸಲಾದ ಶತಮಾನಗಳ ಇತಿಹಾಸವಿರುವ ಮೈಸೂರು ಅರಮನೆಯು ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲು ಯೋಗ್ಯವಾಗಿದೆ. ಇಂತಹ ಐತಿಹಾಸಿಕ ಕಟ್ಟಡದ ನಿರ್ವಹಣೆಯಲ್ಲಿನ ಈ ನಿರ್ಲಕ್ಷ್ಯವು ಅರಮನೆಯ ಭದ್ರತೆ ಮತ್ತು ಸುರಕ್ಷತೆ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ. 

ಕೂಡಲೇ ಅರಮನೆ ಆಡಳಿತ ಮಂಡಳಿ ಕೇವಲ ತಾತ್ಕಾಲಿಕ ರಿಪೇರಿ ಮಾಡದೆ, ಶಾಶ್ವತ ಮತ್ತು ಸಮಗ್ರ ನಿರ್ವಹಣೆಗೆ ಮುಂದಾಗಬೇಕು ಎಂದು ಪ್ರವಾಸಿಗರು ಮತ್ತು ಇತಿಹಾಸಕಾರರು ಒತ್ತಾಯಿಸಿದ್ದಾರೆ.

Read more Photos on
click me!

Recommended Stories