ನಟ ದರ್ಶನ್ ತೂಗುದೀಪ ಅಂಡ್ ಗ್ಯಾಂಗ್‌ನಿಂದ ನಡೆದ ರೇಣುಕಾಸ್ವಾಮಿ (33) ಭೀಕರ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ನ್ಯಾಯಾಲಯದಲ್ಲಿ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ, ಇದೀಗ ರೇಣುಕಾಸ್ವಾಮಿ ಸಮಾಧಿಯನ್ನೇ ಧ್ವಂಸಗೊಳಿಸಿರುವ ಅಮಾನವೀಯ ಘಟನೆ ಚಿತ್ರದುರ್ಗದಲ್ಲಿ ವರದಿಯಾಗಿದೆ.
25
ಸತ್ತ ಮೇಲೂ ನೆಮ್ಮದಿ ಸಿಗುತ್ತಿಲ್ಲ
ಚಿತ್ರದುರ್ಗದ ಲಕ್ಷ್ಮೀಪುರ ರುದ್ರಭೂಮಿಯಲ್ಲಿರುವ ರೇಣುಕಾಸ್ವಾಮಿ ಸಮಾಧಿಯ ಮೇಲಿನ ನಾಮಫಲಕವನ್ನು ಕಿಡಿಗೇಡಿಗಳು ಪುಡಿಪುಡಿ ಮಾಡಿದ್ದಾರೆ. ಇದರಿಂದಾಗಿ, 2024ರ ಜೂನ್ 8 ರಂದು ಕೊಲೆಯಾದ ಬಳಿಕ ಚಿತ್ರದುರ್ಗದಲ್ಲಿ ಅಂತ್ಯಸಂಸ್ಕಾರಗೊಂಡಿದ್ದ ದಿವಂಗತ ರೇಣುಕಾಸ್ವಾಮಿಗೆ ಸತ್ತ ಮೇಲೂ ನೆಮ್ಮದಿ ಸಿಗದಂತಾಗಿದೆ.
35
ಏನಿದು ಪ್ರಕರಣ?
ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿ, ನಟ ದರ್ಶನ್ ಅವರ ಆಪ್ತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದರು ಎಂಬ ಆರೋಪದ ಮೇಲೆ ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆತಂದು, ಅಲ್ಲಿ ದರ್ಶನ್ ಮತ್ತು ಗ್ಯಾಂಗ್‌ನಿಂದ ಬರ್ಬರ ಹಲ್ಲೆಗೊಳಗಾಗಿ ಕೊಲೆಯಾಗಿದ್ದರು. ಬೆಂಗಳೂರಿನ ರಾಜಕಾಲುವೆ ಬಳಿ ಬೀದಿ ಹೆಣವಾಗಿ ಬಿದ್ದಿದ್ದ ರೇಣುಕಾಸ್ವಾಮಿ ಮೃತದೇಹವನ್ನು ಚಿತ್ರದುರ್ಗಕ್ಕೆ ತರಲಾಗಿದ್ದು, ಪತ್ನಿ ಸಹನಾ ಮತ್ತು ಪಾಲಕರ ಸಮ್ಮುಖದಲ್ಲಿ ಲಕ್ಷ್ಮೀಪುರ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ರೇಣುಕಾಸ್ವಾಮಿ ಕೊಲೆಯಾದ ಕೆಲವೇ ದಿನಗಳಲ್ಲಿ ಅವರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದರು.
ರೇಣುಕಾಸ್ವಾಮಿ ಸಮಾಧಿ ಧ್ವಂಸಗೊಳಿಸಿರುವ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ತಿಳಿದಿಲ್ಲ ಎಂದು ಹೇಳಿದ್ದರೂ, ಸ್ಥಳೀಯರಲ್ಲಿ ಕೆಲವು ಶಂಕೆಗಳು ವ್ಯಕ್ತವಾಗಿವೆ.
ಲೇಔಟ್ ನಿರ್ಮಾಣ ಶಂಕೆ: ರುದ್ರಭೂಮಿ ಬಳಿ ಲೇಔಟ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ವೇಳೆ ರೇಣುಕಾಸ್ವಾಮಿ ಸಮಾಧಿಗೆ ಧಕ್ಕೆ ಆಗಿರುವ ಸಾಧ್ಯತೆ ಇದೆ ಎಂದು ಹಲವರು ಶಂಕಿಸಿದ್ದಾರೆ.
ಕಿಡಿಗೇಡಿಗಳ ಕೃತ್ಯ: ಇಲ್ಲವೇ, ನಟ ದರ್ಶನ್ ಅಭಿಮಾನಿಗಳು ಅಥವಾ ದ್ವೇಷ ಸಾಧಿಸಲು ಬಯಸುವ ಕೆಲವು ಕಿಡಿಗೇಡಿಗಳು ಡೆವಿಲ್ ಸಿನಿಮಾ ಬಿಡುಗಡೆಗೂ ಮುನ್ನ ಪ್ರಚಾರದ ಗಿಮಿಕ್ ಉದ್ದೇಶದಿಂದ ಈ ಕೃತ್ಯ ಎಸಗಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
55
ರೇಣುಕಾಸ್ವಾಮಿ ಕುಟುಂಬದ ದುಃಖ ಇಮ್ಮಡಿ
ರೇಣುಕಾಸ್ವಾಮಿ ಸಮಾಧಿಯನ್ನು ಯಾವ ಕಾರಣದಿಂದ ಧ್ವಂಸ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಈ ಘಟನೆಯು ರೇಣುಕಾಸ್ವಾಮಿ ಕುಟುಂಬಕ್ಕೆ ಮತ್ತೊಂದು ಆಘಾತ ತಂದಿದೆ. ಚಿತ್ರದುರ್ಗ ನಗರಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸಿ, ಸಮಾಧಿ ಧ್ವಂಸಗೊಳಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಸದ್ಯ ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಟ್ರಯಲ್ ನಡೆಯುತ್ತಿದ್ದು, ಕುಟುಂಬಸ್ಥರಿಗೆ ನ್ಯಾಯ ಸಿಗುವ ನಿರೀಕ್ಷೆ ಇತ್ತು. ಆದರೆ, ಈ ಅಮಾನವೀಯ ಘಟನೆಯಿಂದಾಗಿ ಮೃತರ ಕುಟುಂಬಸ್ಥರ ದುಃಖ ಇಮ್ಮಡಿಯಾಗಿದೆ.