
ರಾಜ್ಯದಲ್ಲಿ ಭ್ರಷ್ಟಾಚಾರ ವಿರೋಧಿ ಕ್ರಮಗಳ ಭಾಗವಾಗಿ ಲೋಕಾಯುಕ್ತ ತಂಡವು ಬುಧವಾರ ಬೆಳಿಗ್ಗೆ ಪ್ರಮುಖ ಭ್ರಷ್ಟಾಧಿಕಾರಿಗಳ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದೆ. ಒಟ್ಟು ಎಂಟು ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಯಿದ್ದು, ಅವರ ಆಸ್ತಿ ದಾಖಲೆಗಳು, ಹಣಕಾಸು ವಿವರಗಳು ಮತ್ತು ಅಕ್ರಮ ಸಂಪತ್ತನ್ನು ಪರಿಶೀಲಿಸಲಾಗುತ್ತಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡಗಳಿಂದ ಮೈಸೂರು, ಬೀದರ್, ತುಮಕೂರು, ಕಲಬುರ್ಗಿ ಮತ್ತು ರಾಮನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಬೆಂಗಳೂರಿನಲ್ಲಿ ಮೂವರು ಪ್ರಮುಖ ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಐಎಎಸ್ ಅಧಿಕಾರಿ ವಾಸಂತಿ ಅಮರ್, ಟೌನ್ ಪ್ಲ್ಯಾನಿಂಗ್ ಸಹಾಯಕ ನಿರ್ದೇಶಕ ಬಾಗ್ಲಿ ಮಾರುತಿ, ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ಎರ್ರಪ್ಪ ರೆಡ್ಡಿ ನಿವಾಸದ ಮೇಲೆ ದಾಳಿಯಾಗಿದೆ. ಲೋಕಾಯುಕ್ತ ಎಸ್‌ಪಿ ವಂಶಿಕೃಷ್ಣ ನೇತೃತ್ವದ ವಿಶೇಷ ತಂಡದಿಂದ ನಡೆಸಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆದಿದೆ. ಮೊದಲಿನಿಂದಲೂ ಈ ಅಧಿಕಾರಿಗಳ ವಿರುದ್ಧ ಅನೇಕ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿದ್ದವು ಎಂದು ಮೂಲಗಳು ತಿಳಿಸಿವೆ. ವಾಸಂತಿ ಅಮರ್ ಅವರು ಹಿಂದಿನ ವಿಶೇಷ ಜಿಲ್ಲಾಧಿಕಾರಿ-3, ಬೆಂಗಳೂರು ಉತ್ತರ ಉಪ ವಿಭಾಗದ ಅಧಿಕಾರಿಯಾಗಿ, ದಾಸನಪುರ ಹೋಬಳಿಯ ಹುಚ್ಚನಪಾಳ್ಯ ಗ್ರಾಮದಲ್ಲಿ ಸರ್ವೆ ನಂ.8ರಲ್ಲಿ ಇರುವ 10 ಎಕರೆ 20 ಗುಂಟೆ ಸರ್ಕಾರಿ ಜಮೀನನ್ನು ನಿಯಮಬಾಹಿರವಾಗಿ ಖಾಸಗಿಯವರಿಗೆ ವರ್ಗಾಯಿಸಿದ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇವರ ಮೇಲೆ FIR ದಾಖಲಾಗಿದೆ.
ಎಂಜಿನಿಯರ್ ಎರ್ರಪ್ಪ ರೆಡ್ಡಿ ಇತ್ತೀಚೆಗಷ್ಟೆ ₹10 ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದರು. ಅವರ HRBR ಲೇಔಟ್ ನಿವಾಸದಲ್ಲಿ ಬುಧವಾರ ಬೆಳಿಗ್ಗೆ 6.15ರಿಂದಲೇ ದಾಳಿ ಆರಂಭವಾಗಿದೆ. ಲೋಕಾಯುಕ್ತ ಎಸ್‌ಪಿ ಅವರ ನಿವಾಸಕ್ಕೆ ಭೇಟಿ ನೀಡಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. 6ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಆಸ್ತಿ ದಾಖಲೆಗಳು, ಬ್ಯಾಂಕ್ ಡೀಟೇಲ್ಸ್, ಚಿನ್ನಾಭರಣಗಳು ಮತ್ತು ಇತರ ವಿವರಗಳನ್ನು ಪರಿಶೀಲಿಸುತ್ತಿದೆ.
ಟೌನ್ ಪ್ಲಾನಿಂಗ್ ಸಹಾಯಕ ನಿರ್ದೇಶಕ ಬಾಗ್ಲಿ ಮಾರುತಿ ಅವರ ನಿವಾಸದಲ್ಲಿಯೂ ತೀವ್ರ ಶೋಧ ನಡೆಯುತ್ತಿದೆ. ಲೋಕಾಯುಕ್ತ ಅಧಿಕಾರಿಗಳು ಅಲ್ಲಿಂದ ಚಿನ್ನಾಭರಣ, ನಗದು, ಬೆಳ್ಳಿಯ ವಸ್ತುಗಳು, ದುಬಾರಿ ಗಡಿಯಾರಗಳು ಸೇರಿದಂತೆ ಹಲವು ಬೆಲೆ ಬಾಳುವ ವಸ್ತುಗಳನ್ನು ಪತ್ತೆಹಚ್ಚಿದ್ದಾರೆ. ಸಿಕ್ಕಿರುವ ವಸ್ತುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಕೇಳುತ್ತಿದ್ದು, ತನಿಖೆ ಇನ್ನೂ ಮುಂದುವರಿದಿದೆ.
ರಾಜಧಾನಿಯ ಕೂಡ್ಲಿಗಿ ಗೇಟ್ ಬಳಿಯ ಸಹಕಾರ ನಗರದಲ್ಲಿರುವ ಅಪಾರ್ಟ್ಮೆಂಟ್‌ನಲ್ಲಿ ಬಿಬಿಎಂಪಿಯ ಟೌನ್ ಪ್ಲಾನಿಂಗ್ ಅಸಿಸ್ಟೆಂಟ್ ಡೈರೆಕ್ಟರ್ ಬಾಗ್ಲಿ ಮಾರುತಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬೆಳಿಗ್ಗೆ 6 ಗಂಟೆಗೆ ಶೋಧ ನಡೆಸುತ್ತಿದ್ದಾರೆ. ಸುಮಾರು 25 ಮಂದಿಯ ಲೋಕಾಯುಕ್ತ ಅಧಿಕಾರಿಗಳ ತಂಡ ನಾಲ್ಕು ವಾಹನಗಳಲ್ಲಿ ಆಗಮಿಸಿ ದಾಳಿ ನಡೆಸಿತು. ಎರಡನೇ ಮಹಡಿಯಲ್ಲಿ ವಾಸವಿರುವ ಬಾಗ್ಲಿ ಮಾರುತಿ ಅವರ ಮನೆಗೆ ಸತತ 6 ಗಂಟೆಗಳ ಕಾಲ ತೀವ್ರ ಶೋಧ ಕಾರ್ಯ ನಡೆಸಲಾಗಿದೆ. ಶೋಧದ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ, ಬೆಳ್ಳಿಯ ವಸ್ತುಗಳು, ನಗದು ಹಾಗೂ ಆಸ್ತಿ ದಾಖಲೆಗಳು ಪತ್ತೆಯಾಗಿವೆ. ತನಿಖೆ ಮುಂದುವರೆದಿದ್ದು, ಪತ್ತೆಯಾದ ಆಸ್ತಿ ಹಾಗೂ ಹಣಕಾಸು ಸಂಬಂಧಿತ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಇನ್ನು ಮಾರುತಿ ಲೋಕಾಯುಕ್ತ ತಂಡದಿಂದ ಬಳ್ಳಾರಿಯಲ್ಲೂ ತೀವ್ರ ಶೋಧ ದಾಳಿ ನಡೆದಿದೆ. ಬೆಂಗಳೂರು ಲೋಕಾಯುಕ್ತ ತಂಡ ಬಳ್ಳಾರಿಯ ಮಾರುತಿ ಬಗ್ಲಿ ಅವರ ಮಾಲಿಕತ್ವದ ಅಂದಾಜು ಮೂರು ಆಸ್ತಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಮಾರುತಿ ಅವರು ಮೂಲತ ಬಳ್ಳಾರಿಯವರು ಬೆಂಗಳೂರು ಮಾತ್ರವಲ್ಲ, ರಾಜ್ಯದ ಇತರ ಭಾಗಗಳಲ್ಲಿಯೂ ಅನೇಕ ಆಸ್ತಿಗಳನ್ನು ಖರೀದಿಸಿರುವ ಕುರಿತು ಮಾಹಿತಿ ಲಭಿಸಿದೆ. ಈಗಾಗಲೇ ಅಕ್ರಮ ಆಸ್ತಿ ಗಳಿಕೆ ಸಂಬಂಧ ಮಾಹಿತಿ ಆಧಾರದ ಮೇಲೆ ದಾಳಿ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರು ಲೋಕಾಯುಕ್ತದ ವಿಶೇಷ ತಂಡವು ಆಸ್ತಿ ದಾಖಲೆಗಳು, ಹಣಕಾಸು ವಿವರಗಳು ಮತ್ತು ಬ್ಯಾಂಕ್ ಲೆಕ್ಕಪತ್ರಗಳ ಪರಿಶೀಲನೆ ನಡೆಸುತ್ತಿದೆ.
ಟೌನ್ ಪ್ಲಾನಿಂಗ್ ಅಸಿಸ್ಟಂಟ್ ಡೈರೆಕ್ಟರ್ ಮಾರುತಿ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆ, ಲೋಕಾಯುಕ್ತ ಪೊಲೀಸ್‌ವಿಭಾಗ ಈಗ ವಿಜಯನಗರ ಜಿಲ್ಲೆಯಲ್ಲೂ ಬಳ್ಳಾರಿ ಮತ್ತು ಹಂಪಿ ಪುರಸಭೆ ಪ್ರದೇಶಗಳಲ್ಲಿ ಕೂಡ ದಾಳಿ ನಡೆಸಿದೆ. ಮಾರುತಿ ಅವರ ಸಂಬಂಧಿಯಾದ ಹಂಪಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರಜನಿ ಷಣ್ಮುಖ ಗೌಡ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಜನಿ ಅವರ ಅಳಿಯ ಮಾರುತಿ, ಬೆಂಗಳೂರು ಬಿಬಿಎಂಪಿಯಲ್ಲಿ ಟೌನ್ ಪ್ಲಾನಿಂಗ್ ಎಡಿಯಾಗಿ ಸೇವೆ ಸಲ್ಲಿಸುತ್ತಿದ್ದು, ಇವರ ಮೇಲೆ ಅಕ್ರಮ ಆಸ್ತಿ ಗಳಿಕೆ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ, ಮಾರುತಿ ಅವರ ಬೆಂಗಳೂರು ನಿವಾಸ ಹಾಗೂ ವಿಜಯನಗರದ ಹೊಸಪೇಟೆ ತಾಲೂಕಿನ ಕಡಿರಾಂಪುರದಲ್ಲಿ ಇರುವ ಅವರ ಅತ್ತೆಯ ಮನೆ ಮೇಲೆ ಸಹ ದಾಳಿ ನಡೆಯುತ್ತಿದೆ. ಮಾರುತಿ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ಕಲ್ಲು ಕಂಬ ಗ್ರಾಮದ ಮೂಲದವರು. ಅಧಿಕಾರಿಗಳು ಈಗಾಗಲೇ ಆಸ್ತಿ, ಚರಾಸ್ತಿ ದಾಖಲೆಗಳು, ಹಣಕಾಸು ಮಾಹಿತಿ ಮತ್ತು ಬ್ಯಾಂಕ್ ವಿವರಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ತಿಳಿದುಬಂದಂತೆ, ಮಾರುತಿ ಹಿಂದೆ ಸಚಿವ ಬೈರತಿ ಸುರೇಶ್ ಅವರ ಆಪ್ತ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದರು.
ಅಕ್ರಮ ಆಸ್ತಿ ಗಳಿಕೆ ಆರೋಪದ ಕುರಿತು ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಿಗ್ಗೆ ಕೊಪ್ಪಳ ಮತ್ತು ಹುಬ್ಬಳ್ಳಿಯ ಎರಡು ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ನಗದು, ಚಿನ್ನಾಭರಣ, ಬೆಳ್ಳಿ ಹಾಗೂ ಆಸ್ತಿ ದಾಖಲೆಗಳನ್ನು ಪತ್ತೆಹಚ್ಚಿದ್ದಾರೆ. ಕೊಪ್ಪಳ ಜಿಲ್ಲೆಯ ಡಿಸ್ಟ್ರಿಕ್ಟ್ ಇಂಡಸ್ಟ್ರಿಯಲ್ & ಕಮರ್ಷಿಯಲ್ ಟ್ಯಾಕ್ಸ್ ಉಪ ನಿರ್ದೇಶಕ ಎಸ್.ಎಂ. ಶೇಖು ಚವ್ಹಾಣ್ ಅವರ ಮನೆ, ಅಭಿಷೇಕ ಬಡಾವಣೆ ಮತ್ತು ಕೀರ್ತಿ ಕಾಲೋನಿಯಲ್ಲಿ ಇರುವ ಎರಡು ಮನೆಗಳ ಮೇಲೆ ದಾಳಿ ನಡೆದಿದೆ. ಶೇಖು ಚವ್ಹಾಣ್ ಇನ್ನೂ ಮಲಗಿದ್ದಾಗಲೇ ಅಧಿಕಾರಿಗಳು ದಾಳಿ ನಡೆಸಿದ್ದು, ಅಚ್ಚರಿ ಮೂಡಿಸಿದೆ. ದಾಳಿ ವೇಳೆ ಹುಬ್ಬಳ್ಳಿಯ ವಿದ್ಯಾನಗರದ ದತ್ತನಗರದ ಮನೆಯಲ್ಲೂ ಶೋಧ ಕಾರ್ಯ ನಡೆಯಿತು. 700 ಗ್ರಾಂ ಚಿನ್ನಾಭರಣ, 2 ಕೆ.ಜಿ. ಬೆಳ್ಳಿ, ಸುಮಾರು ₹45 ಲಕ್ಷ ನಗದು, 12 ಸೈಟ್‌ಗಳ ದಾಖಲೆ, ಮೂರು ಮನೆಗಳು ಹಾಗೂ 6 ಎಕರೆ ಜಮೀನಿನ ದಾಖಲೆಗಳು ಸಹ ವಶಕ್ಕೆ ಪಡೆಯಲಾಗಿದೆ. ದಾಳಿಗೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ಸುನೀಲ ಮೇಗಳಮನಿ ನೇತೃತ್ವ ವಹಿಸಿದ್ದು, ಸುಮಾರು 25 ಮಂದಿ ಅಧಿಕಾರಿಗಳ ತಂಡ ಭಾಗವಹಿಸಿತು.
ಪಾಲಿಕೆ ಉಪ ವಿಭಾಗಾಧಿಕಾರಿ ವೆಂಕಟರಾಮ್ ಅವರ ಸಿದ್ಧಾರ್ಥ ಬಡಾವಣೆಯ ಮನೆ ಮೇಲೆ ದಾಳಿ. ಕೌಶಲ್ಯಾಭಿವೃದ್ದಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥಸ್ವಾಮಿ ಅವರ ಸಾತಗಳ್ಳಿ ಜೆಪಿ ನಗರ ನಿವಾಸದಲ್ಲೂ ಪರಿಶೀಲನೆ. ಆದಾಯಕ್ಕೂ ಮೀರಿ ಆಸ್ತಿ ಗಳಿಕೆಯ ದೂರಿನಡಿ ದಾಳಿ ನಡೆದಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಸುನೀಲ್ ಕುಮಾರ್ ಮನೆ, ಬೀದರ್‌ನ ಜೈಲ್ ಕಾಲೋನಿಯ ಎಸ್‌ಬಿಪಿ ನಗರದ ನಿವಾಸದಲ್ಲಿ ದಾಳಿ. ಅವರು ಕಲಬುರ್ಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿಯ ಕಚೇರಿಯಲ್ಲಿಯೂ ಪರಿಶೀಲನೆ ನಡೆಯಿತು. ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ ಬಿ ಗ್ರಾಮ ನಿವಾಸಿ ಎಂಬ ವಿವರವೂ ಲಭ್ಯವಾಗಿದೆ. ದಾಳಿಗೆ ಲೋಕಾಯುಕ್ತ ಡಿವೈಎಸ್ಪಿ ಹನುಮಂತರಾಯ್ ನೇತೃತ್ವ ನೀಡಿದರು.
ಕೆಐಎಡಿಬಿ (Karnataka Industrial Area Development Board) ಕಚೇರಿ ಮೇಲೆ ದಾಳಿ. ಎಇಇ ರವಿಕುಮಾರ್ ಮತ್ತು ಎಇಇ ರಾಜೇಶ್ ಅವರ ಕೊಠಡಿಗಳಲ್ಲಿ ದಾಖಲೆ ಪರಿಶೀಲನೆ. ರಾಜೇಶ್ ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರು. ಇತ್ತೀಚೆಗೆ ಬೆಂಗಳೂರು ನಿವಾಸದಿಂದ ಪ್ರತಿದಿನ ತುಮಕೂರಿಗೆ ಸಂಚರಿಸುತ್ತಿದ್ದರು. ದಾಳಿ ವೇಳೆ ಬೆಂಗಳೂರು ಕೋರಮಂಗಲದಲ್ಲಿರುವ ಅವರ ಮನೆ ಮೇಲೂ ಲೋಕಾಯುಕ್ತದ ಶೋಧ ನಡೆದಿದ್ದು, ಅದನ್ನು ಲಾಕ್ ಮಾಡಲಾಗಿದೆ. ದಾಳಿಗೆ ಚಿತ್ರದುರ್ಗ ಲೋಕಾಯುಕ್ತ ತಂಡ ನೇತೃತ್ವ ನೀಡಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಕಚೇರಿ, ಐವಾನ್ ಶಾಹಿ ಪ್ರದೇಶದಲ್ಲಿ ಲೊಕಾಯುಕ್ತ ದಾಳಿ. ಅಧಿಕಾರಿಗಳೆದುರು ಆದಾಯಕ್ಕೂ ಮೀರಿ ಆಸ್ತಿ ಗಳಿಕೆಯ ಆರೋಪ ಇದ್ದು, ನಿವಾಸ ಮತ್ತು ಕಚೇರಿಗಳ ಮೇಲೆ ಶೋಧ ನಡೆಯಿತು.
ರಾಮನಗರ ಜಿಲ್ಲಾಸ್ಪತ್ರೆಯ ಆಡಳಿತ ವಿಭಾಗದ ಲೆಕ್ಕಪತ್ರಗಳ ಪರಿಶೀಲನೆ. ಡಿಸ್ಟ್ರಿಕ್ಟ್ ಸರ್ಜನ್ ಡಾ. ಮಂಜುನಾಥ್ ಅವರಿಂದ ಮಾಹಿತಿ ಸಂಗ್ರಹಣೆ. ದಾಳಿಗೆ ಲೋಕಾಯುಕ್ತ ಡಿವೈಎಸ್ಪಿ ಶಿವಪ್ರಸಾದ್ ಮತ್ತು ರಾಜೇಶ್ ನೇತೃತ್ವ ನೀಡಿದ್ದು, ಹತ್ತುಕ್ಕೂ ಹೆಚ್ಚು ಅಧಿಕಾರಿಗಳ ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತು.