ಬೀದರ್ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯು ಭರ್ಜರಿ ಕಾರ್ಯಾಚರಣೆ ನಡೆಸಿ, ಕೋಟ್ಯಂತರ ರೂಪಾಯಿ ಮೌಲ್ಯದ 'ಎರಡು ತಲೆ ಹಾವು' (ರೆಡ್ ಸ್ಯಾಂಡ್ ಬೋವಾ) ಅನ್ನು ರಕ್ಷಿಸಿದೆ. ಆಂಧ್ರಪ್ರದೇಶ ನೋಂದಣಿಯ ಕಾರಿನಲ್ಲಿ ಹಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಬೀದರ್: ಗಡಿ ಜಿಲ್ಲೆ ಬೀದರ್‌ನಲ್ಲಿ ವನ್ಯಜೀವಿಗಳ ಅಕ್ರಮ ಸಾಗಾಟದ ದೊಡ್ಡ ಜಾಲವೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ. ಕೋಟ್ಯಾಂತರ ರೂಪಾಯಿ ಬೆಲೆಬಾಳುವ ‘ಎರಡು ತಲೆ ಹಾವು’ ಅಥವಾ ‘ಮಣ್ಣ ಮುಕ್ಕ ಹಾವು’ (Red Sand Boa) ಎಂದು ಕರೆಯಲ್ಪಡುವ ಅಪರೂಪದ ಹಾವನ್ನು ರಕ್ಷಿಸಲಾಗಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
26
ಖಚಿತ ಮಾಹಿತಿ ಮೇರೆಗೆ ದಾಳಿ
ಬೀದರ್ ಉಪ ಅರಣ್ಯ ಸಂರಕ್ಷಣಾಧಿಕಾರಿ (DFO) ಆಶಿಶ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆಯ ತಂಡವು ಈ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಆಂಧ್ರಪ್ರದೇಶ ನೋಂದಣಿ (AP Registration) ಹೊಂದಿದ್ದ ಬಿಳಿ ಬಣ್ಣದ ಕಾರಿನಲ್ಲಿ ಹಾವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.
36
5.34 ಕೆಜಿ ತೂಕದ ಬೃಹತ್ ಹಾವು:
ವಶಪಡಿಸಿಕೊಳ್ಳಲಾದ ರೆಡ್ ಸ್ಯಾಂಡ್ ಬೋವಾ ಹಾವು ಸುಮಾರು 5.34 ಕೆಜಿ ತೂಕವಿದ್ದು, ಇದು ಅತ್ಯಂತ ದೊಡ್ಡ ಗಾತ್ರದ ಹಾವಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹಾವಿಗೆ ಕೋಟ್ಯಾಂತರ ರೂಪಾಯಿ ಬೆಲೆ ಇದೆ ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ಮಾಟ-ಮಂತ್ರ, ವಾಮಾಚಾರ ಹಾಗೂ ಔಷಧೀಯ ಗುಣಗಳಿವೆಯೆಂಬ ಮೂಢನಂಬಿಕೆಯಿಂದಾಗಿ ಇಂತಹ ಹಾವುಗಳ ಅಕ್ರಮ ಸಾಗಾಟ ಮತ್ತು ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ.
ಹಾವು ಸಾಗಿಸುತ್ತಿದ್ದ ಕಾರನ್ನು ಜಪ್ತಿ ಮಾಡಿರುವ ಅಧಿಕಾರಿಗಳು, ಕಾರಿನಲ್ಲಿದ್ದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳು ಹಾವನ್ನು ಎಲ್ಲಿಂದ ತಂದಿದ್ದರು ಮತ್ತು ಯಾರಿಗೆ ಮಾರಾಟ ಮಾಡಲು ಹೊರಟಿದ್ದರು ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ವಿವಿಧ ಕಲಂಗಳಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
56
ಮೂಢನಂಬಿಕೆಯೇ ಈ ಹಾವುಗಳಿಗೆ ಶಾಪ:
ಎರಡು ತಲೆ ಹಾವು ಅಥವಾ ಮಣ್ಣ ಮುಕ್ಕ ಹಾವುಗಳನ್ನು ಮನೆಯಲ್ಲಿಟ್ಟರೆ ಅಥವಾ ಪೂಜೆ ಮಾಡಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಸ್ಮಗ್ಲರ್‌ಗಳು ಕಾಡಿನಿಂದ ಇವುಗಳನ್ನು ಹಿಡಿದು ಕೋಟಿಗಟ್ಟಲೆ ಹಣಕ್ಕೆ ಮಾರಾಟ ಮಾಡುತ್ತಾರೆ. ಆದರೆ ವನ್ಯಜೀವಿಗಳನ್ನು ಹಿಡಿಯುವುದು ಮತ್ತು ಮಾರಾಟ ಮಾಡುವುದು ಕಾನೂನುಬಾಹಿರ ಹಾಗೂ ಕಠಿಣ ಶಿಕ್ಷಾರ್ಹ ಅಪರಾಧವಾಗಿದೆ.
ಬೀದರ್ ಅರಣ್ಯ ಇಲಾಖೆಯ ಈ ಸಮಯೋಚಿತ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದ್ದು, ವನ್ಯಜೀವಿಗಳ ರಕ್ಷಣೆಗೆ ಇಲಾಖೆ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದೆ.
66
ಚಿಕ್ಕಮಗಳೂರಿನಲ್ಲೂ ಎರಡು ತಲೆ ಹಾವು ರಕ್ಷಣೆ
ಚಿಕ್ಕಮಗಳೂರಿನಲ್ಲಿಯೂ 2 ತಲೆ ಹಾವನ್ನ ಮಾರಾಟ ಮಾಡಲು ಯತ್ನಿಸಿದಿದ್ದ ಐವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧನ ಮಾಡಿದ್ದರು. 1 ಕೆಜಿ 400 ಗ್ರಾಂ ತೂಕದ ಬೃಹತ್ 2 ತಲೆ ಹಾವು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಸಿಐಡಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳಿಂದ ದಾಳಿ ನಡೆಸಿ ರೆಡ್ ಹ್ಯಾಂಡಾಗಿ ಸೀಜ್ ಮಾಡಿದ್ದರು. ಇಬ್ಬರು ಆಂಧ್ರ, ಇಬ್ಬರು ತುಮಕೂರು, ಓರ್ವ ಶಿವಮೊಗ್ಗ ಮೂಲದವರ ಬಂಧನ ಮಾಡಿ, ಕೋಟ್ಯಾಂತರ ರೂಪಾಯಿಗೆ ಬೆಲೆ ಬಾಳುವ ಎರಡು ತಲೆ (ಮಣ್ಣುಮುಕ್ಕ) ಹಾವು ರಕ್ಷಣೆ ಮಾಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ