ರಾಜ್ಯದಲ್ಲಿ ವರುಣನ ಅಬ್ಬರ: ಧಾರವಾಡ, ಬೆಳಗಾವಿ, ಮಲೆನಾಡಿನಲ್ಲಿ ಗುಡುಗು ಸಹಿತ ಭಾರಿ ಮಳೆ! ಎಲ್ಲೆಲ್ಲಿ ಎಷ್ಟು? ವಿವರ ನೋಡಿ

Published : May 12, 2026, 10:29 PM IST

ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದ್ದು, ಧಾರವಾಡ, ಬೆಳಗಾವಿ, ಮತ್ತು ಮಲೆನಾಡು ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಇದರಿಂದಾಗಿ ಹಲವೆಡೆ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಎಲ್ಲಿ ಎಷ್ಟು ಮಳೆಯಾಗಿದೆ ವಿರ ನೋಡಿ..

PREV
17
ರಾಜ್ಯಾದ್ಯಂತ ಮಳೆ ಎಲ್ಲೆಲ್ಲಿಎಷ್ಟು? ತಿಳಿಯಿರಿ

ರಾಜ್ಯದಾದ್ಯಂತ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದೆ. ಮಂಗಳವಾರ ಸಂಜೆ ಧಾರವಾಡ, ಬೆಳಗಾವಿ, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ಯಾವ ಜಿಲ್ಲೆಗಳಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ ಎಂಬ ವಿವರ ಇಲ್ಲಿದೆ ನೋಡಿ.

27
ಧಾರವಾಡದಲ್ಲಿ ಅಸ್ತವ್ಯಸ್ತಗೊಂಡ ಸಂಚಾರ

ಧಾರವಾಡ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಅರ್ಧ ಗಂಟೆಗೂ ಅಧಿಕ ಕಾಲ ಗುಡುಗು ಸಹಿತ ಭಾರಿ ಮಳೆಯಾಗಿದೆ. ಇದರಿಂದಾಗಿ ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಜನರಿಗೆ ನೆಮ್ಮದಿ ಸಿಕ್ಕಂತಾಗಿದೆ. ಆದರೆ, ಬಿರುಗಾಳಿಯ ರಭಸಕ್ಕೆ ನಗರದ ಹಲವೆಡೆ ಮರಗಳು ಉರುಳಿ ಬಿದ್ದಿವೆ. 

ಮುಖ್ಯವಾಗಿ ಉಪ್ಪಿನ ಬೆಟಗೇರಿ ರಸ್ತೆಯಲ್ಲಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟು ಮರವನ್ನು ತೆರವುಗೊಳಿಸಿದರು. ಹವಾಮಾನ ಇಲಾಖೆಯ ವರದಿಯ ಪ್ರಕಾರ ಧಾರವಾಡದಲ್ಲಿ 15 ಮಿ.ಮೀ ಮಳೆಯಾಗಿದೆ.

37
ಬಿರುಗಾಳಿ ಸಹಿತ ಮಳೆ

ಬೆಳಗಾವಿ ಜಿಲ್ಲೆಯಲ್ಲೂ ವರುಣನ ಅಬ್ಬರ ಜೋರಾಗಿತ್ತು. ಚಿಕ್ಕೋಡಿ ಪಟ್ಟಣದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಸುರಿದ ಮಳೆಗೆ ರಸ್ತೆಗಳು ಕೆರೆಯಂತಾಗಿದ್ದವು. ವಾಹನ ಸವಾರರು ಮಳೆ ನೀರಿನಲ್ಲೇ ಸಂಚರಿಸಲು ಹರಸಾಹಸ ಪಟ್ಟರು.

47
ಬೆಳಗಾವಿ: ಕಕ್ಕೇರಿಯಲ್ಲಿ ಭಯಾನಕ ಬಿರುಗಾಳಿ

ಇನ್ನು ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಭಯಾನಕ ಬಿರುಗಾಳಿ ಸಹಿತ ಮಳೆಯಾಗಿದೆ. ಬಿರುಗಾಳಿಯ ರಭಸಕ್ಕೆ ಗಿಡಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕಚ್ಚಿವೆ. ಈ ಭಯಾನಕ ದೃಶ್ಯಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿವೆ. ಮುಂಜಾಗ್ರತಾ ಕ್ರಮವಾಗಿ ಚಿಕ್ಕೋಡಿ ಪಟ್ಟಣದಲ್ಲಿ ತಡರಾತ್ರಿವರೆಗೆ ವಿದ್ಯುತ್ ಕಡಿತಗೊಳಿಸಲಾಗಿತ್ತು.

57
ಮಲೆನಾಡಿನಲ್ಲಿ ಮುಂದುವರಿದ ಆರ್ಭಟ

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಂದು ಕೂಡ ಧಾರಾಕಾರ ಮಳೆಯಾಗಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್ ಮತ್ತು ಆಲ್ದೂರು ಸುತ್ತಮುತ್ತ ಭಾರಿ ಗಾಳಿ-ಸಿಡಿಲಿನ ಜೊತೆ ಮಳೆ ಸುರಿದಿದೆ. ನಿನ್ನೆಯಷ್ಟೇ ಜಿಲ್ಲೆಯ ಹಲವೆಡೆ ಮಳೆಯಿಂದ ಅನಾಹುತಗಳು ಸಂಭವಿಸಿದ್ದವು, ಇಂದು ಕೂಡ ಅದೇ ಆರ್ಭಟ ಮುಂದುವರಿದಿದೆ. ಬಿರುಗಾಳಿಯ ಜೊತೆ ಮಳೆ ಸುರಿಯುತ್ತಿರುವುದರಿಂದ ಕಾಫಿ ತೋಟಗಳಿಗೆ ಹಾನಿಯಾಗುವ ಭೀತಿ ಎದುರಾಗಿದೆ.

67
ಹವಾಮಾನ ಇಲಾಖೆಯ ಅಂಕಿ-ಅಂಶಗಳು

ಬೆಂಗಳೂರು ಹವಾಮಾನ ಕೇಂದ್ರದ ವರದಿಯ ಪ್ರಕಾರ ರಾಜ್ಯದ ವಿವಿಧೆಡೆ ದಾಖಲಾದ ಮಳೆಯ ವಿವರ ಇಲ್ಲಿದೆ (ಮೇ 12, ರಾತ್ರಿ 9:30ರವರೆಗೆ):

  • ಧಾರವಾಡ: 15.0 ಮಿ.ಮೀ
  • ಸಿರ್ಸಿ (ಉತ್ತರ ಕನ್ನಡ): 11.5 ಮಿ.ಮೀ
  • ಆಗುಂಬೆ (ಶಿವಮೊಗ್ಗ): 8.0 ಮಿ.ಮೀ
  • ಗದಗ: 3.2 ಮಿ.ಮೀ
  • ಮುದಿಗೆರೆ (ಚಿಕ್ಕಮಗಳೂರು): 4.0 ಮಿ.ಮೀ
  • ಮಂಗಳೂರು: 1.0 ಮಿ.ಮೀ
77
ಮುಂದಿನ 5 ದಿನಗಳ ಕಾಲ ಮಳೆ

ಬೆಳಗಾವಿ, ಚಿತ್ರದುರ್ಗ ಮತ್ತು ಕಲಬುರಗಿಯಲ್ಲಿ ಸಂಜೆ ವೇಳೆ ಗುಡುಗು ಸಹಿತ ಮೋಡಗಳು (CB clouds) ಕಂಡುಬಂದಿದ್ದು, ಮಳೆಯ ಮುನ್ಸೂಚನೆ ನೀಡಲಾಗಿದೆ. ಮುಂದಿನ ಕೆಲವು ದಿನಗಳ ಕಾಲ ರಾಜ್ಯದ ಒಳನಾಡಿನಲ್ಲಿ ಇದೇ ರೀತಿಯ ಹವಾಮಾನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಟ್ಟಾರೆಯಾಗಿ ವರುಣನ ಆಗಮನ ಬಿಸಿಲಿನಿಂದ ಮುಕ್ತಿ ನೀಡಿದ್ದರೂ, ಅನಿರೀಕ್ಷಿತ ಬಿರುಗಾಳಿ ಜನರಲ್ಲಿ ಆತಂಕ ಮೂಡಿಸಿದೆ.

ಇದನ್ನೂ ಓದಿ: ರಾಜ್ಯದಲ್ಲಿ 8 ಜಿಲ್ಲೆಗೆ ಆರೆಂಟ್ ಅಲರ್ಟ್; ಮುಂದಿನ 5 ದಿನ ಈ ಭಾಗದಲ್ಲಿ ಆಲಿಕಲ್ಲು ಸಹಿತ ಮಳೆ ಮುನ್ಸೂಚನೆ!

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories