Published : Jul 30, 2025, 09:46 AM ISTUpdated : Jul 30, 2025, 10:13 AM IST
ಮೇರುನಟ ಡಾ.ರಾಜ್ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿ ಇಂದಿಗೆ ಜುಲೈ 30 ಬರೋಬ್ಬರಿ ಇಪ್ಪತ್ತೈದು ವರ್ಷ. ಡಾ ರಾಜ್ ಹುಟ್ಟೂರು ಗಾಜನೂರಿನಲ್ಲಿ ಆ ಕರಾಳ ನೆನಪು ಇಂದಿಗು ಪ್ರತಿಧ್ವನಿಸುತ್ತಿದೆ. ನಿಜಕ್ಕೂ ಅಂದು ರಾತ್ರಿ ಗಾಜನೂರಿನಲ್ಲಿ ನಡೆದಿದ್ದೇನು ಈ ಸ್ಟೋರಿ ನೋಡಿ..
ಅಣ್ಣಾವ್ರಿಗೆ ತಮ್ಮ ಹುಟ್ಟೂರು ಗಾಜನೂರು ಅಂದ್ರೆ ಸ್ವರ್ಗಕ್ಕೆ ಸಮಾನ. ಹಾಗಾಗಿಯೇ ತಮ್ಮ ವಿಶ್ರಾಂತ ಜೀವನ ಕಳೆಯಲೆಂದೆ ಚಾಮರಾಜನಗರ ಜಿಲ್ಲೆಯ ಗಡಿಭಾಗ ತಮಿಳುನಾಡಿನಲ್ಲಿರುವ ಗಾಜನೂರಿನಲ್ಲಿ ಈ ಹೊಸ ಮನೆ ಕಟ್ಟಿಸಿದ್ದರು. ಗೃಹ ಪ್ರವೇಶವೇನೋ ಆಗಿತ್ತು. ಆದರೆ ವಾಸ್ತವ್ಯ ಮಾಡಿರಲಿಲ್ಲ. 2000 ನೇ ಇಸವಿ ಜುಲೈ 30 ರಂದು ಬೆಂಗಳೂರಿನಲ್ಲಿದ್ದ ರಾಜ್ಕುಮಾರ್ ಅವರಿಗೆ ತಮ್ಮ ಜಮೀನಿನಲ್ಲಿ ಕೊರೆಸಿದ ಬೋರ್ ನಲ್ಲಿ ನೀರು ಬಂತು ಎಂಬ ವಿಷಯ ಯಾವಾಗ ಕಿವಿಗೆ ಬಿತ್ತೋ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಅಂದೇ ಗಾಜನೂರಿಗೆ ದೌಡಾಯಿಸಿದ್ದರು. ಜಮೀನಿನಲ್ಲಿ ಖುಷಿ ಖುಷಿಯಾಗಿ ಸುತ್ತಾಡಿಕೊಂಡು ಸಂಜೆ ವೇಳೆಗೆ ಹಳೆ ಮನೆಗೆ ಬಂದಿದ್ದರು. ರಾತ್ರಿ ಎಲ್ಲರೊಂದಿಗೆ ಊಟ ಮಾಡಿ ಹಾಲ್ ನಲ್ಲಿ ಕುಳಿತು ರಾತ್ರಿ ಸುಮಾರು ಒಂಭತ್ತುವರೆ ವೇಳೆಯಲ್ಲಿ ಟಿವಿಯಲ್ಲಿ ಡಾ ವಿಷ್ಣುವರ್ಧನ್ ಅವರ ಪಿಕ್ಚರ್ ನೋಡುತ್ತಾ ಕುಳಿತಿರಬೇಕಾದರೆ ನರಹಂತಕ ವೀರಪ್ಪನ್ ತನ್ನ ಸಹಚರರೊಂದಿಗೆ ಎಂಟ್ರಿ ಕೊಟ್ಟಿದ್ದ. ಬಂದೂಕುಧಾರಿಯಾಗಿದ್ದ ವೀರಪ್ಪನ್ ಮತ್ತು ಸಹಚರರನ್ನು ನೋಡಿ ಮನೆಯಲ್ಲಿದ್ದವರೆಲ್ಲಾ ಬೆಚ್ಚಿಬಿದ್ದಿದ್ದರು. ಡಾ. ರಾಜ್ ಪಕ್ಕದಲ್ಲೇ ಕುಳಿತಿದ್ದ ಪಾರ್ವತಮ್ಮರಾಜಕುಮಾರ್ ಅವರ ಕೈಗೆ ಒಂದು ಆಡಿಯೋ ಕ್ಯಾಸೆಟ್ ನೀಡಿದ ವೀರಪ್ಪನ್ ರಾಜ್ಕುಮಾರ್ ಅವರ ಕೈಗಳನ್ನು ಹಗ್ಗದಿಂದ ಕಟ್ಟಿ ಅಲ್ಲಿಂದ ಎಳೆದೊಯ್ಯಲು ಮುಂದಾಗಿದ್ದ
25
ಡಾ ರಾಜ್ ಅಪಹರಣಕ್ಕೆ ಇಂದಿಗೆ 25 ವರ್ಷ
ನರಹಂತಕ ವೀರಪ್ಪನ್ನ ತನ್ನನ್ನು ಅಪಹರಿಸಲೆಂದೆ ಬಂದಿದ್ದಾನೆ ಎಂದು ತಿಳಿದರೂ ಶಾಂತಚಿತ್ತರಾಗಿದ್ದ ಡಾ ರಾಜಕುಮಾರ್ ಯಾವುದೇ ಪ್ರತಿರೋಧ ತೋರದೆ ನೀನೇನು ಎಳೆದೊಯ್ಯುವುದು ಬೇಡ ನಾನೇ ನಿನ್ನೊಡನೆ ಬರುತ್ತೇನೆ ನಡೆ ಎಂದು ಹೊರಟೇ ಬಿಟ್ಟರು. ಅವರೊಡನೆ ಪಾರ್ವತಮ್ಮರಾಜಕುಮಾರ್ ಅವರ ಸಹೋದರ ಗೋವಿಂದರಾಜು, ಸಹಾಯಕ ನಾಗೇಶ್, ಸಹನಟ ನಾಗಪ್ಪಮಾರಡಗಿ ಅವರು ಸಹ ಹಿಂಬಾಲಿಸಿದರು.
35
ಡಾ ರಾಜ್ ಅಪಹರಣಕ್ಕೆ ಇಂದಿಗೆ 25 ವರ್ಷ
ಕೆಲವೇ ನಿಮಿಷಗಳಲ್ಲಿ ನಡೆದು ಹೋದ ಅನಿರೀಕ್ಷಿತ ಬೆಳವಣಿಗೆಯಿಂದ ಗಾಜನೂರಿನ ಮನೆಯಲ್ಲಿದ್ದ ಎಲ್ಲರೂ ಕಂಗಾಲಾಗಿ ಹೋಗಿದ್ದರು. ಆದರೆ ಈ ಅನಿರೀಕ್ಷಿತ ಘಟನೆಯಿಂದ ಎದೆಗುಂದದೆ ಪಾರ್ವತಮ್ಮ ರಾಜ್ಕುಮಾರ್ ಅವರು ಅಂದು ರಾತ್ರಿಯೇ ಬೆಂಗಳೂರಿಗೆ ಪ್ರಯಾಣಿಸಿ ಅಂದಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರಿಗೆ ವೀರಪ್ಪನ್ ನೀಡಿದ್ದ ಆಡಿಯೋ ಕ್ಯಾಸೆಟ್ ತಲುಪಿಸಿದ್ದರು.
ತನ್ನ ಬೇಡಿಕೆಗಳ ಈಡೇರಿಕೆಗಾಗಿ ಡಾ.ರಾಜ್ಕುಮಾರ್ ಅವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಕಾಡುಗಳ್ಳ ವೀರಪ್ಪನ್ 108 ದಿನಗಳ ಬಳಿಕ ಬಿಡುಗಡೆ ಮಾಡಿದ್ದ. ಭದ್ರತೆಯ ದೃಷ್ಟಿಯಿಂದ ಅಣ್ಣಾವ್ರು ಗಾಜನೂರಿಗೆ ಬಾರದೆ ಬೆಂಗಳೂರಿನಲ್ಲಿಯೇ ವಾಸ್ತವ್ಯ ಮಾಡಿದ್ದರು. ಈ ನಡುವೆ ಚಾಮರಾಜನಗರದಲ್ಲಿ ಆಯೋಜಿಸಿದ್ದ ಪುನೀತ್ ರಾಜ್ಕುಮಾರ್ ಅಭಿನಯದ ಅಪ್ಪು ಸಿನಿಮಾದ ಶತದಿನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಮುನ್ನಾ ದಿನವೇ ಗಾಜನೂರಿಗೆ ಆಗಮಿಸಿದ್ದರು
55
ಡಾ ರಾಜ್ ಅಪಹರಣಕ್ಕೆ ಇಂದಿಗೆ 25 ವರ್ಷ
ಅಂದು ರಾತ್ರಿ ಗಾಜನೂರಿನಲ್ಲಿ ಉಳಿದು ಮಾರನೇ ದಿನ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಯಸಿದ್ದರು. ಅದರೆ ಅಂದು ರಾತ್ರಿಯೇ ಮಾಜಿ ಸಚಿವ ನಾಗಪ್ಪ ಅವರನ್ನು ವೀರಪ್ಪನ್ ಅಪಹರಿಸಿದ್ದ. ವಿಷಯ ಗೊತ್ತಾಗುತ್ತಿದ್ದಂತೆ ರಾತ್ರೋರಾತ್ರಿ ಬಿಗಿಭದ್ರೆತೆಯಲ್ಲಿ ರಾಜಕುಮಾರ್ ಅವರನ್ನು ಬೆಂಗಳೂರಿಗೆ ಕರೆದೊಯ್ಯಲಾಯಿತು ಗಾಜನೂರಿನ ಹೊಸ ಮನೆಯಲ್ಲಿ ವಾಸ್ತವ್ಯ ಮಾಡಬೇಕೆಂಬ ಅವರ ಕನಸು ಕನಸಾಗಿಯೇ ಉಳಿದು ಹೋಯ್ತು