ಅನ್‌ಲಾಕ್‌ ರಾಘವ ಚಿತ್ರಕ್ಕೆ ಅದ್ದೂರಿ ಕ್ಲೈಮ್ಯಾಕ್ಸ್‌: ಮಿಲಿಂದ್‌ಗೆ ರೇಚಲ್ ಜೋಡಿ

First Published Dec 26, 2022, 11:09 AM IST

ಮಿಲಿಂದ್ ಹಾಗೂ ರೇಚಲ್ ಡೇವಿಡ್ ಜೋಡಿಯಾಗಿ ಅಭಿನಯಿಸಿರುವ ಅನ್‌ಲಾಕ್‌ ರಾಘವ ಸಿನಿಮಾ ಕ್ಲೈಮ್ಯಾಕ್ಸ್‌ ಅದ್ಧೂರಿಯಾಗಿ ಚಿತ್ರೀಕರಣವಾಗಿದೆ.

ದೀಪಕ್‌ ಮಧುವನಹಳ್ಳಿ ನಿರ್ದೇಶನದ ‘ಅನ್‌ಲಾಕ್‌ ರಾಘವ’ ಚಿತ್ರಕ್ಕೆ ಅದ್ದೂರಿಯಾಗಿ ಕ್ಲೈಮ್ಯಾಕ್ಸ್‌ ಚಿತ್ರೀಕರಣ ಆಯೋಜಿಲಾಗಿತ್ತು. ಸತ್ಯಪಿಕ್ಚೇರ್ಸ್‌ ಹಾಗೂ ಮಯೂರ ಪಿಕ್ಚೇರ್ಸ್‌ ಮೂಲಕ ನಿರ್ಮಾಣ ಆಗುತ್ತಿರುವ ಈ ಚಿತ್ರದಲ್ಲಿ ಮಿಲಿಂದ್‌ ಹಾಗೂ ರೇಚಲ್‌ ಡೇವಿಡ್‌ ಜೋಡಿಯಾಗಿ ನಟಿಸುತ್ತಿದ್ದಾರೆ. 

ಉಳಿದಂತೆ ಅವಿನಾಶ್‌, ಸಾಧು ಕೋಕಿಲಾ, ವೀಣಾ ಸುಂದರ್‌, ಸುಂದರ್‌ ವೀಣಾ, ರಮೇಶ್‌ ಭಟ್‌, ಶೋಭರಾಜ್‌, ಧರ್ಮಣ್ಣ ಕಡೂರು, ಭೂಮಿ ಶೆಟ್ಟಿಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ಇದ್ದಾರೆ. ಚಿತ್ರೀಕರಣದ ನಡುವೆ ಚಿತ್ರತಂಡದ ಮಾತುಗಳು ಶುರುವಾಯಿತು. 

‘ಹತ್ತು ದಿನಗಳ ಕಾಲ ಕ್ಲೈಮ್ಯಾಕ್ಸ್‌ ಚಿತ್ರೀಕರಣ ಮಾಡಿದ್ದೇವೆ. ಇದರ ಜತೆಗೆ ಎರಡು ಹಾಡುಋು, ಮಾತಿನ ಬಾಗದ ಕೆಲ ದೃಶ್ಯಗಳ ಚಿತ್ರೀಕರಣ ಇದೆ. ಇಲ್ಲಿವರೆಗೂ ಶೇ.50ರಷ್ಟುಭಾಗ ಚಿತ್ರೀಕರಣ ಆಗಿದೆ. ಹ್ಯೂಮರ್‌, ಟ್ರಾವಲ್‌ ಹಾಗೂ ಪ್ರೇಮ ಈ ಮೂವರು ಅಂಶಗಳ ಮೇಲೆ ಇಡೀ ಸಿನಿಮಾ ಸಾಗುತ್ತದೆ. 

ಮಾತಿನ ಭಾಗದ ದೃಶ್ಯಗಳ ಜತೆಗೆ ಸಾಹಸ ಕೂಡ ನಡೆಯುತ್ತದೆ. ಇದೇ ಚಿತ್ರದ ಹೈಲೈಟ್‌. ಹೀಗಾಗಿ ಇದೊಂದು ಆ್ಯಕ್ಷನ್‌ ಹ್ಯೂಮರ್‌ ಸಿನಿಮಾ ಎನ್ನಬಹುದು’ ಎಂದರು ನಿರ್ದೇಶಕ ದೀಪಕ್‌ ಮಧುವನಹಳ್ಳಿ ಅವರು.

ಈ ಚಿತ್ರಕ್ಕೆ ಕತೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವುದು ನಿರ್ದೇಶಕ ಡಿ ಸತ್ಯಪ್ರಕಾಶ್‌ ಅವರು. ‘ಬುದ್ಧಿವಂತ ಹೀರೋ. ಎಲ್ಲರ ಜೀವನದಲ್ಲಿ ಲಾಕ್‌ ಮಾಡುವ ಹೀರೋ, ತಾನೇ ಒಂದು ಸನ್ನಿವೇಶದಲ್ಲಿ ಲಾಕ್‌ ಆದಾಗ ಏನಾಗುತ್ತದೆ. ಮತ್ತು ಲಾಕ್‌ ಎಂಬುದು ಕೇವಲ ವಸ್ತುಗಳಿಗೆ ಸೀಮಿತವಲ್ಲ. 

ಸಂಬಂಧಗಳು, ಪ್ರೀತಿ- ಪ್ರೇಮ ಕೂಡ ಇರುತ್ತದೆ. ತಾನೇ ಸಿಕ್ಕಿಕೊಂಡಿರುವ ಲಾಕ್‌ನಿಂದ ಅನ್‌ ಲಾಕ್‌ ಆಗಿ ಬರುವ ಹೀರೋ ಕತೆ ಇಲ್ಲಿದೆ. ಇಡೀ ಸಿನಿಮಾ ನಗಿಸುತ್ತಲೇ ಸಾಗುತ್ತದೆ’ ಎಂಬುದು ಸತ್ಯಪ್ರಕಾಶ್‌ ಅವರ ವಿವರಣೆ. ಈ ಚಿತ್ರದ ನಿರ್ಮಾಪಕರು ಡಿ ಮಂಜುನಾಥ್‌. 

ಇವರ ಪುತ್ರನೇ ಚಿತ್ರದ ನಾಯಕ ಮಿಲಿಂದ್‌. ‘ಒಳ್ಳೆಯ ಕಂಟೆಂಟ್‌ ಕೊಟ್ಟರೆ ಜನ ಸಿನಿಮಾ ನೋಡಿ ಗೆಲ್ಲಿಸುತ್ತಾರೆ ಎಂಬುದಕ್ಕೆ ಕನ್ನಡದಲ್ಲೇ ಸಾಕಷ್ಟುಸಿನಿಮಾಗಳು ಇವೆ. ನಮ್ಮ ಚಿತ್ರ ಕೂಡ ಕಂಟೆಂಟ್‌ ಆಧರಿಸಿದೆ. ಹೀಗಾಗಿ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆಂಬ ನಂಬಿಕೆ ಇದೆ’ ಎಂದರು ಮಂಜುನಾಥ್‌. 

 ‘ಇದು ನನ್ನ ಎರಡನೇ ಸಿನಿಮಾ. ನಾಯಕನಿಗೆ ಬೇಕಾದ ಕ್ವಾಲಿಟಿಗಳನ್ನು ಅರ್ಥ ಮಾಡಿಕೊಂಡಿದ್ದೇನೆ. ನಮ್ಮ ಈ ಚಿತ್ರದ ಶಕ್ತಿ ಸತ್ಯಪ್ರಕಾಶ್‌ ವರ ಬರವಣಿಗೆ. ರೋಮ್ಯಾಂಟಿಕ್‌ ಹಾಗೂ ಕಾಮಿಡಿ ಜಾನರ್‌ ಸಿನಿಮಾ ಇದು. ನಾನು ಈ ಚಿತ್ರದಲ್ಲಿ ನಾಯಕನಾಗಿ ನಟಿಸುವುದಕ್ಕೆ ಮುಖ್ಯ ಕಾರಣ ನಮ್ಮ ತಂದೆ. ಅವರ ಆಸೆ ಮತ್ತು ನನ್ನ ಆಸಕ್ತಿ ಈ ಚಿತ್ರದ ಹುಟ್ಟಿಗೆ ಕಾರಣವಾಗಿದೆ’ ಎಂದು ಹೇಳಿದ್ದು ನಟ ಮಿಲಿಂದ್‌.

ನಟಿ ರೇಚಲ್‌ ಡೇವಿಡ್‌ ಅವರು ಇಲ್ಲಿ ಆರ್ಕಿಟೆಕ್‌ ಪಾತ್ರ ಮಾಡುತ್ತಿದ್ದಾರೆ. ಇವರ ತಂದೆ ಪಾತ್ರದಲ್ಲಿ ಅವಿನಾಶ್‌ ನಟಿಸಿದ್ದಾರೆ. ವೀಣಾ ಸುಂದರ್‌, ಧರ್ಮಣ್ಣ, ಸುಂದರ್‌ ವೀಣಾ, ಸಾಹಸ ನಿರ್ದೇಶಕ ವಿನೋದ್‌ ಕುಮಾರ್‌, ಸಾಯಿ ಕುಡ್ಲ ಅವರು ಚಿತ್ರದ ಕುರಿತು ಹೇಳಿಕೊಂಡರು. ಲವಿತ್‌ ಕ್ಯಾಮೆರಾ, ಅನೂಪ್‌ ಸೀಳಿನ್‌ ಸಂಗೀತ ಚಿತ್ರಕ್ಕಿದೆ.

click me!