ಟ್ವಿಟರ್, ಇನ್‌ಸ್ಟಾಗ್ರಾಮ್‌ ನಿಷೇಧ: ಸ್ಯಾಂಡಲ್‌ವುಡ್ ತಾರೆಯರು ಏನಂತಾರೆ ?

ಫೇಸ್‌ಬುಕ್, ಟ್ವೀಟರ್, ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳು ನಿಷೇಧ ಆಗುವ ಕುರಿತಾದ ಚರ್ಚೆಗಳು ಜೋರಾಗಿವೆ. ಈ ಹಂತದಲ್ಲಿ ನಿಷೇಧ ಕುರಿತು ನಿಮ್ಮ ಅಭಿಪ್ರಾಯವೇನು, ನಿಷೇಧವಾದರೆ ನೀವು ಯಾವ ಆ್ಯಪ್ ಬಳಸುತ್ತೀರಿ ಎಂದು ಕೇಳಿದಾಗ ಸೆಲೆಬ್ರಿಟಿಗಳು ನೀಡಿದ ಉತ್ತರಗಳು ಇಲ್ಲಿವೆ.

ಹರ್ಷಿಕಾ ಪೂಣಚ್ಚ: ಬ್ಯಾನ್ ಮಾಡುತ್ತಾರೆಯೇ ಇಲ್ಲವೇ ಎಂಬುದು ಗೊತ್ತಿಲ್ಲ. ಹಾಗೊಂದು ವೇಳೆ ಮಾಡಿದರೆ ಅದು ಒಳ್ಳೆಯ ನಿರ್ಧಾರ ಅಲ್ಲ. ಸೋಷಿಯಲ್ ಮೀಡಿಯಾಗಳಿಂದ ಸಾಕಷ್ಟು ಒಳ್ಳೆಯ ಕೆಲಸಗಳು ಆಗುತ್ತಿವೆ ಎಂದಿದ್ದಾರೆ.
ಈ ಕಷ್ಟದಲ್ಲಿ ಯಾರಿಗಾದರೂ ನೆರವು ಆಗುತ್ತಿದ್ದೇವೆ ಎಂದರೆ ಅದಕ್ಕೆ ಈ ಸೋಷಿಯಲ್ ಮೀಡಿಯಾ ಕೂಡ ಕಾರಣ. ಒಬ್ಬ ತುಂಬು ಗರ್ಭಿಣಿಯ ಜೀವ ಉಳಿದುಕೊಂಡಿದ್ದು ಇದೇ ಟ್ವಿಟ್ಟರ್‌ನಲ್ಲಿ ನಾನು ಹಾಕಿದ ಪೋಸ್ಟ್ ಮೂಲಕ ಎಂದಿದ್ದಾರೆ.

ಸೋನು ಸೂದ್ ಥರದ ಕಲಾವಿದರು ನೂರಾರು ಜನಕ್ಕೆ ಸಹಾಯ ಮಾಡುತ್ತಿರುವುದು ಸಾಮಾಜಿಕ ಜಾಲತಾಣಗಳ ನೆರವಿನಿಂದ. ಹೀಗಾಗಿ ಬೇರೆ ಆ್ಯಪ್ ಬಳಸುತ್ತೇನೆ ಎನ್ನುವುದಕ್ಕಿಂತ ಇದೇ ಸೋಷಿಯಲ್ ಮೀಡಿಯಾಗಳನ್ನು ಒಳ್ಳೆಯ ರೀತಿಯಲ್ಲಿ ಬಳಸುತ್ತೇವೆ ಎಂದು ಹೇಳುವ ಮೂಲಕ ಇವುಗಳನ್ನೇ ಉಳಿಸಿಕೊಳ್ಳಬೇಕು ಎಂದಿದ್ದಾರೆ ನಟಿ.
ಶ್ವೇತಾ ಶ್ರೀವಾತ್ಸವ: ನಟಿ ಸಂಪೂರ್ಣವಾಗಿ ಬ್ಯಾನ್ ಮಾಡುತ್ತಾರಾ, ಒಂದಿಷ್ಟು ಹೊಸ ನಿಯಮಗಳನ್ನು ಜಾರಿ ಮಾಡುತ್ತಾರೆಯೇ ಎಂಬುದು ಗೊತ್ತಿಲ್ಲ. ಒಂದು ವೇಳೆ ಬ್ಯಾನ್ ಆದರೆ ಸಿನಿಮಾ ಮಂದಿಗೆ ಯೂಟ್ಯೂಬ್ ಇದೆ ಅಷ್ಟೆ ಎಂದಿದ್ದಾರೆ ನಟಿ.
ಇದರ ಜತೆಗೆ ನಾನು ನಮ್ಮ ದೇಶದ್ದೇ ಆದ ‘ಜೋಶ್’ ಎನ್ನುವ ಆ್ಯಪ್ ಬಳಸುತ್ತಿದ್ದೇನೆ. ಆದರೆ, ನಾವು ಪ್ರೇಕ್ಷಕರ ಜತೆಗೆ ನೇರವಾಗಿ ಮಾತನಾಡಲು, ನಮ್ಮ ಚಿತ್ರಗಳ ಬಗ್ಗೆ ಹೇಳಿಕೊಳ್ಳಲು ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್‌ನಷ್ಟು ಒಳ್ಳೆಯ ವೇದಿಕೆಗಳು ಬೇರೆ ಇಲ್ಲ ಎಂದಿದ್ದಾರೆ.
ಇದೊಂದು ಒಳ್ಳೆಯ ಮಾಧ್ಯಮ. ಅದು ಕೂಡ ನಮ್ಮಿಂದ ದೂರ ಆಗುತ್ತದೆ ಎಂದರೆ ಏನೂ ಮಾಡಕ್ಕೆ ಆಗಲ್ಲ. ನಾವು ಮತ್ತೆ ಹಿಂದಕ್ಕೆ ಹೋಗುತ್ತಿದ್ದೇವೆ ಎಂದರ್ಥ. ಯಾಕೆಂದರೆ ನಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ವೇದಿಕೆಗಳೇ ಬ್ಯಾನ್‌ಗೆ ಗುರಿಯಾಗುತ್ತಿವೆ.
ಕಾರುಣ್ಯ ರಾಮ್:ನಟಿ ನನ್ನ ಪ್ರಕಾರ ನೀವು ಹೇಳಿದಂತೆ ಈ ಸೋಷಿಯಲ್ ಮೀಡಿಯಾ ಬ್ಯಾನ್ ಆದರೆ, ಬೇರೆ ಆಯ್ಕೆ ಇಲ್ಲ. ಬ್ಯಾನ್ ಆದರೆ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡವರಿಗೆ ದೊಡ್ಡ ಡ್ರಾ ಬ್ಯಾಕ್ ಆಗುತ್ತದೆ ಎಂದಿದ್ದಾರೆ.
ಸಾಮಾನ್ಯ ಜನರಿಗೆ ಇದರಿಂದ ಏನೂ ಆಗಲ್ಲ. ಸೋಷಿಯಲ್ ಮೀಡಿಯಾಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದರೆ ಯಾವುದೇ ಒಂದು ದಾರಿಯಲ್ಲಿ ಒಳ್ಳೆಯದು ಇರುತ್ತದೆ, ಕೆಟ್ಟದು ಇರುತ್ತದೆ. ಹಾಗಂತ ಆ ದಾರಿಯನ್ನೇ ಬಂದ್ ಮಾಡುವುದು ಪರಿಹಾರ ಅಲ್ಲ ಎಂದಿದ್ದಾರೆ.
ಮೈನಸ್‌ಗಿಂತ ಪ್ಲಸ್‌ಗಳ ಬಗ್ಗೆ ಮಾತನಾಡಬೇಕು. ನನ್ನ ಪ್ರಕಾರ ಹೊಸ ಪ್ಲಾಟ್‌ಫಾರಂ ಕ್ರಿಯೇಟ್ ಮಾಡಬೇಕು, ಇಲ್ಲವೇ ಈಗಿರುವ ಸೋಷಿಯಲ್ ಮಾಡಿಯಾಗಳನ್ನೇ ಒಂದಿಷ್ಟು ಫಿಲ್ಟರ್ ಮಾಡಬೇಕು. ಇದರ ಹೊರತಾಗಿ ಬೇರೆ ಆ್ಯಪ್ ನನಗೆ ಈ ಕ್ಷಣಕ್ಕೆ ಕಾಣುತ್ತಿಲ್ಲ ಎಂದಿದ್ದಾರೆ ಕಾರುಣ್ಯ
ಪವನ್‌ಕುಮಾರ್: ಈ ಬ್ಯಾನ್ ಅನ್ನೋ ಯೋಚನೆಗೇ ಮೊದಲಿನಿಂದಲೂ ವಿರೋಧ ನನ್ನ ಇದೆ. ಯಾವುದೇ ಒಂದು ಟೂಲ್ ಅನ್ನು ಬ್ಯಾನ್ ಮಾಡುತ್ತೇವೆ, ಕಂಟ್ರೋಲ್ ಮಾಡುತ್ತೇವೆ, ಹೊಸ ನಿಯಮಗಳನ್ನು ರೂಪಿಸುತ್ತೇವೆ ಎನ್ನುವುದಕ್ಕಿಂತ ಅದರ ಮಹತ್ವ ತಿಳಿಸಬೇಕಿದೆ. ಅದರಿಂದ ಆಗುವ ಉಪಯೋಗಗಳ ಬಗ್ಗೆ ತಿಳಿ ಹೇಳಬೇಕು ಎಂದಿದ್ದಾರೆ.
ಕೋವಿಡ್ ಸಂದರ್ಭದಲ್ಲೇ ನೋಡಿ ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳನ್ನೇ ಬಳಸಿಕೊಂಡು ಯಾವ ರೀತಿ ನಾವು ಒಳ್ಳೆಯ ಕೆಲಸಗಳನ್ನು ಮಾಡಿದ್ದೇವೆ, ಹಾಗೆ ಯಾರೋ ತನ್ನ ಕಷ್ಟ ಹೇಳಿಕೊಂಡರೇ ಸಂಬಂಧವೇ ಇಲ್ಲದೆ ಇನ್ನಾರೋ ಆ ಕಷ್ಟದಲ್ಲಿದ್ದವರಿಗೆ ನೆರವು ನೀಡಲು ಸಾಧ್ಯವಾಗಿದ್ದು ಇದೇ ಸೋಷಿಯಲ್ ಮೀಡಿಯಾದಿಂದ. ಹೀಗಾಗಿ ಬ್ಯಾನ್ ಮಾಡುತ್ತೇವೆ ಎಂಬುದೇ ತಪ್ಪು ನಿರ್ಧಾರ. ಜನರ ಮೇಲೆ ನಂಬಿಕೆ ಇಲ್ಲದಿದ್ದಾಗ, ವ್ಯವಸ್ಥೆ ತನ್ನ ಪವರ್ ತೋರಿಸಬೇಕು ಎಂದುಕೊಂಡಾಗ ಇಂಥ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ ಎಂದಿದ್ದಾರೆ ನಿರ್ದೇಶಕ

Latest Videos

click me!