ಯಶ್‌ ಹೃದಯವಂತ ವ್ಯಕ್ತಿ, ಇಡೀ ಟಾಕ್ಸಿಕ್‌ ಸಿನಿಮಾ ಅಭಿಮಾನಿಗಳಿಗೆ ಹಬ್ಬ ಎಂದ ನಟಿ ತಾರಾ ಸುತಾರಿಯಾ

Published : Jul 15, 2026, 09:53 PM IST

'ಟಾಕ್ಸಿಕ್' ಚಿತ್ರದ ಚಿತ್ರೀಕರಣದ ಅನುಭವ ಹಂಚಿಕೊಂಡಿರುವ ನಟಿ ತಾರಾ ಸುತಾರಿಯಾ, ತಮ್ಮ 'ರೆಬೆಕಾ' ಪಾತ್ರದ ವಿಶೇಷತೆ ಮತ್ತು ಸಿನಿಮಾದ ದೃಶ್ಯ ಶ್ರೀಮಂತಿಕೆಯ ಬಗ್ಗೆ ಮಾತನಾಡಿದ್ದಾರೆ. ಸಹನಟ ರಾಕಿಂಗ್ ಸ್ಟಾರ್ ಯಶ್ ಅವರ ವ್ಯಕ್ತಿತ್ವ ಮತ್ತು ವೃತ್ತಿಪರತೆಯನ್ನು ಅವರು ಮನಸಾರೆ ಕೊಂಡಾಡಿದ್ದಾರೆ.

PREV
16
ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಟಾಕ್ಸಿಕ್‌

ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಬಜೆಟ್ ಹಾಗೂ ನಿರೀಕ್ಷೆಗಳನ್ನು ಹುಟ್ಟುಹಾಕಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್: ದಿ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' (Toxic: For Grown-ups) ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿರುವ ಬಾಲಿವುಡ್‌ನ ಜನಪ್ರಿಯ ನಟಿ ತಾರಾ ಸುತಾರಿಯಾ ಅವರು ಚಿತ್ರೀಕರಣದ ಅನುಭವ, ತಮ್ಮ ಪಾತ್ರದ ಹಿನ್ನೆಲೆ ಹಾಗೂ ಸಹನಟ ಯಶ್ ಅವರ ಗುಣದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

26
ಅತೀವ ತೃಪ್ತಿ ನೀಡಿದ 'ಟಾಕ್ಸಿಕ್' ಚಿತ್ರೀಕರಣದ ಅನುಭವ

'ಟಾಕ್ಸಿಕ್' ಸಿನಿಮಾದ ಭಾಗವಾಗಿರುವುದು ನನ್ನ ವೃತ್ತಿಜೀವನದಲ್ಲಿ ಅತ್ಯಂತ ತೃಪ್ತಿ ಮತ್ತು ಹೆಮ್ಮೆ ತಂದಿರುವ ವಿಚಾರ ಎಂದು ತಾರಾ ಸುತಾರಿಯಾ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಚಿತ್ರದ ಸೆಟ್‌ನಲ್ಲಿದ್ದಾಗ ನನಗೆ ಸದಾ ಒಂದು ಸಕಾರಾತ್ಮಕ ಭಾವನೆ ಇರುತ್ತಿತ್ತು. ಈ ಕಾರಣಕ್ಕಾಗಿಯೇ ನಾನು ಪ್ರತಿದಿನ ಚಿತ್ರೀಕರಣದ ಸೆಟ್‌ಗೆ ಹೋಗಲು ಕಾತರದಿಂದ ಕಾಯುತ್ತಿದ್ದೆ. ನಿರ್ದೇಶಕಿ ಗೀತು ಮೋಹನ್ ದಾಸ್ ಮತ್ತು ನಟ ಯಶ್ ಅವರ ನೇತೃತ್ವದಲ್ಲಿ ಈ ಇಡೀ ಸಿನಿಮಾ ತಂಡವು ಅತ್ಯಂತ ಪ್ರಾಮಾಣಿಕತೆ, ಸ್ಪಷ್ಟ ಉದ್ದೇಶ ಹಾಗೂ ಬದ್ಧತೆಯಿಂದ ಕೆಲಸ ಮಾಡಿದೆ. ಈ ಚಿತ್ರದಲ್ಲಿ ಕೆಲಸ ಮಾಡಿರುವುದು ನನ್ನ ಜೀವನದ ಅತ್ಯಂತ ಖುಷಿಯ ಕ್ಷಣಗಳಲ್ಲಿ ಒಂದು ಎಂದಿದ್ದಾರೆ.

36
ನಾಯಕಿ 'ರೆಬೆಕಾ' ಪಾತ್ರದ ವಿಶೇಷತೆ

ಚಿತ್ರದಲ್ಲಿ ತಾವು ನಿರ್ವಹಿಸುತ್ತಿರುವ ಪಾತ್ರದ ಕುರಿತು ಮಾಹಿತಿ ಹಂಚಿಕೊಂಡಿರುವ ತಾರಾ, "ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು 'ರೆಬೆಕಾ'. ಬಹಳ ವಿಭಿನ್ನ ಪಾತ್ರ. ಕೇವಲ ನನ್ನ ಪಾತ್ರ ಮಾತ್ರವಲ್ಲ, ಈ ಸಿನಿಮಾದಲ್ಲಿ ಬರುವ ಪ್ರತಿಯೊಬ್ಬ ಮಹಿಳಾ ಪಾತ್ರಗಳೂ ಸಹ ಅತ್ಯಂತ ರೋಚಕವಾಗಿ ಮೂಡಿಬಂದಿವೆ. ಚಿತ್ರದಲ್ಲಿನ ಎಲ್ಲಾ ಮಹಿಳಾ ಪಾತ್ರಗಳಿಗೆ ನೈಜ ಶಕ್ತಿ, ಧೈರ್ಯ, ಅಂಜಿಕೆಯೇ ಇಲ್ಲದ ಸಾಹಸಪ್ರವೃತ್ತಿ ಹಾಗೂ ಅದ್ಭುತವಾದ ಸ್ಟೈಲ್ ಅನ್ನು ತುಂಬಲಾಗಿದೆ," ಎಂದು ತಿಳಿಸಿದ್ದಾರೆ.

46
ದೃಶ್ಯ ಶ್ರೀಮಂತಿಕೆ ಹಾಗೂ ವಿಶಿಷ್ಟ ಶೈಲಿಯ ಸಿನಿಮಾ

'ಟಾಕ್ಸಿಕ್' ಸಿನಿಮಾ ತಾಂತ್ರಿಕವಾಗಿ ಮತ್ತು ದೃಶ್ಯ ವೈಭವದ ದೃಷ್ಟಿಯಿಂದ ಅತ್ಯುನ್ನತ ಗುಣಮಟ್ಟವನ್ನು ಹೊಂದಿದೆ ಎಂದು ತಾರಾ ಸುತಾರಿಯಾ ಹೆಮ್ಮೆಪಟ್ಟಿದ್ದಾರೆ.. "ಇಡೀ ಚಿತ್ರವು ಕಣ್ಣಿಗೆ ಹಬ್ಬದಂತೆ ಮೂಡಿಬರುತ್ತಿದ್ದು, ಅತ್ಯಂತ ಸ್ಟೈಲಿಶ್ ಆಗಿ ಮೂಡಿಬಂದಿದೆ. ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ವಿಶಿಷ್ಟ ಹಾಗೂ ವೈಯಕ್ತಿಕ ಸ್ಟೈಲ್ (Personal Style) ಅನ್ನು ನೀಡಲಾಗಿದೆ. ಇದು ಚಿತ್ರದ ದೃಶ್ಯ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ," ಎಂದಿದ್ದಾರೆ.

56
ಜಾಗತಿಕ ಪ್ರೇಕ್ಷಕರಿಗೆ ಕಾದಿದೆ ದೊಡ್ಡ ಅಚ್ಚರಿ!

ಈ ಚಿತ್ರವು ಕೇವಲ ಭಾರತೀಯ ಚಿತ್ರರಂಗ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲೂ ದೊಡ್ಡ ಸಂಚಲನ ಸೃಷ್ಟಿಸಲಿದೆ ಎಂದು ತಾರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ಜಾಗತಿಕ ಮಟ್ಟದ ಸಿನಿಪ್ರೇಕ್ಷಕರು ಈ ಚಿತ್ರದಿಂದ ಏನನ್ನು ನಿರೀಕ್ಷಿಸುತ್ತಿದ್ದಾರೋ, ಅದಕ್ಕಿಂತಲೂ ಮಿಗಿಲಾದ ಅದ್ಭುತ ಅಚ್ಚರಿ ಈ ಸಿನಿಮಾದಲ್ಲಿದೆ. ಪ್ರೇಕ್ಷಕರು ಎಂದಿಗೂ ಊಹಿಸದ ರೀತಿಯಲ್ಲಿ ಸಿನಿಮಾ ಮೂಡಿಬಂದಿದೆ. ಇಂತಹ ಕಥಾಹಂದರ ಹೊಂದಿರುವ ಚಿತ್ರದಲ್ಲಿ ಭಾರತದ ಅತ್ಯಂತ ಅಪ್ರತಿಮ ಮಹಿಳಾ ಕಲಾವಿದೆಯರೊಂದಿಗೆ ಸ್ಕ್ರೀನ್ ಶೇರ್ ಮಾಡಿರುವುದು ನನಗೆ ಮರೆಯಲಾಗದ ಅನುಭವ ನೀಡಿದೆ," ಎಂದು ಖುಷಿಪಟ್ಟಿದ್ದಾರೆ.

66
ಸಹನಟ ಯಶ್ ವ್ಯಕ್ತಿತ್ವದ ಬಗ್ಗೆ ತಾರಾ ಫಿದಾ

ರಾಕಿಂಗ್ ಸ್ಟಾರ್ ಯಶ್ ಅವರ ಸರಳತೆ ಮತ್ತು ವೃತ್ತಿಪರತೆಗೆ ಬಾಲಿವುಡ್ ನಟಿ ತಾರಾ ಸುತಾರಿಯಾ ಫಿದಾ ಆಗಿದ್ದಾರೆ. ಯಶ್ ಅವರ ಜೊತೆಗಿನ ನಟನೆಯ ಅನುಭವವನ್ನು ಹಂಚಿಕೊಂಡಿರುವ ಅವರು, "ಯಶ್ ಕೇವಲ ಒಬ್ಬ ಅದ್ಭುತ ನಟ ಮತ್ತು ಸಹನಟ ಮಾತ್ರವಲ್ಲ, ವೈಯಕ್ತಿಕವಾಗಿ ಯಶ್‌ ಹೃದಯವಂತ ವ್ಯಕ್ತಿ. ನಾವು ಜೊತೆಯಾಗಿ ನಟಿಸಿದ ಪ್ರತಿಯೊಂದು ಸೀನ್ ಅನ್ನು ಸಂಭ್ರಮಿಸುತ್ತಾ ಚಿತ್ರೀಕರಣ ಮಾಡಿದ್ದೇವೆ. ಅವರೊಂದಿಗೆ ಕೆಲಸ ಮಾಡಿರುವುದು ನಿಜಕ್ಕೂ ಅದ್ಭುತವಾದ ಅನುಭವ," ಎಂದು ಯಶ್ ವ್ಯಕ್ತಿತ್ವವನ್ನು ಮನಸಾರೆ ಕೊಂಡಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories