ಶ್ರುತಿ ನಾಯ್ಡು ನಿರ್ಮಾಣದ ‘ಪ್ರೀಮಿಯರ್ ಪದ್ಮಿನಿ’ ಸಿನಿಮಾ ತಂಡ ಹೊಸ ಸಿನಿಮಾ ಶುರು ಮಾಡಿದೆ. ಮೈಸೂರಿನ ಚಾಮುಂಡೇಶ್ವರಿ ದೇವಿ ಸನ್ನಿಧಾನದಲ್ಲಿ ಸ್ಕ್ರಿಪ್ಟ್ ಪೂಜೆ ಆಗಿದೆ.
ರಮೇಶ್ ಇಂದಿರಾ ಚಿತ್ರಕಥೆ, ನಿರ್ದೇಶನವಿರುವ ಈ ಚಿತ್ರಕ್ಕೆ ಪ್ರೀಮಿಯರ್ ಪದ್ಮಿನಿ ಚಿತ್ರದ ನಾಯಕ ಪ್ರಮೋದ್ ಹೀರೋ. ಆಗಸ್ಟ್‌ನಲ್ಲಿ ಶೂಟಿಂಗ್ ಆರಂಭವಾಗಲಿದೆ.
ಹೊಸ ಸಿನಿಮಾ ಬಗ್ಗೆ ವಿವರ ನೀಡಿದ ನಿರ್ಮಾಪಕಿ ಶ್ರುತಿ ನಾಯ್ಡು, ‘ಕಂಪ್ಲೀಟ್ ಎನರ್ಜಿ ಇರೋ ಕಾಲೇಜ್ ಕಥೆ. ಪ್ರಮೋದ್ ಪಕ್ಕಾ ಕಮರ್ಷಿಯಲ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಕಾಲೇಜ್ ಅಂದ್ಮೇಲೆ ಫ್ರೆಂಡ್‌ಶಿಪ್, ಪ್ರೇಮ, ಆ್ಯಕ್ಷನ್, ಪೊಸೆಸಿವ್‌ನೆಸ್ ಎಲ್ಲ ಇರುತ್ತೆ. ಆ ಎಲ್ಲ ಅಂಶಗಳನ್ನು ಒಳಗೊಂಡ ಒಂದು ಕಂಪ್ಲೀಟ್ ಪ್ಯಾಕೇಜ್ ಈ ಸಿನಿಮಾದಲ್ಲಿ ಸಿಗಲಿದೆ.
ಈಗೀಗ ಥಿಯೇಟರ್‌ಗೆ ಬರೋರ ಸಂಖ್ಯೆ ಕಡಿಮೆ ಆಗಿದೆ. ಓಟಿಟಿಯಲ್ಲೇ ಸಿನಿಮಾ ನೋಡ್ತೀವಿ ಅನ್ನೋರು ಹೆಚ್ಚಾದಿದ್ದಾರೆ. ಈ ಅಭಿಪ್ರಾಯವನ್ನು ಬ್ರೇಕ್ ಮಾಡಿ ಜನರನ್ನು ಬಡಿದೆಬ್ಬಿಸಿ ಥಿಯೇಟರ್‌ಗೆ ಕರೆತರುವ ಕೆಲಸವನ್ನು ನಮ್ಮ ಸಿನಿಮಾ ಮಾಡಲಿದೆ. ಈ ಕಾಲದ ಎಲ್ಲಾ ವಯೋಮಾನದವರಿಗೂ ಕನೆಕ್ಟ್ ಆಗೋ ಕಥೆ ಇದು’ ಎಂದಿದ್ದಾರೆ.
‘ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡೋ ಪ್ಲಾನಿಲ್ಲ. ಕನ್ನಡದಲ್ಲಷ್ಟೇ ಚಿತ್ರ ಬಿಡುಗಡೆಯಾಗಲಿದೆ. ಸದ್ಯ ಕಂಪ್ಲೀಟ್ ಕಾಲೇಜ್ ಫೀಲ್ ಕೊಡುವ ಲೊಕೇಶನ್ ಹುಡುಕಾಟದಲ್ಲಿದ್ದೇವೆ’ ಎಂದೂ ಶ್ರುತಿ ನಾಯ್ಡು ತಿಳಿಸಿದ್ದಾರೆ.