ಅಗ್ನಿಸಾಕ್ಷಿ (Agnisakshi) ಧಾರಾವಾಹಿಯ ಪ್ರಿಯಾಂಕ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಫ್ಯಾಂಟಸಿ’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ.
ಪತ್ರಕರ್ತ ಗೌರೀಶ್ ಅಕ್ಕಿ, ಬಲರಾಜವಾಡಿ, ಹರಿಣಿ, ಬಾಲ ನಟ ಅನುರಾಗ್ ನಟಿಸಿರುವ ಈ ಚಿತ್ರವನ್ನು ಪವನ್ ಕುಮಾರ್ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಸೆ.1ರಂದು ಬಿಡುಗಡೆ ಆಗಲಿದೆ.
ನಿರ್ದೇಶಕರಾದ ಗುರು ದೇಶಪಾಂಡೆ ಹಾಗೂ ಮಹೇಶ್ ಕುಮಾರ್ ಟ್ರೇಲರ್ ಬಿಡುಗಡೆ ಮಾಡಿದರು. ‘ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಫ್ಯಾಂಟಸಿ ವರ್ಗದ ಕತೆಯನ್ನು ಇಲ್ಲಿ ನೋಡಬಹುದು.
ಸ್ಟಾರ್ ನಟರನ್ನು ಇಟ್ಟುಕೊಂಡು ಮಾಡಬಹುದಾದ ಕತೆಯನ್ನು ಬಾಲ ನಟನ ಮೂಲಕ ಹೇಳಿಸಿದ್ದೇನೆ. ಅದೇ ಈ ಚಿತ್ರದ ವಿಶೇಷತೆ’ ಎಂದರು ಪವನ್ ಕುಮಾರ್.
ಪ್ರಿಯಾಂಕ ಮಾತನಾಡಿ, ‘ಚಿತ್ರದ ಟ್ರೇಲರ್ ನೋಡಿದರೆ ನನ್ನದು ನೆಗೆಟಿವ್ ಪಾತ್ರ ಎಂದುಕೊಳ್ಳುತ್ತಾರೆ. ಆದರೆ, ಚಿತ್ರ ನೋಡಿದರೆ ಆ ರೀತಿ ಇರಲ್ಲ. ಬೇರೆಯದ್ದೇ ರೀತಿ ಪಾತ್ರವನ್ನು ರೂಪಿಸಿದ್ದಾರೆ’ ಎಂದರು.
ಗೌರೀಶ್ ಅಕ್ಕಿ ಅವರು ಚಿತ್ರದಲ್ಲಿ ಮನೋವೈದ್ಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೆಂಕಟ್ ನಾರಾಯಣ ಹಾಗೂ ಛಾಯಾಗ್ರಾಹಕ ಪಿ ಕೆ ಎಚ್ ದಾಸ್ ಚಿತ್ರದ ಕುರಿತು ಮಾತನಾಡಿದರು.