ನಿರ್ದೇಶಕ ಸುಜಯ್ ಶಾಸ್ತ್ರಿ ‘ವರಮಹಾಲಕ್ಷ್ಮಿ’ ಹಬ್ಬದಂದು ಹೀಗೊಂದು ಕಾರ್ಯಕ್ರಮ ಆಯೋಜಿಸಿದ್ದರು. ಆ ಪ್ರಯುಕ್ತ ಬೆಳಗ್ಗೆ ಮದುವೆಯ ಶೂಟಿಂಗ್, ಮಧ್ಯಾಹ್ನ ಆ ಲೆಕ್ಕದಲ್ಲಿ ಭರ್ಜರಿ ಊಟ, ಸಂಜೆ ರಿಸೆಪ್ಶನ್ ಹಾಡು ‘ಗೋಲ್ಡ್ ಫ್ಯಾಕ್ಟರಿ’ ಬಿಡುಗಡೆಯಾಯ್ತು.
ಈ ನಡುವೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಜಯ್ ಶಾಸ್ತ್ರಿ, ‘80ರ ದಶಕದಲ್ಲಿ ಹಳ್ಳಿ ಬದುಕು ಹೇಗಿತ್ತು ಅನ್ನೋದರ ಪರಿಚಯವನ್ನು ನಮ್ಮ ಸಿನಿಮಾ ಮಾಡುತ್ತೆ.
ಈ ಔಟ್ ಆ್ಯಂಡ್ ಔಟ್ ಕಾಮಿಡಿ ಚಿತ್ರ ಸಂಪೂರ್ಣ ರೆಟ್ರೋ ಸ್ಟೈಲಿನಲ್ಲಿದೆ. ಈ ಸಿನಿಮಾ ಚಿತ್ರೀಕರಣಕ್ಕೆ ನಲವತ್ತು ದಶಕ ಹಿಂದಿನಂತಿರುವ ಹಳ್ಳಿಯನ್ನು ಹುಡುಕೋದೆ ದೊಡ್ಡ ಸವಾಲಾಗಿತ್ತು.
ಕನಕಪುರ ಸಮೀಪದ ಕೆರಳಾಲುಸಂದ್ರ ಎಂಬ ಹಳ್ಳಿಯಲ್ಲಿ ಇಡೀ ಸಿನಿಮಾ ಶೂಟಿಂಗ್ ನಡೆದಿದೆ. ಬಹುತೇಕ ಚಿತ್ರೀಕರಣ ಮುಗಿದಿದೆ’ ಎಂದರು.
ನಾಯಕ ಚಂದನ್ ಶೆಟ್ಟಿ, ‘ಇಡೀ ಚಿತ್ರದಲ್ಲಿ ನಟನೆಗಿಂತ ಸಹಜತೆಗೆ ಒತ್ತು ನೀಡಲಾಗಿದೆ’ ಎಂದರು. ನಾಯಕಿ ಅರ್ಚನಾ ಕೊಟ್ಟಿಗೆ, ‘ಕಾಮಿಡಿ ಚಿತ್ರದಲ್ಲಿ ನಟಿಸುವ ಕನಸು ಈ ಸಿನಿಮಾ ಮೂಲಕ ನನಸಾಗಿದೆ’ ಎಂದರು.
ಸಂಗೀತ ನಿರ್ದೇಶಕರಾದ ಪ್ರವೀಣ್, ಪ್ರದೀಪ್, ಕಥೆ, ಸಂಭಾಷಣೆ ಬರೆದಿರುವ ರಾಜಗುರು ಹೊಸಕೋಟೆ, ಛಾಯಾಗ್ರಾಹಕ ವಿಶ್ವಜಿತ್ ರಾವ್, ಕಲಾವಿದರಾದ ಮಂಜು ಪಾವಗಡ, ರಾಕೇಶ್, ಅನಂತ್ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.