ಮಾಲಾಶ್ರೀ ಕನ್ನಡ ಚಿತ್ರರಂಗವನ್ನು ಅಕ್ಷರಶಃ ಆಳಲು ಕಾರಣವೇನು? A to Z ಸೀಕ್ರೆಟ್ ಇಲ್ಲಿದೆ ನೋಡಿ!

Published : Sep 19, 2026, 08:02 PM IST

90ರ ದಶಕದಲ್ಲಿ ಮಾಲಾಶ್ರೀ ಎಂದರೆ ಕೇವಲ ಒಬ್ಬ ಸ್ಟಾರ್ ನಟಿಯಲ್ಲ, ಅವರೊಂದು ಸಂಚಲನ! ಚಿತ್ರಮಂದಿರಗಳ ಮುಂದೆ ಮಾಲಾಶ್ರೀ ಸಿನಿಮಾ ನೋಡಲು ಕಿಲೋಮೀಟರ್‌ಗಟ್ಟಲೆ ಸಾಲು ನಿಲ್ಲುತ್ತಿದ್ದ ಆ ಕಾಲವೇ ಒಂದು ಅದ್ಭುತ. ಮಾಲಾಶ್ರೀ ಯಶಸ್ಸಿನ ಸೀಕ್ರೆಟ್ ಇಲ್ಲಿದೆ ನೋಡಿ..

PREV
17

ಕನ್ನಡ ಚಿತ್ರರಂಗದ ಇತಿಹಾಸವನ್ನು ಒಮ್ಮೆ ತಿರುವಿ ನೋಡಿದರೆ, ಡಾ ರಾಜ್‌ಕುಮಾರ್, ಡಾ ವಿಷ್ಣುವರ್ಧನ್, ಅನಂತ್ ನಾಗ್, ಅಂಬರೀಷ್, ಶಂಕರ್‌ ನಾಗ್ ಅವರಂತೆ ಒಬ್ಬರು ನಟಿಯ ಹೆಸರು ಸುವರ್ಣಾಕ್ಷರಗಳಲ್ಲಿ ಮಿನುಗುತ್ತದೆ. ಅವರೇ ಅಭಿಮಾನಿಗಳ ಪಾಲಿನ 'ಕನಸಿನ ರಾಣಿ', ಚಿತ್ರರಂಗದ 'ಆಕ್ಷನ್ ಕ್ವೀನ್' ಮಾಲಾಶ್ರೀ. 90ರ ದಶಕದಲ್ಲಿ ಮಾಲಾಶ್ರೀ ಎಂದರೆ ಕೇವಲ ಒಬ್ಬ ಸ್ಟಾರ್ ನಟಿಯಲ್ಲ, ಅವರೊಂದು ಸಂಚಲನ! ಚಿತ್ರಮಂದಿರಗಳ ಮುಂದೆ ಮಾಲಾಶ್ರೀ ಸಿನಿಮಾ ನೋಡಲು ಕಿಲೋಮೀಟರ್‌ಗಟ್ಟಲೆ ಸಾಲು ನಿಲ್ಲುತ್ತಿದ್ದ ಆ ಕಾಲವೇ ಒಂದು ಅದ್ಭುತ.

27

ಮಾಲಾಶ್ರೀ ಅವರ ಸಿನಿವೃತ್ತಿ ಆರಂಭವಾಗಿದ್ದು ಕೇವಲ ನಾಲ್ಕು ತಿಂಗಳ ಮಗುವಾಗಿದ್ದಾಗ! ಹೌದು, ಮಹಾನಟಿ ಸಾವಿತ್ರಿ ಅವರ ಚಿತ್ರದ ಮೂಲಕ ಬಾಲ ಕಲಾವಿದೆಯಾಗಿ ಬಣ್ಣ ಹಚ್ಚಿದವರು ನಟಿ ಶ್ರೀದುರ್ಗಾ. ಸುಮಾರು 35 ಚಿತ್ರಗಳಲ್ಲಿ ಬಾಲನಟಿಯಾಗಿ ಮಿಂಚಿದ್ದ ಶ್ರೀದುರ್ಗಾ, ಬಳಿಕ ಕನ್ನಡದ 'ನಂಜುಂಡಿ ಕಲ್ಯಾಣ' ಸಿನಿಮಾದ ಮೂಲಕ 'ಮಾಲಾಶ್ರೀ' ಎಂದು ಮರುನಾಮಕರಣದ ಮೂಲಕ ಮಿಂಚಿದ ನಟಿ!

37

1989ರಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಅವರು 'ನಂಜುಂಡಿ ಕಲ್ಯಾಣ' ಚಿತ್ರಕ್ಕೆ ನಾಯಕಿಯನ್ನು ಹುಡುಕುತ್ತಿದ್ದಾಗ ಅವರಿಗೆ ಸಿಕ್ಕಿದ್ದೇ ಈ ಪ್ರತಿಭೆ. ಶ್ರೀದುರ್ಗಾ ಹೆಸರನ್ನು ‘ಮಾಲಾಶ್ರೀ’ ಎಂದು ಬದಲಾಯಿಸಿದ ಪಾರ್ವತಮ್ಮನವರು, ರಾಘವೇಂದ್ರ ರಾಜ್‌ಕುಮಾರ್ ಎದುರು ನಾಯಕಿಯಾಗಿ ಲಾಂಚ್ ಮಾಡಿದರು. ಆಗ ಮಾಲಾಶ್ರೀಗೆ ಕೇವಲ 15 ವರ್ಷ! ಮೊದಲ ಚಿತ್ರವೇ ಬರೋಬ್ಬರಿ 535 ದಿನಗಳ ಕಾಲ ಪ್ರದರ್ಶನ ಕಂಡು ಇತಿಹಾಸ ಸೃಷ್ಟಿಸಿತು. ಮಾಲಾಶ್ರೀ ಅವರ ನಟನೆ, ಚಂದದ ಮುಖ ನೋಡಿ ಸ್ವತಃ ಅಣ್ಣಾವ್ರು ಇವರನ್ನು "ಕನ್ನಡ ಚಿತ್ರರಂಗದ ಹೇಮಾ ಮಾಲಿನಿ" ಎಂದು ಕರೆದಿದ್ದರು ಎನ್ನುವುದು ಗುಟ್ಟಾಗಿಲ್ಲ.

47

ಒಂದೇ ವರ್ಷದಲ್ಲಿ ಅವರು ಬರೋಬ್ಬರಿ 20 ಚಿತ್ರಗಳಲ್ಲಿ ನಟನೆ

ಮಾಲಾಶ್ರೀ ಅವರ ನಟನೆ ಹಾಗೂ ಜನಪ್ರಿಯತೆ ವೇಗ ಎಷ್ಟಿತ್ತೆಂದರೆ, 1992ರಲ್ಲಿ ಒಂದೇ ವರ್ಷದಲ್ಲಿ ಅವರು ಬರೋಬ್ಬರಿ 20 ಚಿತ್ರಗಳಲ್ಲಿ ನಟಿಸಿ ಅಂದಿನ ಕಾಲಕ್ಕೆ ಅತಿ ದೊಡ್ಡ ದಾಖಲೆ ಬರೆದರು. ಕೇವಲ ಗ್ಲಾಮರ್ ಗೊಂಬೆಯಾಗಿ ಉಳಿಯದ ಮಾಲಾಶ್ರೀ, 'ರಾಣಿ ಮಹಾರಾಣಿ', 'ಹೃದಯ ಹಾಡಿತು' ಅಂತಹ ಚಿತ್ರಗಳ ಮೂಲಕ ತಮ್ಮ ಅಭಿನಯದ ತಾಕತ್ತು ಏನೆಂಬುದನ್ನು ತೋರಿಸಿದರು. ಇನ್ನು 'ಎಸ್.ಪಿ. ಭಾರ್ಗವಿ' ಚಿತ್ರದ ಮೂಲಕ ಅವರು ‘ಆಕ್ಷನ್ ಕ್ವೀನ್’ ಆಗಿ ಅವತರಿಸಿದಾಗ, ತೆಲುಗಿನ ವಿಜಯಶಾಂತಿಯಂತೆ ಕನ್ನಡದಲ್ಲೂ ಮಹಿಳಾ ಪ್ರಧಾನ ಚಿತ್ರಗಳಿಗೆ ಹೊಸ ಭಾಷ್ಯ ಬರೆದರು. ವಿಲನ್‌ಗಳನ್ನು ಮಾಲಾಶ್ರೀ ಸದೆಬಡಿಯುತ್ತಿದ್ದರೆ ಥಿಯೇಟರ್‌ನಲ್ಲಿ ಶಿಳ್ಳೆ-ಚಪ್ಪಾಳೆಗಳ ಸುರಿಮಳೆಯಾಗುತ್ತಿತ್ತು.

57

ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ ಮಾಲಾಶ್ರೀ ಅವರು ಕನ್ನಡದ ಖ್ಯಾತ ನಿರ್ಮಾಪಕ ‘ಕೋಟಿ’ ಖ್ಯಾತಿಯ ರಾಮು ಅವರನ್ನು ಪ್ರೀತಿಸಿ ಮದುವೆಯಾದರು. ಈ ಜೋಡಿ ಸ್ಯಾಂಡಲ್‌ವುಡ್‌ನ 'ಪವರ್ ಕಪಲ್' ಎಂದೇ ಪ್ರಸಿದ್ಧವಾಗಿತ್ತು. ಆದರೆ 2021ರಲ್ಲಿ ಪತಿ ರಾಮು ಅವರ ಅಕಾಲಿಕ ಮರಣ ಮಾಲಾಶ್ರೀ ಅವರಿಗೆ ದೊಡ್ಡ ಆಘಾತ ನೀಡಿತು. ಈ ತೀವ್ರ ದುಃಖದ ನಡುವೆಯೂ ವಾಸ್ತವ ಪ್ರಜ್ಞೆ ಮರೆಯದ ನಟಿ ಮಾಲಾಶ್ರೀ ಅವರು, ಕುಗ್ಗದೇ ತಮ್ಮ ಮಕ್ಕಳಿಗಾಗಿ ಮತ್ತು ಚಿತ್ರರಂಗಕ್ಕಾಗಿ ಮರಳಿ ನಟನೆ ಮಾಡುತ್ತಿದ್ದಾರೆ.

67

ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ

ಈಗ ಮಾಲಾಶ್ರೀ ಅವರ ಪರಂಪರೆಯನ್ನು ಮುಂದುವರಿಸಲು ಅವರ ಪುತ್ರಿ ಆರಾಧನಾ ರಾಮ್ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ಕಾಟೇರ’ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಆರಾಧನಾ, ಮೊದಲ ಚಿತ್ರದಲ್ಲೇ SIIMA ಪ್ರಶಸ್ತಿ ಗೆಲ್ಲುವ ಮೂಲಕ ತಾಯಿಯ ಹೆಸರನ್ನು ಉಳಿಸಿದ್ದಾರೆ. ಜೊತೆಗೆ, ಸದ್ಯ ರಿಯಲ್ ಸ್ಟಾರ್ ಉಪೇಂದ್ರ ನಟನೆಯ 'ನೆಕ್ಸ್ಟ್ ಲೆವೆಲ್' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

77

ಬಾಲನಟಿಯಿಂದ ಹಿಡಿದು ಆಕ್ಷನ್ ಕ್ವೀನ್ ವರೆಗೆ ಮಾಲಾಶ್ರೀ ಅವರು ಸವೆಸಿದ ಹಾದಿ ಇಂದಿನ ಪೀಳಿಗೆಯ ನಟಿಯರಿಗೆ ಒಂದು ದೊಡ್ಡ ಸ್ಫೂರ್ತಿ. ‘ಕನಸಿನ ರಾಣಿ’ ಎಂದರೆ ಅದು ಅಂದಿಗೂ ಎಂದಿಗೂ ಮಾಲಾಶ್ರೀ ಮಾತ್ರ! ಅವರ ಈ ಪರಿಯ ಯಶಸ್ಸಿಗೆ ಕಾರಣ, ಅವರ ಹೈ ಲೆವೆಲ್ ಎನರ್ಜಿ, ನಟನಾ ಪ್ರತಿಭೆಯ ಜೊತೆಗೆ ಸಿನಿಮಾ ಆಯ್ಕೆಯಲ್ಲಿರುವ ಜಾಣ್ಮೆ ಮುಖ್ಯ ಕಾರಣ ಎನ್ನಬಹುದು. ಅದೃಷ್ಟದ ಮಾತು ಏನೇ ಇದ್ದರೂ ಮಾಲಾಶ್ರೀ ಬಳಿಗೆ ಅದೃಷ್ಟ ಬರಲು 'ಅದೃಷ್ಟಕ್ಕೆ ಅದೃಷ್ಟ ಇತ್ತು' ಎನ್ನಬೇಕಷ್ಟೇ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories