Published : Nov 28, 2026, 03:17 PM ISTUpdated : Nov 28, 2026, 03:22 PM IST
‘ಲಕ್ಷ್ಮೀಪುತ್ರ’ ಸಿನಿಮಾದಲ್ಲಿ ತಾಯಿ-ಮಗನ ಸಂಬಂಧವನ್ನು ಕೇವಲ ಸೆಂಟಿಮೆಂಟ್ಗೆ ಸೀಮಿತಗೊಳಿಸದೆ, ಕಥೆಯ ತಿರುವುಗಳ ಮೂಲಕ ಪ್ರೇಕ್ಷಕರಿಗೆ ಹೊಸ ಅನುಭವ ನೀಡುವ ಪ್ರಯತ್ನ ಕಾಣುತ್ತದೆ. ಅಸಲಿಗೆ ಈ ಸಿನಿಮಾ ಯಾಕೆ ನೋಡಬೇಕು?
ತಾಯಿ-ಮಗನ ನಡುವಿನ ಪ್ರೀತಿ ಕನ್ನಡ ಸಿನಿಮಾಗಳಿಗೆ ಹೊಸದೇನಲ್ಲ. ಆದರೆ, ಅದೇ ಭಾವನಾತ್ಮಕ ಎಳೆಯನ್ನು ಹಿಡಿದುಕೊಂಡು ಪ್ರೇಕ್ಷಕರನ್ನು ನಿರೀಕ್ಷೆಗೂ ಮೀರಿದ ಪಯಣಕ್ಕೆ ಕರೆದೊಯ್ಯುವುದು ಸುಲಭದ ಮಾತಲ್ಲ. ‘ಲಕ್ಷ್ಮೀಪುತ್ರ’ ಈ ಪ್ರಯತ್ನದಲ್ಲಿ ಗಮನ ಸೆಳೆಯುತ್ತದೆ. ತಾಯಿಯೇ ಸರ್ವಸ್ವ ಎಂದು ಬದುಕುವ ಮಗ (ಚಿಕ್ಕಣ್ಣ), ಮಗನೇ ತನ್ನ ಜಗತ್ತು ಎಂದುಕೊಂಡಿರುವ ತಾಯಿ (ತಾರಾ)... ಇವರಿಬ್ಬರ ಬದುಕಿನಲ್ಲಿ ಮುಂದೆ ಏನಾಗಬಹುದು ಎಂಬ ಕುತೂಹಲದೊಂದಿಗೆ ಸಿನಿಮಾ ಶುರುವಾಗುತ್ತದೆ. ಕಥೆ ಹೀಗೆಯೇ ಸಾಗಬಹುದು ಎಂದು ಪ್ರೇಕ್ಷಕರು ಲೆಕ್ಕ ಹಾಕುವಷ್ಟರಲ್ಲಿ ಚಿತ್ರ ಹೊಸ ತಿರುವು ಪಡೆದುಕೊಳ್ಳುತ್ತದೆ. ಅದರಲ್ಲೂ ಇಂಟರ್ವಲ್ ನಂತರದ ಬೆಳವಣಿಗೆಗಳು ಸಿನಿಮಾದ ಅಚ್ಚರಿಯ ಅಂಶಗಳಿಗೆ ಮತ್ತಷ್ಟು ಬಲ ತುಂಬುತ್ತವೆ.
25
ಎರಡು ಆಸೆಗಳು ಈಡೇರುತ್ತವೆಯೇ?
ಹಳ್ಳಿಯೊಂದರಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡು ಬದುಕು ಸಾಗಿಸುವ ನಾಯಕ. ಕೂಲಿ ಕೆಲಸ ಮಾಡಿ ಮಗನನ್ನು ಸಾಕುವ ತಾಯಿ. ಮಗನಿಗೆ ಪ್ರೀತಿಸಿ ಮದುವೆಯಾಗುವ ಆಸೆ. ತಾಯಿಗೆ ಕಾಶಿಯಾತ್ರೆ ಮಾಡಬೇಕೆಂಬ ಹಂಬಲ. ಈ ಎರಡು ಆಸೆಗಳು ಈಡೇರುತ್ತವೆಯೇ ಎಂಬುದೇ ಚಿತ್ರದ ಆರಂಭಿಕ ಕುತೂಹಲ. ಆದರೆ, ಪ್ರೀತಿ ಮತ್ತು ಕಾಶಿಯಾತ್ರೆಯ ಸುತ್ತ ಹೆಣೆದಿರುವ ಕಥೆ ಬರೀ ಆಸೆಗಳನ್ನು ಈಡೇರಿಸುವ ಪ್ರಯತ್ನಕ್ಕೆ ಸೀಮಿತವಾಗುವುದಿಲ್ಲ. ಬದುಕಿನ ಸಂಬಂಧಗಳು, ಭಾವನೆಗಳು ಮತ್ತು ಜೀವನದ ಸತ್ಯಗಳನ್ನು ತೆರೆದಿಡುತ್ತಾ ಸಾಗುತ್ತದೆ. ಈ ವಿಭಿನ್ನ ಎಳೆಯನ್ನು ಕತೆಗಾರ ಹಾಗೂ ನಿರ್ಮಾಪಕ ಎ.ಪಿ. ಅರ್ಜುನ್ ಅಚ್ಚುಕಟ್ಟಾಗಿ ಹೆಣೆದಿದ್ದಾರೆ.
35
ತಾರಾ ಅವರದು ಮನಮುಟ್ಟುವ ಅಭಿನಯ
ನಿರ್ದೇಶಕ ವಿಜಯ್ ಎಸ್. ಸ್ವಾಮಿ ಅದನ್ನು ಭಾವನೆ ಮತ್ತು ಮನರಂಜನೆಯ ಸಮತೋಲನದೊಂದಿಗೆ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ. ಕಥೆಯಲ್ಲಿನ ಕೆಲವು ಅನಿರೀಕ್ಷಿತ ಬೆಳವಣಿಗೆಗಳು ಪ್ರೇಕ್ಷಕರನ್ನು ಮುಂದೇನಾಗಬಹುದು ಎಂಬ ಕುತೂಹಲದಲ್ಲಿಡುತ್ತವೆ. ಚಿತ್ರದ ನಿಜವಾದ ಶಕ್ತಿ ಅದರ ಪಾತ್ರಗಳು. ನಾಯಕನಾಗಿ ಚಿಕ್ಕಣ್ಣ ತಮ್ಮ ಸಹಜ ಅಭಿನಯದಿಂದ ಗಮನ ಸೆಳೆಯುತ್ತಾರೆ. ಕಾಮಿಡಿ ಮೂಲಕ ಪರಿಚಿತರಾಗಿರುವ ಅವರು, ಭಾವನಾತ್ಮಕ ಸನ್ನಿವೇಶಗಳಲ್ಲೂ ತಮ್ಮ ನಟನೆಯ ಮತ್ತೊಂದು ಮುಖವನ್ನು ತೋರಿಸಿದ್ದಾರೆ. ಅಮ್ಮನ ಪಾತ್ರದಲ್ಲಿ ತಾರಾ ಅವರದು ಮನಮುಟ್ಟುವ ಅಭಿನಯ. ಮಗನ ಮೇಲಿನ ಪ್ರೀತಿ, ಬದುಕಿನ ಆಸೆಗಳು ಮತ್ತು ತಾಯ್ತನದ ಭಾವನೆಗಳನ್ನು ಅವರು ಸಹಜವಾಗಿ ಅಭಿವ್ಯಕ್ತಿಸಿದ್ದಾರೆ. ಇಂಥ ಪಾತ್ರಗಳಿಗೆ ತಾರಾ ಏಕೆ ಸೂಕ್ತ ಆಯ್ಕೆ ಎಂಬುದು ಮತ್ತೊಮ್ಮೆ ಸಾಬೀತಾಗುತ್ತದೆ.
ಮೆಟಾಪರ್ ಆಗಿ ಮಂಡೇಲ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮಿತ್ರಾ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮಂಜುನಾಥ್ ಹೆಗಡೆ, ಕುರಿ ಪ್ರತಾಪ್ ಮತ್ತು ಧರ್ಮಣ್ಣ ಕಡೂರು ಅವರ ಪಾತ್ರಗಳೂ ಕಥೆಯ ಓಟಕ್ಕೆ ಪೂರಕವಾಗಿವೆ. ಹಾಸ್ಯ ಮತ್ತು ಮನರಂಜನೆಯ ಮೂಲಕ ಚಿತ್ರಕ್ಕೆ ಚೈತನ್ಯ ತುಂಬುತ್ತವೆ. ಸಿನಿಮಾದ ಕೊನೆಯ ಹಂತದಲ್ಲಿ ಭಾವನೆಗಳ ತೀವ್ರತೆ ಹೆಚ್ಚಾಗುತ್ತದೆ. ‘ತಾಯಿನೇ ಎಲ್ಲಾ ಬದಲಾಗೋದಿಲ್ಲ’ ಎಂಬ ಹಾಡಿನ ಸಾಲು ನೆನಪಾಗುವಂತೆ ಕ್ಲೈಮ್ಯಾಕ್ಸ್ ಮನಸ್ಸಿನಲ್ಲಿ ಉಳಿಯುತ್ತದೆ.
55
ಮನರಂಜನಾತ್ಮಕ ಪ್ರಯತ್ನ
ಇನ್ನು ತಾಯಿ-ಮಗನ ಸಂಬಂಧವನ್ನು ಕೇವಲ ಸೆಂಟಿಮೆಂಟ್ಗೆ ಸೀಮಿತಗೊಳಿಸದೆ, ಕಥೆಯ ತಿರುವುಗಳ ಮೂಲಕ ಪ್ರೇಕ್ಷಕರಿಗೆ ಹೊಸ ಅನುಭವ ನೀಡುವ ಪ್ರಯತ್ನ ಇಲ್ಲಿ ಕಾಣುತ್ತದೆ. ತಾಯಿಯ ಪ್ರೀತಿ, ಮಗನ ಕನಸು, ಒಂದಷ್ಟು ನಗು, ಅನಿರೀಕ್ಷಿತ ತಿರುವುಗಳು ಮತ್ತು ಭಾವುಕ ಕ್ಷಣಗಳ ಮಿಶ್ರಣವೇ ‘ಲಕ್ಷ್ಮೀಪುತ್ರ’. ಕಥೆಯ ಮುಂದಿನ ನಡೆ ಊಹಿಸುತ್ತಿದ್ದೇವೆ ಎನ್ನುವಷ್ಟರಲ್ಲಿ ಹೊಸ ಹಾದಿ ತೋರಿಸುವ ಈ ಸಿನಿಮಾ, ಕುಟುಂಬ ಸಮೇತ ಕುಳಿತು ನೋಡಬಹುದಾದ ಮನರಂಜನಾತ್ಮಕ ಪ್ರಯತ್ನ. ತಾಯಿ-ಮಗನ ಬಾಂಧವ್ಯದ ಕಥೆ ಇಷ್ಟಪಡುವವರು ಈ ಸಿನಿಮಾವನ್ನು ಒಮ್ಮೆ ನೋಡಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.