‘ಸಂಯುಕ್ತಾ ನಮ್ಮ ಸಿನಿಮಾ ನಾಯಕಿ ಅಂದಾಗ ಆ ಹುಡುಗಿ ತುಂಬಾ ಕಿರಿಕ್ಕು. ಅವಳನ್ನು ಹಾಕ್ಕೊಂಡು ಸಿನಿಮಾ ಮಾಡ್ತೀಯಾ, ಮಧ್ಯೆ ಕೈಕೊಟ್ಟರೆ ಏನು ಮಾಡ್ತೀಯಾ? ಅಂತೆಲ್ಲ ಸುತ್ತಲಿನ ಜನ ನನ್ನನ್ನು ಪ್ರಶ್ನೆ ಮಾಡಿದ್ದರು.
ಇಷ್ಟು ಬಂಡವಾಳ ಹಾಕಿ ಸಿನಿಮಾ ಮಾಡುತ್ತಿರುವಾಗ ಮಧ್ಯೆ ಕೈಕೊಟ್ಟರೆ ಏನು ಮಾಡೋದಪ್ಪಾ ಅಂತ ಆಗ ನನಗೂ ಭಯ ಆಗಿತ್ತು. ಆದರೆ ಈಗ ಅನಿಸುತ್ತೆ, ಅವಳನ್ನು ತಗೊಳ್ಳದಿದ್ದರೆ ನನ್ನಂಥಾ ದಡ್ಡ ಇನ್ನೊಬ್ಬ ಇರುತ್ತಿರಲಿಲ್ಲ.’
‘ಕ್ರೀಂ’ ಸಿನಿಮಾದ ಟ್ರೇಲರ್ ಬಿಡುಗಡೆಯಲ್ಲಿ ನಿರ್ಮಾಪಕ ಡಿ ಕೆ ದೇವೇಂದ್ರ ಹೇಳಿದ ಮಾತುಗಳಿವು. ಈ ಚಿತ್ರದಲ್ಲಿ ಸಂಯುಕ್ತಾ ಹೆಗ್ಡೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಅವರ ಅಭಿನಯಕ್ಕೆ ಪ್ರಶಂಸೆ ವ್ಯಕ್ತವಾಯಿತು. ಈ ಸಿನಿಮಾದ ಕಥೆ, ಚಿತ್ರಕಥೆ, ಸಂಭಾಷಣೆ ಬರಹಗಾರ ಅಗ್ನಿ ಶ್ರೀಧರ್ ಮಾತನಾಡಿ, ‘ನೈಜ ಕಥಾಹಂದರ ಆಧರಿಸಿ ತಯಾರಾಗುತ್ತಿರುವ ಚಿತ್ರವಿದು.
ಭಾರತದಲ್ಲಿ ಪ್ರತಿವರ್ಷ ಎರಡೂವರೆ ಸಾವಿರ ಮಹಿಳೆಯರು ಒಂದು ಕಾರಣಕ್ಕೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಆ ಕಾರಣ ಏನು ಎಂಬುದನ್ನು ತಿಳಿಸುವ ಕಥೆ ಈ ಚಿತ್ರದಲ್ಲಿದೆ’ ಎಂದರು.
ನಟಿ ಸಂಯುಕ್ತಾ ಹೆಗ್ಡೆ, ‘ಚಿತ್ರದಲ್ಲಿ ನನ್ನದು ಭಿನ್ನ ಪಾತ್ರ. ಐದು ವರ್ಷಗಳ ಬಳಿಕ ಈ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರೆದುರು ಬರುತ್ತಿದ್ದೇನೆ’ ಎಂದರು.
ನಿರ್ದೇಶಕ ಅಭಿಷೇಕ್ ಬಸಂತ್, ಸಂಗೀತ ನಿರ್ದೇಶಕ ರೋಹಿತ್, ಕಲಾ ನಿರ್ದೇಶಕ ಶಿವಕುಮಾರ್ ಹಾಗೂ ಚಿತ್ರದಲ್ಲಿ ನಟಿಸಿರುವ ರೋಷನ್ ಅಗ್ನಿ ಶ್ರೀಧರ್ ಬಚ್ಚನ್, ಇರ್ಫಾನ್ ಇದ್ದರು.