ಬಹಳ ಸಮಯದ ನಂತರ ಕನ್ನಡದ ಕಲಾವಿದರು, ತಂತ್ರಜ್ಞರು ಬಹುತೇಕರು ಒಗ್ಗೂಡಿ ಉಪೇಂದ್ರ ನಿರ್ದೇಶನದ ‘ಯುಐ’ ಸಿನಿಮಾ ನೋಡಿದ್ದಾರೆ. ಉಪೇಂದ್ರ ಅವರ ಕರೆಗೆ ಓಗೊಟ್ಟು ರಮೇಶ್ ಅರವಿಂದ್, ಸುದೀಪ್, ಯಶ್ ಬಂದು ಸಿನಿಮಾ ನೋಡಿದ್ದು ವಿಶೇಷ.
ವರ್ಷಗಳ ಬಳಿಕ ಕನ್ನಡ ಸಿನಿಮಾ ಕಾರ್ಯಕ್ರಮಕ್ಕೆ ಯಶ್ ಹಾಜರಾಗಿದ್ದರಿಂದ ಮತ್ತು ಸುದೀಪ್ ಅವರು ಕೂಡ ಸೆಲೆಬ್ರಿಟಿ ಶೋಗೆ ಆಗಮಿಸಿದ್ದರಿಂದ ಸೆಲೆಬ್ರಿಟಿ ಶೋ ಕಳೆಗಟ್ಟಿತ್ತು. ಅಲ್ಲದೇ ಡಾರ್ಲಿಂಗ್ ಕೃಷ್ಣ, ಶರಣ್, ರಾಧಿಕಾ ಪಂಡಿತ್, ಪ್ರೇಮ್, ರಘು ಮುಖರ್ಜಿ, ಅನು ಪ್ರಭಾಕರ್, ಮಾಜಿ ಕೇಂದ್ರ ಸಚಿವ ಸದಾನಂದ ಗೌಡ, ಆರ್. ಚಂದ್ರು, ಮೇಘನಾ ಗಾಂವ್ಕರ್, ರಾಕ್‌ಲೈನ್ ವೆಂಕಟೇಶ್ ಎಲ್ಲರೂ ಬಂದಿದ್ದು ವಿಶೇಷವಾಗಿತ್ತು.
ಸಿನಿಮಾ ಮುಗಿದ ಬಳಿಕ ಮಾತನಾಡಿದ ಯಶ್, ‘ನಾನು ಉಪ್ಪಿ ಸರ್ ಅಭಿಮಾನಿ. ಬಹಳಷ್ಟು ಮಂದಿಗೆ ಅವರು ಸ್ಫೂರ್ತಿ. ಚಿಕ್ಕವರಿದ್ದಾಗ ಅವರ ಸಿನಿಮಾವನ್ನು ಸಂಭ್ರಮದಿಂದ ನೋಡುತ್ತಿದ್ದ ಗಳಿಗೆ ನೆನಪಾಯಿತು ನನಗೆ. ಇವತ್ತು ಅವರ ಜೊತೆಯೇ ಕುಳಿತು ಅವರ ಸಿನಿಮಾ ನೋಡಿದ್ದು ನಮ್ಮ ಅದೃಷ್ಟ. ಉಪ್ಪಿ ಸರ್ ಅವರ ಮನಸ್ಸಲ್ಲಿ, ಮೈಂಡಲ್ಲಿ ಏನಿದೆ ಅನ್ನುವುದನ್ನು ಸಂಕೇತ ರೂಪದಲ್ಲಿ ಹೇಳಿದ್ದಾರೆ.
ಅವರು ನೇರವಾಗಿ ಹೇಳುವುದಕ್ಕಿಂತ ಅವರ ಸಿನಿಮಾದ ಆಳದಲ್ಲಿ ಗಾಢವಾದ ಅರ್ಥ ಇರುತ್ತದೆ. ಈ ಸಿನಿಮಾದಲ್ಲಂತೂ ಕತೆಯೇ ಸರಿನೋ ತಪ್ಪೋ ಎಂಬ ಪ್ರಶ್ನೆ ಹುಟ್ಟುಹಾಕಿದ್ದಾರೆ. ಯಾವಾಗಲೂ ಅವರು ಹೊಸತಾಗಿ ಏನೋ ಮಾಡುತ್ತಾರೆ. ಇಲ್ಲಿ ಕತೆಯಿಂದಲೇ ಸಂಕೀರ್ಣತೆ ಆರಂಭವಾಗಿರುವುದಾಗಿ ತಿಳಿಸಿದ್ದಾರೆ. ತಲೆಗೆ ತುಂಬಾ ಕೆಲಸ ಕೊಟ್ಟಿದ್ದಾರೆ’ ಎಂದು ಹೇಳಿದರು.
ಉಪೇಂದ್ರ, ‘ನಮ್ಮ ಸಿನಿಮಾದಲ್ಲಿ ಕೆಲಸ ಮಾಡಿದ ಕಲಾವಿದರಿಗೆ, ತಂತ್ರಜ್ಞರಿಗೆ ಸಿನಿಮಾ ತೋರಿಸುವ ಅವಕಾಶ ಸಿಕ್ಕಿತು. ವಿಶೇಷವಾಗಿ ರಮೇಶ್, ಸುದೀಪ್, ಯಶ್ ಬಂದು ಸಿನಿಮಾ ನೋಡಿದರು. ಎಲ್ಲರಿಗೂ ಧನ್ಯವಾದ’ ಎಂದರು.
ಸುದೀಪ್ ಟ್ವೀಟ್ ಮಾಡಿ, ‘ಈ ಸ್ಕ್ರಿಪ್ಟ್ ಅನ್ನು ಉಪೇಂದ್ರ ಅವರು ಮಾತ್ರ ಕಲ್ಪಿಸಿಕೊಳ್ಳಲು ಮತ್ತು ನಿರೂಪಿಸಲು ಸಾಧ್ಯ. ಈ ಚಿತ್ರಕ್ಕೆ ದೊರೆತ ಪ್ರತಿಕ್ರಿಯೆ ನೋಡಿ ಖುಷಿಯಾಗಿದೆ. ಉಪೇಂದ್ರ ಬೆನ್ನಿಗೆ ನಿಂತ ಅವರ ತಂಡಕ್ಕೆ ಅಭಿನಂದನೆ’ ಎಂದಿದ್ದಾರೆ. ನಿರ್ಮಾಪಕರಾದ ಜಿ. ಮನೋಹರನ್, ಲಹರಿ ವೇಲು ಮತ್ತಿತರರು ಇದ್ದರು.
ಪರಸ್ಪರ ಅಪ್ಪಿಕೊಂಡ ಯಶ್, ಸುದೀಪ್: ಯುಐ ಸೆಲೆಬ್ರಿಟಿ ಶೋದಲ್ಲಿ ಸುದೀಪ್ ಮತ್ತು ಯಶ್ ಪರಸ್ಪರ ಅಪ್ಪಿಕೊಂಡು ಪ್ರೀತಿಯಿಂದ ಮಾತನಾಡಿದ ದೃಶ್ಯವನ್ನು ಎಲ್ಲರೂ ಖುಷಿಯಿಂದ ನೋಡಿದರು. ಸಾಮಾಜಿಕ ಜಾಲತಾಣದಲ್ಲಿ ಅವರಿಬ್ಬರು ಅಪ್ಪಿಕೊಂಡ ವಿಡಿಯೋ ನೋಡಿದ ಮಂದಿ ಇದೇ ರೀತಿ ಎಲ್ಲರೂ ಒಗ್ಗಟ್ಟಿನಿಂದ ಇರಿ ಎಂದು ಆಶಿಸಿದರು.