ನಟ ಭಯಂಕರ ತಂಡದಿಂದ ವಿಶ್ವನಾಥ್‌ ಶೆಟ್ಟಿ ಕುಟುಂಬಕ್ಕೆ ಚೆಕ್‌ ಕೊಟ್ಟ ಪ್ರಥಮ್!

First Published | Mar 14, 2022, 3:50 PM IST

ಬಿಗ್‌ಬಾಸ್ ವಿನ್ನರ್ ಹಾಗೂ ನಟ ಪ್ರಥಮ್ ಅವರು ಮತ್ತೊಮ್ಮೆ ತಮ್ಮ ಮಾನವೀತೆ ಮೆರೆದಿದ್ದಾರೆ. ಶಿವಮೊಗ್ಗ ನಗರದಲ್ಲಿ 2015ರಲ್ಲಿ ನಡೆದ ಕೋಮುಗಲಭೆಯಲ್ಲಿ ಸಾವು ಕಂಡ ವಿಶ್ವನಾಥ ಶೆಟ್ಟಿ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದಾರೆ. 
 

ಆ ಮೂಲಕ ಹೆತ್ತ ಮಗನನ್ನು ಕಳೆದುಕೊಂಡು ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ವಿಶ್ವನಾಥ್ ಶೆಟ್ಟಿ ತಾಯಿಗೆ ಧೈರ್ಯ ತುಂಬಿದ್ದಾರೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತನ ಸಾವಿನ ಹಿನ್ನೆಲೆಯಲ್ಲಿ ವಿಶ್ವನಾಥ್ ಶೆಟ್ಟಿ ಸಾವಿನ ಪ್ರಕರಣವೂ ಸದ್ದು ಮಾಡಿತು. 

ಈ ಸುದ್ದಿ ತಿಳಿದ ನಟ ಪ್ರಥಮ್ ಅವರು ಶಿವಮೊಗ್ಗ ನಗರಕ್ಕೆ ಹೋಗಿ ವಿಶ್ವನಾಥ್ ಶೆಟ್ಟಿ ಅವರ ತಾಯಿಯನ್ನು ಭೇಟಿ ಮಾಡಿ ಅವರ ಕಷ್ಟವನ್ನು ಕಣ್ಣಾರೆ ನೋಡಿ ಅವರಿಗೆ ತಮ್ಮ ‘ನಟಭಯಂಕರ’ ಚಿತ್ರತಂಡದಿಂದ ಆರ್ಥಿಕ ನೆರವು ನೀಡಿದ್ದಾರೆ.

Tap to resize


ವಿಶ್ವನಾಥ್ ಶೆಟ್ಟಿ ಕುಟುಂಬಕ್ಕೆ ನೆರವು ನೀಡಿರುವ ಪ್ರಥಮ್ ಅವರನ್ನು ಮೆಚ್ಚಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಫೋಟೋಗಳನ್ನು ಹೆಚ್ಚಿಕೊಂಡಿದ್ದಾರೆ. ‘ಹರ್ಷ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಎಂದು ನಾನು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿಕೊಂಡೆ. 

ಈ ಸಮಯದಲ್ಲಿ ಮಾಧ್ಯಮ ಮಿತ್ರರು ನನ್ನ ಸಂಪರ್ಕಿಸಿ. ಇದೇ ರೀತಿಯ ಗಲಭೆಯಲ್ಲಿ ತುಂಬಾ ಹಿಂದೆ ವಿಶ್ವನಾಥ್ ಶೆಟ್ಟಿ ಎಂಬುವವರು ಸಾವು ಕಂಡಿದ್ದರು. ಅವರ ಮನೆಯಲ್ಲಿ ತುಂಬಾ ಕಷ್ಟ ಇದೆ. ಏನಾದರೂ ಅವರಿಗೆ ಸಹಾಯ ಮಾಡಿ ಅಂತ ಹೇಳಿದರು. 

ಹೀಗಾಗಿ ಕೆಲ ದಿನ ಬಿಟ್ಟು ನಾನು ವಿಶ್ವನಾಥ್ ಶೆಟ್ಟಿ ಅವರ ಮನೆಗೆ ಹೋದೆ. ವಯಸ್ಸಾದ ತಾಯಿ, ತಂದೆಯನ್ನು ಕಳೆದುಕೊಂಡ ವಿಶ್ವನಾಥ್ ಶೆಟ್ಟಿ ಮಗಳನ್ನು ನೋಡಿದೆ. ಮಳೆ, ಗಾಳಿಗೂ ನಿಲ್ಲದ ಮನೆಯಲ್ಲಿ ವಾಸಿಸುತ್ತಿದ್ದಾರೆ. ಕೂಡಲೇ ನಮ್ಮ ‘ನಟ ಭಯಂಕರ’ ಚಿತ್ರತಂಡದಿಂದ 50 ಸಾವಿರ ರೂಪಾಯಿ ಚೆಕ್ ಕೊಟ್ಟು, ಇದನ್ನು ವಿಶ್ವನಾಥ್ ಶೆಟ್ಟಿ ಮಗು ಹೆಸರಿಗೆ ಎಫ್‌ಡಿ ಮಾಡುವಂತೆ ಹೇಳಿ ಬಂದಿರುವೆ. 

ಸಿನಿಮಾ ಬಿಡುಗಡೆ ಆದ ಮೇಲೆ ಆ ಕುಟುಂಬಕ್ಕೆ ಮತ್ತಷ್ಟು ನೆರವು ನೀಡಲಿದ್ದೇನೆ. ಸಾಧ್ಯವಾದರೆ ಬೇರೆಯವರು ಕೂಡ ಆ ಕುಟುಂಬಕ್ಕೆ ನೆರವು ನೀಡಿ’ ಎಂದು ಪ್ರಥಮ್ ಮನವಿ ಮಾಡಿಕೊಂಡಿದ್ದಾರೆ. ಪ್ರಥಮ್ ನಿರ್ದೇಶಿಸಿ, ನಟಿಸಿರುವ ‘ನಟ ಭಯಂಕರ’ ಸಿನಿಮಾ ಮೇ.13ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ.   

Latest Videos

click me!